2290

ಈ ಚಿತ್ರ ಕಾದಂಬರಿ ಆಧಾರಿತವಲ್ಲ. ಕವನಗಳ ಆಧಾರಿತ.

ಕನ್ನಡ ಭಾವಗೀತೆಗಳ ಮಟ್ಟಿಗೆ ಶ್ರೀಮಂತ. ಅಡಿಗರು, ಶಿವರುದ್ರಪ್ಪನವರು, ಕುವೆಂಪು, ಬೇಂದ್ರೆ ಮತ್ತು ಕೆ.ಎಸ್ ನರಸಿಂಹಸ್ವಾ‌ಮಿಯವರು, ಎಚ್ಚೆಸ್ವಿಯವರು, ಎಮ್.ಎನ್ ವ್ಯಾಸರಾಯರು ಹೀಗೆ ಪರಂಪರಾಗತವಾಗಿ ಭಾವಗೀತೆಯ ನದಿ ಜೀವನದಿಯಾಗಿ ಹರಿಯುವಂತೆ ಅದಕ್ಕೊಂದು ಭೋರ್ಗರೆತ ಕೊಟ್ಟ ಕವಿಗಳ ಪಟ್ಟಿ ದೊಡ್ಡದಿದೆ. ಹಲವಾರು ಬಾರಿ ಭಾವಗೀತೆಗಳು ಸಾಹಿತ್ಯಾಸಕ್ತರ ಮನೆಗಳ ಪುಸ್ತಕ ಕಪಾಟುಗಳಲ್ಲಿನ ಕವನ ಸಂಕಲನಗಳ ಪುಟಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಯಾವಾಗ ಆ ಭಾವಗೀತೆಗಳು ಆಲ್ಬಮ್‌ಗಳಾಗಿ ಬಿಡುಗಡೆಗೊಂಡವೋ ಮತ್ತು ಅಲ್ಲಲ್ಲಿ ಸಿನಿಮಾಗಳಲ್ಲಿ ಬಳಸಲ್ಪಟ್ಟವೋ ಆಗ ಅವುಗಳ ಪ್ರಖ್ಯಾತಿ ದುಪ್ಪಟ್ಟಾಯ್ತು ಮತ್ತು ಸಿನಿಮಾಗಳಿಗೂ ಒಂದು ಸಂಸ್ಕಾರದ ಲೇಪವಾಯ್ತು. ಈ ರೀತಿಯ ಭಾವಗೀತೆಗಳಿಗೆ ರಾಗ ಸಂಯೋಜನೆ ಮಾಡಿ ಹಲವಾರು ಜನರಿಗೆ ತಲುಪುವಂತೆ ಮಾಡಿದ್ದರಲ್ಲಿ ಇಬ್ಬರು ಪ್ರಮುಖರು ಒಬ್ಬರು ಮೈಸೂರು ಅನಂತಸ್ವಾಮಿ ಮತ್ತೊಬ್ಬರು ಸಿ.ಅಶ್ವತ್ಥ್. ಮೈಸೂರು ಅನಂತಸ್ವಾಮಿಯವರದ್ದು ರಾಗ ಸಂಯೋಜನೆಯಾದರೆ ಅಶ್ವತ್ಥ್ ಅವರದು ಸ್ವರ ಸಂಯೋಜನೆ. ಅಲ್ಲಿ ಮೊದಲು ಹಾಡಿನ ಭಾವವನ್ನು ಗ್ರಹಿಸಿ ಅದಕ್ಕೆ ಬೇಕಾದಂತೆ ಸ್ವರಗಳನ್ನು ಸಮಾಂತರವಾಗಿ ಜೋಡಿಸುತ್ತಾ ಹೋಗುವುದು. ತಮ್ಮಲ್ಲಿ ಪ್ರಕಾಂಡ ಪಾಂಡಿತ್ಯವಿದ್ದರೂ ಅಶ್ವತ್ಥ್ ಆ ಪಾಂಡಿತ್ಯವನ್ನು ಹಾಡಿನ ಭಾವವನ್ನು ಪುಷ್ಟಿಕರಿಸಲು ಬಳಸಿದರೆ ಹೊರತು ಅದನ್ನು ಎಲ್ಲೂ ಭಾವಪಲ್ಲಟವಾಗಗುಡಲಿಲ್ಲ.‌ ಅಲ್ಬಮ್‌ಗೆ ಬಂದ ಹಾಡುಗಳನ್ನು ಮತ್ತು ಅದಕ್ಕೂ ಮೊದಲೇ ಕೆಲವು ಭಾವಗೀತೆಗಳನ್ನು ಚಲನಚಿತ್ರಗಳಿಗೆ ಬಳಸಿದ್ದಿದೆ. ಸಾಂದರ್ಭಿಕವಾಗಿ ಬಳಸುವುದು ಒಂದೆಡೆಯಾದರೆ ಹಾಡುಗಳನ್ನು ಚುಕ್ಕೆಯಂತಿಟ್ಟು ಚಿತ್ರಕಥೆಯ ರಂಗೋಲಿ ಬಿಡಿಸಿ ಹಿರಿತೆರೆಯ ಅಂಗಳಕ್ಕೆ ತಂದಿಡುವುದು ಸೃಜನಶ್ರೇಷ್ಟತೆ. ಅಂಥ ಕೆಲಸವನ್ನು ಟಿ.ಎಸ್. ನಾಗಾಭರಣ ಅವರು ಮಾಡುತ್ತಾರೆ. ಆ ಚಿತ್ರವೇ “ಮೈಸೂರು ಮಲ್ಲಿಗೆ”(https://www.youtube.com/playlist?list=PL5C5A6EA3014AAB63)

ಚಿತ್ರದ ಟೈಟಲ್ ಕಾರ್ಡಿನಲ್ಲಿ ಅಲ್ಲಿಯವರೆಗೆ ಕಾದಂಬರಿ ಆಧಾರಿತ ಚಿತ್ರ ಅಂತ ಮಾತ್ರ ಇರುತ್ತಿತ್ತು. ಮೊತ್ತಮೊದಲ ಬಾರಿಗೆ ಕೆ.ಎಸ್.ನರಸಿಂಹಸ್ವಾಮಿಯವರ ಹಾಡುಗಳ ಆಧಾರಿತ ಚಿತ್ರ ಎಂದು ಟೈಟಲ್ ಕಾರ್ಡ್ ಹೊಸತನವನ್ನು ತಂದಿತ್ತು. ಅಸಲಿಗೆ ಈ ಚಿತ್ರದಿಂದ ಹಾಡಿಗೆ ಪ್ರಖ್ಯಾತಿ ಬಂದಿತು ಎಂದರೆ ತಪ್ಪಾದೀತು. ಪ್ರಖ್ಯಾತ ಹಾಡುಗಳನ್ನು ಚಿತ್ರಕ್ಕೆ ಸಮರ್ಪಕವಾಗಿ ಬಳಸಿಕೊಂಡು ಕಥೆ ಕಟ್ಟಿದ್ದರು‌ ಎಂದರೆ ಸರಿ. ಯಾಕೆಂದರೆ ಮೈಸೂರು ಮಲ್ಲಿಗೆಯ ಹಾಡುಗಳು ಜನಪದ ಹಾಡುಗಳಷ್ಟೆ ಸಲೀಸಾಗಿ ಬಾಯಿಂದ ಬಾಯಿಗೆ ಹರಿದು ಹೋದವು.

ನಾನೀಗಾಗಲೇ ಹೇಳಿದಂತೆ ಚುಕ್ಕೆಯಿಟ್ಟು ಬಿಡಿಸಿದ ರಂಗೋಲಿಯೇ ಸರಿ. ಆ ಚುಕ್ಕೆಗಳೇ ಪಾತ್ರಗಳು ಮತ್ತು ಸನ್ನಿವೇಶಗಳು ಒಟ್ಟು ಕಥಾಹಂದರವೇ ರಂಗೋಲಿ. ಪ್ರೇಮ ಕವಿಗಳೆಂದ ಖ್ಯಾತರಾದ ನರಸಿಂಹಸ್ವಾಮಿಯವರ ಹಾಡುಗಳ ಆಧಾರಿತ ಕಥೆ ಹೆಣೆಯುವಾಗ ಪ್ರೇಮಕಥೆ ಇರದಿದ್ದರೆ ಹೇಗೆ?

ಒಂದು ಪ್ರೇಮಕಥೆ ಪ್ರೇಯಸಿಯ ಹೆಸರು ಹೇಳುವ ನೆಪದಲ್ಲಿ “ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ” ಹಾಡು. ಆ ಪ್ರೇಮಕ್ಕೆ ಅಪ್ಪನ ಅಡೆತಡೆ ಇಟ್ಟು ಇಬ್ಬರನ್ನೂ ಆ ಕ್ಷಣಕ್ಕೆ ಅಗಲಿಸಿ “ನಿನ್ನ ಪ್ರೇಮದ ಪರಿಯಾ” ಹಾಡು. ಹುಡುಗನ ಊರು ಹೊನ್ನೂರು ಹುಡುಗಿಯದು ನವಿಲೂರು “ಒಂದಿರುಳು ಕನಸಿನಲಿ ನನ್ನವಳ ಕೇಳಿದೆ” ಹಾಡಿಗೆ ಇಟ್ಟ ಚುಕ್ಕೆಗಳು. ಹುಡುಗಿಯ ಹೆಸರು ಪದ್ಮ. ಕನ್ನಡಿಗರು ಯಾರಾದರೂ ರಾಯರನ್ನು ಕಾಯಿಸಿ ಕೊನೆಗೆ ಅವರ ಕೋಣೆಗೆ ಹೂವನು ಮುಡಿಯುತ ಬಂದ ಪದುಮಳನ್ನು ಮರೆಯೋಕೆ ಸಾಧ್ಯವೇ? “ರಾಯರು ಬಂದರು ಮಾವನ ಮನೆಗೆ…” ಅನುಕೂಲಕ್ಕೆ ಈ ಹೆಸರು. ಇಷ್ಟೇ ಆಗಿದ್ದರೆ ಹಾಡುಗಳನ್ನು ಸುಮ್ಮನೇ ತುರುಕಿದ್ದಾರೆ ಅನಿಸುತ್ತಿತ್ತು. ಹಾಡುಗಳು ರಚನೆಯಾದ ತತ್ಕಾಲದ ಸ್ವಾತಂತ್ರ್ಯ ಹೋರಾಟದ ಎಳೆಯನ್ನು ಹೊಂದಿದ ಕಥೆಯನ್ನು ಹಾಡನ್ನು ಬಳಸಿಕೊಂಡಷ್ಟೆ ಸಮರ್ಥವಾಗಿ ಕಟ್ಟಿದ್ದಾರೆ. ಒಂದು ಸ್ವಾತಂತ್ರ್ಯ ಹೋರಾಟಗಾರರ ದಂಡು ಅದನ್ನು ಹಿಡಿಯಲು ನಮ್ಮದೇ ಪೇದೆಗಳ ದಂಡು. ಊರ ಉಸಾಬರಿ ನಿನಗೇಕೆ ನಿನ್ನ ಕುಟುಂಬ ನೋಡಿಕೋ ಎಂಬಂತಿರುವ ಎಂದಿನ ಮಧ್ಯಮ ವರ್ಗದ ಸೀಮಿತ ವಲಯಕ್ಕೆ ಸಿಕ್ಕಿಬಿದ್ದ ಹುಡುಗ. ಅದನ್ನು ದಾಟಿ ರಾಷ್ಟ್ರಕ್ಕೇನಾದರೂ ಮಾಡಬೇಕು ಎನ್ನುವ ಹುಡುಗನ ಸಹಜ ಹುಂಬತನ. ಅದರಿಂದ ವೈಯಕ್ತಿಕ ಬದುಕಿನ ಅಲ್ಲೋಲ ಕಲ್ಲೋಲಗಳು. ಎಲ್ಲೋ ಒಂದು ಕಡೆ ಬಂಧಿತನಾದ ಗಂಡನನ್ನು ಬಿಡಿಸಿಕೊಳ್ಳಲೂ ಆಗದ ನೋಡಲೂ ಆಗದ ನಿಸ್ಸಹಾಯಕ ಮಡದಿ ದೇವರ ಮುಂದೆ ಮಂಡಿ ಊರಿ ಕುಳಿತಾಗ ಬರುವ “ದೀಪವು ನಿನ್ನದೇ ಗಾಳಿಯು ನಿನ್ನದೇ..” ಹಾಡು.

ಅಂದಿನ ಕಾಲಕ್ಕೆ ಪತ್ರದ ಹೊರತು ಮತ್ತೊಂದು ಸೇತುವೇ ಇರಲಿಲ್ಲ. ಆದರೆ ಹಳ್ಳಿಹಳ್ಳಿಗೂ ಬಳೆ ಮಾರುತ್ತಾ ಬರುವ ಬಳೆಗಾರ ಸಂದೇಶ ವಾಹಕನಾಗಿದ್ದ. “ಅಬಚೂರಿನ ಪೋಸ್ಟಾಫಿಸಿ”ನ ಪೋಸ್ಟ್ ಮ್ಯಾನ್ ಯಾವ ರೀತಿ ಬರೀ ಪತ್ರ ಹಂಚಿಕೆಯಷ್ಟೇ ಮಾಡದೇ ಜನರ ಒಳಗೆ ಅವರ ಭಾವನೆಗಳ ಸೇತುವಾಗಿದ್ದನೋ ಅದರಷ್ಟೆ ವಿಶ್ವಾಸವನ್ನು ಜನ ಆಗಿನ ಕಾಲದ ಬಳೆಗಾರನ ಮೇಲಿಟ್ಟಿದ್ದರು. ಮನೆಯ ಜಗುಲಿಯ ಮೇಲೆ ಬಂದು ಕೂತು ಬಳೆ ತೊಡಿಸಿ. ಮನೆಯೊಡತಿ ಕೊಡುವ ಒಂದು ಲೋಟ ಮಜ್ಜಿಗೆ ಕುಡಿದು. ಧಣಿಗಳು ಕೊಡುವ ಹಳೆಯ ಬಟ್ಟೆಯನ್ನು ಹಬ್ಬದ ಬಟ್ಟೆಯಷ್ಟೆ ಹುರುಪಿನಿಂದ ಜೋಳಿಗೆಗಿಳಿಸಿಕೊಳ್ಳುವ ಅಲ್ಪತೃಪ್ತ.

ಈಗ ನಿಸ್ಸಹಾಯಕ ಮಡದಿಗೆ ಗಂಡನೊಂದಿಗೆ ಬೆಸೆಯಲು ಇವನೇ ಸೇತು. ಚಿತ್ರದ ಪಾತ್ರಧಾರಿ ಬಳೆಗಾರ ಚೆನ್ನಯ್ಯ “ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು” ಹಾಡು ಬಳಸಲಾಗಿದೆ. ಎಂದೋ ಒಮ್ಮೆ ಬರುವ ಬಳೆಗಾರನನ್ನು ಮನೆಯ ಸದಸ್ಯನಂತೆ ನೋಡುತ್ತಿದ್ದ ಕಾಲವದು. ಹೋಗುತ್ತಿದೆ ಮನೆಯವರ ಮಗಳ ಮೇಲೆ ತನ್ನ ಮಗಳಷ್ಟೆ ವಾತ್ಸಲ್ಯ ತೋರುತ್ತಿದ್ದ ಬಳೆಗಾರರ ಕಾಲವೂ ಹೌದು. ಬಳೆಗಾರಿಕೆ ವ್ಯಾಪರೀತನಕ್ಕೆ ಸೀಮಿತವಾಗದೆ ವಾತ್ಸಲ್ಯದ ವಿಸ್ತಾರ ಪಡೆದಿತ್ತು.

ಇನ್ನುಳಿದಂತೆ “ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ..” ಹಾಡು ಮೊದಲೇ ಬರುತ್ತೆ ಹಳ್ಳಿಯ ಮುಗ್ಧ ಹದಿನಾರರ ಹುಡುಗಿಯ ಸ್ವಚ್ಛಂದ ಆಸೆಗಳ ರುವಾರಿಯಾಗಿ. ಹುಡುಗಿಯ ತಂದೆಗೆ ಶಾನುಭೋಗರ ಹುದ್ದೆ ಕೊಟ್ಟರು ಶಾನುಭೋಗರ ಮಗಳು ಹಾಡು ಸುಳಿಯುವುದಿಲ್ಲ‌. ಚಿತ್ರ ದೊಡ್ಡದಾಗುತ್ತೆ ಎಂದು ಕೈ ಬಿಟ್ಟರೋ ಅಥವಾ ಎಡಿಟ್ ಮಾಡಿದರೋ ನಿರ್ದೇಶಕರಿಗೆ ಗೊತ್ತು. ಇನ್ನು ಮನೆ ಮಡದಿ ಎಲ್ಲ ಬಿಟ್ಟು ದೇಶದ ಒಳಿತಿಗಾಗಿ ಒಂದಡಿ ಹೊರಗಿಡುವ ಹುಡುಗನಿಗಾಗಿ ಅಡಿಗರ “ಯಾವ ಮೋಹನ ಮುರಳಿ ಕರೆಯಿತು” ಬಳಸಲಾಗಿದೆ. ಚಿತ್ರದಲ್ಲಿ ಸೇರಿಸಿಲ್ಲ. ಒಟ್ಟಾರೆಯಾಗಿ ಎಂಟರಿಂದ ಹತ್ತು ಭಾವಗೀತೆಗಳನ್ನು ಕಥೆಗೆ ಬಳಸಿಕೊಂಡದ್ದು ಚೆಂದ.

ನಾಗಾಭರಣ ಅವರು ಇಂಥ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ತ.ರಾ.ಸು ಅವರ ಮೂರು ಕಾದಂಬರಿಗಳನ್ನು ಆಧರಿಸಿ “ಆಕಸ್ಮಿಕ” ಚಿತ್ರಕಥೆಯನ್ನು ಹೆಣೆದದ್ದು, “ಶಿಶುನಾಳ ಶರೀಫ”ರ ಬದುಕಿನ ಘಟನೆಗಳನ್ನು ಹಾಡುಗಳನ್ನು ಒಂದು ಚಿತ್ರದಲ್ಲಿ ಕ್ರೋಢಿಕರಿಸಿ ಕನ್ನಡಿಗರಿಗೆ ಕೊಟ್ಟ ಶ್ರೇಯ ನಾಗಾಭರಣ ಅವರಿಗೆ ಸಲ್ಲಬೇಕು. “ಜನುಮದ ಜೋಡಿ” ಚಿತ್ರಕ್ಕೆ ಆಯ್ದುಕೊಂಡ ಕಥೆ “ಪನ್ನಾಲಾಲ್ ಪಟೇಲ್” ಎಂಬ ಗುಜರಾತಿ ಸಾಹಿತಿಯ ಜ್ಞಾನಪೀಠ ಪುರಸ್ಕೃತ ಕೃತಿಯನ್ನು ಆಧರಿಸಿದ್ದು. ಇತ್ತಿಚೆಗೆ ಕನ್ನಡದ ನಿರ್ದೇಶಕರಿಗೆ ಕಥೆಗಳೇ ಇಲ್ಲದೇ ರಿಮೇಕಿಗೆ ಮೊರೆಹೋಗುವ ಕಾಲ ಬಂದಿದೆ. ಕಾರಣವಿಷ್ಟೆ ನಿರ್ದೇಶಕನಿಗೆ ವಾಚಾನಾಭಿರುಚಿ(ಓದುವ ಆಸಕ್ತಿ)ಯ ಕೊರತೆ ಇದೆ. ಗುಜರಾತಿ ಮೂಲದ ಪುಸ್ತಕವನ್ನು ಓದಿ ಕನ್ನಡದ ಸೊಗಡಿಗೆ ಹೊಂದುವ ಚಿತ್ರಕಥೆಯಾಗಿಸುವ ಸೃಜನಶೀಲತೆಯ ಕೊರತೆಯೂ ಇದೆ.

ಹೋದವಾರ ಆರು ಹಾಡುಗಳನ್ನು ಚಿತ್ರದ ತಿರುವಿಗೆ ಬಳಸಿಕೊಂಡ “ಅಮೃತ ವರ್ಷಿಣಿ”ಯ ಬಗ್ಗೆ ಹೇಳಿದ್ದೆ. ಈ ವಾರ ಹಾಡನ್ನೇ ಮೂಲವಾಗಿಸಿಕೊಂಡು ಚಿತ್ರಕಥೆ ರಚಿಸಿದ ಅಪರೂಪದ ಚಿತ್ರ “ಮೈಸೂರು ಮಲ್ಲಿಗೆ”ಯನ್ನು ನೋಡಿದೆವು. ನಾಗಾಭರಣ ಅವರ ಸೃಜನಶೀಲತೆಗೆ, ಕೆ ಎಸ್ ನರಸಿಂಹಸ್ವಾಮಿಯವರ ಹಾಡುಗಳಿಗೆ, ಅಮೂಲ್ಯ ಹಾಡುಗಳು ಇವತ್ತಿಗೂ ಕನ್ನಡಿಗರಿಗೆ ಲಭ್ಯವಾಗುವಂತೆ ಮಾಡಿದ ಸಿ.ಅಶ್ವತ್ಥ್, ಮೈಸೂರು ಅನಂತ್‌ಸ್ವಾಮಿಗಳಿಗೆ ಕೋಟಿ ಕೋಟಿ ನಮನಗಳು.

ಮೈಸೂರು ಮಲ್ಲಿಗೆ ಕವನ ಸಂಕಲನದ ಒಂದೊಂದು ಹಾಡು ನನ್ನ ಹಾಡು-ಜಾಡುವಿನ ಒಂದೊಂದು ಲೇಖನಕ್ಕೆ ವಸ್ತುವಾಗಬಲ್ಲಷ್ಟು ಸಮೃದ್ಧ. ಮತ್ತೊಮ್ಮೆ ಒಂದೊಂದೆ ಹಾಡುಗಳ ಬಗ್ಗೆ ಬರೆಯುವೆ.

ಹಿಂದಿನ ಅಂಕಣಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
1.ಅಮೃತದಂಥ ಐದು ಹಾಡುಗಳ ವರ್ಷಿಣಿ…
2.ನಾವೆಲ್ಲಾ ಇಲ್ಲಿ ನಿಮಿತ್ತ ಮಾತ್ರ.

3.ಮಗು ಅಜ್ಜ ಮತ್ತು ಬಾಹುಬಲಿ. ಮುಗ್ಧತೆ ಪ್ರಬುದ್ಧತೆ ಮತ್ತು ವೈರಾಗ್ಯ.

4.ಒಂದು ವಿಯೋಗಕ್ಕೆ ಹುಡುಗಿಯ ಆಂತರ್ಯದ ಸಿದ್ಧತೆ

5.ಸಯಾಮಿಯೋ, ಅವಳಿ ಜವಳಿಯೋ, ದೇಹ ಬೇರೆ ಆತ್ಮ ಬೇರೆಯೋ?

6.ಮೈಯೆಲ್ಲಾ ಚಂದ್ರನ ಗುರುತು ಹೆಸರೆಲ್ಲೋ ಹೋಗಿದೆ ಮರೆತು.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..