2304

“ಅಮರಾವತಿ” ಎಂಬ…

ಕಾಲ ಬದಲಾದಂತೆ ಪ್ರೇಕ್ಷಕ ಬದಲಾಗುತ್ತಿದ್ದಾನೆ ಎನ್ನುವುದು ಸತ್ಯ.ಪ್ರೇಕ್ಷಕ ಕೇಳಿದನ್ನು ಕೊಡಬೇಕಾದದ್ದು ಸಿನಿಮಾ ಮಾಡುವವರ ಧರ್ಮ.ಇತ್ತೀಚಿನ ಪ್ರೇಕ್ಷಕನ ಕಣ್ಣು ತೆರೆಯ ಮೇಲೆ ಬರೀ ಬಣ್ಣಗಳನ್ನು ಮಾತ್ರ ಬಯಸುತ್ತಿಲ್ಲ.ಅವನಿಗೆ ಕೇಳಲೊಂದು ಕಥೆ ಬೇಕು.ಅದು ಎರಡು ಮೂರು ತಾಸು ಬೆಳಕಿನ ಪ್ರಪಂಚವನ್ನು ಮರೆಸಬೇಕು.ಆ ಕಥೆಯೊಳಗೆ ಅವನನ್ನು ಅವನು ಕಂಡುಕೊಳ್ಳಬೇಕು.ಎಲ್ಲಕಿಂತ ಹೆಚ್ಚಾಗಿ ಅದು ಅವನನ್ನು ರಂಜಿಸಬೇಕು.ಥಿಯೇಟರ್ ನಿಂದ ಹೊರಬಂದ ಮೇಲೂ ಅವನನ್ನು ಕಾಡಬೇಕು.ತಾನು ನೋಡಿದ ಸಿನಿಮಾದ ಬಗ್ಗೆ ನಾಲ್ಕು ಜನರಿಗೆ “ಹೋಗಿ ಚಿತ್ರ ನೋಡಿ ಸೂಪರ್ರಾಗಿದೆ”ಎಂದು ಹೇಳುವ ಧೈರ್ಯ ನೀಡಬೇಕು.ಅದು ಒಳ್ಳೆಯ ಸಿನಿಮಾ.ಅದು ಗೆಲ್ಲುವ ಸಿನಿಮಾ.ಅಮರಾವತಿ ನಾನು ಕಂಡಂತ ಅಧ್ಬುತ ಸಿನಿಮಾಗಳಲೊಂದು.ನನ್ನನ್ಯಾರಾದರೂ “ನಿನ್ ಫೇವರೇಟ್ ಯಾಕ್ಟರ್ ಯಾರು?”ಅಂತ ಕೇಳಿದ್ರೆ ನಾನ್ ಹೇಳೋದು,”ಅಚ್ಯುತ್ ಕುಮಾರ್” ಅಂತ.ಯಾವ ಪಾತ್ರವನ್ನಾದರೂ ಕೊಡಿ ಸ್ವಾಮಿ ಇವರಿಗೆ,ಅವರು ಸಂಪೂರ್ಣವಾಗಿ ಆ ಪಾತ್ರವಾಗುತ್ತಾರೆ.ಅಚ್ಯುತ್ ಅವರ ನಟನೆಯನ್ನ ಇಷ್ಟ ಪಡುವವರು ನೊಡಲೇಬೇಕಾದ ಚಿತ್ರ “ಅಮರಾವತಿ”.ದಿನಬೆಳಗಾದರೆ ನಾವೂ ಕೂಡ ಊರೆಲ್ಲಾ ಸುತ್ತುತ್ತೇವೆ.ಸಾಕಷ್ಟು ಜನರನ್ನ ಅವರ ಪಡಿಪಾಟಲನ್ನು ಗಮನಿಸುತ್ತೇವೆ.ಮತ್ತೆ ಸುಮ್ಮನಾಗುತ್ತೇವೆ.ಹೀಗೆ ಸುಮ್ಮನಿರುವ ನಮ್ಮಂತವರನ್ನು ಹೊಡೆದೆಬ್ಬಿಸಿ ಪೌರ ಕಾರ್ಮಿಕರು ಮತ್ತು ಅವರ ಘೋರ ಜೀವನದ ಚಿತ್ರವನ್ನು,ವಿಚಿತ್ರವನ್ನು ತೆರೆಯ ಮೂಲಕ ನಮ್ಮ ಕಣ್ಣಿಗೆ ಮತ್ತು ಮನಸ್ಸಿಗೆ ತಲುಪಿಸುವ ಪ್ರಯತ್ನವೇ ಈ “ಅಮರಾವತಿ”.ಅದ್ವೈತ,ಜಟ್ಟ,ಮೈತ್ರಿ ಹಾಗು ತೆರೆಗಾಗಿ ಕಾಯುತ್ತಿರುವ “ತುಂಡ್ ಹೈಕ್ಳ್ ಸಾವಾಸ” ಚಿತ್ರವನ್ನು ಬರೆದು ನಿರ್ದೇಶಿಸಿರುವ
ಬಿ.ಎಂ ಗಿರಿರಾಜ್ ಅಮರಾವತಿಯ ಜನಕ.ಕತ್ತಲಲ್ಲಿರುವ ಪೌರ ಕಾರ್ಮಿಕರ ಜೀವನದ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಿದ್ದಾರೆ.ನಮ್ಮ ಸುತ್ತಮುತ್ತಲೂ ದಿನನಿತ್ಯಲೂ ನಡೆಯುವ ಕಥೆ ಅಮರಾವತಿ.ಎಷ್ಟು ಬೇಕೊ ಅಷ್ಟು ಮನರಂಜನೆ ಖಂಡಿತ ಇದೆ.ಅಂತಹ ಮುಜುಗರ ಪಡುವ,ಭಯಪಡುವ ಯಾವುದೇ ವಿಚಾರಗಳು ಸಿನಿಮಾದಲ್ಲಿ ಇಲ್ಲದಿದ್ದರೂ ಚಿತ್ರಕ್ಕೆ A certificate ಕೊಟ್ಟಿರುವುದು ವಿಷಾದ.ಕುಟುಂಬದವರ ಜೊತೆ ಅರಾಮಾವಾಗಿ ನೋಡಬಹುದಾದ ಚಿತ್ರ.

amara

ಚಿತ್ರದ ಬಹುತೇಕ ಕಲಾವಿದರು ರಂಗಭೂಮಿಯ ಹಿನ್ನೆಲೆ ಉಳ್ಳವರು ಎನ್ನುವುದು ವಿಶೇಷ.ಅಚ್ಯುತ್ ಕುಮಾರ್ ,ಹೇಮಂತ್ ಸುಶೀಲ್,ಕಿರಣ್ ಕುಮಾರ್,ಪರಮೇಶ್ವರ್,ವೈಶಾಲಿ ದೀಪಕ್ ಇವರುಗಳ ನಟನೆ ಅಮರಾವತಿಯ ಜೀವಾಳ.ಗಿರಿರಾಜ್ ಅವರ ಚಿತ್ರ ಕಥೆ ಮತ್ತು ಸಂಭಾಷಣೆ ಪ್ರೇಕ್ಷಕನನ್ನು ಬೋರಾಗದಂತೆ ಕಥೆ ಹೇಳಿಕೊಂಡು ಹೋಗುತ್ತದೆ.ಆಷ್ಲೆ-ಅಭಿಲಾಶ್ ಹಿನ್ನೆಲೆ ಸಂಗೀತ ದೃಷ್ಯಗಳ ಆಳದಲ್ಲಿ ಹೋಗಲು ನಮಗೆ ಸಹಕರಿಸುತ್ತದೆ.ಟೈಟಲ್ ಕಾರ್ಡ್ ತೋರಿಸುವಾಗ ಕಲಾವಿದರು ಅವರವರ ತಾಯಿಯ ಜೊತೆ ತೆಗೆಸಿಕೊಂಡ ಫೋಟೊ ನೋಡಿದಾಗ ನಮ್ಮ ನಮ್ಮ ತಾಯಂದಿರ ನೆನಪಿಸುತ್ತದೆ.ಸಾಮಾನ್ಯವಾಗಿ ಚಿತ್ರ ಮುಗಿದ ನಂತರ (ಎಷ್ಟೋ ಬಾರಿ ಸಿನಿಮಾ ಮುಗೀತು ಮುಗೀತು ಅಂತ ತಿಳಿಯುತ್ತಲೇ) ಪಾರ್ಕಿಂಗ್ ಕಡೆ ಓಡುವ ಪ್ರೇಕ್ಷಕ.”ಅಮರಾವತಿ” ಚಿತ್ರ ಮುಗಿದ ನಂತರ ತನ್ನ ಸೀಟಿನಿಂದ ಏಳಬೇಕು,ಎದ್ದು ಮನೆಗೆ ಹೊರಡಬೇಕು ಎನ್ನುವುದನ್ನು ಮರೆತು ಕುಂತಲ್ಲೆ ಚಪ್ಪಾಳೆ ತಟ್ಟುತ್ತಾ ಕಣ್ಣೊರೆಸಿಕೊಳ್ಳುವ ಅಪರೂಪದ ದೃಷ್ಯ ನಾನು ಸಿನಿಮಾ ನೊಡಲು ಹೋದಾಗ ಕಂಡೆ.ಎಂತಹ ಅಧ್ಬುತ ಅನುಭವ ಅದು.ಒಂದು ಚಿತ್ರ ನಮ್ಮ ಮನಸ್ಸಿಗೆ ಹತ್ತಿರವಾಗಿ, ನಮ್ಮನ್ನು ಕಾಡಿ ಅದು ನಮ್ಮ ಕಣ್ಣುಗಳು ತೋಯುವಂತೆ ಮಾಡುತ್ತದೆ ಅಂದರೆ ಅದು ಒಳ್ಳೆಯ ಸಿನಿಮಾ ತಾನೆ?ಒಳ್ಳೆಯ ಸಿನಿಮಾ ಗೆಲ್ಲಬೇಕು ತಾನೆ?ಗೆಲ್ಲಿಸೋಣ.ಥಿಯೇಟರ್ ಬರ ಎದುರಿಸುತ್ತಿರುವ ಅಮರಾವತಿಯನ್ನು ನಾವು ಹುಡುಕಿಕೊಂಡು ಹೋಗಿ ನೋಡಬೇಕಿದೆ.ಬೆಂಗಳೂರನ್ನು ಪೂರೈಸಿ ಈಗ ಚಿತ್ರ ರಾಜ್ಯಾದಾದ್ಯಂತ ನಿಮ್ಮನ್ನು ತಲುಪುವ ಸನ್ನಾಹದಲ್ಲಿದೆ.ನಿಮ್ಮೂರಿಗೆ ಬಂದಾಗ ಸ್ವಾಗತಿಸಿ ಸಿನಿಮಾವನ್ನು ಗೆಲ್ಲಿಸುವ ಹೊಣೆ ನಿಮ್ಮದು.ಯಾಕೆಂದರೆ ಅಮರಾವತಿ ಒಳ್ಳೆಯ ಸಿನಿಮಾ,ಒಳ್ಳೆಯ ಕನ್ನಡ ಸಿನಿಮಾ ಗೆಲ್ಲಲೇಬೇಕು.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..