2992

A meaningful gesture by Old students of Maravanthe Govt. School

ಮರವಂತೆ.ಸಮುದ್ರವನ್ನು ಅಂಗಳವನ್ನಾಗಿ ಪಡೆದ ಸುಂದರ ಗ್ರಾಮ.ದೂರದವರಿಗೆ ಯಾರಿಗಾದ್ರೂ ಮರವಂತೆ ಗೊತ್ತಾ ಕೇಳಿದ್ರೆ ,”ಹೌದು ಒಂದ್ ಕಡೆ ಬೀಚು ಇನ್ನೊಂದ್ ಕಡೆ,ನದಿ ಇದೆ ತಾನೆ?ಸೂಪರ್ರಾಗಿದೆ” ಎನ್ನುವ ಪ್ರತಿಕ್ರಿಯೆ ಬರುವುದು ಸಹಜ.ಹೌದು ನಮ್ಮೂರು ಮರವಂತೆ ಗೂಗಲ್ ನಲ್ಲಿ ಅತಿ ಸರಳವಾಗಿ ಎಲ್ಲರಿಗೂ ಸಿಗುವುದು ಈ ಒಂದು ಕಾರಣಕ್ಕೆನೆ.ಒಬ್ಬ ಕ್ಯಾಮೆರಮ್ಯಾನ್ ಇಲ್ಲಿಗೆ ಬಂದರೆ ಅವನ ಕ್ಯಾಮೆರ ಬ್ಯಾಟರಿ ಖಾಲಿಯಾಗುವವರೆಗೂ ಅವನು ಪೋಟೊ ಕ್ಲಿಕ್ಕಿಸುತ್ತಲೆ ಇರಬೇಕು ಅಷ್ಟು ಸುಂದರವಾಗಿದ್ದಾಳೆ ಪ್ರಕೃತಿ ದೇವತೆ ಇಲ್ಲಿ.ಇದೆಲ್ಲಾ ಸೃಷ್ಟಿಯ ಕೊಡುಗೆ.ದೇವರು ಕೊಟ್ಟಿದ್ದು.ಅದನ್ನು ಕಾಪಾಡಿಕೊಂಡು ಹೋಗುತ್ತಿರುವುದು ನಮ್ಮ ಹೆಮ್ಮೆ.ಇಲ್ಲಿ ವಿಚಾರ ಅದಲ್ಲ.ಬರೀ ದೇವರು ಕೊಟ್ಟಿದ್ದನ್ನು ಇನ್ನೊಬ್ಬರಿಗೆ ತೋರಿಸಿಕೊಂಡು,ಇರುವ ದೇವರಿಗೆ ಹಣ್ಣುಕಾಯಿ ಮಂಗಳಾರತಿ ಮಾಡಿಕೊಂಡು ಹೆಮ್ಮೆ ಪಡುತ್ತಾ ಇದ್ದಿದ್ದರೆ ಮರವಂತೆ ಮಾದರಿ ಗ್ರಾಮವಾಗುತ್ತಿರಲಿಲ್ಲ.ದೇಶದ ಮೂಲೆ ಮೂಲೆಯಿಂದ ಜನರು ಬಂದು ಇಲ್ಲಿ ಊರನ್ನು ನೋಡಿ ಹೋಗುತ್ತಿರಲಿಲ್ಲ.ಮರವಂತೆಯ ಬಗ್ಗೆ ಬರೆಯಲು ಸಾಕಷ್ಟು ಹೆಮ್ಮೆಯ ವಿಚಾರಗಳಿವೆ.ಅದರಲ್ಲಿ ನನಗೆ ವೈಯಕ್ತಿಕವಾಗಿ ತುಂಬಾ ಖುಷಿ ಕೊಟ್ಟ ವಿಚಾರ.ಇತ್ತೀಚೆಗೆ ನಮ್ಮೆಲ್ಲರಿಗೆ ಸಾಕ್ಷಿಯಾದ ಹಳೆ ವಿಧ್ಯಾರ್ಥಿಗಳ ಹೊಸ ಯೋಚನೆ.ನನ್ನ ಚಿಕ್ಕಪ್ಪನ ಮಕ್ಕಳನ್ನು ಸಾಕಷ್ಟು ಬಾರಿ ನಾನೂ ಕೂಡ ಮಳೆಯಲ್ಲಿ ಒಂದು ಕೈಯಲ್ಲಿ ಕೊಡೆ,ಇನ್ನೊಂದು ಕೈಯಲ್ಲಿ ಮಗುವಿನ ಕೈಯನ್ನು ಹಿಡಿದುಕೊಂಡು ಸುಮಾರು ಒಂದು ಕಿಲೊ ಮೀಟರ್ ನಡೆದು ಶಾಲೆಗೆ ಬಿಟ್ಟು ಬಂದಿದ್ದೇನೆ.ಮಳೆಗಾಲದ ಆ ಜಂಜಾಟವನ್ನು ಅಕ್ಷರಷಹ ಅನುಭವಿಸಿದ್ದೇನೆ.ನನ್ನ ಆ ಒಂದು ದಿನದ ಅನುಭವ ಎಷ್ಟೋ ತಾಯಂದಿರ ದೈನಂದಿನ ಚಟುವಟಿಕೆ.ಇಂತಹ ಸಮಸ್ಯೆ ಮರವಂತೆಗಷ್ಟೆ ಸೀಮಿತವಲ್ಲ.ಎಲ್ಲಾ ಕಡೆಯೂ ಈ ರೀತಿಯ ಬವಣೆಗಳಿವೆ.ತಾಪತ್ರಯಗಳಿವೆ.ಆದರೆ ಪರಿಹಾರ? ಇದೆ.ಆದರೆ ಕಂಡುಕೊಂಡವರು ಕಡಿಮೆ.ಎಲ್ಲಿ ಹೊಸ ಯೋಚನೆಗಳಿರುತ್ತವೆಯೋ ಅಲ್ಲಿ ಸಮಸ್ಯೆಗಳಿಗೆ ಒಂದಲ್ಲ ಒಂದು ಪರಿಹಾರ ಸಿಕ್ಕೆ ಸಿಗುತ್ತದೆ ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಸಾಕ್ಷಿ ಇನ್ನೊಂದಿಲ್ಲ.
ಶಾಲೆಯಲ್ಲಿ ಕಲಿತದನ್ನು ಬಿಡಿ,ಕಲಿಸಿದ ಮಾಷ್ಟರನ್ನೇ,ಶಾಲೆಯನ್ನೆ ಮರೆತು ಬಿಡುವಂತ ಈ ಕಾಲದಲ್ಲಿ,ತಾವು ಓದಿದ ಶಾಲೆಗಾಗಿ ಸದಾ ಶ್ರಮಿಸುತ್ತಿರುವ ಹಳೆ ವಿಧ್ಯಾರ್ಥಿಗಳು ಮತ್ತು ಎಸ್ ಡಿ ಎಂ ಸಿ ಸದಸ್ಯರ ಕ್ರಿಯಾಶೀಲ ಯೋಚನೆಯಿಂದಾಗಿ ಚಿಕ್ಕ ಮಕ್ಕಳಿಗೆ ಮನೆಯಿಂದ ಶಾಲೆಗೆ ಓಡಾಡಲು ಸುಮಾರು ಹದಿನಾಲ್ಕು ಲಕ್ಷ ವೆಚ್ಚದ ಶಾಲಾ ವಾಹನವೊಂದನ್ನು ನೀಡಲಾಗಿದೆ .ಇಂತಹ ಸೃಜನಶೀಲ ಯೋಚನೆ ಎಷ್ಟು ಊರಿನ ಜನರಿಗೆ ಬಂದಿದೆ? ಬಂದರೂ ಎಷ್ಟು ಕಡೆ ಅದು ಸಾಕಾರಗೊಂಡಿದೆ? ಅಲ್ಲೆ ಅಲ್ಲವೆ ಇರುವುದು ಹೆಮ್ಮೆಯ ವಿಚಾರ.ಬರೀ ಖಾಸಗಿ ಶಾಲೆಯ ಮಕ್ಕಳು ವ್ಯಾನ್ ನಲ್ಲಿ ಹೋಗಿ ಬರುವುದನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದ ಪುಟಾಣಿಗಳಿಂದು ದೊಡ್ಡದೊಂದು ಹಳದಿ ಬಸ್ ನಲ್ಲಿ ಕುಳಿತು ಪಕ್ಕದಲ್ಲಿ ಹೋಗುತ್ತಿರುವ ಖಾಸಗಿ ಶಾಲೆಯ ವಾಹನದ ಡ್ರೈವರ್ ಗೆ ಟಾಟಾ ಮಾಡುವಾಗ ಅದೆಷ್ಟು ಖುಷಿಯಾಗುತ್ತದೆ ಗೊತ್ತಾ?ಅನುದಿನ ಮಗುವೊಂದು ಸುರಕ್ಷಿತವಾಗಿ ಶಾಲೆಗೆ ಹೋಗಿ ಬಂದಾಗ ತಂದೆ ತಾಯಿಗಾಗುವ ಸಮಾಧಾನದಲ್ಲಿ ಅದೆಷ್ಟು ಧನ್ಯತೆ ಇದೆ ಗೊತ್ತೆ? ಪ್ರತಿದಿನವೂ ಈ ಒಂದು ಸುಂದರ ಯೋಚನೆಗೆ ಕೈಜೋಡಿಸಿದವರು ಅದೆಷ್ಟು ಪುಣ್ಯವನ್ನು ಗಳಿಸುತ್ತಿರಬಹುದಲ್ಲವೆ? ಈ ಲೇಖನದ ಉದ್ದೇಶ ನನ್ನ ಊರಿನ ಹಿರಿಮೆಯನ್ನು ಎಲ್ಲರಿಗೂ ಪರಿಚಯಿಸಬೇಕು ಎನ್ನುವುದಷ್ಟೆ ಅಲ್ಲ.ನಮ್ಮೂರಿನ ಜನರ ಇಂತಹ ಯೋಚನೆಗಳು ಎಲ್ಲರಿಗೂ ಮಾದರಿಯಾಗಲಿ ಎನ್ನುವುದು.ಕನ್ನಡ ಶಾಲೆಗೆ ಬೀಗ ಬೀಳುತ್ತಿರುವ ಈ ಕಾಲದಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ತರಲು ಇಂತಹ ಕ್ರಿಯಾಶೀಲ ಮನಸ್ಸುಗಳು ಒಂದಾಗಲಿ ಎನ್ನುವುದು.ಇದಾದರೆ ನಾವು ಉದ್ದಾರವಾಗುತ್ತೇವೆ.ನಾವು ಉದ್ದಾರವಾದರೆ ದೇಶ ಉದ್ದಾರವಾಗುತ್ತದೆ.

ಶಾಲಾ ಮಕ್ಕಳ ಹಾಗು ಅವರ ತಂದೆ ತಾಯಿಯರ ಗೋಳು ನೋಡಿ ಮಿಡಿದ ಪ್ರತಿಯೊಂದು ಹೃದಯಕ್ಕೆ ಈ ಒಂದು ಲೇಖನವನ್ನು ಅರ್ಪಿಸುತ್ತಿದ್ದೇನೆ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..