942

ಕಾರು ಖರೀದಿಸುವ ಮುನ್ನ ಈ ಅಂಶಗಳನ್ನು ನೆನಪಿಟ್ಟುಕೊಳ್ಳಿ

ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್.
ಕಾರೇ ಕಾರುಬಾರು
ಕಾರಿಂದೇ ದರ್ಬಾರು,
ರೋಡಿನ್ ತುಂಬಾ ಮನೆಯ ಕಾರ್-ಗಳೋ 🎼🎼🎼

ನನ್ನ ಪ್ರೀತಿಯ ಹುಡುಗಿ ಚಿತ್ರದ ಈ ಹಾಡು ಒಂದು ಕಾಲದಲ್ಲಿ ಸಖತ್ ಟ್ರೆಂಡ್ ಸೃಷ್ಟಿ ಮಾಡಿತ್ತು. ಆಗ ನಾವು ಎಷ್ಟು ಚಿಕ್ಕವರಿದ್ದೆವು ಅಂದರೆ ಈ ಚಿತ್ರದ ಹೆಸರು ಹೇಳೋಕೆ ಕೂಡ ಒಂಥರಾ awkward ಭಾವ ಕಾಡುತ್ತಿತ್ತು. ಆಗೆಲ್ಲಾ ಶಾಲೆಯಲ್ಲಿ ಜಾಸ್ತಿ ತರಲೆ ಮಾಡಿದವರಿಗೆ ಕ್ಲಾಸ್ ರೂಮ್ ಬಾಗಿಲ ಬಳಿ‌ ಒಂಟಿ ಕಾಲಲ್ಲಿ ನಿಲ್ಲಿಸುತ್ತಿದ್ದರು. ಇನ್ನೂ ಜಾಸ್ತಿ ಹಾವಳಿ ಮಾಡಿದವರಿಗೆ ಹುಡುಗಿಯರ ನಡುವೆ ಕೂರಿಸುತ್ತಿದ್ದರು. ನಾವು ಬೇರೆ ಆಗ A ಫಿಲಂ ಉಪೇಂದ್ರ ಥರ “ಹುಡುಗೀರನ್ನ ಕಂಡ್ರೆ ಆಗ್ತಿರಲಿಲ್ಲ, ಲವ್ ಅಂದ್ರೆ ಆಗ್ತಿರಲಿಲ್ಲ, ಡೈರೆಕ್ಟ್ರು ಸೂರಿ, ಬೆಂಕಿ, ಬೆಂಕಿ ಥರ ಇದ್ರು” ಅನ್ನೋ ಥರನೇ ಇದ್ವಿ. ಈಗ ನಮ್ಮ ಅಡ್ಮಿನ್ ಪ್ರದೀಪ ಅವರ ಹಾಡಿನಂತೆ “ಗುಲಾಬಿ ಹೂವಾದರೇನು ಶಿವಾ, ತುಂಬೆ ಹೂವಾದರೇನು ಶಿವಾ, ಯಾವುದಾದರೂ ಸಿಕ್ರಾಯ್ತು ಶಿವಾ” ಎನ್ನುವಂತಾಗಿದೆ. Coming to topic, Jannat ಚಿತ್ರದ “Naa Car, Naa Pyaar” ಚಿತ್ರದ ಡೈಲಾಗ್ ನೀವು ಕೇಳಿರಬಹುದು. ಸಿದ್ಲಿಂಗು, ಕಿರಿಕ್ ಪಾರ್ಟಿ, ಪರಮಾತ್ಮ ಚಿತ್ರಗಳಲ್ಲಿ ಕಾರ್ ಕೂಡ ಚಿತ್ರದ ಒಂದು ಭಾಗವಾಗಿ ಕಥಾ‌ ನಿರೂಪಣೆ ಮಾಡಿರುವುದನ್ನು ಕಂಡಿದ್ದೇವೆ. ಎಡಗೈಯಲ್ಲಿ ಗಿಯರ್ ಬದಲಾಯಿಸುವ ಫಿಯಟ್, ಪ್ರೀಮಿಯರ್ ಪದ್ಮಿನಿ ಕಾರ್ ಇಂದ ಹಿಡಿದು ವೋಲ್ವೋ, ಆಡಿ, ಜಾಗ್ವಾರ್ ಕಾರಿನವರೆಗೂ ಹೆಚ್ಚು ಕಮ್ಮಿ ಎಲ್ಲಾ ಕಾರುಗಳ ಬಗ್ಗೆ ಮಾಹಿತಿ‌ ಇಟ್ಟಿರುವ ಜೆನರೇಟರ್, ಥೋ ಸಾರಿ, ಜೆನರೇಷನ್ ನಮ್ಮದು. “ಆಡಿಕೊಳ್ಳುವವರ ಮುಂದೆ Audi ಕಾರ್ ಕೊಳ್ಳುವ ಮಟ್ಟಕ್ಕೆ ಬೆಳೆಯಬೇಕು” ಎಂಬುದೇ ನಮ್ ಹುಡುಗರ ಘೋಷ ವಾಕ್ಯ ಆಗಿರುವುದರಲ್ಲಿ ಆಶ್ಚರ್ಯವಿಲ್ಲ. ಇಂತಿಪ್ಪ ಸಂದರ್ಭದಲ್ಲಿ “ಕಾಣದ long ride ಗೆ, ಹಂಬಲಿಸಿದೆ ಮನ” ಎನ್ನುವ ನಮ್ಮ ವಯೋಮಾನದ ಹಲವರ ಕನಸು: ಕಾರು. ಅಂತಹ ಕಾರು ಕೊಳ್ಳುವ ಇರಾದೆ‌ ನಿಮ್ಮದಾಗಿದ್ದರೆ, “ಇಲ್ನೋಡಿ, ಇಲ್ನೋಡಿ ಸೈಲೆನ್ಸ್, ಒಂದು‌ ನಿಮಿಷ”, ಈ ಅಂಕಣ ನಿಮಗಾಗಿ.

1. ಅಗತ್ಯದ ಅನುಸಾರ
ಕಾರು ಕೊಳ್ಳುವ ಮುನ್ನ‌ ಯಾವ ಅಗತ್ಯಗಳಿಗಾಗಿ‌ ಕಾರನ್ನು ಕೊಳ್ಳುತ್ತೀದ್ದೀರಾ ಮತ್ತು ಅದರ ಬಳಕೆ ಯಾವ ಕಾರಣಗಳಿಗೆ ಎಂಬುದರ ಕುರಿತು ಯೋಚಿಸಿ. ಕೆಲವರಿಗೆ ಒಮ್ಮೊಮ್ಮೆ ಮನೆಯ ಎಲ್ಲಾ ಸದಸ್ಯರೊಂದಿಗೆ ಎಲ್ಲಾದರೂ ಟ್ರಿಪ್ ಹೋಗುವ ಮನಸ್ಸಿರುತ್ತದೆ. ಹಾಗೆಯೇ ಅಂಗಡಿ ಅಥವಾ ವ್ಯಾಪಾರದ ಸಾಮಾಗ್ರಿಗಳನ್ನು ಸಾಗಿಸಲು ಕೂಡ ಸ್ವಂತ ವಾಹನದ ಅಗತ್ಯವಿರುತ್ತದೆ; ಇಂತಹ ಅಗತ್ಯಗಳಿಗೆ ಮಾರುತಿ ಸುಜ಼ುಕಿ ಓಮ್ನಿ ಸರಿಯಾದ ಆಯ್ಕೆ. ರಾಜಕೀಯ ವ್ಯಕ್ತಿಯಾಗಿ ಹಲವು ಜನರ ಜೊತೆಯಲ್ಲಿ ಪ್ರಯಾಣ ಸಾಮಾನ್ಯವಾಗಿದ್ದರೆ ಟೊಯೋಟಾ ಇನ್ನೋವಾ, ಮಹಿಂದ್ರಾ ಸ್ಕಾರ್ಪಿಯೋ / ಎಕ್ಸ್.ಯು.ವಿ, ಫೋರ್ಡ್ ಎಕೋಸ್ಪೋರ್ಟ್ ಇತ್ಯಾದಿ SUV ವಾಹನಗಳು ಸಮಂಜಸವಾಗುತ್ತವೆ. ಚಿಕ್ಕ ಸಂಸಾರಕ್ಕೆ Hatchback, ಐಶಾರಾಮಿ ಜೀವನಶೈಲಿಗೆ Sedan, ಹೀಗೆ ನಿಮ್ಮ ಅಗತ್ಯಕ್ಕೆ ತಕ್ಕಂತೆ ಕಾರ್ ಬಗೆಯನ್ನು finalize ಮಾಡಿಕೊಳ್ಳಿ.

2. ಕಾಸಿಗೆ ತಕ್ಕಂಗೆ ಕಜ್ಜಾಯ
ಅತಿ‌ ಕಡಿಮೆ ದರ ಅಂದರೆ 2,25,000/- ಇಂದ ಶುರುವಾಗುವ ಟಾಟಾ ನ್ಯಾನೋ, ಡಾಟ್ಸನ್ ರೆಡಿ-ಗೋ‌ ಇಂದ ಹಿಡಿದು 8-12 ಕೋಟಿವರೆಗೂ ಬೆಂಟ್ಲಿ, ಜಾಗ್ವಾರ್, ರೋಲ್ಸ್ ರಾಯ್ಸ್, ಬುಗಾಟಿವರೆಗೂ ಥರಹೇವಾರಿ ಬ್ರಾಂಡ್ ಗಳಲ್ಲಿ ಪೆಟ್ರೋಲ್, ಡೀಸೆಲ್, ಎಲ್.ಪಿ.ಜಿ. ಹೀಗೆ ಹಲವಾರು ಆಯ್ಕೆಗಳ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಶೀರ್ಷಿಕೆಯಲ್ಲಿ ಹೇಳಿರುವಂತೆ ಕಾರಿನ ಬೆಲೆ ಜಾಸ್ತಿ ಆದಂತೆಲ್ಲಾ ABS, ಏರ್ ಬ್ಯಾಗ್, Centralised Car Locking ಹೀಗೆ ಹಲವಾರು ವಿಭಿನ್ನ ಸವಲತ್ತುಗಳು ದೊರೆಯುತ್ತಾ ಹೋಗುತ್ತವೆ. ನಿಮ್ಮ ಉಳಿತಾಯ, ಸಂಬಳ, ಆಸ್ತಿಗೆ ಅನುಸಾರವಾಗಿ ಒಂದು ಬಜೆಟ್ ರೇಂಜ್ ಅನ್ನು ಗೊತ್ತು ಮಾಡಿಕೊಳ್ಳಿ. ಹೆಚ್ಚುವರಿ accessories ಗಳನ್ನು ಹೊರತುಪಡಿಸಿ, ಕಾರಿನ ಆನ್ ರೋಡ್ ಬೆಲೆಗೆ 80% ಮಾತ್ರವೇ ಬ್ಯಾಂಕುಗಳು ಸಾಲ ನೀಡುವದರಿಂದ ನಿಮ್ಮ ಇಷ್ಟದ ಕಾರಿನ ಬೆಲೆಯ ಕನಿಷ್ಟ 20-30% ಹಣ ನೀವು‌ ಮೊದಲು ಉಳಿಸಿ ನಂತರ ಮುಂದಿನ ಹೆಜ್ಜೆ ಇಡುವುದು ಒಳ್ಳೆಯದು. ಸದ್ಯಕ್ಕೆ ಕಾರ್ ಸಾಲ ಬಡ್ಡಿ 9.45% ಇದೆ, play store ನಲ್ಲಿ ಹಲವಾರು EMI Calculator app ಗಳು ಸಿಗುತ್ತವೆ.‌ ಅದರ ಸಹಾಯದಿಂದ ನಿಮ್ಮ ಕನಸಿನ ಕಾರಿನ EMI ನಿಮ್ಮ ಜೇಬಿಗೆ ಭಾರವಾಗುವುದಾ ಇಲ್ಲವಾ ಎಂದು‌ ನೀವೇ‌ ನೋಡಿಕೊಳ್ಳಬಹುದು.

3. ಯಾವ್ ಬ್ರಾಂಡ್ ನಿಮ್ಮದು?
ಕಾರ್ ಬಗ್ಗೆ ಮಾತಾಡುತ್ತಾ ಏಕ್ ದಂ ವಿಷಯ ಸಾಟರ್ಡೇ ಸಿಟ್ಟಿಂಗ್ ಕಡೆ ಹೋಯಿತಲ್ಲಾ ಅಂತ ಗಾಬರಿಯಾಗಬೇಡಿ, ಕಾರ್ ಬ್ರಾಂಡ್ ಬಗ್ಗೆಯೇ ಇಲ್ಲಿ ಹೇಳುತ್ತಿರುವುದು. ಸಾಮಾನ್ಯವಾಗಿ 20-25 ರ ವಯಸ್ಸಿನ ಗ್ರಾಹಕರು ನಿಸ್ಸಾನ್, ಫೋರ್ಡ್, ರೆನೋ ಕಾರುಗಳ ಬಗ್ಗೆ ಉತ್ಸುಕರಾಗಿದ್ದರೆ 50-60 ವಯಸ್ಸಿನ ನಮ್ಮ ಅಪ್ಪ ಅಮ್ಮನ ಜಮಾನದವರಿಗೆ ಮಾರುತಿ ಸುಜ಼ುಕಿ, ಟಾಟಾ ಕಾರುಗಳು ಬಿಟ್ಟು ಬೇರೆ ಯಾವುದೂ ರುಚಿಸುವುದಿಲ್ಲ. ಈಗಾಗಲೇ ಹೇಗಿದ್ದರೂ ಕಾರ್ ವಿಧ ಮತ್ತು ಬಜೆಟ್ ಅಂದಾಜಾಗಿರುವುದರಿಂದ carwale, CarDekho, CarTrade ನಂತಹ ಹಲವಾರು app ಗಳಲ್ಲಿ ನಿಮ್ಮ ಬಜೆಟ್ ಮತ್ತು ಕಾರ್ ಮಾದರಿಯನ್ನು (ಹ್ಯಾಚ್-ಬ್ಯಾಕ್, ಸಿಡಾನ್, ಎಸ್.ಯು.ವಿ ಇತ್ಯಾದಿ) ಗೊತ್ತು ಮಾಡಿ ಕಾರುಗಳನ್ನು ನೋಡಬಹುದು. ಹಲವಾರು ಬ್ರಾಂಡ್ ಗಳಲ್ಲಿ ಕಾರಿನ ಸಂಪೂರ್ಣ specifications, ಕಾರು ಮಾಲೀಕರ ರಿವ್ಯೂ ಎಲ್ಲವೂ ಅಲ್ಲಿರುವುದರಿಂದ ಸೂಕ್ತ ಬ್ರಾಂಡ್ ಆಯ್ದುಕೊಳ್ಳುವಲ್ಲಿ ಕಷ್ಟವೇನೂ ಆಗದು.

4. ಆನೆ ಕೊಳ್ಳಬಹುದು ಆದರೆ…
ಆನೆ ಕೊಳ್ಳಬಹುದು ಆದರೆ ಆನೆಗೆ ಹುಲ್ಲು ಹಾಕೋಕೆ ಆಗುವಂತಿರಬೇಕು ಎಂಬ ಮಾತಿದೆ. Consider this: ಈಗಾಗಲೇ ಕಾರು ಕೊಳ್ಳಲು 1-2 ಲಕ್ಷ ಉಳಿತಾಯ ಮಾಡಿದ್ದೀರಾ ಅಂದುಕೊಳ್ಳೋಣ. ಹುಂಡೈ ವರ್ನಾ ಕಾರ್ ನ 9,50,000/- quotation ಮತ್ತು ಇತರ ದಾಖಲೆ ನೀಡಿ ಸಾಲ ಕೂಡ ಮಂಜೂರಾಗಿದೆ ಅಂತಿಟ್ಟುಕೊಳ್ಳೋಣ. 50,000/- accessories ಸೇರಿ 10 ಲಕ್ಷ ಆಯಿತು ಅಂತಿಟ್ಟುಕೊಳ್ಳೋಣ. ನಿಮ್ಮ ಉಳಿತಾಯದ 2 ಲಕ್ಷ ಬಿಟ್ಟರೆ 8 ಲಕ್ಷ. 8 ಲಕ್ಷಕ್ಕೆ 6 ವರ್ಷಗಳ ಸಾಲ ಅಂದುಕೊಂಡರೂ ಮುಂದಿನ ತಿಂಗಳಿಂದ ಬರುವ EMI ₹14,600/-. ಇದರ ಜೊತೆ ತಿಂಗಳ ಪೆಟ್ರೋಲ್ / ಡೀಸಲ್ ಖರ್ಚು, ಮೂರು ತಿಂಗಳಿಗೊಮ್ಮೆ ಸರ್ವೀಸ್ ಮಾಡಿಸುವ ಖರ್ಚು ಎಲ್ಲವೂ‌ ನಿಮ್ಮ ಆದಾಯ ವ್ಯಾಪ್ತಿಯೊಳಗೆ ಬರಬೇಕು. ಅಡ್ಡಾಡಲು ಕಾರ್ ತಗೊಂಡು ಮನೆ ಬಾಡಿಗೆ ಕಟ್ಟಲಾಗದೆ ಕಾರಿನಲ್ಲಿಯೇ ಮಲಗುವ ಮಾರ್ಡನ್ ಬಡತನ ಬರಬಾರದು. ಪಾಯಿಂಟ್ ಇಷ್ಟೇ, ಆನೆ‌ ಕೊಳ್ಳುವುದು ಎಷ್ಟು ಮುಖ್ಯವೋ, ಅದಕ್ಕೆ ಹುಲ್ಲು ಹಾಕುವುದೂ ಅಷ್ಟೇ ಮುಖ್ಯ ಕೆಲಸ. ಆದಷ್ಟು ಈ‌ ವಿಷಯವನ್ನು ಪರಿಗಣನೆಗೆ ತೆಗೆದುಕೊಂಡು ಮುಂದೆ ಹೆಜ್ಜೆ ಇಡುವುದು ಒಳ್ಳೆಯದು.

5. ಅಜ್ಜಿ‌ ಮನೆ ಬಂತಾ? ಹೂ ಬಂತು!
“ಆಗೆಲ್ಲಾ ಮಕ್ಕಳು ಅಜ್ಜಿ ಮನೆಯಲ್ಲಿ ಹುಟ್ಟುತ್ತಿದ್ದರು, ಅದಕ್ಕೆ ಆಗಾಗ ಅಜ್ಜಿ ಮನೆಗೆ ಹೋಗಿ ಬರುತ್ತಿದ್ದರು. ಈಗೆಲ್ಲಾ ಮಕ್ಕಳು ಆಸ್ಪತ್ರೆಯಲ್ಲಿ ಹುಟ್ಟುತ್ತಾರೆ, ಹಾಗಾಗಿ ಆಗಾಗ ಆಸ್ಪತ್ರೆಗೆ ಹೋಗಿ ಬರುತ್ತಾರೆ” ಈ ಥರದ ಟ್ರೋಲ್ ನಿಮ್ಮ WhatsApp ಸಂದೇಶದಲ್ಲಿ ನೀವು ನೋಡಿರಬಹುದು. ಬೆಂಗಳೂರಿನಲ್ಲಿ ತಿಂಗಳಿಡೀ ವೀಕೆಂಡ್ ವೀಕ್-ಡೇಸ್ ಲೆಕ್ಕಿಸದೆ ದಣಿವಾದ ದೇಹಕ್ಕೆ, ಅದಕ್ಕಿಂತಲೂ ಹೆಚ್ಚು ದಣಿವಾದ ಮನಸ್ಸಿಗೆ ಊರಲ್ಲಿ ಅಮ್ಮ ಮಾಡಿ ಕೊಡುವ ಕಾಫಿ ಎಷ್ಟೋ ನೆಮ್ಮದಿ ನೀಡುತ್ತದೆ. ಇದೇ ಕಾನ್ಸೆಪ್ಟ್ ಅನ್ನು ವಾಹನಗಳಿಗೆ ಅಳವಡಿಸಿದರೆ ಷೋರೂಮ್ ತವರುಮನೆ ಇದ್ದಂತೆ, ಮತ್ತು ಸರ್ವೀಸ್ ಸ್ಟೇಷನ್ ಅಜ್ಜಿ ಮನೆ ಇದ್ದಂತೆ. ಕೆಲವು ವಾಹನಗಳ maintenance cost ಮತ್ತು service frequency ಜಾಸ್ತಿ. ಬೈಕ್ ನ ವಿಷಯಕ್ಕೆ ಬಂದರೆ ರಾಯಲ್ ಎನ್ಫೀಲ್ಡ್ ಬೈಕ್ ಇದ್ದರೆ, ಮೆಕ್ಯಾನಿಕ್ ನಿಮ್ಮ ಆಪ್ತಮಿತ್ರ ಆಗುವಂತ ಕೇಸ್ ಇದು. ಆದರೆ ಸ್ಪ್ಲೆಂಡರ್ ಏನನ್ನೂ ಬೇಡದೆ ಸದಾ ನಮ್ಮನ್ನು ಕಾಯುವ ಕರ್ಣನಂತೆ. ಹೀಗೆ ಕಾರಿನಲ್ಲಿಯೂ ಕೂಡ RE, ಕರ್ಣ ಎಲ್ಲರೂ ಇದ್ದಾರೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಾರ್ maintenance ಕುರಿತು ಅಧ್ಯಯನ ಮಾಡಿ ನಂತರ ನಿರ್ಧರಿಸುವುದು ಒಳ್ಳೆಯದು.

6. ನಮಗೆ ಈ ಕಾರು ಓಡುತ್ತಾ ಇಲ್ವಾ ಅನ್ನೋದೇ ಡೌಟು!

ಮನೆ ಕಟ್ಟಿ‌ ನೋಡು, ಮದುವೆ ಮಾಡಿ ನೋಡು ಎಂಬ ಕಾಲ ಇತ್ತು ಆಗ. ಈ ಹೊಸ ಜೆನರೇಷನ್ ಅಲ್ಲಿ ಮನೆ ಕಟ್ಟಿಸಿ, ಅದರೊಳಗೆ ಜೀವಿಸಿ, ಮನೆಯೊಂದಿಗೆ ಒಂದು ಭಾವುಕ ನಂಟು ಬೆಸೆದುಕೊಳ್ಳುವ ನಮ್ಮ ಅಪ್ಪ ಅಮ್ಮ ಕಾಲದ ಮನೋಭಾವ ಕಮ್ಮಿಯಾಗಿದೆ ಎನ್ನಬಹುದು. ಇನ್ನೂ ಮದುವೆ ಮಾಡಿಸುವ ವಿಷಯ ಸದ್ಯಕ್ಕೆ ಬೇಡ, “ಮದುವೆ ಆಗುವ ಮೊದಲು ಕಾರು ತಗೊಂಡೇ ಮದುವೆ ಆಗಬೇಕು, ಮದುವೆ ಮುಗಿಸಿ ಮನೆಗೆ ಹೋಗುವಾಗ ನನ್ನ ಕಾರಲ್ಲೇ ಹೋಗಬೇಕು ಮಗಾ, ಬಾಡಿಗೆ ಕಾರೆಲ್ಲಾ ಸರಿ‌ ಹೋಗಲ್ಲ” ಎಂದವರ ಸಂಖ್ಯೆ ಏನೂ ಕಡಿಮೆ ಇಲ್ಲ. Little off topic ಹೋದೆ ಸಾರಿ, ವಿಷಯ ಏನೆಂದರೆ ಕಾರನ್ನು ಕೊಳ್ಳುವಾಗ ಗಮನಿಸಬೇಕಾದ ಇನ್ನೊಂದು ಅಂಶ, riding comfort ಮತ್ತು ಥ್ರಿಲ್. ಯಾವ ಕಾರ್ ಆದರೇನು, ನಾಲ್ಕೇ ಚಕ್ರ ಅಲ್ವಾ ಅನ್ನೋ ಮಾತಿಗೆ ಸೊಪ್ಪು ಹಾಕಬೇಡಿ, ಆ ಹೇಳಿಕೆಯಲ್ಲಿ ಅಂತಹ ಲಾಜಿಕ್ ಏನಿಲ್ಲ. ಕುಟುಂಬದವರೆಲ್ಲಾ ಓಡಾಡಲು ಮೈಲೇಜ್ ಗಾಡಿ ತೆಗೆದುಕೊಳ್ಳುವವರೂ ಇದ್ದಾರೆ, ವಾಹನ ಚಲಾಯಿಸುವುದನ್ನು ಹೊಸ ಯುಗದ ಧ್ಯಾನ ಎಂಬಂತೆ ಭಾವಿಸಿ ಥ್ರಿಲ್ ಆಗಲು ಸ್ಪೋರ್ಟ್ಸ್ ಕಾರ್‌ ಕೊಳ್ಳುವವರೂ ಇದ್ದಾರೆ. ನಿಮ್ಮ ಮನೋಭಾವ ಎಂಥದ್ದು ಎಂಬುದರ ಮೇಲೆ ‘ಮನಿ’ ಖರ್ಚು‌ಮಾಡಿ.

ಇಷ್ಟಾಯ್ತು ನೋಡಿ ಸ್ವಾಮಿ, ಎದ್ದೇಳು pt, ಥೋ ಸಾರಿ, ಎದ್ದೇಳು ಮಂಜುನಾಥ ಚಿತ್ರದಲ್ಲಿ ನಮ್ಮ ಜಗ್ಗು ಮಾಮ ಹೇಳಿರುವಂತೆ “ಜ್ಞಾನ ಯಾವ ಮೂಲದಿಂದ ಬಂದರೂ ತಗೋಬೇಕು”. ಏನೋ ನಮಿಗೆ ಗೊತ್ತಿರೋದು ಒಂಚೂರು ಹೇಳಿದ್ದೀವಿ, ಇಷ್ಟ ಆದರೆ ಲೈಕ್ ಮಾಡಿ, ಏನಾದರೂ ಸಲಹೆ, ತಿದ್ದುಪಡಿ, ಕಂಪ್ಲೇಂಟ್ ಇದ್ದರೆ ಕಾಮೆಂಟ್ ಮಾಡಿ, ನಿಮ್ಮವರು ಓದಲು ಎನಿಸಿದರೆ share ಮಾಡಿ. ಒಟ್ಟಿನಲ್ಲಿ ಏನೋ ಒಂದು ಮಾಡಿ, ಪುಣ್ಯ ಕಟ್ಕೊಳ್ಳಿ.

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..