4119

ಮಗು ಅಜ್ಜ ಮತ್ತು ಬಾಹುಬಲಿ. ಮುಗ್ಧತೆ ಪ್ರಬುದ್ಧತೆ ಮತ್ತು ವೈರಾಗ್ಯ.

ಹನ್ನೆರಡು ವರುಷಕ್ಕೊಮ್ಮೆ ನಡೆಯುವ

ಬಾಹುಬಲಿಯ ಮಸ್ತಕಾಭಿಷೇಕ ಒಂದು ಅಪರೂಪದ ಸಂಭ್ರಮ. ಭಾರತದಲ್ಲಿ ನಡೆಯುವ ಮತ್ತು ವಿಶ್ವವಿಖ್ಯಾತಿಯನ್ನು ಗಳಿಸಿರುವ ಧಾರ್ಮಿಕ ಸಂಭ್ರಮಗಳಲ್ಲಿ ಇದು ಒಂದು.‌ ೫೭ ಅಡಿ ಎತ್ತರದ ವಿರಾಗಿ ಬಾಹುಬಲಿ ಪುತ್ಥಳಿಗೆ ಅಭಿಷೇಕ ಮಾಡುವುದನ್ನು ನೋಡುವುದೇ ಖುಷಿಯ ಸಂಗತಿ. ಬಾಹುಬಲಿಯ ಐತಿಹ್ಯವನ್ನು ಸಾರಿ ಹೇಳುವುದು ನಮ್ಮ ಕರ್ತವ್ಯ. ಚಾವುಂಡರಾಯನ ತಾಯಿಗೆ ಬಾಹುಬಲಿಯ ದರ್ಶನ ಮಾಡುವ ಆಸೆಯಾಗುತ್ತದೆ. ಅದಕ್ಕೆ ಚಾವುಂಡರಾಯ ಶೃವಣ ಬೆಳಗೊಳದಲ್ಲಿ ಬಾಹುಬಲಿಯ ಮೂರ್ತಿಯನ್ನು ಸ್ಥಾಪಿಸುತ್ತಾನೆ. ಸು ರಂ ಎಕ್ಕುಂಡಿಯವರ ಒಂದು ಪದ್ಯವಿದೆ. “ನನ್ನ ಹಾಗೆಯೇ” ಎಂಬ ಸರಳ ಪದ್ಯ. ಆದರೆ ಸರಳಾರ್ಥದ ಜೊತೆಗೆ ಸುಪ್ತಾರ್ಥವನ್ನು ಕಟ್ಟಿಕೊಡುವ ಪದ್ಯವದು. ಆ ಸುಪ್ತಾರ್ಥವನ್ನು ಸರಳೀಕರಿಸುವ ಪ್ರಯತ್ನವನ್ನು ಈ‌ ಬರಹದಲ್ಲಿದೆ.

ಕವಿ: ಸು.ರಂ. ಎಕ್ಕುಂಡಿ

ಮೊನ್ನೆ ಮೊನ್ನೆ ನಡೆಯಿತಲ್ಲ ಬಾಹುಬಲಿಯ ಮಜ್ಜನ
ಬೆಟ್ಟದಲ್ಲಿ ಕೇಳಿತೊಂದು ಪುಟ್ಟ ಮಗುವು ಅಜ್ಜನ
‘ಈತನಾರು ತಾತ! ಇಲ್ಲಿ ನಿಂತು ನೋಡುತಿರುವನು
ಇಂದ್ರಗಿರಿಯ ನೆತ್ತಿಯಲ್ಲಿ ಏನು ಮಾಡುತಿರುವನು?’

‘ಇವನೆ ಬಾಹುಬಲಿಯು ಮಗು! ಧೀರತನದ ಮೂರ್ತಿಯು!
ನುಡಿಯ ಹೊಳೆಗಳಲ್ಲಿ ತುಂಬಿ ಹರಿವುದಿವನ ಕೀರ್ತಿಯು
ಹತ್ತುವವರ ಇಳಿಯುವವರ ನಿಂತು ನೋಡುತಿರುವನು
ನಿಲ್ಲುವವರ ನಡೆಯುವವರ ಲೆಕ್ಕ ಮಾಡುತಿರುವನು
ಬಳಲಿದವರಿಗೆಲ್ಲ ಇಲ್ಲಿ ಕೈಯ ನೀಡುತಿರುವನು’

‘ಇಲ್ಲಿ ಏಕೆ ಬಂದು ನಿಂತ? ಇಷ್ಟು ದೂರ! ಎತ್ತರ!
ಭಯವಾಗದೆ ಇವನಿಗಿಲ್ಲಿ! ಯಾರು ಇಲ್ಲ ಹತ್ತಿರ!’

‘ಇವನಿಗೆಲ್ಲಿ ಭಯವು ಮಗು ಅಭಯ ಮೂರ್ತಿ ಈತನು
ಭರತ ಚಕ್ರವರ್ತಿ ಇವನ ಅಣ್ಣ ಒಮ್ಮೆ ಆತನು
ಹಮ್ಮಿನಲ್ಲಿ ಬಂದು ಸೆಣಸಿ ತಮ್ಮನಲ್ಲಿ ಸೋತನು
ಗೆದ್ದ ರಾಜ್ಯ ಮರಳಿಸುತ್ತ ನುಡಿದನೊಂದು ಮಾತನು
ನೀನು ಸೋತು ಗೆದ್ದೆ ಅಣ್ಣ! ನಾನು ಗೆದ್ದು ಸೋತೆನು!
ಬೆಟ್ಟ ಕರೆಯುತಿಹುದು ನನ್ನ ಮುಗಿಲು ತನ್ನ ಹತ್ತಿರ
ಯಾವುದುಂಟು ಅಣ್ಣ ಇಲ್ಲಿ ಜೀವವೇರದೆತ್ತರ?
ತಪಸ್ಸೊಂದೆ ತಿಳಿವುದೊಂದೆ ಹುಟ್ಟು ಸಾವಿನುತ್ತರ.
ನಿಂತು ಹಾಗೆ ನಿಂತುಕೊಂಡು ಘೊರ ತಪವ ಮಾಡಲು
ಹುಟ್ಟು ಸಾವಿನಾಚೆಗಿರುವ ಹೊಳೆವ ಹಾದಿ ನೋಡಲು
ಬಿಸಿಲು ಬಂತು ನೆರಳು ಬಂತು ಗಾಳಿ ಬಿಚ್ಚಿ ಬೀಸಿತು
ಒಮ್ಮೆ ಹಸಿರು ಒಮ್ಮೆ ಹೊನ್ನು ಹಚ್ಚಡವನು ಹಾಸಿತು
ಸೂರ್ಯನೊಮ್ಮೆ ಚಂದ್ರನೊಮ್ಮೆ ಸುತ್ತು ಹಾಕಿ ನಡೆದರು
ದೀಪದಂತೆ ನಿಂತ ಇವಗೆ ‘ನಮೋ’ ಎಂದು ನುಡಿದರು’

‘ಇಷ್ಟು ಜನರು ಇಲ್ಲಿಗಿಂದು ಏಕೆ ಬಂದು ನೆರೆದರು?
‘‘ಬಾಹುಬಲಿ’’ ‘‘ಬಾಹುಬಲಿ’’ ಎಂದು ಕರೆಯುತಿರುವರು’

‘ಮಗೂ, ಇಂದು ಇವನಿಗಿಲ್ಲಿ ಹಾಲಿನಲ್ಲಿ ಸ್ನಾನವು
ದಾರಿಯಲ್ಲಿ ದಣಿದ ಇವರಿಗೆ, ಇವನದೊಂದೆ ಧ್ಯಾನವು
ಮುದ್ದು ಮುಖದಿ ಮುಗುಳ್ನಕ್ಕು ಸಿದ್ಧನಾಗಿ ನಿಂತಿಹ
ದುಗ್ಧ ಹಾಸದಲ್ಲಿ ನಲಿವ ಮುಗ್ಧ ಮಗುವಿನಂತಿಹ’

‘ತಾತ,
ಎರೆವ ಮುಂಚೆ ಎಣ್ಣೆ ಹಚ್ಚಿ ಅಮ್ಮ ನನಗೆ ಹೀಗೆಯೇ
ನಿಲ್ಲಿಸುವಳು. ಬಾಹುಬಲಿಯು ಕೂಡ ನನ್ನ ಹಾಗೆಯೆ
ನಿಂತು ಕಾಯುತಿರುವ ಕಣ್ಣು ತೆರೆದು ಮೊದಲ ಚೆಂಬಿಗೆ!’

ಗೊಮ್ಮಟೇಶ ನಕ್ಕುಬಿಟ್ಟ ಕಂಡು ಮುಗ್ಧ ನಂಬಿಗೆ

ಮಗುವ ಮಗ್ಧತೆಯ ಪ್ರಶ್ನೆಗಳಿಗೆ ತಾತನು ಉತ್ತರಗಳನ್ನು ಕೊಡುತ್ತಾ ಹೋಗುತ್ತಾನೆ. ಇಲ್ಲಿ ಮಗುವಿಗೆ ಸಿಗುವುದು ಸರಳಾರ್ಥವಾದರೂ ಓದುಗರಿಗೊಂದು ಸುಪ್ತಾರ್ಥವಿದೆ. ಬಾಹುಬಲಿಯು ಹತ್ತುವವರ ಇಳಿಯುವವರ ನಿಂತು ನೋಡುತಿರುವನು. ನಿಂತಿರುವವರ ನಡೆಯುತಿರುವವರ ಲೆಕ್ಕ ಮಾಡುತಿರುವನು. ಬೆಟ್ಟದ ಮೇಲಿನ ಬಾಹುಬಲಿ ಭೌತಿಕ ಲೆಕ್ಕಾಚಾರ ಮಾತ್ರ ಹಾಕುತ್ತಿಲ್ಲ. ಅಲ್ಲಿ ನಮ್ಮ ಕರ್ಮಗಳ ಲೆಕ್ಕವೂ ನಡೆಯುತಿದೆ. ಉನ್ನತಿಗೆ ಏರುವವರು ಅಧೋಗತಿಗೆ ಇಳಿಯುವವರನ್ನು ಬಾಹುಬಲಿ ನೋಡುತ್ತಿದ್ದಾನೆ. ಜಡವಾಗಿ ನಿಂತಿರುವವರನ್ನು ಪಾದರಸದಂತೆ ಕ್ರಿಯಾಶೀಲರಾಗಿರುವವರನ್ನೂ ನೋಡುತ್ತಿದ್ದಾನೆ. ಇದಕ್ಕೆ ತತ್ಸಮಾನ ಅರ್ಥಕೊಡುವ ಒಂದಷ್ಟು ಸಾಲುಗಳು ಕಗ್ಗದಲ್ಲೂ ಬರುತ್ತವೆ.

ದಿವಸಕೊಳಗದಿನ್ ಆಯುರಾಶಿಯನು ರವಿಯಳೆಯಲ್ ।
ಅವನ ಮಗ ಜವನ್ ಅದರ ಲೆಕ್ಕವಿರಿಸುವನು॥
ದಿವಿಜರೊಳಗಿವರಿರ್ವರುಪಕಾರಿಗಳು ನಮಗೆ ।
ಸವೆಸುವರು ತನುಘಟವ -ಮಂಕು ತಿಮ್ಮ

ಇಡೀ ಆಯಸ್ಸನ್ನು ದಿನವೆಂಬ ಕೊಳಗದಲ್ಲಿ ಸೂರ್ಯ ಅಳೆಯಲಾಗಿ ಅವನ ಮಗ ಯಮ ಅದರ ಲೆಕ್ಕವನ್ನಿಡುತ್ತಾನೆ. ಇವರಿಬ್ಬರ ಬಗ್ಗೆಯೂ ನಮಗೆ ಕೃತಜ್ಞತೆ ಇರಲಿ ಯಾಕೆಂದರೆ ನಮಗೆ ಒಳಿತು ಮಾಡಲಿಕ್ಕೆ ಒಂದಿಡಿ ಜನ್ಮವನ್ನು ಕೊಟ್ಟಿದ್ದಾರೆ. ನಮ್ಮ ಆಯುಷ್ಯ ಮುಗಿದಂತೆ ನಮ್ಮ ದೇಹವೆಂಬ ಮಣ್ಣಿನ ಮಡಿಕೆಯನ್ನು ಸವೆಸುತ್ತಾ ಸಾಗುತ್ತಾರೆ ಕೊನೆಗೊಂದು ದಿನ ತಮ್ಮಲ್ಲಿ ವಿಲೀನ ಮಾಡಿಕೊಳ್ಳುತ್ತಾರೆ.

ಅಂತೆಯೇ ಬಾಹುಬಲಿ ಉತ್ತುಂಗದಲ್ಲಿ ನಿಂತು ಯಾರ ಉತ್ಕೃಷ್ಟವಾದ ಸುಕರ್ಮಗಳನ್ನು ಮಾಡುತ್ತಾರೆ ಅವರನ್ನು ತನ್ನೆಡೆಗೆ (ಮೊಕ್ಷ)

ಎಳೆದುಕೊಳ್ಳುತ್ತಾನೆ. ಅವರೆಲ್ಲ ಹತ್ತುವವರ ಸಾಲಿನಲ್ಲಿ ಬರುತ್ತಾರೆ. ಇಳಿಯುವವರು ಪಾಪಕರ್ಮಗಳಿಗೆ ಸಿಲುಕಿದವರಷ್ಟೆ.

ಮಗು ಮತ್ತೊಮ್ಮೆ ಕೇಳುತ್ತದೆ. “ಜನರೇ ಇಲ್ಲದ ಇಂಥ ಬೆಟ್ಟದ ಮೇಲೆ ಬಂದು ನಿಲ್ಲಲು ಅವನಿಗೆ ಭಯವಿಲ್ಲವೇ? ಊರು ಕೇರಿ ಎಲ್ಲವನ್ನು ಬಿಟ್ಟು ಇಲ್ಲಿಗೇಕೆ ಬಂದು ನಿಂತಿದ್ದಾನೆ?” ಎಂದು.

ಇಲ್ಲಿಗೇಕೆ ಬಂದು ನಿಂತಿದ್ದಾನೆ ಎಂಬ ಪ್ರಶ್ನೆಯಲ್ಲೇ ಮತ್ತೊಂದ ಉಪಪ್ರಶ್ನೆ ಇದೆ. ಬಾಹುಬಲಿ ಒಬ್ಬ ರಾಜ. ಸಿಂಹಾಸನದಲ್ಲಿ ಕುಳಿತು ಅಂತಃಪುರದಲ್ಲಿ ಸುಖಪುರುಷನಾಗಿರಬೇಕಾದವನು ಇಂಥ ದೂರದ ಬೆಟ್ಟದಾಸೆಗೆ (ಮುಕ್ತಿ) ಏಕೆ ಬಿದ್ದನು.

ಇದು ಎಲ್ಲರಲ್ಲಿಯೂ ಇರುವ ತುಡಿತ. ಇರುವುದೆಲ್ಲವೂ ಸಾಕೆನಿಸುತ್ತಲೇ ಇರುತ್ತದೆ. ಅಡಿಗರ ಯಾವ ಮೋಹನ ಮುರಳಿಯಲ್ಲೂ ಇದರ ಪ್ರಸ್ತಾಪವಿದೆ. ಮೊಳೆಯದಲೆಗಳ ಮೂಕ ಮರ್ಮರದಂತೆ ನಮ್ಮ ಅಂತರಾತ್ಮದ ತುಡಿತ ಮುಕ್ತಿಯೆಡೆಗೆ ಮೋಹನ ಮುರಳಿಯಂತೆ ಕರೆಯುತ್ತದೆ. ಆದರೆ ಐಹಿಕ ಭೋಗದ ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನಗಳು ನಮ್ಮನ್ನು ತಮ್ಮ ಚೌಕಟ್ಟಿನಲ್ಲೆ ಬಂಧಿಸುತ್ತವೆ. ಬಯಕೆ ತೋಟದ ಬೇಲಿ ದಾಟುವುದು ಕಷ್ಟಸಾಧ್ಯ ಹಾಗೆ ದಾಟಿದವನೆ ಬಾಹುಬಲಿಯಾದ. ಅವನ ಕಥೆಯನ್ನು ಅಜ್ಜ ಹೇಳುತ್ತಾನೆ

ಇವನಿಗೆಲ್ಲಿ ಭಯವು ಮಗು ಇವನೆ ಅಭಯ ಮೂರ್ತಿಯು ಎಂಬ ಮಾತಿದೆ. ಕಳೆದುಕೊಳ್ಳುವೆ ಎಂಬವನಿಗೆ ಮಾತ್ರ ಭಯವಿರುತ್ತದೆಯೇ ಹೊರತು ಎಲ್ಲವನ್ನೂ ಬಿಟ್ಟು ಹೊರಟವನಿಗಲ್ಲ. ಅಣ್ಣ ಭರತನನ್ನು ಎಲ್ಲ ಬಗೆಯ ಯುದ್ಧಗಳಲ್ಲಿ ಗೆದ್ದ ನಂತರ ಅವನಿಗೆ ಜ್ಞಾನೋದಯವಾಗುತ್ತದೆ. ತುಂಡು ಭೂಮಿ ಸಾಮ್ರಾಜ್ಯಕ್ಕಾಗಿ ನಾವು ನಮ್ಮ ರಕ್ತ ಸಂಬಂಧ ಮರೆತು ಸೆಣೆಸುತ್ತಿದ್ದೇವಲ್ಲಾ ಎಣಿಸಿಬಿಟ್ಟು. ವೈರಾಗ್ಯದ ಕಡೆ ಮುಖ ಮಾಡುತ್ತದೆ. ವೈರಾಗ್ಯವನ್ನು ಇಲ್ಲಿ ನಿಶ್ಚಲ ಬೆಟ್ಟಕ್ಕೂ ಎತ್ತರದ ಮುಗಿಲಿಗೂ ಹೋಲಿಸಿದ್ದಾರೆ. ಬೆಟ್ಟ ಮುಗಿಲುಗಳಿಗೂ ವೈರಾಗ್ಯಕ್ಕೂ ತಾವು ತೌಲನಿಕವಾಗಿ ನೋಡಬೇಕು. ಬೆಟ್ಟವೆಂದರೆ ಎಂಥದ್ದಕ್ಕೂ ಜಗ್ಗದೆ ಆಕರ್ಷಿತವಾಗದೆ ನಿಲ್ಲುವುದು ಮುಗಿಲು ಎಂದರೆ ಯಾರ ಕೈಗೂ ಸಿಗದಷ್ಟು ಎತ್ತರ.ವೈರಾಗ್ಯವೂ ಅಷ್ಟೆ ಭವ ಬಂಧನಗಳಿಂದ ಮುಕ್ತವಾಗುವುದು ಸುಲಭದ ಸಂಗತಿಯಲ್ಲ.‌ ಅಲ್ಲಿ

ಬೆಟ್ಟದ ನಿಶ್ಚಲ ಭಾವವಿರಬೇಕು. ನೂರು ಆಮಿಷಗಳು ಬಂದರೂ ಚಂಚಲತೆಯನ್ನು ಗೆಲ್ಲಬೇಕು. ಯಾವ ಮೋಹಕ ಪಾಶಕ್ಕೂ ಸಿಲುಕದಷ್ಟು ಮುಗಿಲಿನ ಎತ್ತರಕ್ಕೆ ಏರಬೇಕು.ಇಲ್ಲಿ ಯಾವುದುಂಟು ಅಣ್ಣ ಜೀವವೇರದೆತ್ತರ? ಎಂಬ ಪ್ರಶ್ನೆ ಕೇಳುತ್ತಾನೆ. ಮನುಷ್ಯ ನಿಶ್ಚಲನಾಗಿ ಒಂದೇ ಗುರಿಯಿಟ್ಟು ಬದುಕಿದರೆ ಅದರ ಸಿದ್ಧಿ ಬಹಳ ಸುಲಭ ಎಂಬುದೇ ಈ ಮಾತಿನ ಅರ್ಥ. ವಿಶೇಷವೆಂದರೆ ಹುಟ್ಟು ಸಾವು ಎಂಬ ಆರಂಭ ಅಂತ್ಯದ ಸೀಮಾರೇಖೆಯ ಆಚೆಗಿನ ಹೊಳೆವ ಹಾದಿ(ಮುಕ್ತಿ ಪಥ)ಯನ್ನು ನಾವು ತಪಸ್ಸಿನಿಂದ ಕಾಣಬಹುದು.‌

ಬಿಸಿಲು ಮಳೆ ಚಳಿ ಗಾಳಿ ಸೂರ್ಯ ಚಂದ್ರರೂ ಬಂದು ಈ ದಿವ್ಯದೀಪಕ್ಕೆ ಶರಣು ಎಂದರು. ಇದರಲ್ಲೂ ಕೂಡಾ ಎರಡರ್ಥವಿದೆ. ಒಂದು ಬಾಹುಬಲಿಯ ಛಲಕ್ಕೆ ನಮೋ ಅಂದರು ಎಂಬುದು. ಎರಡು ಭಕ್ತಿಯಿಂದ ನಮೋ ಎಂದರು ಎಂಬುದು. ನಿತ್ಯೋತ್ಸವ ಗೀತೆಯಲ್ಲಿ ಹೇಳುವಂತೆ ಬಾಹುಬಲಿಗೆ ಪ್ರತಿದಿನವೂ ಪ್ರಕೃತಿ ಮಾತೆ ಮಸ್ತಕಾಭಿಷೇಕ ಮಾಡುತ್ತಾಳೆ.

ಇವತ್ತೇಕೆ ಇಷ್ಟೊಂದು ಜನ ಇಲ್ಲಿ ನೆರೆದಿಹರು? ಎಂದು ಮಗು ಕೇಳಲಾಗಿ ಅಜ್ಜ ಇವತ್ತು ಅವನಿಗೆ ಅಭಿಷೇಕ. ಜನರೆಲ್ಲಾ ತಮ್ಮ ಬದುಕಿನ ಜಂಜಾಟಗಳನ್ನು ಮರೆತು ಭಗವಂತ ಮೀಯುವುದನ್ನು ನೋಡಿ ಧನ್ಯರಾಗಲು ಬಂದಿದ್ದಾರೆ ಎಂದು ಅಜ್ಜ ಹೇಳುತ್ತಾನೆ.

ಮಗುವು ತನ್ನ ಸ್ನಾನಕ್ಕೂ ದೇವರಿಗೂ ಹೋಲಿಸಿಕೊಳ್ಳುವುದರಲ್ಲೂ ಒಂದು ಸತ್ವವಿದೆ. ಮಕ್ಕಳು ಮತ್ತು ದೇವರಲ್ಲಿ ಭೇದವಿಲ್ಲ. ಬೆತ್ತಲಾಗುವುದರಲ್ಲೂ ಮಗುವಿಗೆ ಯಾವ ಸಂಕೋಚವೂ ಇಲ್ಲ. ಹಿಂದೊಮ್ಮೆ ಜೈನ ಮುನಿ ತರುಣ ಸಾಗರ ಮಹಾರಾಜರಿಗೆ ನೀವೇಕೆ ಬೆತ್ತಲಿರುತ್ತೀರಿ ಎಂದು ಕೇಳಿದಾಗ ಬಹಳ ಚೆಂದದ ಉತ್ತರ ಕೊಟ್ಟಿದ್ದರು. “ಮನುಷ್ಯ ಸ್ವಾಭಾವಿಕವಾಗಿ ತಪ್ಪಿದ್ದರೆ ಮುಚ್ಚಿಕೊಳ್ಳುತ್ತಾನೆ ಸರಿ ಇದ್ದರೆ ನಿರ್ಭಿಡೆಯಿಂದಿರುತ್ತಾನೆ. ನಿರ್ಮಲ ‌ಮನಸ್ಸಿನ ನಾನು ಮುಚ್ಚಿಕೊಳ್ಳುವಂತದ್ದು ಏನು ಇಲ್ಲ ಅದಕ್ಕೆ ಹೀಗಿದ್ದೇನೆ.” ಸರ್ವಸಂಗ ಪರಿತ್ಯಾಗ ಮಾಡಿದ ಕಾರಣಕ್ಕೆ ಅವರು ಬೆತ್ತಲಾಗಿದ್ದು.

ಮಗುವು ನಿರ್ಮಲ ಭಾವದ ಪುತ್ಥಳಿಯಾದರೆ ದೇವರು ಮಗುವಿನ ಮುಗ್ಧತೆಯ ಮೂರ್ತರೂಪ. ಮಗುವಿನಲ್ಲೂ ಕಳೆದುಕೊಳ್ಳುವುದಕ್ಕೆ ಮತ್ತು ಮುಚ್ಚುಮರೆಯಂತದ್ದು ಏನು ಇರುವುದಿಲ್ಲ. ದೇವರು ಕೂಡಾ ಎಲ್ಲವನ್ನೂ ಬಿಟ್ಟು ಮುಕ್ತಿಯೆಡೆಗೆ ಹಾದಿ ಹಿಡಿದಿರುತ್ತಾನೆ.

ಸು.ರಂ.ಎಕ್ಕುಂಡಿಯವರ ಈ ಹಾಡು ವಿಶೇಷ ಎನಿಸುವುದೆಂದರೆ ಸರಳ ಭಾಷೆಯಲ್ಲಿ ಕ್ಲಿಷ್ಟಾರ್ಥವನ್ನು ತುಂಬಿಕೊಟ್ಟಿದ್ದಕ್ಕೆ. ಇಲ್ಲಿ ಮಗುವಿನ ಪ್ರಶ್ನೆ ಎಲ್ಲರ ಪ್ರಶ್ನೆಯೂ ಹೌದು. ಭಗವದ್ಗೀತೆಯಲ್ಲಿ ಅರ್ಜುನ ಶ್ರೀಕೃಷ್ಣನಿಗೆ ಪ್ರಶ್ನಿಸುವ ಎಲ್ಲ ಪ್ರಶ್ನೆಗಳು ನಮ್ಮ ಪ್ರಶ್ನೆಗಳೆ. ಅರ್ಜುನ ನಮ್ಮ ಪ್ರತಿನಿಧಿಯಂತೆಯೂ ಕೃಷ್ಣ ನಮ್ಮ ಸಮಸ್ಯೆಯ ಪರಿಹಾರದಂತೆಯೂ ಕಾಣುತ್ತಾನೆ. ಅಂತೆಯೇ ಇಲ್ಲಿ ಮಗು ನಮ್ಮ ಪ್ರತಿನಿಧಿಯಾಗುತ್ತದೆ. ಅಜ್ಜ ತನ್ನ ಪ್ರಬುದ್ಧತೆ ಜೀವನಾನುಭವದ ಧಾರೆ ಎರೆದು ಬಾಹುಬಲಿಯ ಎತ್ತರದ ಪರಿಚಯ ಮಾಡಿಸುತ್ತಾನೆ ಅದೂ ಮಗುವಿನ ಭಾಷೆಯಲ್ಲಿ. ಮುಗ್ಧತೆ ಪ್ರಬುದ್ಧತೆ ಎರಡು ಸಮಾಂತರವಾಗಿ ಸಾಗುವ ಪದ್ಯಗಳು ವಿರಳ. ಮಗುವನ್ನು ಎತ್ತಿಕೊಳ್ಳಲು ಅಜ್ಜ ಬಾಗುವಂತೆ ಮಗುವಿನ ವಯೋಸಹಜವಾದ ಸಂಕುಚಿತ ಅರಿವಿನ ಪರಿಧಿಗೆ ತಾನಿಳಿದು ತನ್ನ ಹಿರಿತನದ ಪರಿಧಿಗೆ ಮಗುವನ್ನು ತರುವಂತದ್ದು ಪ್ರಶಂಸನೀಯ. ಚೆಂದದ ಪದಗಳನ್ನು ಬಳಸಿ ಲಯ ಗೇಯತೆಗಳೊಂದಿಗೆ ಹಾಡನ್ನು ಕಟ್ಟಿಕೊಟ್ಟ ಸು ರಂ ಎಕ್ಕುಂಡಿಯವರಿಗೆ ಧನ್ಯವಾದಗಳು. ಬಾಹುಬಲಿಗೆ ನಮನಗಳು.

ಹಿಂದಿನ ಅಂಕಣಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

1.ಒಂದು ವಿಯೋಗಕ್ಕೆ ಹುಡುಗಿಯ ಆಂತರ್ಯದ ಸಿದ್ಧತೆ

2.ಸಯಾಮಿಯೋ, ಅವಳಿ ಜವಳಿಯೋ, ದೇಹ ಬೇರೆ ಆತ್ಮ ಬೇರೆಯೋ?

3.ಮೈಯೆಲ್ಲಾ ಚಂದ್ರನ ಗುರುತು ಹೆಸರೆಲ್ಲೋ ಹೋಗಿದೆ ಮರೆತು.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..