2107

ದಾದಾಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿ ವಿಜೇತ ದೊರೈ -ಭಗವಾನ್ ಅವರ 10 ಅವಿಸ್ಮರಣೀಯ ಚಿತ್ರಗಳು

  • By Rahul Hajare
  • Thursday, May 25th, 2017
  • Things You Should Know

ಕನ್ನಡ ಚಿತ್ರೋದ್ಯಮ ಕಂಡ ಅದ್ಭುತ ಮತ್ತು ಸೃಜನಶೀಲ ನಿರ್ದೇಶಕರಲ್ಲಿ ದೊರೈ-ಭಗವಾನ್ ಕೂಡಾ ಒಬ್ಬರು. ಇವರ ಮೂಲ ಹೆಸರು S.K.ಭಗವಾನ್ ದೊರೈರಾಜ್ ಜೊತೆಗೆ ಇವರು ಹೆಚ್ಚು ಕೆಲಸ ಮಾಡಿದ ಕಾರಣ ಅವರ ಜೊತೆ ಇವರ ಹೆಸರು ಬೆಸೆತುಕೊಂಡಿತು. ಭಗವಾನರು ಕಾದಂಬರಿ ಆಧಾರಿತ ಚಿತ್ರಗಳನ್ನು ಮಾಡುವುದರಲ್ಲಿ ಪ್ರಸಿದ್ಧರು ಒಂದು ಕಾದಂಬರಿಯನ್ನು ಆಯ್ದುಕೊಂಡ ಮೂಲವಸ್ತುವಿಗೆ ಚ್ಯುತಿ ಬರದಂತೆ ಚಿತ್ರಕತೆ ಹೆಣೆದು ಸಿದ್ಧ ಪಡಿಸಿದ ಸಿನಿಮಾಗಳು ಕನ್ನಡಿಗರ ಹಿರಿಪರದೆಗೆ ಅಪ್ಪಳಿಸಿದವು. ಅವರಿಗೆ ದಾದಾಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು ಶುಭಾಷಯವನ್ನು ಈ ಮೂಲಕ ರವಾನಿಸುತ್ತಾ ಅವರ ಕೆಲವು ಚಿತ್ರಗಳ ಮೇಲೆ ಪಕ್ಷಿನೋಟ ಬೀರಲು ಇದು ಸುಕಾಲ.

೧. ಕಸ್ತೂರಿ ನಿವಾಸ ( ೧೯೭೧)
ರಾಜ್’ಕುಮಾರ್,ಆರತಿ, ಜಯಂತಿ, ಅಶ್ವತ್ಥ್ ಅವರಂತೆ ಶ್ರೇಷ್ಠ ತಾರಾಗಣವನ್ನು ಹೊಂದಿದ ಚಿತ್ರದಲ್ಲಿ ಬದುಕಿನ ವಿವಿಧ ಆಯಾಮಗಳು ಸಂದಿಗ್ಧಗಳನ್ನು ತೋರಿಸಲಾಗಿದೆ. ಕೊನೆಗೆ ಕಥಾನಾಯಕ ಜೀವ ಬಿಟ್ಟರೂ ಆದರ್ಶವನ್ನು ಉಳಿಸಿಕೊಂಡು ಹೋಗುತ್ತಾನೆ. ಚಿತ್ರದ ಅಷ್ಟು ಹಾಡುಗಳು ಮಾಧುರ್ಯಕ್ಕೆ ಹೆಸರಾದರೆ ಆಡಿಸಿನೋಡು ಬಿಳಿಸಿನೋಡು ಮತ್ತು ಆಡಿಸಿದಾತ ಬೇಸರಮೂಡಿ ಹಾಡುಗಳು ಸಾಲು ಸಾಲಿನಲ್ಲೂ ಸಂಸ್ಕಾರವನ್ನು ಬಿತ್ತುತ್ತವೆ. ಅದೂ ನಿರ್ಜೀವ ವಸ್ತುಗಳಾದ ಕಬ್ಬು,ಗಂಧ, ದೀಪಗಳನ್ನು ಸೋದಾಹರಣವಾಗಿ ಬಳಸಿ ಬದುಕಿಗೆ ಮಾರ್ಗದರ್ಶನ ಮಾಡುವ ಅಪರೂಪದ ಹಾಡು ಚಿತ್ರದ ಒಂದು ಪ್ರಮುಖಾಂಶ.

೨.ಎರಡು ಕನಸು (೧೯೭೪)
ಪ್ರೇಮವೆಂಬುದು ಪವಿತ್ರ ಮತ್ತು ಅಮರ ಭಾವ. ಹಲವರ ಪ್ರೇಮ ಮದುವೆ ಎಂಬ ಗುರಿಯೊಂದಿಗೆ ಶುರುವಾಗಿ ಅಲ್ಲಿಗೆ ಮುಗಿದುಹೋಗುತ್ತದೆ. ಆದರೆ ಚಿತ್ರದಲ್ಲಿನ ಕಥಾನಾಯಕ ತಾಯಿಯ ಒತ್ತಾಯ ಮತ್ತು ಮನೆತನದ ಹಗೆತನದ ಕಾರಣಕ್ಕೆ ಬೇರೊಬ್ಬಳನ್ನು ಮದುವೆಯಾದರು ಅವಳೊಂದಿಗೆ ದೇಹ ಸಾಂಗತ್ಯಕ್ಕೆ ಮನಸ್ಸು ಒಪ್ಪುವುದಿಲ್ಲ.ಇಂಥ ಒಂದು ಪವಿತ್ರ ಪ್ರೇಮದ ಕಥಾಹಂದರವುಳ್ಳ ವಾಣಿಯವರು ಬರೆದ ಕಾದಂಬರಿ ಆಧಾರಿತ ಚಿತ್ರವಿದು.ಚಿತ್ರದ ಇನ್ನೊಂದು ವಿಶೇಷವೆಂದರೆ ರಾಜ್ ಅವರ ಇಂಗ್ಲೀಷ್ ಲೆಕ್ಚರ್.ಸುಶಿಕ್ಷಿತರೂ ನಾಚುವ ಹಾಗೆ ಸ್ಪಷ್ಟೋಚ್ಛಾರದ ಇಂಗ್ಲಿಷ್ ನಾವಲ್ಲಿ ಕೇಳಬಹುದು.

೩.ಬಯಲು ದಾರಿ(೧೯೭೬)
ಅನಂತ್’ನಾಗ್ ಕಲ್ಪನಾ ಅಭಿನಯದ ಈ ಚಿತ್ರದಲ್ಲಿ ಬಾನಲ್ಲೂ ನೀನೆ ಭುವಿಯಲ್ಲೂ ನೀನೆ, ಕನಸಲೂ ನೀನೆ ಮನಸಲೂ ನೀನೆ ಮತ್ತು ಎಲ್ಲಿರುವೆ ಮನವ ಕಾಡುವ ರೂಪಸಿಯೇ ಹಾಡುಗಳು ಇವತ್ತಿಗೂ ಪ್ರಸಿದ್ಧ. ಚಿತ್ರದ ಕಥಾನಾಯಕ ಮತ್ತು ನಾಯಕಿ ಯಾವುದೋ ಭಾವುಕ ಗಳಿಗೆಯಲ್ಲಿ ಒಂದಾಗಿ ಬಿಡುತ್ತಾರೆ. ಸೈನ್ಯದಲ್ಲಿ ಕೆಲಸಕ್ಕೆ ಹೋದ ನಾಯಕ ತೀರಿಹೋದ ಸುದ್ದಿ ಕೇಳಿದ ನಾಯಕಿ ಮತ್ತೊಂದು ಮದುವೆಯೂ ಆಗದೆ ಹುಟ್ಟಿದ ಮಗುವನ್ನು ಒಂಟಿಯಾಗಿ ಪೋಷಿಸುತ್ತಾಳೆ. ಆದರೆ ನಾಯಕ ಸತ್ತ ಸುದ್ದಿ ಸುಳ್ಳಾಗಿರುತ್ತದೆ. ಯುದ್ಧದಲ್ಲಿ ಕಾಲು ಕಳೆದುಕೊಂಡ ಕಾರಣಕ್ಕೆ ನನ್ನಿಂದ ಅವಳ ಜೀವನ ಹಾಳಾಗಬಾರದು ಅವಳು ಬೇರೆಯವರನ್ನು ಮದುವೆಯಾಗಿ ಸುಖವಾಗಿರಲಿ ಎಂಬ ಕಾರಣಕ್ಕೆ ಅಜ್ಞಾತವಾಸದಲ್ಲಿರುತ್ತಾನೆ. ಇದು “ಭಾರತಿಸುತ”ರ ಕಾದಂಬರಿ ಆಧಾರಿತ ಚಿತ್ರ.

೪.ಗಿರಿಕನ್ಯೆ(೧೯೭೭)
ಇದು ಕೂಡಾ ಭಾರತಿಸುತರ ಕಾದಂಬರಿ ಆಧಾರಿತ ಚಿತ್ರ. ಥೈ ಥೈ ಬಂಗಾರಿ ಹಾಡು ಸುಪ್ರಸಿದ್ಧ. ಎಸ್ಟೇಟ್ ಓನರ್ ಒಬ್ಬನನ್ನು ಮೋಸಗೊಳಿಸುವ ಪಾತ್ರದಲ್ಲಿ ವಜ್ರಮುನಿ ಮತ್ತು ಅವನ ಹಿಂದೆ ನಿಲ್ಲುವ ಪಾತ್ರದಲ್ಲಿ ರಾಜ್ ಅಭಿನಯಿಸಿದ್ದಾರೆ. ಚಿತ್ರದ ಸಂಪೂರ್ಣ ಭಾಗ ಎಸ್ಟೇಟ್’ನಲ್ಲೇ ಚಿತ್ರೀಕರಣಗೊಂಡಿದ್ದು ಗ್ರಾಮೀಣ ಬದುಕಿನ ಮೂಢನಂಬಿಕೆಗಳ ನಡುವೆ ಸಿಲುಕಿದ ಮಧ್ಯಮವರ್ಗದವರ ಪಾಡನ್ನು ನಿರ್ದೇಶಕರು ಚಿತ್ರದಲ್ಲಿ ತೋರಿಸಿದ್ದಾರೆ.

೫.ಆಪರೇಷನ್ ಡೈಮಂಡ್ ರಾಕೆಟ್(೧೯೭೮)
ಆ ಕಾಲದಲ್ಲಿ ಕನ್ನಡ ಸಿನಿಮಾರಂಗದಲ್ಲಿ ಬಾಂಡ್ ಶೈಲಿಯ ಚಿತ್ರಗಳಿಗೆ ಬಹು ಬೇಡಿಕೆ ಇತ್ತು. ಎಲ್ಲ ಪಾತ್ರಗಳನ್ನು ಮೈತುಂಬಿಕೊಳ್ಳುತ್ತಿದ್ದ ರಾಜ್ ಈ ಪಾತ್ರದಲ್ಲೂ ಮಿಂಚಿದರು ಕಡೆಯವರೆಗೂ ಸಸ್ಪೆನ್ಸ್ ಉಳಿಸಿಕೊಂಡು ಹೋಗುವ ಚಿತ್ರ ಇದಾಗಿದ್ದು ಚಿತ್ರೀಕರಣ ಅರ್ಧ ಭಾಗ ಉತ್ತರ ಭಾರತದಲ್ಲಿ ನಡೆದಿದೆ.

೬.ಚಂದನದ ಗೊಂಬೆ(೧೯೭೯)
ತರಾಸು ಅವರ ಕಾದಂಬರಿ ಆಧಾರಿತ ಚಿತ್ರ. ಚಿತ್ರದಲ್ಲಿನ ಹಾಡುಗಳು ಹೆಸರು ಮಾಡಿದ್ದವು. ಚಿತ್ರದಲ್ಲಿ ಆಗಿನ ಕಾಲದ ಫೇವರೇಟ್ ಜೋಡಿ ಅನಂತ್ ನಾಗ್ ಮತ್ತು ಲಕ್ಷ್ಮಿ ನಟಿಸಿದ್ದಾರೆ. ನಾಯಕ ಹಳ್ಳಿಯೊಂದರಲ್ಲಿ ಶಿಕ್ಷಕನಾಗಿ ಸೇರುತ್ತಾನೆ. ಅವನ ನಿಯತ್ತೆ ಅವನಿಗೆ ಉರುಳಾಗುತ್ತದೆ. ಚಿತ್ರದ ಮೊದಲಾರ್ಧ ನೋಡಬಹುದಾದರೂ ಉತ್ತರಾರ್ಧದಲ್ಲಿ ಸಂಪೂರ್ಣವಾಗಿ ದುಃಖದಿಂದಲೇ ಕೂಡಿದ್ದು ದುಃಖಾಂತವಾಗುತ್ತದೆ.

೭.ಗಾಳಿಮಾತು(೧೯೮೧)
ಇದು ಕೂಡಾ ತರಾಸು ಕಾದಂಬರಿ ಆಧಾರಿತ ಚಿತ್ರವಾಗಿದ್ದು ಚಿತ್ರದ ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ, ನುಡಿಸಲು ನೀನು ಬಿಡುವೆನು ನಾನು ಪ್ರಸಿದ್ಧ ಹಾಡುಗಳಿವೆ. ಬರೀ ಪತ್ರ ಮತ್ತು ಅದು ಹೊತ್ತು ತರುವ ಸಂದೇಶದಿಂದಲೇ ಕಥೆ ಹೆಣೆದಿರುವುದು ಜಾಣ್ಮೆಯೇ ಸರಿ. ಮೂಲವೇ ಇಲ್ಲದ ಪತ್ರವೊಂದು ನಾಯಕಿಯ ಕೈ ಸೇರಿ ಕಸುವಿಸಿಗೊಳಿಸಿ ಕೊನೆಗೆ ಅವಳ ಪ್ರಾಣಾಹುತಿಗೆ ಕಾರಣವಾಗುವುದೇ ಕಥೆ. ಆ ಪತ್ರವನ್ನು ನಾಯಕಿಯ ಗೆಳತಿ ಚಿತ್ರದ ಖಳನಾಯಕಿ ಬರೆದಿದ್ದು ಎಂದು ಕಥೆಯ ಕ್ಲೈಮ್ಯಾಕ್ಸ್’ನಲ್ಲಿ ಗೊತ್ತಾಗುತ್ತದೆ. ಆಗಿನ ಕಾಲದ ಸಮಾಜಕ್ಕೂ ಒಂದು ಕನ್ನಡಿ ಹಿಡಿಯುವುದು ಕಥೆಯ ಮತ್ತೊಂದು ವಿಶೇಷತೆ.

೮.ಹೊಸಬೆಳಕು(೧೯೮೨)
ತ್ರಿಕೋನ ಪ್ರೇಮಕಥೆಯುಳ್ಳ ಚಿತ್ರದಲ್ಲಿ ರಾಜ್ ಪಾತ್ರ ತನ್ನ ಅಕ್ಕನ ಮಲಮಗಳನ್ನು ಮದುವೆಯಾಗುವುದೇ ಚಿತ್ರದ ಕಥೆ. ಕುವೆಂಪುರವರ ತೆರೆದಿದೆ ಮನೆ ಹಾಡು ಚಿತ್ರದ ಹೈಲೈಟ್. ಚಿತ್ರದ ಇನ್ನಿತರ ಹಾಡುಗಳಾದ ರವಿ ನೀನು,ಚೆಲುವೆಯೇ ನಿನ್ನ, ಕಣ್ಣೀರ ಧಾರೆ ಕೂಡಾ ಹಿಟ್ ಹಾಡುಗಳು.

೯.ಜೀವನ ಚೈತ್ರ(೧೯೯೨)
ಇಲ್ಲಿ ನಾವು ಚಿತ್ರದ ಕಥೆಗಿಂತ ಅದರ ಪ್ರಭಾವವನ್ನು ಅರಿಯಬೇಕು. ಹಲವು ಜನ ಕುಡುತವನ್ನು ಬಿಡಲು ಮತ್ತು ಹಲವು ಸರಾಯಿ ಅಂಗಡಿಗಳು ತಂತಾನೇ ಮುಚ್ಚಲು ಪ್ರೇರಕವಾದ ಚಿತ್ರವಿದು. ಚಿತ್ರದ ಹಾಡುಗಳು ಮತ್ತೊಮ್ಮೆ ಪ್ರಸಿದ್ಧವಾದವು. ಮೂಗುರು ಮಲ್ಲಪ್ಪನವರು ಬರೆದ ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಚಿತ್ರದಲ್ಲಿ ಅಡಕವಾಗಿದೆ.

೧೦. ಒಡಹುಟ್ಟಿದವರು(೧೯೯೪)
ಈ ಚಿತ್ರದಿಂದ ದೂರವಾದ ಅಣ್ಣ ತಮ್ಮಂದಿರು ಒಂದಾದ ಉದಾಹರಣೆಗಳು ಸಿಗುತ್ತವೆ. ನಂಬಿ ಕೆಟ್ಟವರಿಲ್ಲವೋ ಎಂಬ ಹಾಡು ಕೃಷಿಯ ಪ್ರಾಧಾನ್ಯತೆ ತಿಳಿಸುತ್ತದೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ರಾಜ್ ಮತ್ತು ಅಂಬರೀಷ್ ನಟಿಸಿದ್ದು ವಿಶೇಷ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..