2166

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸಂಗೀತ ಶಾರದೆ ಅನುರಾಧ ಮಯ್ಯ ಅವರ ಬಗ್ಗೆ

ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನ. ಸಾಧನೆಯ ಹಾದಿಯಲಿ ದಣಿವರಿಯದೆ ದುಡಿಯುತ್ತಿರುವ ಸಾಧಕಿಯರನ್ನು ಈ ಸಮಾಜಕ್ಕೆ ಪರಿಚಯಿಸುವುದು ನಮ್ಮ ಜವಬ್ದಾರಿ..ಈ ನೆಲೆಯಲ್ಲಿ ಈ ಗ್ರಾಮೀಣ ಪರಿಸರದ ಸಂಗೀತ ಸಾಧಕಿಯೊಬ್ಬರ ಯಶಸ್ಸಿನ ಕಥೆ ನಿಮಗಾಗಿ ಓದಿ.. ಗ್ರಾಮೀಣ ಪರಿಸರದಲ್ಲಿ ಅರಳಿದ ಸಂಗೀತ ಶಾರದೆ:: ಶ್ರೀಮತಿ ಅನುರಾಧಾ ಎ.ಪಿ ಮಯ್ಯ!! ಸಂಗೀತ ಎಲ್ಲರಿಗೂ ಇಷ್ಟವಾಗುತ್ತದೆ ನಿಜ: ಆದರದು ಒಲಿದು ಬರುವುದು ಕೆಲವರಿಗೆ ಮಾತ್ರ. ಸುಶ್ರಾವ್ಯ ಸ್ವರಧಾರೆ, ಕಠಿಣ ಪರಿಶ್ರಮ, ನಿರಂತರ ಶ್ರದ್ಧೆ , ಸದಾ ಕಲಿಯುವ ಮಗುವಿನ ಮುಗ್ದತೆ ಇದ್ದವರಷ್ಟೆ ಸಂಗೀತವನ್ನು ಕಲಿತು ಇನ್ನೊಬ್ಬರಿಗೆ ಕಲಿಸುವಷ್ಟರ ಮಟ್ಟಿಗೆ ಬೆಳೆಯಬಲ್ಲರು. ಈ ಮೇಲಿನ ಮಾತಿಗೆ ಅನುರೂಪ ಎಂಬಂತೆ ಸಂಗೀತವನ್ನು ತಪಸ್ಸಿನಂತೆ ಸ್ವೀಕರಿಸಿ ತಾವು ಕಲಿತು ಇದೀಗ ನೂರಾರು ವಿದ್ಯಾರ್ಥಿಗಳಿಗೆ ಸಂಗೀತವನ್ನು ಕಲಿಸುವಷ್ಟರ ಮಟ್ಟಿಗೆ ಬೆಳೆದ ಸರಳ ಸಜ್ಜನಿಕೆ ವ್ಯಕ್ತಿತ್ವದ ಸಂಗೀತ ಶಾರಧೆಯೇ ಉಡುಪಿ ಜಿಲ್ಲೆಯ ‘ಹಿಲಿಯಾಣ’ ಎಂಬ ತೀರಾ ಗ್ರಾಮೀಣ ಪರಿಸರದ ಸಂಗೀತ ಸಾಧಕಿ..ಅವರೇ ಶ್ರೀಮತಿ ಅನುರಾಧಾ ಎ.ಪಿ. ಮಯ್ಯ! ಇವರ ಬದುಕೇ ಸಾಕ್ಷಾತ್ ಸಂಗೀತದ ರಾಗದಂತೆ ಮನ ಮುಟ್ಟುವಂತಹದ್ದು..ಇನ್ನೊಬ್ಬರಿಗೆ ಮಾದರಿಯಾಗಬಲ್ಲಹದ್ದು!! ಮಲೆನಾಡ ಸೆರಗು ಕೊಪ್ಪ ತಾಲೂಕಿನ ಬಡಕುಟುಂಬದಲ್ಲಿ ಜನಿಸಿದ ಅನುರಾಧಾರು ಮದುವೆಯಾಗಿ ಬಂದದ್ದು ಸಂಗೀತದ ಸಣ್ಣ ‘ಗಂಧ-ಗಂಪು-ಪೆಂಪು’ ಇರದ ಉಡುಪಿ ತಾಲೂಕಿನ ಹಿಲಿಯಾಣ ಎಂಬ ತೀರಾ ಗ್ರಾಮೀಣ ಪರಿಸರದ ಊರಿಗೆ. ತಾಯಿ ‘ಸುಮೇಧಾ’ ಅವರಿಂದ ಸಂಗೀತದ ಗೀಳು ಹತ್ತಿಸಿಕೊಂಡು ಬೆಂಗಳೂರಿನಲ್ಲಿ ಸರಿಗಮದ ಮೊದಲ ಪಾಠವನ್ನು ಕಲಿತು ಮದುವೆಯಾಗಿ ಈ ಊರಿಗೆ ಬಂದವರು. ಆದರೆ ಪತಿಯ ಮನೆ ಪರಿಸರದಲ್ಲಿ ಸಂಗೀತದ ಸಣ್ಣ ವಾತವರಣವೂ ಇರದಿದ್ದರಿಂದ ಹೆಚ್ಚು ಕಡಿಮೆ ಮದುವೆಯಾದ ಮೊದಲ ಐದು ವರ್ಷ ಸಂಸಾರವೆಂಬ ಜವಬ್ದಾರಿಯ ಗೂಡಿನೊಳಗೆ ಬಂದಿಯಾಗಿ ಸಂಗೀತದ ತಂತುವನ್ನು ತಂಡರಿಸಿಕೊಂಡು ಸಂಗೀತದಿಂದ ದೂರವೇ ಉಳಿದವರು. ಆದರೆ ‘ಸಾಧಿಸಿದರೆ ಸಬಳವನ್ನು ನುಂಗಬಹುದು’ ಎಂಬ ನಾಣ್ಣುಡಿಯ ಹಾಗೇ ತಾನು ಎನನ್ನಾಧರೂ ಸಾಧಿಸಬೇಕೆಂಬ ಉತ್ಕಠ ತುಡಿತದಿಂದ ತನ್ನೊಳಗಿದ್ದ ಸಂಗೀತದಾಸಕ್ತಿಯನ್ನು ಮತ್ತೆ ಚಿಗುರಿಸಿಕೊಂಡು ಕರ್ನಾಟಿಕ್ ಶಾಸ್ತ್ರೀಯ ಸಂಗೀತದಲ್ಲಿ ಜ್ಯೂನಿಯರ್, ಸೀನಿಯರ್, ವಿದ್ವತ್ ಪದವಿಯನ್ನು ಪಡೆದು ಸಂಗೀತ ಕಛೇರಿಗಳನ್ನು ನೀಡುವಷ್ಟರ ಮಟ್ಟಿಗೆ ಬೆಳೆದು ನಿಂತರು..ಆಮೇಲಿನದ್ದೆಲ್ಲ ಯಶಸ್ಸಿನ ಗಾಥೆಯೇ ಸರಿ.! ಪ್ರಸ್ತುತ ಉಡುಪಿ ಜಿಲ್ಲೆಯಾದ್ಯಂತ ಸಂಗೀತ ಶಿಕ್ಷಕಿಯಾಗಿ ಅನುರಾಧಾ ಚಿರಪರಿಚಿತರು. ಗ್ರಾಮೀಣ ಪರಿಸರದಲ್ಲಿ “ಸುಮೇಧ” ಎಂಬೆಸರಿನ ಸಂಗೀತ ಶಾಲೆಯನ್ನು ಕಟ್ಟಿ ದಿನವೂ ನೂರಕ್ಕೂಅಧಿಕ ಮಕ್ಕಳಿಗೆ ಶಾಸ್ತ್ರೀಯ, ಲಘು ಸಂಗೀತ, ಹನುಮಾನ್ ಚಾಲೀಸ್, ಭಗವದ್ಗೀತೆ, ನೈಮಿತ್ತಿಕಾ ಶ್ಲೋಕಗಳನ್ನು ಕಲಿಸುತ್ತಾ ಬಂದವರು.. ಭರತನಾಟ್ಯ, ಜನಪದ, ಸಿನಿಮಾ ನಾಟ್ಯಗಳ ತರಬೇತಿಗೂ ವಾತವರಣವನ್ನು ಸೃಷ್ಟಿಸಿದವರು. ಯಾವುದೇ ಪ್ರತಿಫಲದ ನಿರೀಕ್ಷೆ ಇಲ್ಲದೆ ಸುಮೇದ ಸಂಗೀತ ಶಾಲೆಯ ದಶಮಾನೋತ್ಸವವನ್ನು ಆಚರಿಸಿ ಮಕ್ಕಳೆಲ್ಲ ಸಂಭ್ರಮದಿಂದ ಬೀಗುವಂತೆ ಮಾಡಿದವರು.! ಅನುರಾಧಾ ಎ.ಪಿ ಮಯ್ಯ ಕವಯತ್ರಿಯಾಗಿ, ಲೇಖಕರಾಗಿ, ನಿರೂಪಕಿಯಾಗಿಯೂ ಜಿಲ್ಲೆಯಾದ್ಯಂತ ಪರಿಚಿತರು. ನಾಡಗೀತಾ, ಕವಿತ ನಂದನ, ಹಂಬಲ ಇವರ ಪ್ರಕಟಿತ ಕವನ ಸಂಕಲನ. ಅನೇಕ ಸಾಹಿತ್ಯ, ಕವಿ ಸಮ್ಮೇಳನದಲ್ಲಿ ಭಾಗವಹಿಸಿದಲ್ಲದೆ ಸ್ವತಃ ತಾವೇ “ಮನೆಯಂಗಳದಲ್ಲಿ ಸಾಹಿತ್ಯ”ದಂತಹ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಸಂಘಟಕರಾಗಿ, ನಿರೂಪಕಿಯಾಗಿಯೂ ಎಲ್ಲೆಡೆ ಗುರುತಿಸಿಕೊಂಡವರು, ಜಿಲ್ಲೆಯಾದ್ಯಂತ ಸಂಗೀತ ಕಚೇರಿಗಳನ್ನು ನೀಡುತ್ತಾ ತಾವು ಹಾಡಿ, ಮಕ್ಕಳಿಂದಲೂ ಹಾಡಿಸಿ ಸಂಗೀತಾಸ್ತರ ಮನವನ್ನು ಗೆದ್ದವರು. ಸ್ವತಃ ಅನುರಾಧಾರೇ ರಚಿಸಿ ರಾಗ ಸಂಯೋಜಿಸಿ ಹಾಡಿದ ‘ಭಾವ ಸಿಂಚನ’ ಸಿಡಿ ಬಿಡುಗಡೆಗೊಂಡು ಸಂಗೀತಾಸಕ್ತರ ಮನವನ್ನು ಸಾಕಷ್ಟು ತಣಿಸಿದೆ.ಗೆದ್ದಿದೆ. ಇವರ ಸಂಗೀತಾ-ಸಾಹಿತ್ಯ ಸಾಧನೆಯನ್ನು ಗುರುತಿಸಿ 2014-15ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹತ್ತಾರು ಪ್ರಶಸ್ತಿಗಳು, ಅಸಂಖ್ಯ ಸನ್ಮಾನಗಳು ಇವರನ್ನರಸಿ ಬಂದಿವೆ. ಪತಿಯ ನೆಚ್ಚಿನ ಪತ್ನಿಯಾಗಿ, ಇಬ್ಬರು ಹೆಣ್ಣುಮಕ್ಕಳ ಮಮತೆಯ ಅಮ್ಮನಾಗಿ, ಕುಟುಂಬದ ನೆಚ್ಚಿನ ಗೃಹಿಣಿಯಾಗಿಯೂ ತನ್ನ ಜವಬ್ದಾರಿಯನ್ನು ಮೆರೆದವರು. ಈ ನೆಲೆಯಲ್ಲೂ ಅನುರಾಧಾ ಅಭಿನಂದನೆಗೆ ಅರ್ಹರು. ಒಟ್ಟಿನಲ್ಲಿ ಗ್ರಾಮೀಣ ಪರಿಸರದ “ಸಂಗೀತ ವಿಶಾರಧೆ” ಎಂಬ ಎಂಬ ಅನ್ವರ್ಥದಿಂದ ಅನುರಾಧರು ಜನಮನದಲ್ಲಿ ಗುರುತಿಸಿಕೊಂಡಿದ್ದಾರೆ. ಅರ್ಹವಾಗಿಯೇ ಇವರಿಗೆ ರಾಜ್ಯ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಸಿಗಬೇಕಿದೆ!!

ಬರಹ : ಮಂಜುನಾಥ್ ಹಿಲಿಯಾಣ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..