4994

ಭವಭವದಿ ಭವಿಸಿ ಹೇ! ಭವವಿದೂರ

ಎಲ್ಲೆಡೆಯೂ ಇದ್ದು ಯಾವುದಕ್ಕೂ ಅಂಟಿಕೊಳ್ಳದ ಚೈತನ್ಯವೇ ದೇವರು. ಎಲ್ಲದರಲ್ಲೂ ದೇವರನ್ನು ಕಾಣುವ ಶ್ರೇಷ್ಟ ಸಂಸ್ಕೃತಿ ನಮ್ಮ ದೇಶದಲ್ಲಿದೆ. ದೇವರು ಇಂಥಲ್ಲೆ ಎಂಬಂತೆ ಎಲ್ಲೂ ಹುಟ್ಟಿಲ್ಲ. ಸುಖದ ಸುಪ್ಪತ್ತಿಗೆಯನ್ನಾಗಲಿ ಮತ್ತೇನನ್ನೇ ಆಗಲಿ‌ ದೇವರು ಅರಸುವುದಿಲ್ಲ. ದೇವರು ಹತ್ತಾರು ಅವತಾರವೆತ್ತಿ ಬರುತ್ತಾನೆ. ತತ್ಕಾಲದ ಅವಶ್ಯಕತೆಗನುಗುಣವಾಗಿ ಜನ್ಮ ತಾಳುತ್ತಾನೆ. ಭಾರತದ ಪೌರಾಣಿಕ ಕಥೆಗಳಲ್ಲಿ ಇದಕ್ಕೆ ಉದಾಹರಣೆಗಳಿವೆ. ನನ್ನೊಳಗೂ(ಮಾನವನೊಳಗೂ) ದೇವರು ಅವತಾರವೆತ್ತಬೇಕು. ಆತ್ಮ ಮತ್ತು ಪರಮಾತ್ಮದ ನಡುವಿರುವ ಅನಂತಾಂತರ ಕಡಿಮೆಗೊಂಡಾಗಲೇ ಒಂದು ಸಾತ್ವಿಕ ಸಮಾಜ ನಿರ್ಮಾಣವಾಗಲು ಸಾಧ್ಯ. ದೇವರ ಹಲವಾರು ಅವತಾರಗಳನ್ನು ನೆನೆಯುತ್ತಾ ನಮ್ಮ ನಡುವೆಯೇ ಹುಟ್ಟಿ ದೇವರಂತೆ ಬದುಕಿದ ದೇವತಾ ಮನುಷ್ಯರನ್ನು ನೆನೆಯುತ್ತಾ ದೇವರೇ ನನ್ನ ಮನದಲ್ಲೂ ಒಮ್ಮೆ ಅವತಾರವೆತ್ತು ಮತ್ತು ಬದುಕಿಗೆ ಹಾದಿ ತೋರಿಸು ಎಂಬಂಥ ಹಾಡು ರಸ‌ಋಷಿ ಕುವೆಂಪು ಅವರು ಬರೆದ “ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ‌”. ಈ ಹಾಡಿನ ವಿಶೇಷವೆಂದರೆ ದೇವರ ಅವತಾರಗಳಂತೆ ಹಾಡು ಕೂಡಾ ಓದಿದಾಗೊಮ್ಮೆ ಹೊಸ ರೂಪ ತಳೆಯುತ್ತದೆ ಹೊಸ ಅರ್ಥ ಹೊಮ್ಮಿಸುತ್ತದೆ.

ಭಕ್ತ ಪರಮಾತ್ಮನನ್ನು ತನ್ನ ದೃಷ್ಟಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಾತ್ರ ಕಾಣಲು ಸಾಧ್ಯ.

‌ ನನ್ನರಿವಿನ ಚೌಕಟ್ಟಿನಲ್ಲಿನ ಅರ್ಥವನ್ನು ಹೇಳಲು ಮಾತ್ರ ನಾನು ಶಕ್ತ. ಹಾಡು ಇಂತಿದೆ.

“ಬಾ ಇಲ್ಲಿ ಸಂಭವಿಸು…
– ಕುವೆಂಪು
ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರ ||
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವಭವದಿ ಭವಿಸಿ ಹೇ! ಭವವಿದೂರ

ಮಣ್ ತನಕೆ ಮರತನಕೆ ಮಿಗತನಕೆ ಖಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ ಬಾರಾ
ಮೂಡಿ ಬಂದಿಂದೆನ್ನ ನರರೂಪ ಚೇತನದಿ
ನಾರಾಯಣತ್ವಕ್ಕೆ ದಾರಿ ತೋರ

ಅಂದು ಅರಮನೆಯಲ್ಲಿ ಮತ್ತೆ ಸೆರೆಮನೆಯಲ್ಲಿ
ಅಲ್ಲಿ ತುರು ಪಟ್ಟಿಯಲಿ ಇಲ್ಲಿ ಕಿರು ಗುಡಿಸಲಲಿ
ದೇಶ ದೇಶದಿ ವೇಷ ವೇಷಾಂತರ-ವನಾಂತು
ವಿಶ್ವ ಸಾರಥಿಯಾಗಿ ಲೀಲಾರಥ-ವನೆಂತು
ಚೋದಿಸಿರುವೆಯೊ ಅಂತೆ ಸೃಷ್ಟಿ ಲೋಲ

ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ
ಹೇ! ದಿವ್ಯ ಸಚ್ಚಿದಾನಂದ ಶೀಲ”

ಕುವೆಂಪು ಅವರು ಪ್ರಥಮ ಸಾಲುಗಳಲ್ಲೇ ದೇವರಿಗೊಂದು ವಿನಮ್ರ ಆಹ್ವಾನ ಕೊಡುತ್ತಾರೆ. ಬಂದು ಬಿಡು ದೇವರೇ ಅಸಂಖ್ಯ ಅವತಾರಿಯೇ ನನ್ನ ಹೃದಯದಲ್ಲಿ ನೆಲೆಗೊಂಡು ಸನ್ಮಾರ್ಗದಲ್ಲಿ ನನ್ನ ನಡೆಸಿಬಿಡು ಎಂದು ಕೇಳಿಕೊಳ್ಳುತ್ತಾರೆ. “ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ” ಎಂಬ ಸಾಲುಗಳು ಒಂದು ಕಡೆ ಜೀವವಿಕಾಸವನ್ನು ಹೇಳಿದರೆ ಮತ್ತೊಂದೆಡೆ ನಾವು ದೇವರನ್ನು ಕಾಣುವ ವಿವಿಧ ರೂಪಗಳನ್ನು ಹೇಳುತ್ತೆ. ಮಣ್ಣು,ಮರ,ಮಿಗ(ಮಿ=ಮಣ್ಣು,ಗ=ಗಮಿಸುವುದು; ಪ್ರಾಣಿ), ಖಗ(ಖ=ಆಕಾಶ,ಗ=ಗಮಿಸುವುದು;ಪಕ್ಷಿ). ಮಣ್ಣು ಎಲ್ಲ ಜೀವರಾಶಿಗಳಿಗೆ ಮೂಲ ತದನಂತರ ಹುಟ್ಟಿದ ಸೂಕ್ಷ್ಮಾಣು ಜೀವಿಗಳು ಭೂಚರಗಳೇ ಆಗಿದ್ದವು. ನಂತರ ದಿನಗಳಲ್ಲಿ ರೂಪಾಂತರಗೊಂಡ ಸಂಕೀರ್ಣ ಜೀವಿಗಳಾದ ಇನ್ನುಳಿದ ಪಕ್ಷಿ ಪ್ರಾಣಿಗಳಾದವು. ದೇವರು ಈ ಎಲ್ಲ ಪ್ರಾಣಿ ಪಕ್ಷಿಗಳ ರೂಪದಲ್ಲಿ ಅವತಾರವೆತ್ತಿದ್ದಾನೆ. ಮಾನವನೆಂಬುದು ಕೊನೆಯ ಮತ್ತು ಅತ್ಯಂತ ಸಂಕೀರ್ಣವಾದ ವಿಕಾಸದ ಘಟ್ಟ.

ಪ್ರತಿಯೊಂದು ಚರಾಚರ ವಸ್ತುಗಳಲ್ಲೂ ಭಗವಂತನನ್ನು ಕಾಣುವ ನಾವುಗಳು ನಮ್ಮಲ್ಲೆ ದೇವರು ಅವತಾರವೆತ್ತುವಂತೆ ಮತ್ತು ಮುಕ್ತಿಯೆಡೆಗೆ ದಾರಿ ತೋರುವಂತೆ ಕೇಳಿಕೊಳ್ಳುವ ಬಗೆಯೇ ಮೊದಲೆರಡು ಸಾಲುಗಳಲ್ಲಿವೆ.

“ಭವಭವದಿ ಭವಿಸಿ ಹೇ ಭವವಿದೂರ”

ಪ್ರತಿಯೊಂದು ಯುಗದಲ್ಲಿ ಒಂದೊಂದು ಅವತಾರದಲ್ಲಿ ಹುಟ್ಟಿದ ಮೇಲೂ ಯಾವ ಭವ ಬಂಧನಗಳಿಗೂ ಅಂಟಿಕೊಳ್ಳದೇ ದೂರವಿದ್ದಾನೆ. ಭರತ ಭೂಮಿಯಲ್ಲಿ ಹಲವಾರು ಸಂತರನ್ನು ನಾವು ನೋಡುತ್ತೇವೆ. ಅವರೆಲ್ಲ ಭವಬಂಧನಗಳಿಂದ ಮುಕ್ತರಾದ ಮೇಲೆಯೇ ದೇವಮಾನವರಾದರು.

ಮುಂದಿನ ಸಾಲುಗಳಲ್ಲಿ “ಮಣ್ತನಕೆ, ಮರತನಕೆ, ಮಿಗತನಕೆ ಖಗತನಕೆ ಮುನ್ನಡೆಗೆ ಕಣ್ಣಾದ ಗುರುವೇ ಬಾರಾ” ಎರಡರ್ಥ ಹೊಮ್ಮಿಸುವ ಸಾಲುಗಳು. ಇಲ್ಲಿ ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ ಎಂಬುದು ದೇವರೂಪಗಳು ಹೌದು. ಮನುಷ್ಯನ ಮಾನಸಿಕ ಸ್ಥಿತಿಯೂ ಹೌದು. ಮಣ್ತನ ಎಂದರೆ ಮೂಲ ಮಣ್ಣಿನ ಗುಣ ಎನ್ನುವ ಸ್ಥಿತಿ ಮತ್ತು ಸರಳ ಸಜ್ಜನಿಕೆಯ ದ್ಯೋತಕ, ಮರತನವೆಂದರೆ ಪರೋಪಕಾರದ, ಸ್ಥಿತಪ್ರಜ್ಞೆಯ ರೂಪವೂ ಹೌದು. ನಿಂತ ನೆಲೆಯಲ್ಲಿ ಆಳವಾಗಿ ಬೇರೂರಿ ತನ್ನತನವನ್ನು ಬಿಟ್ಟುಕೊಡದ ತನ್ಮಯತೆಯೂ ಹೌದು, ಖಗತನವೆಂದರೆ ಸ್ವಚ್ಛಂದತೆ, ಮುಕ್ತತೆಯ ಸಂಕೇತ ಯಾವಾಗ ಮನುಷ್ಯ ಮಣ್ತನವನ್ನೂ ಮರತನವನ್ನೂ ಮರೆಯುತ್ತಾನೋ ಸ್ವಾತಂತ್ರ್ಯ ಸ್ವೆಚ್ಛೆಯಾಗುತ್ತೋ ಆಗಲೇ ಅವನು ಇನ್ನೊಂದು ರೂಪ ವಿನಾಶಕಾರಿ ರೂಪ ಮಿಗತನ(ಮೃಗಿಯತೆ)ಕ್ಕೆ ರೂಪಾಂತರವಾಗೋದು. ಇಂತಿಪ್ಪ ಬದುಕಲ್ಲಿ ನಾವು ಕೊನೆಯವರೆಗೂ ಮಾನವೀಯತೆಯುಳ್ಳ ಮನುಷ್ಯರಾಗೇ ಉಳಿಯಬೇಕೆಂದರೆ ನಮ್ಮಲ್ಲಿ ಭಗವಂತ ಅವತರಿಸಬೇಕು ಮತ್ತು ಸನ್ಮಾರ್ಗದ ದಿಕ್ಕನ್ನು ಒಳಗಣ್ಣಾಗಿ ಅಂತರಾತ್ಮದಲ್ಲಿ ತೋರಿಸುತ್ತಿರಬೇಕು. ನರರೂಪದಲ್ಲಿ ಅವತರಿಸಿದ ನಾರಾಯಣತ್ವ(ಮುಕ್ತಿ)ಕ್ಕೆ ದಾರಿ ತೋರುತ್ತಲಿರಬೇಕು. ಹೊಸತನಕ್ಕೆ ತೆರೆದುಕೊಳ್ಳುವ ಯಾಂತ್ರಿಕ ಬದುಕಿನ ಜಂಜಡಗಳಲ್ಲಿ ನಾವು ನಮ್ಮತನವನ್ನೇ ಮರೆಯುತ್ತಿದ್ದೇವೆ. ನಾಗತಿಹಳ್ಳಿ ಚಂದ್ರಶೇಖರ್ ಅವರು ಒಂದುಕಡೆ ಹೇಳುತ್ತಾರೆ ಮನುಷ್ಯನಿಗೆ ರೆಕ್ಕೆಯೂ ಬೇಕು ಬೇರು ಬೇಕು ಅಂತ. ಮಣ್ಣಿನ ಸೊಗಡನ್ನು ಮರದ ತನ್ನತನವನ್ನು ಉಳಿಸಿಕೊಂಡು ಹಕ್ಕಿಯಂತೆ ಹೊಸತನದ ಆಗಸಕ್ಕೆ ಹಾರುತ್ತಾ ಭವಬಂಧನದಿಂದ ಮುಕ್ತ(ನಾರಾಯಣತ್ವ)ವಾದಾಗ ಮನುಷ್ಯನೊಬ್ಬ ದೇವನಾಗಲು ಸಾಧ್ಯ.

ಹೀಗೆಯೆ ಸಾಮಾನ್ಯಾತಿಸಾಮಾನ್ಯ ಮನುಷ್ಯನಾಗಿ ಹುಟ್ಟಿದವನೇ ದೇವರಾಗಿದ್ದ ಒಂದಷ್ಟು ಉದಾಹರಣೆಗಳನ್ನು ಮುಂದಿನ ಸಾಲುಗಳಲ್ಲಿ ಹೇಳುತ್ತಾರೆ. “ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ, ಅಲ್ಲಿ ತುರುಪಟ್ಟಿಯಲ್ಲಿ, ಇಲ್ಲಿ ಕಿರುಗುಡಿಸಿಲಿನಲ್ಲಿ” ಭಗವಂತ ಅವತರಿಸುವುದಕ್ಕೆ ಇಂಥದ್ದೇ ಜಾಗವಂತಿಲ್ಲ. ಅನುಕೂಲ ಅನಾನುಕೂಲಗಳ ಮೇಲೆ ಅವತಾರ ನಿರ್ಧಾರವಾಗೊಲ್ಲ ಬದಲಿಗೆ ಅವಶ್ಯಕತೆ ಸಮಾಜದಲ್ಲಿನ ಅಂಧಕಾರವನ್ನು ತೊಲಗಿಸಲು ಅವತಾರವೆತ್ತಿದ ಉದಾಹರಣೆಗಳನ್ನು ಕುವೆಂಪು ಕೊಡುತ್ತಾರೆ. ರಾಮ ಅರಮನೆಯಲ್ಲಿ ,ಕೃಷ್ಣ ಸೆರೆಮನೆಯಲ್ಲಿ , ಏಸು ಕೊಟ್ಟಿಗೆಯಲ್ಲಿ, ರಾಮಕೃಷ್ಣ ಪರಮಹಂಸರು ಗುಡಿಸಲಿನಲ್ಲಿ ಹೀಗೆ ಆ ದೇಶಕ್ಕೆ ಆ ದೇಶಕಾಲಕ್ಕೆ ಅವತ್ತಿನ ಅವಶ್ಯಕತೆಗೆ ತಕ್ಕಂತೆ ದೇವ ದೇವಮಾನವರು ಮತ್ತು ಮಹಾಪುರುಷರು ಜನ್ಮವೆತ್ತಿದ್ದಾರೆ. ಅರಮನೆಯ ವೈಭೋಗವನ್ನು ಅನುಭವಿಸಿದ್ದಾಗ್ಯೂ ಲೋಕೋದ್ಧಾರಕ್ಕಾಗಿ ಐಹಿಕ ಭೋಗಗಳನ್ನು ತ್ಯಜಿಸಿದ ಮಹಾವೀರ, ಬುದ್ಧ, ರಾಮನಂತವರು ಮಾತ್ರ ದೇವರಾಗಬಲ್ಲರು ಎಂಬುದೂ ಈ ಸಾಲುಗಳಿಂದ ಹೊರಹೊಮ್ಮುವ ಅರ್ಥವಾಗಿದೆ.ವೈಯಕ್ತಿಕ ಕಷ್ಟ ಬಡತನಗಳನ್ನು ಮರೆತು ಸಮಾಜಮುಖಿಯಾಗಿ ಕೆಲಸ ಮಾಡಿದ ಏಸು, ರಾಮಕೃಷ್ಣರಂತ ಪರಮ ಸಹಿಷ್ಣುಗಳು ಮಾತ್ರ ದೇವರಾಗಬಲ್ಲರು ಎಂಬುದೂ ಈ ಸಾಲುಗಳ ತಾತ್ಪರ್ಯ. ಕುಟುಂಬಕ್ಕೆ ಮಾತ್ರ ಸೀಮಿತವಾಗದೇ ಇಡೀಯ ವಿಶ್ವರಥದ ಸಾರಥಿಯಾಗಿ ನಿಂತವನೇ ದೇವರು.

ಸಾಮಾನ್ಯ ಮನುಷ್ಯನ ಎದೆಯಲ್ಲಿ ಸಚ್ಚಿದಾನಂದ ಅವತರಿಸು ಬಾ ಎಂದು ಕುವೆಂಪು ಅವರು ಮತ್ತೆ ಮತ್ತೆ ಆಹ್ವಾನ ಕೊಡುತ್ತಾರೆ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..