4921

ಪರ್ಸು ಕದ್ದವನಿಗೊಂದು ಪತ್ರ

ಓ ಪರ್ಸು ಕದ್ದವನೇ….

ಚೆನ್ನಾಗಿದ್ದೀಯಾ?ಮನೆಯಲ್ಲಿ ಎಲ್ಲರೂ ಕ್ಷೇಮವೇ?ಹೆಂಡತಿ ಮಕ್ಕಳು ಇದ್ದರೆ,ಅವರು ಕ್ಷೇಮವೇ?ನನ್ನಂತವರು ಪ್ರತಿದಿನ ನಿನಗೆ ಸಿಕ್ಕರೆ,ಎಲ್ಲಿಯ ಕ್ಷೇಮ,ಎಲ್ಲಿಯ ಸೌಖ್ಯ,ಅಲ್ವೆ?ನಿನ್ನನ್ನು ಕಳ್ಳ ಎಂದು ಕರೆಯಲು ಮನಸ್ಸಾಗಲಿಲ್ಲ ನೋಡು.ಅದಕ್ಕೆ ಪರ್ಸು ಕದ್ದವನೇ ಎಂದು ಕರೆದೆ.ಯಾಕೆಂದರೆ ನೀನು ಕದ್ದಿರುವುದು ಪರ್ಸನ್ನೇ ಆದರೂ,ಅದರೊಳಗೆ ನಾಲ್ಕಾಣೆಯೂ ಇರಲಿಲ್ಲವಲ್ಲ, ಅದಕ್ಕೆ.ಪರ್ಸು ತೆಗೆದು ನೋಡುವಾಗ ಅದೆಷ್ಟು ಬೈದುಕೊಂಡೆಯೋ ಏನೋ ಅಲ್ವೇ?ಪಾಪ.ನಿನ್ನ ಗ್ರಹಚಾರ ನೋಡು ನನ್ನ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿರುವಾಗಲೇ ನೀನು ನನ್ನ ಪರ್ಸಿಗೆ ಕೈ ಹಾಕಬೇಕಿತ್ತೆ?ಕಳೆದ ತಿಂಗಳಾಗಿದ್ದರೆ ನಿನಗೆ ಕೈತುಂಬಾ ಸಿಕ್ಕಿರೋದು.ಇನ್ನು ಮೇಲೇ ನೀನು ಯಾರದ್ದೇ ಪರ್ಸು ಕದಿಯುವಾಗಲಾದರೂ ಹುಷಾರಾಗಿ ,ಎಲ್ಲವನ್ನು ಗಮನಿಸಿ ಕದಿಯಲು ಮುಂದಾಗು.ಪಾಪ ನೀನೂ ಬದುಕಬೇಕಲ್ಲವೇ? ಆ ದೃಷ್ಟಿಯಿಂದ ನಿನಗೆ ಸಲಹೆಯನ್ನು ಕೊಡುತ್ತಿದ್ದೇನೆ.ಹಾಗೇ ನನ್ನ ಪರ್ಸಿನಲ್ಲಿದ್ದ ನನ್ನ ಹಾಗೂ ನನ್ನ ಹೆಂಡತಿಯ ಭಾವಚಿತ್ರವನ್ನು ನೋಡಿರಬೇಕಲ್ಲಾ?ನನ್ನ ಹೆಂಡತಿ ಸುಮಾರಿಗೆ ಸ್ಪುರದ್ರೂಪಿಯೇ ಅವಳ ಕೊರಳಿನಲ್ಲಿದೆಯಲ್ಲಾ ತಾಳಿ ಅದು ನಾನೇ ನನ್ನ ಕೈಯಾರ ಕಟ್ಟಿದ್ದು.ಆ ಫೋಟೊವನ್ನು ತೆಗಿಸಿ ತುಂಬಾ ವರುಷವಾಯಿತು.ಫೋಟೊನಲ್ಲಿ ಮುಕ್ಕಾಲು ಭಾಗ ಅವಳೇ ಆವರಿಸಿಬಿಟ್ಟಿದ್ದಾಳೆ.ಈಗ ಅವಳೊಂದಿಗೆ ಪೋಟೊವನ್ನು ತೆಗಿಸಿದರೆ ಏನಾಗಬಹುದು ಎಂಬುದನ್ನು ಮನದಲ್ಲಿಟ್ಟುಕೊಂಡು ನಾನು ಎಂದಿಗೂ ಅವಳೊಂದಿಗೆ ಫೋಟೊ ತೆಗಿಸಿಕೊಳ್ಳುವ ಗೋಜಿಗೆ ಹೋಗಿಲ್ಲ.ನಮ್ಮ ಭಾವಚಿತ್ರ ಈಗ  “ಅಭಾವ” ಚಿತ್ರ  ಆಗಿದೆ.ನನ್ನ ಹಾಗು ಅವಳ ಆ ಫೋಟೊವನ್ನು ಯಾರಾದರೂ ನೋಡಿದರೆ ನನ್ನನ್ನು ಆಡಿಕೊಂಡು ನಗುತ್ತಾರೆ ಎನ್ನುವ ಉದ್ದೇಶದಿಂದಲೇ ನಾನು ಅದನ್ನು ಯಾರಿಗೂ ಸಿಗದಂತೆ ಪರ್ಸಿನಲ್ಲಿಟ್ಟುಕೊಂಡಿದ್ದೆ.ಒಂದು ವೇಳೆ ಅವಳು ನೋಡಿ ಬಿಟ್ಟರೆ ಮುಗಿಯಿತು.  “ನೋಡ್ರಿ ನಾನು ಆವಾಗ ಎಷ್ಟು ಚೆನ್ನಾಗಿದ್ದೆ.ಗುಂಡು ಗುಂಡುಕಿದ್ದೆ ಅಲ್ವೇನ್ರಿ?ಅಯ್ಯೋ ನನ್ನ ಕೂದಲು ನೋಡಿ,ನೆಲದವರೆಗೂ ನೇತಾಡುತ್ತಿದೆ.ಆ ಸೀರೆ ನನ್ನ ತಾಯಿಯ ಅಣ್ಣನ ಮಗನ ಮದುವೆಗೆ ಕೊಟ್ಟಿದ್ದು,ಕಲರ್ ತುಂಬಾನೇ ಚೆನ್ನಾಗಿದೆ ಅಲ್ವೇನ್ರಿ?ನನಗಂತೂ ನೆರಿಗೆಯ ಡಿಸೈನ್ ತುಂಬಾನೇ ಇಷ್ಟವಾಗಿತ್ತು.ಆವಾಗ ಅದೆಷ್ಟು ಉದ್ದ ತೋಳಿನ ರವಿಕೆ ಹಾಕಿದ್ದೇನೆ ನೋಡ್ರಿ.”ಎಂದೆಲ್ಲಾ ಹೇಳುತ್ತಾ  ನನ್ನ ಹೊಟ್ಟೆಯನ್ನು ತಿವಿಯುತ್ತಾ ತಲೆ ತಿನ್ನಬಹುದೆಂಬ ಕಾರಣದಿಂದ ನಾನು ಆ ಭಾವ ಚಿತ್ರವನ್ನು  ಅವಳಿಗೆ ಸಿಗದಂತೆ ಭದ್ರವಾಗಿಟ್ಟುಕೊಂಡಿದ್ದೆ.ಖುಷಿಯ ವಿಷಯವೇನೆಂದರೆ ಅದು ಅವಳ ಕೈಗೆ ಸಿಗಲೇ ಇಲ್ಲ.ಸಿಗುವುದೂ ಇಲ್ಲ.

ಹಾಂ..ಈ ಪತ್ರವನ್ನು ಬರೆಯಲು ಕಾರಣ ಇಷ್ಟೆ.ಆ ನನ್ನ ಖಾಲಿ ಪರ್ಸಿನಲ್ಲಿ ಈ ತಿಂಗಳಿನ ಕರೆಂಟ್ ಬಿಲ್ ಇದೆ.ಕರೆಂಟ್ ಬಿಲ್ಲ್ ಎಂದಾಕ್ಷಣ ಮತ್ತೆ ಫರ್ಸನ್ನು ಕೆದರಬೇಡ ಇರು.ನಾನು ಹೇಳಿದ್ದು ದುಡ್ಡಿದೆ ಎಂದಲ್ಲ.ವಿದ್ಯುತ್ ಇಲಾಖೆಯವರು ಈ ತಿಂಗಳು ಇಷ್ಟು ಕರೆಂಟ್ ತಿಂದಿದ್ದೀರಿ ಎಂದು ಒಂದು ಚೀಟಿಯನ್ನು ಕೊಡುತ್ತಾರಲ್ಲಾ?ಅದು.ಅದು ಕಳೆದು ಹೋದಾಗಿನಿಂದ ನನ್ನ ಹೆಂಡತಿ ಮನೆಯಲ್ಲಿ ಹುಡುಕದ ಜಾಗವಿಲ್ಲ.ಅದು ಫರ್ಸಿನಲ್ಲಿರುವ ವಿಷಯ ನನಗೆ ಮಾತ್ರ ಗೊತ್ತು.ಅವಳು ನನ್ನ ಬಳಿ ಕೊಟ್ಟಿರುವುದನ್ನು ಮರೆತು ಬಿಟ್ಟಿದ್ದಾಳೆ.ನನ್ನ ಹೆಂಡತಿಗೆ ಹುಟ್ಟು ಮರೆವು.ಬೆಳಗ್ಗೆ ಎದ್ದು ಹಲ್ಲು ಉಜ್ಜದೇ ತಿಂಡಿ ತಿನ್ನುವಷ್ಟು, ತಿಂಡಿ ತಿಂದ ಮೇಲೆ ತಿಂದಿದ್ದೇನೆ ಎನ್ನುವುದನ್ನು ಮರೆಯುವಷ್ಟು ಮರೆವು.ನನ್ನ ಅರ್ಧಾಂಗಿಯ ಮರೆವಿನ ಮಹಿಮೆಯನ್ನು ಹೇಳುತ್ತೇನೆ ಕೇಳು.ಅಲ್ಲ ಅಲ್ಲ …ಓದು.

ಪಕ್ಕದ ಮನೆಯಲ್ಲಿ ಹೆಚ್ಚು ಕಮ್ಮಿ ನನ್ನವಳಿಗಿಂತ ನಾಲ್ಕೈದು ಕೇಜಿ ಜಾಸ್ತಿ ಇರುವ ಮಹಿಳೆಯೊಬ್ಬಳಿದ್ದಾಳೆ.ಅವಳನ್ನು ಮಹಿಳೆ ಎಂದು ಕೆರೆದದ್ದು ಅವಳ ಗಂಡ ಕೋದಂಡನಿಗೇನಾದರೂ ಗೊತ್ತಾದರೆ,”ಥೂ ನಿಮ್ ಮಕಾ ಮುಚ್ಚಾ….ಅದ್ ಹೆಣ್ಣ್ ಏನ್ರಿ?ಹೆಣ್ಣಿಗ್ ಇರೋ ಯಾವ್ದಾದ್ರೂ ಹುಟ್ಟು ಅದ್ರಲ್ಲಿದಿಯೇನ್ರಿ?ಮದ್ವೆಗ್ ಮುಂಚೆ ಕತ್ಲಲ್ಲ್ ನಡದಿದ್ದ್ ಮಿಸ್ಟೇಕ್ ನಿಂದಾಗಿ ಅದನ್ನ್ ಕಟ್ಕಂದಿದ್ದು ಬಿಟ್ರೆ,…ಥೂ..ನನ್ ಜನ್ಮ ನಾಸ ಅಗೈತೆ ಸ್ವಾಮಿ”ಎಂದು ಕೂಗಾಡುತ್ತಾನೆ.ಇರಲಿ ಬಿಡು ಪಾಪ  ಎಲ್ಲರದ್ದು ಒಂತರ ಗೋಳಾದರೆ ಅವನದ್ದೊಂತರ ಗೋಳು.ಅವನ ಅವಳಿಗು ನನ್ನ ಇವಳಿಗೂ ಒಂತರ ಸ್ನೇಹ ಭಾಂಧವ್ಯ.ಎದುರಿಗೊಂದು ತರ ಹಿಂದೊಂದು ತರ ಅಂತಾರಲ್ಲ ಆ ತರದ ಭಾಂದವ್ಯ.ದಿನಕ್ಕೆಂಟು ಬಾರಿ ಮಾತಾಡದೇ ಇದ್ದರೆ ಅವರಿಗೆ ತಿಂದದ್ದು ಅರಗುವುದೆ ಇಲ್ಲ,ಅಷ್ಟಕ್ಕೂ ಅವರಿಬ್ಬರಿಗೆ ತಿಂದದ್ದು ಅರಗಿಸುವುದೊಂದೇ ದೈನಂದಿನ ಕೆಲಸ.ಎಂದಿನಂತೆ ಕೋದಂಡನ ಅವಳು ಮತ್ತು ನನ್ನ ಇವಳು ಮಾತನಾಡುತ್ತಾ ನಿಂತಿದ್ದರಂತೆ.ಇಬ್ಬರೂ ಮಾತನಾಡುತ್ತಾ,ಮಾತನಾಡುತ್ತಾ ಊರಿನ ಎಲ್ಲ ಹೆಂಗಸರ ಬಗ್ಗೆ ಮಾತನಾಡಿ ಮುಗಿದ ನಂತರ ಒಬ್ಬರಿಗೊಬ್ಬರು ಮೆಲ್ಲ ದನಿಯಲ್ಲಿ”ಇದನ್ನೆಲ್ಲಾ ನಾನ್ ಹೆಳ್ದೆ ಅಂತ ಯಾರಿಗು ಹೇಳ್ಬೇಡಿ ಆಯ್ತಾ” ಎಂದು ಹೇಳಿಕೊಂಡು ಧಾರಾವಾಹಿಗಳ ಬಗ್ಗೆ ಚರ್ಚೆ ಶುರು ಮಾಡಿದರಂತೆ.ನನ್ನವಳಿಗೆ ಕೋದಂಡನ ಅವಳು ಮಾತಿಗೆ ಮುಂಚೆ “ಈಗ ಅಷ್ಟೆ ಅನ್ನಕ್ಕೆ ಕುಕ್ಕರ್ ಇಟ್ಟು ಬಂದಿದ್ದೇನೆ ಕಣ್ರಿ”ಎಂದಿದ್ದಳಂತೆ.ಇನ್ನೇನು ನಾಲ್ಕನೆ ಧಾರಾವಾಹಿಯ ಬಗ್ಗೆ ಮಾತಾನಾಡಿ ಮುಗಿಸಬೆಕೆನ್ನುವಷ್ಟರಲ್ಲಿ ನನ್ನವಳ ಸ್ಮೃತಿ ಪಟಲದೊಳಗೆ ಅಧ್ಯಾವ ಕಂಪನವಾಯಿತೊ ಏನೊ ತಕ್ಷಣ ಅವಳಿಗೆ “ರ್ರಿ ನೀವು ಕುಕ್ಕರ್ ಇಟ್ಟು ಬಂದಿದ್ದಿನಿ ಅಂತ ಹೇಳಿದ್ರಿ ಅಲ್ವೇ”ಎಂದು ನೆನೆಪಿಸಿದಳಂತೆ.ತಕ್ಷಣ ಆ ಯಮ್ಮ ಅಲ್ಲಿಂದ ಓಡೋಡಿ ತನ್ನ ಮನೆ ಸೇರಿದಳಂತೆ.ತಕ್ಷಣ ನನ್ನವಳಿಗೂ ಏನೋ ನೆನಪಾಗಿ ಮನೆಯೊಳಗೆ ಓಡಿ ಬಂದಳಂತೆ.ಪುಣ್ಯಾತ್ಗಿತ್ತಿ ಗ್ಯಾಸ್ ಮೆಲೆ ಹಾಲು ಇಟ್ಟು ಬಂದಿದ್ದಳಂತೆ.ಆತಂಕದಿಂದ ಓಡೋಡಿ ಬಂದು ನೋಡುತ್ತಾಳೆ.ಗ್ಯಾಸ್ ಮೇಲೆ ಹಾಲಿದೆ.ಹಾಲು ಉಕ್ಕಿಲ್ಲ .ಎಲ್ಲವೂ ಮೊದಲಿನಂತೆಯೇ ಇದೆ.ನನ್ನವಳ ಮುಖದಲ್ಲಿ ಆನಂದದ ಚಿಲುಮೆ.ಗ್ಯಾಸ್ ಮೇಲಿಟ್ಟಿದ್ದ ಹಾಲು ಹೇಗಿತ್ತೋ ಹಾಗೆಯೇ ಇದೆ.ಹಾಲು ಉಕ್ಕಿಲ್ಲ. ಗ್ಯಾಸ್ ತುಂಬಾ ಚೆಲ್ಲಿಲ್ಲ. ಅದ್ಹೇಗೆ ಉಕ್ಕುತ್ತದೆ? ಅದ್ಹೇಗೆ ಚೆಲ್ಲುತ್ತದೆ?.  ಸ್ವಾಮಿ ಗ್ಯಾಸ್ ಮೇಲೆ  ಹಾಲಿಟ್ಟ ಮೇಲೆ ಗ್ಯಾಸ್ ಹೊತ್ತಿಸಿದರಲ್ಲವೇ ಹಾಲು ಕಾಯುವುದು,ಹಾಲು ಉಕ್ಕುವುದು.ಗ್ಯಾಸ್ ಮೇಲೆ ಹಾಲಿಟ್ಟಳು .ಗ್ಯಾಸ್ ಹೊತ್ತಿಸಲೇ ಮರೆತಳು. ಅವಳ ಮರೆವಿನಿಂದ ಪ್ರಯೋಜನವಾದದ್ದೇನಾದರೂ ಇದ್ದರೆ ಇದೊಂದೆ.ಅಂದು ಅರ್ಧ ಲೀಟರ್ ಹಾಲು ಮತ್ತು ಒಂದ್ ಸ್ವಲ್ಪ ಎಲ್ ಪಿ ಜಿ ಉಳಿಸಿದ್ದಳು ನಿಜ ಆದರೆ ಅದರ ನೂರು ಪಟ್ಟು ನಷ್ಟಕ್ಕೂ ಕಾರಣವಾಗಿದೆ ಅವಳ ಮರೆವಿನ ಖಾಯಿಲೆ.ಅವಳು ತವರು ಮನೆಗೆ ಹೊದರಂತೂ ಮುಗಿದೇ ಹೋಯಿತು.ತನಗೆ ಮದುವೆಯಾಗಿದೆ.ತನಗೂ ಒಬ್ಬ ಗಂಡನಿದ್ದಾನೆ ಎನ್ನುವುದನ್ನೇ ಮರೆತು ಬಿಡುತ್ತಾಳೆ.ನಾನೇ ಹೋಗಿ ವಾಪಾಸ್ಸು ಕರೆದುಕೊಂಡು ಬರಬೇಕು.ಹೋಗುವಾಗ ನಾಲ್ಕು ಬ್ಯಾಗು ಒಯ್ದ ಪುಣ್ಯಾತ್ಗಿತ್ತಿ ಬರುವಾಗ ಮರೆತು ಎರಡೇ ಎರಡು ಬ್ಯಾಗು ತರುತ್ತಾಳೆ.ಹೆಚ್ಚು ಕಮ್ಮಿ ಏನಾದರೂ ಕೇಳುವ ಹಾಗಾದರೂ ಇದೇಯಾ,ಉಹುಂ.

ಸ್ವಲ್ಪ ಜಾಸ್ತಿಯೇ ಕೊರೆದು ಬಿಟ್ಟೆ ಅಲ್ವೆ?ಬರೀ ನನ್ನ ಬಗ್ಗೆಯೇ ಹೇಳಿದೆ ಬಿಟ್ಟರೆ ನಿನ್ನ ಬಗ್ಗೆ ಏನನ್ನೂ ಕೇಳಲಿಲ್ಲ ನೋಡು , ಥೂ ನನ್ನ ಹಾಳು ಬುದ್ದಿಗೆ.ಮತ್ತೆ ಹೇಗಿದೆ ಬಿಸಿನೆಸ್ಸು?ಈಗೆಲ್ಲಾ ಅವಾಗಿನ ಹಾಗಿಲ್ಲ ಅಂದುಕೊಂಡಿದ್ದೆನೆ.ಜನ ಜಾಸ್ತಿ ಜಾಗರೂಕರಾಗಿದ್ದಾರೆ.ಗಂಡಸರಂತು ನವೆಯಾದಾಗ ತುರಿಸಲೆಂದೇ ತಮ್ಮ ಕೈಗಳನ್ನು ಆಗಾಗ ಅಂಡಿನ ಮೇಲೆ ತರುವುದರಿಂದ ನಿಮ್ಮಂತವರಿಗೆ ತೀರ ಕಷ್ಟದ ಪರಿಸ್ಥಿತಿ ಎದುರಾಗುತ್ತಿದೆ.ಅಷ್ಟಕ್ಕೂ ಈಗೆಲ್ಲಾ ಮೊದಲಿನ ಹಾಗೆ ಪರ್ಸಿನಲ್ಲಿ ಹಣವಿಡುವವರೂ ಕಮ್ಮಿ ಅನ್ನು.ಈ ಕದಿಯುವುದೂ ಒಂದು ಕಲೆ ಅಲ್ಲವೇ?ಈ ಕಲೆ ಎಲ್ಲರಿಗೂ ಒಲಿಯುವುದಿಲ್ಲ.ಇದಕ್ಕೆ ಯಾವುದೇ ಗುರುವಿನ ಅಗತ್ಯವಿಲ್ಲದಿದ್ದರೂ,ಗುರಿಯ ಅಗತ್ಯವಿದೆ.ಕೇವಲ ಕಲಿಯುವವನ ಶ್ರದ್ಧೆ,ಭಕ್ತಿ,ಆಸಕ್ತಿ,ಅತಿಯಾದ ಸೋಮಾರಿತನ ಇವುಗಳಿಂದ ಮಾತ್ರ ಇದನ್ನು ಮೈಗೂಡಿಸಿಕೊಳ್ಳಲು ಸಾಧ್ಯ.ಈ ಕಲೆಯಲ್ಲಿ ಯಾರೂ ಒಮ್ಮೆಲೆ ಅಟ್ಟಕ್ಕೆ ಏರಿದವರಿಲ್ಲ.ಎಲ್ಲವೂ ಹಂತ ಹಂತವಾಗಿ ಕಲಿಯಬೇಕಾಗುತ್ತದೆ.ಬಾಲ್ಯದಿಂದ ಕಲಿತರೆ ಇನ್ನೂ ಒಳ್ಳೆಯದು.ಮನೆಯಲ್ಲಿ ಬೆಲ್ಲದ ಬಾಕ್ಸಿನಲ್ಲಿಟ್ಟ ಪಾರ್ಲೇಜಿ ಬಿಸ್ಕತ್ತನ್ನು ಕದಿಯುತ್ತಾ ಕದಿಯುತ್ತ ಬೆಳೆದವನೊಬ್ಬ ಮುಂದೊಂದು ದಿನ ದೊಡ್ದದೊಂದು ಬ್ಯಾಂಕಿನ ದರೋಡೆ ಮಾಡುವಷ್ಟು ಎತ್ತರಕ್ಕೆ ಬೆಳೆಯುತ್ತಾನೆಂದರೆ ಅವನ ಪರಿಶ್ರಮ ಎಷ್ಟಿರಬಹುದೆಂದು ಲೆಕ್ಕ ಹಾಕು.ಕಳ್ಳರಿಲ್ಲದೇ ಹೋಗಿದ್ದರೆ ಪೋಲಿಸರಿರುತ್ತಿದ್ದರೆ?ಬ್ಯಾಂಕ್,ಹಾಗೂ ಎ ಟಿ ಏಮ್ ನ  ಎದುರು ಪ್ಲಾಸ್ಟಿಕ್ ಕುರ್ಚಿಯ ಮೇಲೆ ಪವಡಿಸುವ ಸೆಕ್ಯುರಿಟಿ ಗಾರ್ಡ್ ಗಳಿರುತ್ತಿದ್ದರೇ?ಸಿಸಿ ಕ್ಯಾಮೆರಾಗಳಿರುತ್ತಿದ್ದವೇ?ಮನೆಯಲ್ಲಿ ಪೆಟ್ಟಿಗೆಗಳಿರುತ್ತಿದ್ದವೇ?ಅವುಗಳಿಗೆ ಬೀಗಗಳಿರುತ್ತಿದ್ದವೇ?ಉಹುಂ.ನೋಡು ಎಷ್ಟು ಜನರಿಗೆ ಅನ್ನ ಕೊಡುತ್ತಿದ್ದಾರೆ ಕಳ್ಳರು.ಇಷ್ಟಾದರೂ ಈ ಸಮಾಜದಲ್ಲಿ ಕಳ್ಳರೆಂದರೆ ತಾತ್ಸಾರ.ಇದು ಬದಲಾಗಬೇಕು ಗೆಳೆಯ.ಕಳ್ಳರಿಗೂ ಈ ಸಮಾಜದಲ್ಲಿ ಒಂದು ಸ್ಥಾನಮಾನ ಸಿಗಬೇಕು.ಅವರಿಗೂ ಸಮಾನ ಹಕ್ಕುಗಳು ಸಿಗಬೇಕು.ಇದರ ಬಗ್ಗೆ ಉಗ್ರ ಹೊರಾಟ ಮಾಡೋಣ.ಅದ್ಯಾವ ದೊಣ್ಣೆ ನಾಯಕನೆ ಬರಲಿ.ಮುಖ ಮುಸುಡಿ ನೋಡುವುದು ಬೇಡ.ಕಳ್ಳರ ಸಂಘವೊಂದನ್ನು ಕಟ್ಟೋಣ ಅದನ್ನು ರಿಜಿಸ್ಟರ್ ಮಾಡಿಸೋಣ ಸರ್ಕಾರದ ಸವಲತ್ತುಗಳೇನಾದರೂ ಇದ್ದರೆ ಅವುಗಳು ಎಲ್ಲ ಕಳ್ಳರ ಕುಟುಂಬ ವರ್ಗದವರಿಗೆ ಸಿಗುವಂತಾಗಲಿ.ಒಟ್ಟಾರೆ ಕಳ್ಳರು ಚೆನ್ನಾಗಿರಬೇಕು ಅಷ್ಟೆ, ಅದೇ ನನ್ನ ಗುರಿ.ಅದೇ ನನ್ನ ಧ್ಯೇಯ.ಅದಕ್ಕಾಗಿ ಯಾವ ರೀತಿಯ ಹೋರಾಟ ವನ್ನಾದರೂ ಮಾಡೋ… ಅಯ್ಯೋ ನನ್ನ ಹೆಂಡತಿ ಈ ಕಡೆ ಬರುತ್ತಿದ್ದಾಳೆ.ಮತ್ತೆ ಪತ್ರ ಬರೆಯುತ್ತೆನೆ.ಒಳ್ಳೆಯದಾಗಲಿ ನಿನಗೆ.ಮತ್ತೆ ಆ ಫೋಟೊ ಒಂದು ಜಾಗ್ರತೆ.

-ಇಂತಿ ಮಾಜಿ ಕಳ್ಳ(ಮದುವೆಯಾದ ಮೇಲೆ ಬಿಟ್ಟೆ)

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..