- By Mohan Shetty N
- Saturday, February 13th, 2016
ಇನ್ನೇನು ಬೇಸಿಗೆ ರಜಾ ಮುಗೀತಾ ಬರ್ತಿದ,ಏಪ್ರಿಲ್ ಮೇ ರಜಾ ಅಂದ್ರೆ ಅಜ್ಜಿ ಮನೆ,ಅಜ್ಜಿಯ ಪ್ರೀತಿಯ ಕ್ಯೆತುತ್ತು , ರಜಾದಲ್ಲಿ ತಪ್ಪದೆ ಬರುವ ಅತ್ತೆ ,ಮಾವ ,ಅಜ್ಜ, ಅಜ್ಜಿ ,ದೊಡ್ಡಪ್ಪ ,ಚಿಕ್ಕಮ್ಮನ ಮಕ್ಕಳು ಹಾಗೆ ಅಕ್ಕಪಕ್ಕದ ಗೆಳೆಯರ ಬಳಗದ ಜೊತೆ , ಕ್ರಿಕೆಟ್, ಲಗೋರಿ ,ಕಣ್ಣಾಮುಚ್ಚಾಲೆ , ಮರಕೋತಿ ಆಟ, ಚಿನ್ನಿ ದಾಂಡು,ಕುಂಟೆ ಬಿಲ್ಲೇ ,ಒಂಟಿ ಕಾಲಿನ ಆಟ, ಓಡಾಟ, ಆಟ ಆಡ್ತಾ ಆಡ್ತಾ ಯಾಕಾದ್ರು ಇಷ್ಟು ಬೇಗ ಕತ್ತಲೆ ಆಗುತ್ತೋ ಅನ್ನೋ ಮನಸು ,ಆದ್ರೇನಾಯ್ತು ಮನೆ ಒಳಗಡೆ ಮತ್ತೆ ಕಳ್ಳ ಪೋಲಿಸ್ ಆಟ, ಹಾವು ಏಣಿ, ಕೇರಂ, ಚೆನ್ನೆ ಮನೆ ಆಡಬಹುದಲ್ಲ ಅನ್ನೋ ಸಮಾಧಾನ ,ಇನ್ನು ನಿದ್ದೆ ಬರೋ ತನಕ ಅಜ್ಜಿ ,ಅಜ್ಜ ,ಹೇಳೋ ಕಥೆ ಗಳು, ಸರಿಗಮಪ ,ಜೊತೇಲಿ ಬೇಗ ಮಲಗಬೇಕು ಯಾಕಂದ್ರೆ, ಬೆಳಿಗ್ಗೆ ಬೇಗ ಎದ್ದು ರಾತ್ರಿ ಬಂದ ಗಾಳಿ ಮಳೆಗೆ ಬಿದ್ದ ಮಾವಿನ ಹಣ್ಣು ಹೆಕ್ಕಿ ತರುವ ಅವಸರ , ಅದರಲ್ಲೂ ಸ್ಪರ್ಧೆ, ಇನ್ನು ಎರಡು ದಿನದ ಹಿಂದೆ ಹಣ್ಣಿಗೆಂದು ಹಾಕಿದ ಹಲಸಿನ ಕಾಯಿ ಹಣ್ಣು ಆಗಿದ್ಯ ಅಂತ ಹೋಗಿ ನೋಡುವ ಅವಸರ, ರಾತ್ರಿ ಜೋರಾಗಿ ಬಂದ ಮಳೆಯಿಂದ ಮನೆ ಹಿಂದಿನ ಪುಟ್ಟ ಕಾಲುವೆಯಲ್ಲಿ ನೀರು ಬಂದಿದ್ಯ ಅಂತ ನೋಡೋ ಕುತೂಹಲ ,ತೋಟದ ಪಕ್ಕದ ಪುಟ್ಟ ತೊರೆಯಲ್ಲಿ ಮನಬಂದಂತೆ ಮೀಯುವ ಸಂಭ್ರಮ ,ಮನೆಯವರು ಬೆತ್ತ ಹಿಡಿದು ಬರುವ ತನಕ, ಬಾಳೆ ದಿಂಡಿನ ದೋಣಿಯಲ್ಲಿ ಮನದಣಿಯೆ ಆಟ,ಅರೆ ಬರೆ ಕಲಿತ ಈಜಿನ ಪ್ರದರ್ಶನಗಳು ಮಾವಿನ ಹಣ್ಣು ಇರದೇ ಒಂದು ದಿನವು ಊಟ ಸೇರೋದಿಲ್ಲ ,ಬಿಸಿಲಿನಲ್ಲಿ ಸ್ವಲ್ಪ ಹೊತ್ತಾದರೂ ಮನೆ ಒಳಗಡೆ ಇರಿ ಅಂತ ಹೇಳೋ ಹಿರಿಯರ ಮಾತು, ಅವರಿಗೆ ನಿದ್ದೆ ಬಂದ ತಕ್ಷಣ ಅವರ ಕಣ್ಣು ತಪ್ಪಿಸಿ ಫ್ರೆಂಡ್ಸ್ ಗೆ ಸಿಗ್ನಲ್ ,,, ಮತ್ತೆ ಆಟ ಶುರು…. ಕಾಲನ ಮೇಲೆ ಅರಿಯದ ಮುನಿಸು …. ಸಾಕಾಗದ ಸಮಯ ನೀ ನಿಲ್ಲ ಬಾರದೆ,….. ರಜಾ ನೀ ಇನ್ನಸ್ಟು ಮುಂದುವರಿಯಬಾರದೇ………. ಅನ್ನೋ ಪುಟ್ಟ ಮನಸು ………
ಮರಳಿ ಮನೆಗೆ, ಸ್ಕೂಲ್ ಗೆ ಹೋಗಬೇಕಲ್ಲ, ಮತ್ತೆ ಅಕ್ಟೋಬರ್ ರಜೆ ತನಕ ಕಾಯಬೇಕು ಮತ್ತದೇ ತುಂಟಾಟಗಳಿಗೆ, ಲಂಗು ಲಗಾಮಿಲ್ಲದ ಆಟ ಗಳಿಗೆ……ಮಾಳಿಗೆ ಸೇರುವ ಕ್ರಿಕೆಟ್ ಬ್ಯಾಟ್, ಬಾಲ್, ಚೆನ್ನೆ ಮನೆ,ಮಾವಿನ ಮರ, ಹಲಸಿನ ಮರ,ಆಟ ಆಡುತ್ತಿದ್ದ ಗದ್ದೆ ಗಳಿಗೂ ಬೇಜಾರು ..ವಿದಾಯದ ನಿಟ್ಟುಸಿರು….. ಅಂದಿನ ನಮ್ಮ ಪುಟ್ಟ ಮನಸುಗಳಲ್ಲಿ ಇದ್ದದ್ದು ಅಷ್ಟೇ ……ಅಂತಸ್ತಿನ ಅರಿವಿಲ್ಲ , ಸನ್ ಬರ್ನ್ ಆಗೋದು,ಸ್ಕಿನ್ ಹಾಳಾಗೋದು, ಬಟ್ಟೆ ಕೊಳೆಯಾಗೋದು, ಡಸ್ಟ್ ಅಲರ್ಜಿ ಆಗೋದು ಗೊತ್ತಿಲ್ಲ ,ನೆಕ್ಸ್ಟ್ ಇಯರ್ ಕ್ಲಾಸ್ ನ ಪ್ರಿಪರೇಷನ್, ಕಾಂಪಿಟಿಷನ್ ಯಾವ ಒತ್ತಡ ಕೂಡ ಇರಲಿಲ್ಲ ,,,,ಮನಸು ಒಂದು ದಿನ ಮನೆ ಅಂಗಳದಲಿ ಅರಳಿ ನಗುವ ಸುಂದರ ಗುಲಾಬಿಯಂತೆ ನಿಷ್ಕಲ್ಮಶವಾಗಿತ್ತು … ಇಂದು ಬಾಲ್ಯದ ದಿನಗಳು ನೆನಪಿನ ಬುಟ್ಟಿಯಲ್ಲಿ ನಗುವುದನ್ನು ನೋಡಿ ನಾನು ನನ್ನ ಬಾಲ್ಯವನ್ನು ಒಂದಿಂಚು ಬಿಡದೆ ಹೆಮ್ಮೆಯಿಂದ ಅನುಭವಿಸಿದ್ದೇನೆ ಅಂತ ಹೇಳೋ ಸುಖ ಏನೆಂದು , ಅಂದಿನ ಆ ದಿನಗಳಲಿ ಸ್ವಚ್ಚಂದವಾಗಿ ಹಾರಾಡಿಕೊಂಡಿದ್ದ ಮನಸುಗಳಿಗೆ ಖಂಡಿತ ಗೊತ್ತು……………..