1659

ಅಂಬುಧಿಯ ದಡದ ಧೀ ಶಕ್ತಿ

ಕೆಲವೊಂದಿಷ್ಟು ಜನ ಇರ್ತಾರೆ. ೪೦ ತುಂಬಿದರೆ ಜೀವನವೇ ಮುಗೀತು ಎಂಬಂತೆ ಬದುಕ್ತಿರ್ತಾರೆ. ಅಂಥವರು ನಿವೃತ್ತಿ ೬೦ ವರ್ಷಕ್ಕಾದರೂ ಕೊನೆಯ ೨೦ ವರ್ಷ ನಿರ್ಜೀವ ಜಡ ಬದುಕನ್ನು ಬದುಕಿರುತ್ತಾರೆ. ಆದರೆ ಇನ್ನೂ ಕೆಲವರಿಗೆ ತಾವು ಮಾಡಬೇಕಾದ ಕೆಲಸದ ಬಗ್ಗೆ ಯಾವಾಗಲೂ ಅಪೂರ್ಣತೆಯ ಅತೃಪ್ತಿ ಇರುತ್ತದೆ. ಯಾವಾಗಲೂ ಇನ್ನೂ ಹೆಚ್ಚು ಬೇರೆ ಬೇರೆ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರ್ತಾರೆ. ಕೊನೆಯ ಉಸಿರಿನವರೆಗೂ ಜೀವನೋತ್ಸಾಹ ಕಳೆದುಕೊಳ್ಳದೆ ಬದುಕುವ ಚಟುವಟಿಕೆಯಿಂದಿರುವ ಜೀವಗಳವು. ಅಂಥವರಿಗೆ ವಯಸ್ಸು ಅನ್ನೋದು ಬರೀ ಸಂಖ್ಯೆ ಮಾತ್ರ. ಅಂಥವರು ಇಹಕ್ಕೆ ಸಲಾಮು ಹೊಡೆದು ಪರಲೋಕಕ್ಕೆ ತೆರಳಿದ ಮೇಲೂ ಇನ್ನೂ ನಮ್ಮಲ್ಲಿ ತಮ್ಮ ಚೈತನ್ಯ ಉಳಿಸಿಹೋಗುತ್ತಾರೆ. ಅಂಥವರಲ್ಲಿ ಒಬ್ಬರು “ಕಡಲ ತೀರ ಭಾರ್ಗವ ” ಶಿವರಾಮ್ ಕಾರಂತ…
1 ಇಲ್ಲಿ ಬಳಸಿರುವ ಚಿತ್ರಪಟಗಳನ್ನು ಕೆ. ಶಿವರಾಮ ಕಾರಂತ page ಇಂದ ಎರವಲು ಪಡೆಯಲಾಗಿದೆ ..
ಅವರ ೯೦ ನೇ ಹುಟ್ಟುಹಬ್ಬದ ದಿನ ಕಾಲಿಗೆ ಗೆಜ್ಜೆ ಕಟ್ಟಿ ಬಣ್ಣ ಬಳಿದುಕೊಂಡು ಯಕ್ಷಗಾನವಾಡಿದ ಚಲನಶೀಲ ವ್ಯಕ್ತಿ ಅವರು. ೬೦ ವರ್ಷದ ನಂತರದ ದಿನಗಳಲ್ಲೂ ತಮ್ಮ ಅಂಬಾಸಿಡರ್ ಕಾರಿನಲ್ಲಿ ರಾಜ್ಯ ಪರ್ಯಟನೆ ತೆರಳುವಂತ ಉತ್ಸಾಹಿಗಳು.ಯಾವುದೇ ಒಂದು ಸಿದ್ಧಾಂತಕ್ಕೆ ತಮ್ಮನ್ನು ಬಂಧಿಸಿಕೊಳ್ಳದೇ ಸಮೃದ್ಧವಾಗಿ ಮತ್ತು ಸ್ವಚ್ಛಂದವಾಗಿ ಬದುಕಿದವರು ಅವರು. ಮಾತುಗಳು ಕೂಡಾ ಅಷ್ಟೇ ನೇರ ಮತ್ತು ನಿಷ್ಠುರ. ಒಮ್ಮೆ ಪತ್ರಕರ್ತರು ಅವರಿಗೆ ಕೇಂದ್ರ ಸರ್ಕಾರದಿಂದ ಸಾಹಿತ್ಯಕ್ಕಾಗಿ ಸ್ಥಾಪಿಸಲ್ಪಟ್ಟ ವಿವಿಧ ಅಕಾಡೆಮಿಗಳ ಬಗ್ಗೆ ಪ್ರಶ್ನೆ ಹಾಕ್ತಾರೆ. ಕಾರಂತರು ” ಕೂಡಲೇ ಅವನ್ನೆಲ್ಲ ಮುಚ್ಚಿಬಿಡಿ” ಅಂತ ಹೇಳ್ತಾರೆ. ಸರ್ಕಾರ ತನ್ನ ಪಾಡಿಗೆ ರಾಜಕಾರಣ ಮಾಡಿಕೊಂಡು ಇರಲಿ ಕಲೆ ಸಾಹಿತ್ಯ ಕ್ಷೇತ್ರಕ್ಕೆ ಅವರ ಸ್ಪರ್ಶವಾಗದೇ ಇರುವುದೇ ಒಳ್ಳೆಯದು. ಅವೆಲ್ಲಾ ಸ್ವಹಿತಾಸಕ್ತಿಗೆ ಸಾಹಿತ್ಯ ಕ್ಷೇತ್ರವನ್ನು ಬಳಸಿಕೊಳ್ತಾವೆ. ಅದಲ್ಲದೆ ಒಳಗಿನ ಜನ ತಮ್ಮ ಹೆಸರನ್ನು ತಾವೇ ಪ್ರಶಸ್ತಿ ಪುರಸ್ಕಾರಗಳಿಗೆ ಶಿಫಾರಸು ಮಾಡಿಕೊಳ್ತಾರೆ ಅಂತ ನೇರಾನೇರ ವಿವರಿಸಿ ಬಿಡುತ್ತಾರೆ. ಇತ್ತೀಚೆಗೆ ಅಂಥ ನೂರಾರು ಅಕೆಡಮಿ ಬೆಳೆದು ಇಂಥ ಅಸಹ್ಯವಾದ ರಾಜಕೀಯಕ್ಕೆ ಮೀರಿದ ರಾಜಕಾರಣ ಸಾಹಿತ್ಯ ಕ್ಷೇತ್ರದಲ್ಲಿ ನಡೆಯುವುದನ್ನು ಅವರು ಆಗಲೇ ಮನಗಂಡಿದ್ದರು. ಇಂಥ ಪಾರದರ್ಶಕ ಉತ್ತರ ಕೊಡುವ ಜನ ಯಾವುದೇ ಪ್ರಶಸ್ತಿ ಪುರಸ್ಕಾರಗಳ ನಿರೀಕ್ಷೆ ಇಲ್ಲದವರಾಗಿರಬೇಕಾಗಿರುತ್ತದೆ. ಹೌದು ಕಾರಂತರು ಹಾಗೇ ಇದ್ದರು. ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಾಗ ತುರ್ತು ಪರಿಸ್ಥಿತಿ ಹೇರಿದ್ದನ್ನು ವಿರೋಧಿಸಿ ಇಂದಿರಾಗಾಂಧಿಯವರಿಗೆ ಪತ್ರ ಬರೆದು ಪ್ರಶಸ್ತಿ ವಾಪಸು ಮಾಡಿದವರು ಅವರು.
ಕಾರಂತರು ಯಾವತ್ತೂ ತಮ್ಮ ಕೆಲಸಕ್ಕೊಂದು ಬೇಲಿ ಹಾಕಿಕೊಳ್ಳಲಿಲ್ಲ. ಅವರು ಎಲ್ಲಾ ಪ್ರಕಾರದ ಸಾಹಿತ್ಯವನ್ನೂ ಪುಟಕ್ಕಿಳಿಸಿದ್ದಾರೆ. ಕಥೆ,ಸಣ್ಣ ಕಥೆ, ಕಾದಂಬರಿ, ವಿಡಂಬನಾ ಕೃತಿ, ಮಕ್ಕಳ ಸಾಹಿತ್ಯ, ವಿಮರ್ಶೆ, ಬಿಡಿ ಬರಹ ಸಂಕಲನ , ವಿಶ್ವಕೋಶ, ನಿಘಂಟು, ಆತ್ಮಕಥೆ, ಜೀವನ ಚರಿತ್ರೆ, ವಿಜ್ಞಾನ ಸಾಹಿತ್ಯ, ನಾಟಕ, ಕವನ ಸಂಕಲನ, ಅನುವಾದ, ಸಂಪಾದಿತ ಕೃತಿ ಹಾಗೂ ೬ ಇಂಗ್ಲಿಷ್ ಕೃತಿಗಳು ಸೇರಿ ಒಟ್ಟು ೪೦೭ ಕೃತಿಗಳನ್ನು ರಚಿಸಿದ್ದರು. ಪಕ್ಷಿಗಳ ಕುರಿತ ತಮ್ಮ ಕೃತಿಗೆ ಮತ್ತು ತಮ್ಮ ಹಲವು ಪುಸ್ತಕಗಳ ಮುಖಪುಟಗಳಿಗೆ ತಾವೇ ಕುಂಚ ಹಿಡಿದು ಚಿತ್ರ ಬರೆದು ಬಿಡುತ್ತಿದ್ದರು. ಬರಹದ ವಿಷಯಕ್ಕೆ ಬಂದರೆ ಅವರೊಬ್ಬ ಬರೀ ವ್ಯಕ್ತಿಯಲ್ಲ ಒಂದು ದೊಡ್ಡ ಸಂಸ್ಥೆ. ಬರಹಗಳಿಗೆ ತಮ್ಮನ್ನು ತಾವು ಬಂಧಿಸಿಕೊಳ್ಳದೇ ಫೋಟೊಗ್ರಾಫಿ, ಸಂಶೋಧನೆ, ಚಿತ್ರಕಲೆ, ಪ್ರವಾಸ, ಯಕ್ಷಗಾನ, ಮೂಕಿಚಿತ್ರ,ನಾಟಕ, ನಟನೆ, ನಿರ್ದೇಶನ ಇತ್ಯಾದಿ ಕ್ಷೇತ್ರಗಳಿಗೆ ತಮ್ಮನ್ನು ತಾವು ತೊಡಗಿಸಿಕೊಂಡರು. ೪೦೭ ಕೃತಿಗಳನ್ನು ಬರೆಯುವುದೇ ಅಸಾಮಾನ್ಯ ಕೆಲಸ ಅಂತದ್ದರಲ್ಲಿ ಇಷ್ಟೆಲ್ಲ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬರೆಯುವುದು ಕೂಡಾ ಸಾಧನೆಯೇ ಸರಿ. ಅವರ ಬರಹದ ಬಗ್ಗೆ ಬರೆಯುತ್ತಾ ಒಮ್ಮೆ ರೋಹಿತ್ ಚಕ್ರತೀರ್ಥರು ಉಲ್ಲೇಖಿಸುವಂತೆ ಅವರು ಅತಿವೇಗವಾಗಿ ಬರೆಯಬಲ್ಲವರಾಗಿದ್ದರು. ಹಲವು ನೂರು ಪುಟಗಳ ಕೃತಿಗಳನ್ನು ಬರೀ ಎರಡು ಮೂರು ದಿನಗಳಲ್ಲೇ ಬರೆದು ಮುಗಿಸಿ ಬಿಡುತ್ತಿದ್ದರಂತೆ.ಅವರ ಬರಹಗಳು ಇಂದಿಗೂ ತಮ್ಮ ಪ್ರಭಾವವನ್ನು ಉಳಿಸಿಕೊಂಡಿವೆ. ಅಂಥ ತ್ರಿಕಾಲಗಳಲ್ಲಿಯೂ ಪ್ರಸ್ತುತತೆಯನ್ನು ಉಳಿಸಿಕೊಂಡು ಹೋಗಬಲ್ಲ ಸಾಹಿತ್ಯ ಸೃಷ್ಟಿಗೆ ಅತಿ ದೊಡ್ಡ ವೈಚಾರಿಕ ದೃಷ್ಟಿಯೂ ಬೇಕಾಗುತ್ತದೆ. ಆ ದೃಷ್ಟಿಕೋನ ತತ್ಕಾಲಕ್ಕೆ ಸೀಮಿತವಾಗದೆ ಭವಿತವ್ಯದ ಬಗ್ಗೆಯೂ ಚಿಂತಿಸಬೇಕಾಗುತ್ತದೆ. ಅವತ್ತಿನ ಜನಜೀವನವನ್ನು ಕಟ್ಟಿಕೊಡುತ್ತಾ ಸಮಾಜದಲ್ಲಿನ ಜಾಢ್ಯವನ್ನು ಖಂಡಿಸುತ್ತಾ ಬರೆಯಲು ಎಂಟೆದೆ ಇರಬೇಕಾಗುತ್ತದೆ. ಸಮಕಾಲೀನ ಕಂದಾಚಾರಗಳಿಂದ ದೂರವಿದ್ದು ಗೊಡ್ಡು ಸಂಪ್ರದಾಯಗಳ ಖಂಡಿಸುತ್ತಲೇ ಬದುಕಿದವರು ಅವರು. ಅದಕ್ಕೆ ಉದಾಹರಣೆ ಎಂಬಂತೆ ವೇಶ್ಯೆಯರಿಗೆ ಅವರೇ ಗಂಡು ಹುಡುಕಿ ಮದುವೆ ಮಾಡಿದರು. ತುಳಿತಕ್ಕೊಳಗಾದ ದಲಿತರ ಪರವಾಗಿ ಹಲವು ಸಾಹಿತ್ಯಿಕ ಕೃತಿ ರಚನೆ ಮಾಡಿದರು. ಎಲ್ಲಾ ವರ್ಗದ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಿದರು.
ಸಮಕಾಲೀನ ಯುವಸಾಹಿತಿಗಳಿಗೆ ಚಲನಚಿತ್ರ ಬರಹಗಾರರಿಗೆ ಇವರಿಂದ ಸಿಕ್ಕ ಸ್ಪೂರ್ತಿ ಅಪಾರ. ಅದನ್ನು ಸ್ವತಃ ಗಿರೀಶ್ ಕಾರ್ನಾಡ್ ಮತ್ತು ಯು.ಆರ್. ಅನಂತಮೂರ್ತಿಯವರು ಹಲವು ಸಲ ಹೇಳಿಕೊಂಡಿದ್ದಾರೆ. ಇಷ್ಟಕ್ಕೆ ಸೀಮಿತರಾಗದೇ ಕೆನರಾ ಕ್ಷೇತ್ರದಿಂದ ಒಮ್ಮೆ ಚುನಾವಣೆಯಲ್ಲಿಯೂ ಸ್ಪರ್ಧಿಸಿದರು. ಆದರೆ ಜನ ಬುದ್ಧಿವಂತರಿಗೆ ಮತ ಹಾಕುವುದು ಕಡಿಮೆ ಮತ್ತು ರಾಜಕೀಯ ಕುತಂತ್ರಗಳು ಕಾರಂತರಂತಹ ಪಾರದರ್ಶಕ ವ್ಯಕ್ತಿಗೆ ತಿಳಿಯುವುದಾದರೂ ಹೇಗೆ? ಅದಕ್ಕೆ ಪರಾಭವಗೊಂಡರು.
ಯಕ್ಷಗಾನವೆಂಬ ಕಡಲತೀರದ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಯಕ್ಷಗಾನಕ್ಕೆ ಸ್ವಲ್ಪ ಆಧುನಿಕತೆಯ ಸ್ಪರ್ಶ ನೀಡಿದವರು ಕಾರಂತರೇ ಅಂದರೆ ತಪ್ಪಾಗಲಿಕ್ಕಿಲ್ಲ. ಅದರ ಕುರಿತು ಎರಡು ಕೃತಿಗಳನ್ನು ರಚಿಸಿದ್ದರು.ಅವರಿಗೆ ಅಪಾರವಾದ ಪರಿಸರ ಪ್ರೇಮವಿತ್ತು ಪಶ್ಚಿಮ ಘಟ್ಟಗಳನ್ನು ಉಳಿಸಲು ಅವರು ಮಾಡಿದ ಚಳುವಳಿಗಳೆ ಅದಕ್ಕೆ ಸಾಕ್ಷಿ.
ಅದಲ್ಲದೆ ಸರ್ಕಾರಗಳು ಶಿಕ್ಷಣ ಕ್ಷೇತ್ರದಿಂದ ಹೊರಗಿರಬೇಕು ಎಂದು ಅವರು ಹೇಳಿದ್ದರು. ಮುಂದುವರೆಯುತ್ತಾ ದೇಶಪ್ರೇಮವನ್ನು ನಾವು ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಪಠ್ಯದ ಮೂಲಕ ಬಿತ್ತಬೇಕು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಮಕ್ಕಳೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ ಯಾವುದಾದರೂ ಶಿಕ್ಷಣ ಸಂಸ್ಥೆಗಳು ಅವರನ್ನು ಭಾಷಣಕ್ಕೆಂದು ಆಹ್ವಾನಿಸಿದರೆ ಅಷ್ಟು ಚಿಕ್ಕ ವಯಸ್ಸಿನ ಮಕ್ಕಳಿಗೆ ಭಾಷಣ ಮಾಡುವ ಬದಲು ಅವರೊಂದಿಗೆ ಆಟವಾಡಬೇಕು ಎಂದು ಹೇಳುತ್ತಿದ್ದರು. ಆಗಿನ ಶಿಕ್ಷಣ ವ್ಯವಸ್ಥೆ ಸರಿ ಕಾಣದೇ ಇದ್ದಾಗ ಪುತ್ತೂರಿನಲ್ಲಿ ಬಾಲವನ ಎಂಬ ಹೆಸರಿನ ಒಂದು ಶಾಲೆಯನ್ನು ತೆಗೆದರು. ಪುತ್ತೂರಿನಲ್ಲಿ ಒಂದು ಮುದ್ರಣಾಲಯವನ್ನೂ ಸ್ಥಾಪಿಸಿದರು.
ಕನ್ನಡದ ಶ್ರೇಷ್ಟ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ , ಸಾಹಿತ್ಯ ಅಕೆಡಮಿ ಫೆಲೋಶಿಪ್, ಸಂಗೀತ ನಾಟಕ ಅಕೆಡಮಿ, ಮೈಸೂರು, ಮೀರತ್, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ದಾದಾಬಾಯಿ ನೌರೋಜಿ ಪ್ರಶಸ್ತಿ, ಪಂಪಾ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕೆಡಮಿ, ಸಂಗೀತ ಅಕೆಡಮಿ, ಸ್ವದೇಶೀ ಅಕೆಡಮಿ, ತುಳಸಿ ಸಮ್ಮಾನ ಈ ತರಹದ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾದರು. ಅದಲ್ಲದೆ ಅವರಿಗೆ ಮರಣೋತ್ತರವಾಗಿ ನ್ಯಾಷನಲ್ ಫಿಲ್ಮ್ ಅವಾರ್ಡ್ ಕೂಡಾ ಲಭಿಸುತ್ತದೆ. ಯಾವ ಖ್ಯಾತಿ ಮತ್ತು ಪ್ರಶಸ್ತಿಗಳ ಅಪೇಕ್ಷೆ ಇಲ್ಲದೇ ತನಗೆ ಸರಿ ಎನಿಸಿದ್ದನ್ನು ಮಾಡುತ್ತಾ ಹೋದ ಕಾರಂತರಿಗೆ ಪ್ರಶಸ್ತಿ ಪುರಸ್ಕಾರಗಳು ತಾವಾಗಿಯೇ ಹಿಂಬಾಲಿಸಿದವು. ಅವರ ಚೋಮನದುಡಿ, ಬೆಟ್ಟದ ಜೀವ ಎಂಬ ಕೃತಿಗಳು ಸಿನಿಮಾ ರೂಪ ಪಡೆದವು. ಮತ್ತೊಂದು ಕೃತಿ ಚಿಗುರಿದ ಕನಸು ಎಂಬ ವ್ಯಕ್ತಿಗೆ ತನ್ನ ಮೂಲವನ್ನು ಅರಿಯುವ ಹಪಹಪಿಯನ್ನು ಬಿಡಿಸಿ ಹೇಳುವ ಕಥೆಯನ್ನು ಆಧರಿಸಿ ಕಮರ್ಷಿಯಲ್ ಚಿತ್ರವೊಂದು ಹೊರಬಂತು. ಆದರೆ ಈಗಿನ ಪೀಳಿಗೆಯ ಬದಲಾದ ಅಭಿರುಚಿ ಅನ್ನೋದಕ್ಕಿಂತ ಹೆಚ್ಚಿದ ಅರುಚಿಯಿಂದಾಗಿ ಚಿತ್ರ ಕಮರ್ಷಿಯಲ್ಲಾಗಿ ಗೆಲ್ಲದಿದ್ದರು ಸದಭಿರುಚಿಯ ಚಿತ್ರರಸಿಕರ ಮನವನ್ನು ಗೆದ್ದಿತು.
ಹೀಗೆ ಕಡಲತೀರದ ಧೀ ಶಕ್ತಿಯ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ ಹೆಸರಾಂತ ಬರಹಗಾರ ರಾಮಚಂದ್ರ ಗುಹಾ ಕಾರಂತರನ್ನು “ಆಧುನಿಕ ಭಾರತದ ರವೀಂದ್ರನಾಥ ಟ್ಯಾಗೋರ್” ಅಂಥ ಕರೆಯುತ್ತಾರೆ. ಸಮುದ್ರದ ನೀರನ್ನು ಬೊಗಸೆಯಲ್ಲಿ ಹಿಡಿಯುವ ಅಸಾಧ್ಯ ಪ್ರಯತ್ನವನ್ನು ಈ ಲೇಖನ ಮಾಡಿದೆ ಅಷ್ಟೆ.ಕಾರಂತರ ಮರಣದ ನಂತರ ಸರ್ಕಾರದವರು ಅವರ ಹುಟ್ಟೂರಾದ ಕೋಟಾದಲ್ಲಿ “ಥೀಮ್ ಪಾರ್ಕ್” ಹೆಸರಲ್ಲಿ ಸರ್ಕಾರಿ ಜಾಗದಲ್ಲಿ ಒಂದು ಸ್ಮಾರಕ ಕಟ್ಟಿಸಿದ್ದಾರೆ. ನಾನು ಒಮ್ಮೆ ಭೇಟಿ ಕೊಟ್ಟಿದ್ದೆ. ಅಲ್ಲಿ ಒಂದು ಕೋಣೆಯನ್ನು ಮಕ್ಕಳ ಬಾಲವಾಡಿಯನ್ನು ಕಟ್ಟಿ ಅವರ ಮಕ್ಕಳ ಪ್ರೇಮವನ್ನು ಜೀವಂತವಾಗಿರಿಸಿದ್ದಾರೆ. ಅದಲ್ಲದೆ ಒಂದು ದೊಡ್ಡ ಆಡಿಟೋರಿಯಂ, “ಕಾರಂತ ಸಿರಿ” ಎಂಬ ಒಂದು ಪುಟ್ಟ ಪುಸ್ತಕದ ಅಂಗಡಿ, ಮತ್ತು ಅವರ ವಿವಿಧ ಫೋಟೊಗಳು ಒಂದು ದೊಡ್ಡ ಗ್ಯಾಲರಿಯಿದೆ. ಅದರಲ್ಲಿ ಅವರ ಯಕ್ಷಗಾನದ ಫೋಟೊಗಳು ನಿಮ್ಮ ಗಮನ ಸೆಳೆಯುವುದು ಖಚಿತ. ಅಂಬುಧಿಯ ದಡದ ಧೀ ಶಕ್ತಿಯನ್ನು ಮರಣೋತ್ತರವಾಗಿ ಕಟ್ಟಿಕೊಡುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಒಂದು ಸಣ್ಣ ಪ್ರಯತ್ನ ತಮಗೆ ಸಮಯವಿದ್ದಾಗ ಒಮ್ಮೆ ಭೇಟಿ ಕೊಡಿ….

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..