8206

ನಡುತಿಟ್ಟಿನ ಐಸಿರಿ ‘ಐರಬೈಲ್’ ಸುವರ್ಣ ಸಂಭ್ರಮ

  • By Guest Writer
  • Wednesday, September 28th, 2016
  • Ankanagalu

nagನಾಗರಾಜ್ ಶೆಟ್ಟಿ ನೈಕಂಬ್ಳಿ

ಐರಬೈಲ್ ಆನಂದ ಶೆಟ್ಟರು ಎಂದಾಕ್ಷಣ ನೆನಪಿಗೆ ಬರುವುದು ನಮ್ಮ ಮಾರಣಕಟ್ಟೆ ಮೇಳ. ಶ್ರೀ ಕ್ಷೇತ್ರ ಮಾರಣಕಟ್ಟೆಗೆ ಲಕ್ಷಾಂತರ ಭಕ್ತಾಭಿಮಾನಿಗಳು ಇದ್ದಾರೆ. ಮೇಳದ ಆರು ತಿಂಗಳಿನ ತಿರುಗಾಟ ಹೆಚ್ಚಾಗಿ ಕುಂದಾಪುರ ತಾಲೂಕಿನಲ್ಲೆ ಆಗುತಿರುತ್ತದೆ . ಸುತ್ತಲಿನ ಪರಿಸರದ ಕಲಾಭಿಮಾನಿಗಳ ನೆಚ್ಚಿನ ಮೆಚ್ಚಿನ ಕಲಾವಿದರಾಗಿ ಜನಜನಿತರಾಗಿದ್ದಾರೆ.
ಬೆಂಗಳೂರು, ಮುಂಬಾಯಿ, ಹೈದರಬಾದ್, ಉತ್ತರ ಕರ್ನಾಟಕದಲ್ಲಿ ಕೂಡ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಮಳೆಗಾಲದ ತಿರುಗಾಟದಲ್ಲಿ ಅಪರೂಪಕ್ಕೆ ಆ ಎಲ್ಲಾ ಪ್ರದೇಶಗಳಲ್ಲಿ ಪ್ರದರ್ಶನ ನೀಡುತ್ತಾರೆ.

ಯಕ್ಷಗಾನ ಕಲೆಯ ಬಗ್ಗೆ ಕೀಳರಿಮೆ ಇದ್ದ ಕಾಲಘಟ್ಟದಲ್ಲಿ , ಸುತ್ತಲಿನ ನಡೆಯುತ್ತಿದ್ದ ಆಟಗಳಿಂದ ಆಕರ್ಷಿತರಾದವರು . ಮಾರಣಕಟ್ಟೆ ಮೇಳಕ್ಕೆ ಹೊಸ ಆಯಾಮ ಕೊಟ್ಟವರು ದಕ್ಷಯಜಮಾನರಾದ ದಿವಂಗತ ಎಂ.ಎಂ ಹೆಗಡೆಯವರು. ಅವರ ಗರಡಿಯಲ್ಲಿ ಕೊಡಂಗಿಯಾಗಿ, ಬಾಲಕಲಾವಿದನಾಗಿ , ಪೀಠಿಕೆ ಸ್ತ್ರೀವೇಷಧಾರಿ , ಪುಂಡು ವೇಷ, ಪುರುಷ ವೇಷ, ಹೀಗೆ ಹಂತಹಂತವಾಗಿ ಕಲಿತು ಪರಿಪೂರ್ಣ ಪ್ರಧಾನ ವೇಷಧಾರಿಯಾಗಿ ರೂಪಿತಗೊಂಡವರು. ಹಾರಾಡಿ ಸರ್ವೋತ್ತಮ ಗಾಣಿಗರಿಂದ ನೃತ್ಯ ಅಭ್ಯಸಿಸಿದರು. ಹಾರಾಡಿ ಶೈಲಿಯ ಗತ್ತು ಗಾಂಬೀರ್ಯದ ರಂಗ ನಡೆ ಇವರಲ್ಲಿ ಕಾಣಬಹುದಾಗಿದೆ .ಬೆಳಿಗ್ಗೆ ಇವರನ್ನು ಕಂಡವರು ರಾತ್ರಿ ರಂಗಸ್ಥಳದಲ್ಲಿ ಕಂಡರೆ ಹುಬ್ಬೇರಿಸುತ್ತಾರೆ. ವಿಶಿಷ್ಟವಾದ ರಂಗಪ್ರವೇಶ, ತೂಕಬದ್ಧ ಮಾತುಗಾರಿಕೆ, ರಂಗಸ್ಥಳ ತುಂಬುವ ವೇಷಗಾರಿಕೆ, ಹಿತಮಿತ ಕುಣಿತ , ವಿಭಿನ್ನ ಭಂಗಿಯಲ್ಲಿ ನಿಂತು ತನ್ನ ಎರಡು ಕಣ್ಣುಗಳನ್ನು ತಿರುಗಿಸುವ ರೀತಿ, ಕರ್ಣಾನಂದಕರ ನಿರೂಪಣಾ ಶೈಲಿ , ಅದ್ಭುತ ಕಂಠಸಿರಿಯಲ್ಲಿ ಹೂಂಕರಿಸಿ ಅಟ್ಟಹಾಸದ ನಗುವಂತು ರೋಮಾಂಚನಗೊಳಿಸುತ್ತದೆ. ಗುರು ವೀರಭದ್ರ ನಾಯಕ್, ಉಡುಪಿ ಬಸವ, ಮಾರ್ಗೋಳಿ ಗೋವಿಂದ ಸೇರೆಗಾರ್, ವಂಡ್ಸೆ ನಾರಾಯಣ ಗಾಣಿಗ, ಮೊಳಹಳ್ಳಿ ಹೆರಿಯ, ಅರಾಟೆ ಮಂಜುನಾಥ ಒಡನಾಟ ಇವರನ್ನು ಇನ್ನಷ್ಟು ಸಮರ್ಥರನ್ನಾಗಿಸಿತು.ನಾಲ್ಕು ದಶಕಗಳ ಕಲಾಸೇವೆಯಲ್ಲಿ ಹಿರಿಯ ಭಾಗವತರಾದ ಮರಿಯಪ್ಪ ಆಚಾರ್ ,ಮರವಂತೆ ದಾಸ ಭಾಗವತರಿಂದ ಆದಿಯಾಗಿ ಉಮೇಶ ಸುವರ್ಣ, ಕೃಷ್ಣ ದಾಸ , ಸುಧಾಕರ ಕೊಠಾರಿ, ರಾಘವೇಂದ್ರ ಆಚಾರ್ ಜನ್ಸಾಲೆ ಹೀಗೆ ಮೂರು ತಲೆಮಾರಿನ ಹಿಮ್ಮೆಳನಕ್ಕೆ ಹೊಂದಿಕೊಂಡ ಕೀರ್ತಿ ಇವರದ್ದು.

magic

 

ಜನ್ಮ ಸ್ಥಳ :- ಕುಂದಾಪುರ ತಾಲೂಕು ಐರ್ ಬೈಲು
ಜನನ :- 1961ರಲ್ಲಿ
ತಂದೆ ರಾಮಣ್ಣ ಶೆಟ್ಟಿ , ತಾಯಿ ನರಸಮ್ಮ ಶೆಡ್ತಿ
ವಿದ್ಯಾಭ್ಯಾಸ :- 7ನೇ ತರಗತಿ
ಮಡದಿ :- ಜಯರಾಣಿ
ಮಕ್ಕಳು :- ಶಿಲ್ಪಾ ,ಶಿಥಿಲ ,ಸೀಮಾ
ನಿಲುವು ನೆಡೆಯಲ್ಲಿ ಸ್ವಂತಿಕೆಯ ಛಾಪು, ಗತ್ತುಗಾರಿಕೆ, ಹೆಚ್ಚೂ ಅಲ್ಲದ ಕಡಿಮೆಯೂ ಅಲ್ಲದ ಔಚಿತ್ಯಕ್ಕೆ ತಕ್ಕ ಅಭಿನಯ , ಎರಡನೇ ವೇಷಕ್ಕೆ ಒಪ್ಪುವ ಶರೀರ ಶಾರೀರ. ರಾಮ, ರಾವಣ, ಕಂಸ, ಕರ್ಣ, ಅರ್ಜುನ, ಜಾಂಭವ, ಕೀಚಕ, ವಲಲ, ಕೌರವ, ಭೀಷ್ಮ, ವೀರಮಣಿ, ಬಲರಾಮ, ಭಸ್ಮಾಸುರ , ರಕ್ತಜಂಘ, ದುರ್ಜಯ, ದುಷ್ಟಬುದ್ಧಿ ,ಕೃಷ್ಣ, ಸುಧನ್ವ, ರುದ್ರಕೋಪ ,ಪುಷ್ಕಳ, ಹೀಗೆ ನಾಯಕ ಪ್ರತಿನಾಯಕ ಪಾತ್ರಗಳಿಗೂ ಗರಿಷ್ಠ ಮಟ್ಟದ ನ್ಯಾಯ ಒದಗಿಸಬಲ್ಲವರು.
ಮಾರಣಕಟ್ಟೆ ಕ್ಷೇತ್ರ ಮಹಾತ್ಮೆಯ ಕಂಹಾಸುರನ ಪಾತ್ರ , ಮೂಕಾಸುರನಾಗಿ ಮಾತನಾಡಲಾಗದೆ ಚಡಪಡಿಸುತ್ತಾ ಭಕ್ತಿ ಬಾವದಿಂದ ಭಿನ್ನಹ ಅಪಾರ ಕಲಾರಸಿಕರ ಮನಸೂರೆಗೊಂಡಿದೆ.ಕನಸಿನಲ್ಲಿ ಕೃಷ್ಣನನ್ನು  ಕಂಡಾಗ  ಕಂಸನಾಗಿ ಅಭಿನಯಿಸುವ ರೀತಿ, ರಾಮನಿಗೆ ಕುಶಲವರನ್ನು  ನೋಡಿದಾಗ ಅಭಿವ್ಯಕ್ತ ಪಡಿಸುವ ಭಾವಾಭಿನಯ , ರಾವಣನಾಗಿ ಸೀತೆಯನ್ನು ಅಶೋಕವನದಲ್ಲಿ ಕಂಡಾಗ ವರ್ಣಿಸುವಲ್ಲಿ ಸಾಹಿತ್ಯ,  ಹೀಗೆ ಪ್ರತಿಪಾತ್ರಕ್ಕೂ ತನ್ನದೆ ವೈಶಿಷ್ಟಪೂರ್ಣ ಸ್ವಂತಿಕೆಯನ್ನು ಪ್ರಸ್ತುತಪಡಿಸುತ್ತಾರೆ.

ರಂಗಸ್ಥಳದ ರಾಜನೆಂದು ಖ್ಯಾತಿವೆತ್ತಿ ತನ್ನ ಸುದೀರ್ಘ ತಿರುಗಾಟದಲ್ಲಿ 50ಕ್ಕೂ ಅದಿಕ ಸನ್ಮಾನಗಳಿಗೆ ಬಾಜನರಾದ ಇವರಿಗೆ ಹೊರರಾಜ್ಯ, ಮುಂಬೈ, ದೆಹಲಿಯಲ್ಲೂ ಸನ್ಮಾನ ಸಂದಿದೆ.
ಜಾಗತಿಕ ಬಂಟ ಪ್ರತಿಷ್ಟಾನದ ಪ್ರಶಸ್ತಿ , ಎಂ. ಎಂ. ಹೆಗ್ಡೆ ಪ್ರತಿಷ್ಟಾನದ ಪ್ರಶಸ್ತಿ ಸಹಿತ ಹಲವಾರು ಸನ್ಮಾನಗಳನ್ನು ಇವರಿಗೆ ಯೋಗ್ಯವಾಗಿ ಸಂದಿವೆ. ಸೆಪ್ಟೆಂಬರ 29ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ರಂಗ ನಾಯಕ ಎಂಬ ಬಿರುದನ್ನು ನೀಡಿ ಅಭಿನಂದಿಸಲಿದ್ದಾರೆ .ಐರಬೈಲರ ಕಲಾಜೀವನದ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಶುಭಹಾರೈಸೋಣ .
ಸರಳ ,ಸಜ್ಜನ ಶೆಟ್ಟರು ಎಲ್ಲರೊಂದಿಗೆ ಪ್ರೀತಿಯಿಂದ ನಗುತ್ತಲೇ ಮಾತಿಗೆ ಇಳಿಯುತ್ತಾರೆ. ಅವರ ಕಲಾಬದುಕನ್ನು ಸ್ವಾರಸ್ಯಕರವಾಗಿ ನಮ್ಮೊಂದಿಗೆ ಹಂಚಿಕೊಂಡರು

ನೈಕಂಬ್ಳಿ :- ಬದಲಾದ ಕಾಲಘಟ್ಟದ ಬಗ್ಗೆ ನಿಮ್ಮ ಅನಿಸಿಕೆ?

ಐರಬೈಲ್ :- ಬದಲಾವಣೆ ಅನಿವಾರ್ಯ ನಿಜ. ಆದರೆ ಪೌರಾಣಿಕ ಕಥೆಗಳಲ್ಲಿನ ಮೌಲ್ಯ ಜನರಿಗೆ ತಲುಪಿಸುವಲ್ಲಿ ಯಕ್ಷಗಾನ ಅತ್ಯುತ್ತಮ ಮಾಧ್ಯಮ . ಹಾಗಾಗಿ ಪೌರಾಣಿಕ ಕಥೆಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಆದ್ಯತೆ ಕೊಡಬೇಕು. ಹಿಂದೆ ಯಕ್ಷಗಾನದ ಬಗ್ಗೆ ಕೀಳರಿಮೆ ಕೂಡ ಇತ್ತು ಆದರೂ ಸಂಪ್ರದಾಯದ ಎಲ್ಲೆ ಮೀರುತ್ತಿರಲಿಲ್ಲ. ಈಗ ಕಲೆಗೆ ಪ್ರೋತ್ಸಾಹಗಳು ದೊರಕುತ್ತಿವೆ ಆದರೂ ಚೌಕಟ್ಟು ಮೀರುವ ಪ್ರಯತ್ನ ನಿರಂತರವಾಗಿ ಆಗುತ್ತಿದೆ . ಹಾಗೆ ಬಡಗುತಿಟ್ಟಿನಲ್ಲಿ ಮಾರಣಕಟ್ಟೆ ಮತ್ತು ಮಂದಾರ್ತಿ ಮೇಳಗಳು ಕೇವಲ ಪೌರಾಣಿಕ ಪ್ರಸಂಗಗಳನ್ನಷ್ಟೆ ಆಡುವಂತಹ ಮೇಳಗಳು. ಪೌರಾಣಿಕ ಪ್ರಸಂಗ ಉಳಿವಿನಲ್ಲಿ ಇವುಗಳ ಪಾತ್ರ ಹಿರಿದಾಗಿದೆ.

ನೈಕಂಬ್ಳಿ :- ಮೇಳದ ಅನುಭವದ ಹೇಗೆ ಹಂಚಿಕೊಳ್ಳಲು ಬಯಸುತ್ತಿರಿ

ಐರಬೈಲ್ :- ಇಂದಿನ ಎಲ್ಲಾ ಯಶಸ್ಸಿಗೆ ಶ್ರೀ ಬ್ರಹ್ಮಲಿಂಗೇಶ್ವರ ಅನುಗ್ರಹವೇ ಕಾರಣ. ಎಂ.ಎಂ ಹೆಗಡೆಯವರು ನನ್ನನ್ನು ಈ ಮಟ್ಟಕ್ಕೆ ತಿದ್ದಿ ,ತೀಡಿ ರೂಪಿಸಿದ್ದಾರೆ ಅವರನ್ನು ಸದಾ ಸ್ಮರಿಸುತ್ತೇನೆ. ನನಗೆ ಡೇರೆ ಮೇಳದಿಂದ ಹಿಡಿದು ಬೇರೆ ಬೇರೆ ಮೇಳದಿಂದ ಆಹ್ವಾನ ಬಂದಿದ್ದರು ಸಹ ಎಂ.ಎಂ.ಹೆಗಡೆಯವರೇ ನನ್ನೊಂದಿಗೆ ನೀನು ಸದಾ ಇರಬೇಕು ಎಂದು ಇಚ್ಛೆಪಟ್ಟವರು ಹಾಗಾಗಿ ನಲವತ್ತು ವರ್ಷಗಳ ಕಾಲ ಒಂದೇ ಮೇಳದಲ್ಲಿ ಉಳಿಯಲು ಸಾಧ್ಯವಾಯಿತು. ಅವರ ಪಟ್ಟದ ಶಿಷ್ಯನೆಂದೆ ಯಕ್ಷಗಾನ ವಲಯದಲ್ಲಿ ಗುರುತಿಸಿಕೊಂಡಿದ್ದಕ್ಕೆ ನನಗೆ ಹೆಮ್ಮೆಯಿದೆ. ಚೌಕಿ ಮತ್ತು ರಂಗದ ಶಿಸ್ತಿಗೆ ಅನ್ವರ್ಥಕ ನಾಮ
ಎಂ.ಎಂ ಹೆಗಡೆಯವರೆಂದರೆ ಅತಿಶಯೋಕ್ತಿ ಅಲ್ಲ. ಅವರ ಶಿಷ್ಯರು ಈಗಲೂ ಮಾರಣಕಟ್ಟೆ ಮೇಳದಲ್ಲಿ ಇರುವುದರಿಂದ ಅದೇ ಶಿಸ್ತು ಇನ್ನು ಚಾಲ್ತಿಯಲ್ಲಿದೆ.

ನೈಕಂಬ್ಳಿ :- ಕಲಾ ಬದುಕಿನ ಅವಿಸ್ಮರಣೀಯ ಕ್ಷಣಗಳು ?

ಐರಬೈಲ್ :- ಒಮ್ಮೆ ಗೋವಾದಲ್ಲಿ ಆಟ .ನನ್ನ ನೃತ್ಯ ಗುರು ಹಾರಾಡಿ ಸರ್ವ ಗಾಣಿಗರು ಭಸ್ಮಾಸುರನ ಪಾತ್ರ ಮಾಡಬೇಕಿತ್ತು. ಅನಿವಾರ್ಯ ಕಾರಣದಿಂದ ಅವರು ಬಂದಿರಲಿಲ್ಲ. ಆಗ ನರಸಿಂಹ ದಾಸ ಭಾಗವತರು ,ಮಾರ್ಗೋಳಿ ಗೋವಿಂದ ಸೇರೆಗಾರರು ಇದ್ದರು. ಅವರು ನನ್ನನ್ನು ಹುರಿದುಂಬಿಸಿ ಪ್ರಪ್ರಥಮ ಬಾರಿಗೆ ಭಸ್ಮಾಸುರ ಮತ್ತು ಸತಿ ಸುಶೀಲೆಯ ಪಾತ್ರ ಮಾಡುವಂತೆ ಪ್ರೇರೇಪಿಸಿದರು. ಪಾತ್ರ ಮುಗಿದ ನಂತರ ಪ್ರಶಂಸಿದರು.ಇನ್ನೊಮ್ಮೆ ನಾನು ಬಂಟ್ವಾಡಿ ಕಲಾಸಂಘದ ಉದ್ಘಾಟನೆಗೆ ಶಾಲಾ ಶಿಕ್ಷಕರನ್ನು ಮತ್ತು ಮಕ್ಕಳನ್ನು ತಯಾರು ಮಾಡಿ ಸುಧನ್ವಾರ್ಜುನ ಪ್ರಸಂಗ ಆಡಿಸಿದ್ದೆ .ಅದನ್ನು ಕಂಡ ಕಂದಾವರ ರಘು ಮಾಸ್ಟ್ರ್, ಡಾಕ್ಟರ್ ಚಂದ್ರಶೇಖರ ಶೆಟ್ರು , ಎಂ.ಎಂ ಹೆಗಡೆಯವರು ತುಂಬು ಸಂತೋಷಗೊಂಡರು.ಈ ವಯಸ್ಸಿನಲ್ಲೆ ಇಷ್ಟೊಂದು ಅತ್ಯುತ್ತಮವಾಗಿ ತಯಾರು ಮಾಡಿದ್ದಾನೆ ಎಂದು ಮೆಚ್ಚಿ ಮುಂದಿನ ತಿರುಗಾಟದಿಂದ ಎರಡನೇ ವೇಷಧಾರಿಯಾಗಿ ಆಯ್ಕೆ ಮಾಡಿದರು. ಹಾಗಾಗಿ ನಾನು ಯಕ್ಷಗಾನಕ್ಕೆ ಬಂದ ಹನ್ನೊಂದನೇ ವಯಸ್ಸಿಗೆ ಎರಡನೆ ವೇಷಧಾರಿಯಾಗಿ ಭಡ್ತಿ ಪಡೆದೆ.
ನೈಕಂಬ್ಳಿ :- ನಲವತ್ತು ವರ್ಷಗಳ ಕಲಾ ಜೀವನದ ಸಂಭ್ರಮಕ್ಕೆ ತಯಾರಿ ನಡೆಯುತ್ತಿದೆ, ಈ ದಿನದ ಬಗ್ಗೆ ಹೇಳುವುದಾದರೆ .

ಐರಬೈಲ್ :-ನನ್ನನ್ನು ಪ್ರೋತ್ಸಾಹಿಸುವ, ಪ್ರೀತಿಸುವ ಅಭಿಮಾನಿಗಳ ಹಾರೈಕೆ ನನ್ನನ್ನು ಈ ಮಟ್ಟಕ್ಕೆ ತಲುಪಿಸಿದೆ . ಸಹಕರಿಸಿ, ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಆರಾಧ್ಯ ದೇವರಾದ ಬ್ರಹ್ಮಲಿಂಗೇಶ್ವರ ಸನ್ಮಂಗಲ ಉಂಟುಮಾಡಲಿ ಎಂದು ಬೇಡಿಕೊಳ್ಳುತ್ತೇನೆ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..