3978

ಎಂ.ಎಲ್.ಎ ಗೊಂದು ಪತ್ರ

ಮಾನ್ಯ ಮಾಜಿ ಶಾಸಕರೇ,
ನನಗೆ ಗೊತ್ತು ಆಂಟಿಯನ್ನು ಅಜ್ಜಿ ಎಂದು ಕರೆದಾಗಲೂ,ಹಾಲಿ ಶಾಸಕರನ್ನು ಮಾಜಿ ಶಾಸಕರೇ ಎಂದು ಸಂಭೋದಿಸಿದಾಗಲೂ ಸಿಟ್ಟು ಬರುವುದು ಸಹಜ.ಬರಲಿ ಬಿಡಿ.ಸಿಟ್ಟು ಅದಾಗೆ ಬರುತ್ತದೆ ಅದಾಗೆ ಹೋಗುತ್ತದೆ ಮಗುವಿನ ಮೂತ್ರದ ಹಾಗೆ.ನಿಮ್ಮನ್ನು ಹಾಗೆ ಕರೆದದ್ದಕ್ಕೂ ಕಾರಣವಿದೆ,ಮಹಾಸ್ವಾಮಿ.ನಿಮ್ಮ ಕಳಪೆ ಆಡಳಿತವನ್ನು ಕಂಡ ಜನ ಗದ್ದೆಗಳಲ್ಲಿ ಕೊಳೆತ ಟೊಮ್ಯಾಟೋ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.ಕೋಳಿಗಳು ಕೊಳೆತ ಮೊಟ್ಟೆಗಳನ್ನಿಡುತ್ತಿವೆ.ಇನ್ನೇನು ನಿಮ್ಮ ಆಗಮನವೊಂದೇ ಬಾಕಿ ನೋಡಿ.ಹಾಂ..ನಿಮ್ಮನ್ನು ಮಾಜಿ ಶಾಸಕರೇ ಎಂದು ಕರೆಯಲು ಕಾರಣವೇನೆಂಬುದನ್ನು ಪತ್ರದ ಕೊನೆಯಲ್ಲಿ ಬರೆದಿದ್ದೇನೆ.ಹಾಗಂತ..ನೇರವಾಗಿ ಪತ್ರದ ಕೊನೆಗೆ ಹೋಗಬೇಡಿ ಇರಿಪಾ.ನೀವು ಮಾಜಿಯಿಂದ ಹಾಲಿಯಾಗಲು ಇಷ್ಟು ವರುಷ ಕಾದಿರುವಿರಂತೆ ಇನ್ನು ಕೆಲವೇ ಕೆಲವು ಸೆಕೆಂಡುಗಳು ಕಾದರೆ ನಿಮ್ಮ ಸಾವಿರ ಕೋಟಿಯ ಕಳ್ಳ ಗಂಟಿನಲ್ಲಿ ಒಂದು ಬಿಡಿಗಾಸು ಕೂಡ ಹೋಗುವುದಿಲ್ಲ ಬಿಡಿ.
ಮಹಾಸ್ವಾಮಿ ನಮ್ಮ ಜನರಿಗೆಲ್ಲಾ ಬೆಳಗ್ಗೆಯಿಂದ ರಾತ್ರಿ ಮಲಗುವ ತನಕ ನಿಮ್ಮದೇ ಧ್ಯಾನವಾಗಿಬಿಟ್ಟಿದೆ.ನೀರಿಲ್ಲದ ಟ್ಯಾಂಕುಗಳ ಎದುರು,ರಸ್ತೆಯ ಹೊಂಡಗಳ ನಡುವೆ ನಿಲ್ಲಿಸಿದ ಗಾಡಿಗಳಲ್ಲಿ,ಅಯ್ಯೊ ನಿಮ್ಮ ಗುಣಗಾನ ಕೇಳಬೇಕು.ಅದನ್ನು ಕೇಳಲಾದರೂ ನೀವು ಒಮ್ಮೆ ಬರಲೇಬೇಕು.ಮೊನ್ನೆ ಒಬ್ಬ ರಸ್ತೆ ಬದಿಯಲ್ಲಿ ನಿಂತು ಮೂತ್ರ ವಿಸರ್ಜಿಸುವಾಗ, ಜನರೆಲ್ಲಾ ಅವನಿಗೆ ಬೈಯ್ಯುವುದು ಬಿಟ್ಟು ಅಲ್ಲೂ ನೆನೆದದ್ದೂ ನಿಮ್ಮ ಕಾರ್ಯವೈಖರಿಯನ್ನೇ.ಸ್ವಾಮಿ ನೀವೆನೋ ಅರಾಮವಾಗಿ ವಿಧಾನಸೌಧಕ್ಕೂ,ಮನೆಗೂ,ರೆಸಾರ್ಟ್ ಗಳಿಗೂ,ಓಡಾಡುತ್ತಾ ಸದನದಲ್ಲಿ ಬೇಸರವಾದಾಗ,ಏಷ್ಟು ನೋಡಿದರೂ ಬೇಸರವಾಗದಂತಹ ಚಿತ್ರಗಳನ್ನು ನೋಡುತ್ತಾ,ಸುಸ್ತಾದರೆ ನಿದಿರೆ ಮಾಡುತ್ತಾ ಆರಾಮಾವಾಗಿದ್ದೀರಿ.ಆದರೆ ನಿಮ್ಮ ಪರವಾಗಿ ಮತ ಯಾಚನೆ ಮಾಡಿದ ನಮ್ಮ ಗತಿ ,ದೇವರಿಗೆ ಪ್ರೀತಿ ಏನ್ನುವಂತಾಗಿದೆ.ನೀವು ಕೊಟ್ಟ ಹುಸಿ ಆಶ್ವಾಸನೆಗಳನ್ನೇ ಎದುರಿಗಿಟ್ಟುಕ್ಕೊಂಡು ಮತ ಭೇಡಿದ ನಮಗೇನು ಕಾದಿದೆಯೊ ಎನ್ನುವ ಆತಂಕ ಉಂಟಾಗುತ್ತಿದೆ.ಅಂದು ನೀವು ಒಂದಿಷ್ಟು ಶ್ವೇತ ವಸ್ತ್ರಧಾರಿಗಳೊಂದಿಗೆ ನಮ್ಮ ಊರಿಗೆ ಬಂದ ದಿನವನ್ನು ಯಾರೂ ಮರೆತಿಲ್ಲ.ಮನೆಯ ಸರ್ವ ಸದಸ್ಯರಿಗೂ ಬಿಡಿ,ದನಕರು,ನಾಯಿ,ಬೆಕ್ಕು ಎಲ್ಲದರ ಕಾಲಿಗೆ ಬಿದ್ದು ಮತಯಾಚನೆ ಮಾಡಿದಿರಿ.ಚಿಕ್ಕ ಮಕ್ಕಳನ್ನು ಎತ್ತಿ ಮುದ್ದಾಡಿದಿರಿ.ಎಲ್ಲರೊಂದಿಗೆ ಕುಳಿತು ಹಳ್ಳಿಯ ಸಮಸ್ಯೆಗಳ ಬಗ್ಗೆ ಕುರಿತು ಚರ್ಚಿಸಿದಿರಿ.ಎಲ್ಲವನ್ನೂ ಸರಿಪಡಿಸುವಂತೆ,ಪ್ರಮಾಣಿಸಿದಿರಿ.ಒಟ್ಟಾರೆ ಒಂದೆ ಮಾತಿನಲ್ಲಿ ಹೇಳುವುದಾದರೆ ಅಂದು ನೀವು ತುಂಬಾ ಚೆನ್ನಾಗಿ ನಾಟಕವಾಡಿದಿರಿ.ಬಣ್ಣ ಹಚ್ಚದೇ.ಬಣ್ಣ ಬದಲಾಯಿಸುವವರಿಗೆ ಎಲ್ಲಿಯ ಬಣ್ಣ ಅಲ್ವೇ?ಆದರೆ ಒಂದನ್ನು ಮಾತ್ರ ಎಲ್ಲರ ಸಮ್ಮುಖದಲ್ಲಿ ಹೇಳದಿದ್ದರೂ ಕಳುಹಿಸಿಕೊಟ್ಟಿರಿ.ಕತ್ತಲಾದ ಮೇಲೆ ಅದನ್ನೆಲ್ಲಾ ಸರಿಯಾಗಿ ಹಂಚೋಣವೆಂದರೆ,ನಿಮ್ಮ ಅಭಿಮಾನಿ ದೇವರುಗಳು ಮುಗಿಬಿದ್ದು ಅದರ ಸದುಪಯೋಗವನ್ನು ಪಡೆದುಕೊಂಡರು.ನೀವು ಕಳುಹಿಸಿಕೊಟ್ಟ ಅಮೃತ ದೇಹ ಸೇರುತ್ತಲೆ,ಎಲ್ಲೆಲ್ಲೂ ನಿಮ್ಮದೇ ಜೈಕಾರ ಸ್ವಾಮಿ.ನೀವು ಇರಬೇಕಿತ್ತು,ಇದ್ದಿದ್ದರೆ ಅದೆಷ್ಟು ಸಂತೋಷ ಪಡುತ್ತಿದ್ದಿರೋ ಏನೋ?ಇರಲಿ ಮುಂದಿನ ಬಾರಿ ಮಾತ್ರ ಮಿಸ್ ಮಾಡಿಕೊಳ್ಳಬೇಡಿ.ಕುಡಿದವರ ಬಾಯಿಯಲ್ಲಿ,ಕಣ್ಣಿನಲ್ಲಿ,ಮೂಗಿನಲ್ಲಿ…ಏಯ್..ಥೋ…ಅಂದರೆ ಪಂಚೇಂದ್ರಿಯಗಳಲ್ಲೂ ನಿಮ್ಮದೇ ಜಪ.ಬರೀ ಗಂಡಸರ ಬಗ್ಗೆ ಮಾತ್ರವಲ್ಲದೇ ಮಹಿಳೆಯರ ಬಗ್ಗೆಯೂ ಅತೀವ ಕಾಳಜಿ ವಹಿಸಿ ನೀವು ಕಳುಹಿಸಿದ್ದ ಸೀರೆಗಳನ್ನು ಹಂಚಿದೆವು.ಕಲರ್ ಸೆಲೆಕ್ಷನ್ ವಿಷಯದಲ್ಲಿ ಮಾತ್ರ ಮಹಿಳೆಯರ ಮಧ್ಯೆ ತುಂಬಾ ವೈಮನಸ್ಸು ಉಂಟಾಗಿದ್ದು ಬಿಟ್ಟರೆ ಎಲ್ಲವೂ ಸುಸೂತ್ರವಾಗೇ ನಡೆದಿತ್ತು ಸ್ವಾಮಿ.ಮಕ್ಕಳಿಗೆ ನೀವು ನೀಡಿದ್ದ ಕ್ಯಾಪ್ ಗಳನ್ನು ಕೊಟ್ಟಿದ್ದೆವು,ಅವುಗಳಂತು ಮಲಗುವಾಗಲೂ ಅದನ್ನು ಧರಿಸಿ ಮಲಗುತ್ತಿದ್ದವು.ಅಷ್ಟೊಂದು ಅಭಿಮಾನ ನೋಡಿ ಅವುಕ್ಕೆ,ಆ ಕ್ಯಾಪ್ ಗಳ ಮೇಲೆ. ಒಟ್ಟಾರೆಯಾಗಿ ನಾವು ನಮ್ಮ ಕೆಲಸಗಳನ್ನು ಚಾಚೂ ತಪ್ಪದಂತೆ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದೆವು.
ಇನ್ನು ವಿರೋಧ ಪಕ್ಷದವರು ಪ್ರಚಾರಕ್ಕೆಂದು ಬಂದಾಗ ನಮಗೂ ಅವರಿಗೂ ತೀರ ಜಗಳವಾಯಿತು ಸ್ವಾಮಿ.ಅವರನ್ನು ಇಲ್ಲಿಗೆ ಬರಬೇಡಿ ಎಂದು ಓಡಿಸಿದೆವು.ಆದರೆ ಅವರು ನಡೆದುಕೊಂಡೇ ವಾಪಾಸ್ಸಾದರು.ರಸ್ತೆಗಳಲೆಲ್ಲಾ ಗುಂಡಿ ನೋಡಿ, ಪಾಪ ಓಡುವುದಾದರು ಹೇಗೆ?ಇಷ್ಟೆಲ್ಲಾ ಮಾಡಿ ನಾವು ನಿಮ್ಮನ್ನು ವಿಧಾನಸೌಧದವರೆಗೂ ಕಳುಹಿಸಿದ್ದೇನೋ ನಿಜ.ಆದರೆ ನೀವು ಮಾಡಿದ್ದೇನು?ಗೆದ್ದು ಆರು ತಿಂಗಳಾಯಿತು.ಗಂಡಸರಿಗೆ ನೀವು ಕೊಟ್ಟ ಸಾರಯಿಯ ನೆನೆಪಿಲ್ಲ.ಹೆಂಗಸರ ಆ ಸೀರೆಯಲ್ಲಿ ಬಣ್ಣವೇ ಇಲ್ಲ.ಇಷ್ಟು ದಿನ ನಿಮ್ಮ ಆಗಮನಾಭಿಲಾಷಿಗಳಾಗಿದ್ದ ಪ್ರಜೆಗಳು,ಟೀವಿಯಲ್ಲಿ ನಿಮ್ಮ ಠೀವಿಯನ್ನು ಕಂಡು ಚಾನೆಲ್ ಚೇಂಜ್ ಮಾಡುತ್ತಿದ್ದಾರೆ.ಬಾಯಿಗೆ ಬಂದ ಹಾಗೆ ಉಗಿಯುತ್ತಿದ್ದಾರೆ. ನಿಮಗೂ ಹಾಗು ಹೆಚ್ಚು ನಮಗೂ.ನಿಮ್ಮ ಪಕ್ಷದ ಕಾರ್ಯಕರ್ತರಾದ ನಮಗೆ ಮನೆಯ ಹಿತ್ತಲಲ್ಲೇ ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ.ನೀರಿಲ್ಲದೇ ಬೇಸತ್ತ ಮಹಿಳೆಯರು ಕಳೆದ ವಾರ ಎಲ್ಲರೂ ಒಗ್ಗೂಡಿ ಕೊಡಪಾನಗಳನ್ನೆಲ್ಲಾ ರಸ್ತೆಯಲ್ಲಿರಿಸಿ ನಿಮ್ಮ ವಿರುದ್ಧ ಪ್ರತಿಭಟನೆ ಮಾಡುವ ಬಗ್ಗೆ ಯೋಚಿಸಿದ್ದರಂತೆ,ಆದರೆ ಧಾರಾವಾಹಿಯ ಸಮಯ ಹಾಗು ಪ್ರತಿಭಟನೆಯ ಸಮಯ ಸಹಘಟಿಸಿದ್ದರಿಂದ ವಿಚಾರವನ್ನು ಕೈ ಬಿಡಲಾಯಿತಂತೆ,ನಿಮ್ಮ ಪುಣ್ಯ.ಇಷ್ಟು ದಿನ ನಾನೊಬ್ಬ ಕಾರ್ಯಕರ್ತ ಎಂದು ಅದೇನೋ ಬೆಂಗಳೂರು ಕಡೆಯೆಲ್ಲಾ “ಹವಾ” ಅಂತಾರಲ್ಲಾ?ಅದನ್ನು ಕಾಪಾಡಿಕೊಂಡು ಬಂದವನು ನಾನು ಆದರೆ ಯಾವಾಗ ನೀವು ನಮ್ಮ ಹಳ್ಳಿಯ ದಾರಿ ಮರೆತಿರೊ ಅಲ್ಲಿಂದ ನನಗೆ ಕೆಟ್ಟ ಹವಾ ಶುರುವಾದಂತಿದೆ ನೋಡಿ.ಸ್ವಲ್ಪ ದಿನ ಜನರ ಬಾಯಿ ಮುಚ್ಚಿಸಲು”ಮದುವೆಯಾದ ಕೂಡಲೇ ಮಕ್ಕಳಾಗುತ್ತಾ ಸಾರ್ ಸ್ವಲ್ಪ ಕಾಯಬೇಕು.ಈಗ ಅಷ್ಟೆ ನಮ್ಮ ಶಾಸಕರು ವಿಧಾನಸೌಧದ ಮೆಟ್ಟಿಲು ಕಂಡಿದ್ದಾರೆ,ಅವರಿಗೆ ಸ್ವಲ್ಪ ಕಾಲಾವಕಾಶ ಕೊಡಿ”ಎಂದು ಬೆಂಕಿಗೆ ನೀರು ಸುರಿಯುವ ಕೆಲಸ ಮಾಡಿಕೊಂಡು ಬಂದಿದ್ದೆವು.ಊರಿನವರನ್ನು ಬಿಡಿ ಸ್ವಾಮಿ, ಮನೆಯವರೂ ಬೈಯ್ಯಲಾರಂಭಿಸಿದ್ದಾರೆ.ಮೊನ್ನೆ ಮೊನ್ನೆ ಹಲ್ಲೇ ಇಲ್ಲದ ನನ್ನಜ್ಜಿ ಹಲ್ಲು ಸೆಟ್ ಹಾಕಿಕೊಂಡು ನನಗೆ ಅರ್ಧ ಗಂಟೆಗಳ ಕಾಲ ಸುಧೀರ್ಘವಾಗಿ ಬೈಯ್ದಿದ್ದಾಳೆ.ನಂತರ ತಕ್ಷಣ ಅವಳನ್ನು ದೂರದಲ್ಲಿರುವ ಪಕ್ಕದ ಊರಿನ ಆಸ್ಪತ್ರೆಗೆ ಸೇರಿಸಲಾಯಿತು.ಇನ್ನು ನನ್ನ ಹೆಂಡತಿ ,ತಾನು ಬೈದು ಬೈದು ಸುಸ್ತಾದಗಲೆಲ್ಲಾ ತನ್ನ ತವರಿಗೆ ಫೋನ್ ಮಾಡಿ ಅವರಿಂದಲೂ ಬೈಯಿಸುತ್ತಿದ್ದಾಳೆ ಸ್ವಾಮಿ.ಮನೆಯವರ ಕಾಟ ತಾಳಲಾರದೆ ಈ ಪತ್ರವನ್ನು ನಮ್ಮ ಊರಿನ ಹೊರಗಡೆ ಒಂದು ಚಿಕ್ಕ ಸೇತುವೆ ಇದೆಯಲ್ಲಾ ಸ್ವಾಮಿ?ಅದೇ ಸ್ವಾಮಿ ಕಳೆದ ವರ್ಷ ನೀರಿನ ಸೆಳೆತಕ್ಕೆ ಒಂದು ಕಡೆ ವಾಲಿಕೊಂಡಿದೆಯಲ್ಲಾ?ಅಯ್ಯೋ…ನಿಮ್ಮ ತಂದೆಯವರು ಕುರ್ಚಿಯಲ್ಲಿದ್ದಾಗ ಬಂದು ಉದ್ಘಾಟನೆ ಮಾಡಿದ್ದರಲ್ಲಾ ಸ್ವಾಮಿ?ಇನ್ನೂ ಗೊತ್ತಾಗಲಿಲ್ಲವೇ?ಆ ಸೇತುವೆಯನ್ನು ನೀವ್ಯಾಕೆ ನೆನೆಪಿನಲ್ಲಿಟ್ಟುಕೊಂಡಿರುತ್ತೀರಿ?ಅದೇನು ವೋಟು ಹಾಕುತ್ತದೆಯೇ?ಐದು ವರುಷಕ್ಕೊಮ್ಮೆಯಾದರೂ ನೆನಪಿಸಿಕೊಳ್ಳಲು.ಈ ಪತ್ರವನ್ನು ಆ ಸೇತುವೆಯ ಕೆಳಗೆ ಕುಳಿತು ಬರೆಯುತ್ತಿದ್ದೇನೆ.ಸ್ವಾಮಿ ನಾನು ಓದಿದ್ದು ಐದನೇ ಕ್ಲಾಸ್ಸು ಅಷ್ಟೆ.ಆರಕ್ಕೆ ಹೋಗು ಅಂದಿದ್ದ ನಮ್ಮಪ್ಪ.”ಹೋಗಪ್ಪ ಯಾವಾನ್ ಅಷ್ಟೊಂದ್ ದೂರ ನಡೀತಾನೆ ಐದ್ ವರ್ಷಕ್ಕೆ ಸಾಕಾಗಿದೆ”ಅಂತ ಶಾಲೆಗೆ ಟಾಟಾ ಹೇಳಿದ್ದೆ ಸ್ವಾಮಿ.ನನಗೆ ಬರಿಯೋಕ್ ಬರಲ್ಲ ತಪ್ಪಿದ್ರೆ ತಿದ್ದಿ ಓದ್ಕೊಂಡ್ ಬಿಡಿ.ನಾವಂತೂ ಶಾಲೆಗೆ ಹೋಗಲಾಗಲಿಲ್ಲ ನಮ್ಮ ಮುಂದಿನ ಪೀಳಿಗೆಯಾದರೂ ನಾಲ್ಕಕ್ಷರ ಕಲಿಯಲಿ ಎಂಬ ಮಹಾದಾಸೆಯಿಂದ ಶಾಲೆಯ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದ ಶಾಂತಜ್ಜಿ ಮೊನ್ನೆ ಮೊನ್ನೆಯಷ್ಟೆ ಅಸುನೀಗಿದರು.ಶಾಲೆ ಬರುತ್ತೆ ಅಂತ ಕಾಯ್ತಾ ಇದ್ದಿದ್ರು,ಸಾವು ಬಂದು ಬಿಡ್ತು ಪಾಪ.
ನೀವೆನೋ ಏನೂ ಓದದಿದ್ದರೂ ಶಾಸಕರಾದಿರಿ.ಎಲ್ಲರ ಹಣೆಬರಹವನ್ನೂ ದೇವರು ಚಿನ್ನದ ಪೆನ್ನಿನಲ್ಲಿ ಬರೆದಿರುತ್ತಾನೆಯೇ ಹೇಳಿ?ನಿಮಗಾಗಿ,ನಿಮ್ಮ ಪಕ್ಷಕ್ಕಾಗಿ ಇಷ್ಟು ವರುಷಗಳಿಂದ ದುಡಿದಿದ್ದೇನೆ ಎನ್ನುವ ಚಿಕ್ಕ ಹಕ್ಕಿನಿಂದ ಇಷ್ಟೆಲ್ಲಾ ಬರೆಯುತ್ತಿದ್ದೇನೆ.ಏನಾದರೂ ಒಂದು ಮಾಡಿ ಸ್ವಾಮಿ.ಏನೂ ಆಗದಿದ್ದರೆ ರಾಜಿನಾಮೆ ಅಂತ ಒಂದಿದೆಯಲ್ಲಾ?ಅದನ್ನು ಕೊಟ್ಟೂ ಬಿಡಿ.ಮತ್ತೆ ಚುನಾವಣೆ ಬರುತ್ತಿದೆ,ಎಂದು ಖುಷಿ ಪಡುತ್ತೇವೆ.ಇನ್ನೂ ಬರೆಯುತ್ತಾ ಹೋದರೆ ತುಂಬಾ ಇದೆ ಸ್ವಾಮಿ.ನಾನು ಎಷ್ಟು ಬರೆದರೇನು ಪ್ರಯೋಜನ ಹೇಳಿ.ಇಲ್ಲಿಗೆ ಮುಗಿಸಿ ಬೀಡುತ್ತೇನೆ ಯಾರಾದರೂ ಬಂದು ನಾನಿಲ್ಲಿರುವುದನ್ನು ಕಂಡರೆ ಕಷ್ಟ,ಮತ್ತೆ ಬೈಯ್ಯಲಾರಂಭಿಸುತ್ತಾರೆ.ಅದು ಅಲ್ಲದೇ ಈ ಸೇತುವೆ ಯಾವಾಗ ಬೀಳುವುದೋ ಗೊತ್ತಿಲ್ಲ.ಅದಕ್ಕೆ ಈ ಪತ್ರವನ್ನು ಇಲ್ಲಿಗೆ ಮುಗಿಸಿಬಿಡಿತ್ತೇನೆ.ಹಾಂ…ಮರೆತೇ ಹೋಗಿದ್ದೆ ನೋಡಿ,ನಿಮ್ಮನ್ನು ಮಾಜಿ ಶಾಸಕರೇ ಎಂದು ಕರೆಯಲು ಕಾರಣವಿಷ್ಟೆ.ನಿಮಗೆ ಇಂತಹ ಪತ್ರಗಳು ದಿನಕದೆಷ್ಟು ಬರುತ್ತವೆಯೊ ಏನೋ?ಸಾವಿರಾರು ಪತ್ರಗಳಲ್ಲಿ ನೀವು ಎಲ್ಲವನ್ನೂ ದೇವರಾಣೆ ಓದಿರುವುದಿಲ್ಲ ಬಿಡಿ.ಈ ಪತ್ರವನ್ನ ಅರ್ಧಕ್ಕೆ ಓದಿ ಎಸೆಯಬಾರದು,ಕುತೂಹಲಕ್ಕಾದರೂ ಸಂಪೂರ್ಣವಾಗಿ ಓದಲಿ,ಎನ್ನುವ ಉದ್ದೇಶದಿಂದ,ಇಂತಹ ಒಂದು ಉಪಾಯವನ್ನು ಪ್ರಯೋಗಿಸಿದೆ ಅಷ್ಟೆ.ಕ್ಷಮೆ ಇರಲಿ. ನಿಮ್ಮ ಆಗಮನ(ನಮ್ಮ ಹಳ್ಳಿಗೆ),ನಿರ್ಗಮನ(ಶಾಸಕ ಸ್ಥಾನದಿಂದ)ದ ಅಭಿಲಾಷಿ..

ಇಂತಿ ನಿಮ್ಮ ಮಾಜಿ ಕಾರ್ಯಕರ್ತ…

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..