3389

ನಾವೆಲ್ಲಾ ಇಲ್ಲಿ ನಿಮಿತ್ತ ಮಾತ್ರ.

“ತಸ್ಮಾತ್ತ್ವಮುತ್ತಿಷ್ಠ ಯಶೋ ಲಭಸ್ವ

ಜಿತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಂ ಸಮೃದ್ಧಮ್|

ಮಯೈವೈತೇ ನಿಹತಾಃ ಪೂರ್ವಮೇವ

ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್||”

ಭಗವದ್ಗೀತೆಯ ಹನ್ನೊಂದನೆ ಅಧ್ಯಾಯದ 33 ನೇ ಶ್ಲೋಕ. ಹನ್ನೊಂದನೆ ಅಧ್ಯಾಯದಲ್ಲಿ ಅರ್ಜುನ ಕೃಷ್ಣನನ್ನು ತನ್ನ ರೂಪವನ್ನು ತೋರಿಸುವಂತೆ ಕೇಳುತ್ತಾನೆ. ಸಾಮಾನ್ಯರಿಗೆ ನನ್ನ ರೂಪ ನೋಡಲು ಸಾಧ್ಯವಿಲ್ಲ. ಅದಕ್ಕಾಗಿ ದಿವ್ಯದೃಷ್ಟಿಯನ್ನು ಕೊಟ್ಟು ವಿಶ್ವರೂಪ ದರ್ಶನ ಮಾಡಿಸುತ್ತೇನೆ ಎಂದು ಹೇಳುತ್ತಾನೆ. ವಿಶ್ವರೂಪ ದರ್ಶನವಾಗುತ್ತಿರುವ ಸಮಯದಲ್ಲಿ ದ್ರೋಣ ಭೀಷ್ಮ ದುರ್ಯೋದನ ಹೀಗೆ ಒಬ್ಬೊಬ್ಬರೇ ಕೃಷ್ಣನ ಬಾಯಲ್ಲಿ ಹೋಗುತ್ತಿರುವುದನ್ನು ಅರ್ಜುನ ನೋಡುತ್ತಾನೆ. ಆಗ ಅರ್ಜುನ ನಾನು ಇವರಾರನ್ನು ಕೊಂದೇ ಇಲ್ಲವಲ್ಲ ಎಂದಾಗ ಕೃಷ್ಣ ನಾನಾಗಲೇ ಇವರನ್ನು ಕೊಂದಾಯಿತು. ನೀನು‌ ಇಲ್ಲಿ “ನಿಮಿತ್ತ ಮಾತ್ರ” ಎಂದು ಹೇಳುತ್ತಾನೆ. ಹೌದು ಬದುಕಿನ ಎಲ್ಲ ಘಟನೆಗಳು ಪೂರ್ವ ನಿರ್ಧಾರಿತ ನಾವು ಕೈಗೊಂಬೆಗಳು ಮಾತ್ರ. Everything is prewritten nothing can be rewritten. ಹಲವಾರು ಬಾರಿ ಈ ಅಂಶ(ಎಲ್ಲಕ್ಕೂ ದೇವರೇ ಕಾರಣ) ನಮ್ಮಲ್ಲಿ ಚಿಂತೆಯಿಂದ ದೂರ ಮಾಡಬಲ್ಲದು. ಕೆಲವೊಮ್ಮೆ ಇದು ಅಪರಾಧಕ್ಕೆ ಮೊದಲ ಹಂತದ ಮನಸ್ಥಿತಿಯೂ ಆಗಬಹುದು. ಘಟಿಸಿಹೋದದ್ದರ ಬಗ್ಗೆ ಕೊರಗುವ ಬದಲು ಆ ಘಟನೆಗೆ ನಾವು ನಿಮಿತ್ತ ಮಾತ್ರ ಎಂದುಕೊಳ್ಳುವುದು ಒಂದು ಮುಖ. ಮಾಡುತ್ತಿರುವುದು ತಪ್ಪೆಂಬುದು ಗೊತ್ತಿದ್ದರೂ ಈ ತರಹ ಮಾಡಲಿಕ್ಕೆ ದೇವರೇ ಕಾರಣ ಎಂಬ ಮನಸ್ಥಿತಿ ಇದರ ಇನ್ನೊಂದು ಮುಖ.ಮೊದಲನೇ ಅಂಶಕ್ಕೆ ಹೊಂದುವ ಒಂದು ಹಾಡನ್ನು ಈ ವಾರ ನೋಡೋಣ. ಅದು “ರಾಯರು ಬಂದರು ಮಾವನ ಮನೆಗೆ” ಚಿತ್ರದ “ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ.”

( https://youtu.be/vuiX7VctXuE)

“ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲಾ

ನಿನ್ನಯ ಕೈಯಲ್ಲಿ ಬೊಂಬೆಯು ನಾನು,
ಆಡಿಸಿ ಬೀಳಿಸಿ ನಗುತಿಹೆ ನೀನು
ನನ್ನಯ ಸರಿ ತಪ್ಪು ಹೊಣೆ ನಿನ್ನದು
ಶೋಧನೆ ಈದಿನ ನನಗೆ ಅದು
ಪ್ರಭು ಶಿಕ್ಷೆ ನೀಡುವೆಯೊ ರಕ್ಷೆ ಮಾಡುವೆಯೊ
ಪಾಪ ಪುಣ್ಯ ನಿನಗೆ ಅರ್ಪಣೆ
ಪ್ರಭು ಶಿಕ್ಷೆ ನೀಡುವೆಯೊ ರಕ್ಷೆ ಮಾಡುವೆಯೊ
ಪಾಪ ಪುಣ್ಯ ನಿನಗೆ ಅರ್ಪಣೆ
ಪರಮಾತ್ಮನೆ ಶ್ರೀ ಕೃಷ್ಣನೆ||೧||

ಬೇಡದೆ ತಾಳಿಯ ನನಗೇ ನೀತಂದೇ,
ಜೀವಕು ಜೀವಕು ಹೊಸ ನಂಟು ತಂದೇ
ಕೀಳುವೆ ಏಕಿಂದು ಆ ಬಂಧನಾ
ಪ್ರೇಮಕೆ ಈ ಶಿಕ್ಷೆ ಏಕೀ ದಿನ
ಪ್ರಭು ಸ್ನೇಹ ಜೀವಿಯನು, ತ್ಯಾಗಮೂರ್ತಿಯನು
ಮಮತೆಯಿಂದ ಕಾಯೊ ತಂದೆಯೇ;
ನೀ ಎನ್ನ ತಪ್ಪುಗಳ ಕ್ಷಮಿಸಿ ಪಾಲಿಸುತ
ಜೀವ ನೀಡಿ ಸಲಹೊ ತಂದೆಯೇ
ರಾಘವೇಂದ್ರನೇ ಗುರುರಾಜನೇ…||೨||

ನಿಶ್ಚಯ ಮನುಜಗೆ ಮರಣವು ಒಂದೇ
ಮನಸಿಗೆ ಶಾಂತಿಯು ಆಗಲೆ ತಂದೇ
ನಿಶ್ಚಲ ಮನಶಕ್ತಿ ದಯಪಾಲಿಸು
ಪಾದದಿ ಸ್ಥಳ ನೀಡಿ ಕೃಪೆ ತೋರಿಸು
ಪ್ರಭು ನಿನ್ನ ನಂಬಿರುವೆ
ಶರಣು ಎಂದಿರುವೆ
ನಿನ್ನಲೆನ್ನ ಒಂದು ಮಾಡಿಕೊ
ಪ್ರಭು ನಿನ್ನ ನಂಬಿರುವೆ
ಶರಣು ಎಂದಿರುವೆ
ನಿನ್ನಲೆನ್ನ ಒಂದು ಮಾಡಿಕೊ
ಪರಮಾತ್ಮನೆ ಶ್ರೀ ಕೃಷ್ಣನೆ ||೩||

ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲಾ”

ಚಿತ್ರದ ನಾಯಕ ಸ್ವಭಾವತಃ ಸಜ್ಜನ. ಪ್ರೀತಿಸುವ ಹುಡುಗಿ ಮೂಗಿಯಾದರೂ ಮದುವೆಯಾಗುತ್ತಾನೆ. ಹುಟ್ಟಿದ ಮೂಗ ಮಗನಿಗೆ ಮಾತಾಡುವಂತೆ ಮಾಡಲು ಶಸ್ತ್ರಚಿಕಿತ್ಸೆಗೆ ದುಡ್ಡು ಹೊಂದಿಸುವ ಜಂಜಾಟಕ್ಕೆ ಬೀಳುತ್ತಾನೆ. ತದನಂತರ ಮತ್ತೊಂದು ಉಪಕಥೆಗೆ ಪಾತ್ರಧಾರಿಯಾಗುತ್ತಾನೆ. ದುಡ್ಡಷ್ಟೇ ಅಲ್ಲದೇ ತಾನು ಹೋದ ಮನೆಯ ಯಜಮಾನನ ಅನಾರೋಗ್ಯದ ಸಲುವಾಗಿ ಸಾಕಷ್ಟು ಸುಳ್ಳಿನ ಬದುಕಿಗೆ ಒಡ್ಡಿಕೊಳ್ಳುತ್ತಾನೆ. ಮೂಗಿಗೆ ಬಾಳು ಕೊಟ್ಟ, ಮಗನಿಗೆ ಮಾತಾಡುವಂತೆ ಮಾಡುವ ಮತ್ತು ಹೃದ್ರೋಗಿಯೊಬ್ಬನ ಜೀವ ಉಳಿಸುವ ಮೂರು ಕಾರಣಗಳಲ್ಲಿ ಬಂಧಿಯಾಗಿ ಹಲವು ಅಪರಾಧಗಳನ್ನು ಎಸಗುತ್ತಾನೆ. ಹೃದ್ರೋಗಿಯ ಮಗಳನ್ನು ಯಾವುದೋ ಸಂದಿಗ್ಧ ಪರಿಸ್ಥಿತಿಯಲ್ಲಿ ಮದುವೆಯೂ ಆಗುತ್ತಾನೆ. ಕೊನೆಗೊಮ್ಮೆ ಉರುಳು ಕತ್ತನ್ನು ಹಿಸುಕುವ ಸಮಯ ಬಂದಾಗ “ನನ್ನ ಮರಣದಂಡನೆ ತಪ್ಪಿಸಬಹುದಾ? ನನಗೆ ಬದುಕುವ ಆಸೆ ಇದೆ. ನನಗೋಸ್ಕರ ಅಲ್ಲದಿದ್ದರೂ ಮತ್ತೊಬ್ಬರಿಗೋಸ್ಕರ ಬದುಕಬೇಕು.” ಎಂದು ಪೋಲಿಸ್ ಅಧಿಕಾರಿಯನ್ನು ಕೇಳುವಾಗ ಒಬ್ಬ ಮನುಷ್ಯ ಎಷ್ಟೊಂದು ನಿಸ್ಸಹಾಯಕ ಅಂತನಿಸುತ್ತದೆ. ತಾನಂದುಕೊಂಡಂತೆ ಬದುಕಲೂ ಆಗದ ಸಮಯದ ಗೊಂಬೆ ನಾವು ಅಂದುಕೊಂಡಾಗ ಸಾಯುವಂತ ಇಚ್ಛಾಮರಣಿಗಳೂ ನಾವಲ್ಲ.

“ನಿನ್ನಯ ಕೈಯಲಿ….” ಸಾಲುಗಳಲ್ಲಿ ದೇವರು ಒಂದು ತರಹ ಹಿಂಸಾವಿನೋದಿ ಎಂಬುದನ್ನು ಹೇಳಲಾಗಿದೆ. ಮನುಷ್ಯನಿಗೆ ಹಲವಾರು ಸಂದಿಗ್ಧಗಳು ಪರಿಸ್ಥಿತಿಗಳನ್ನು ಸೃಷ್ಟಿಸಿ ಅದರಲ್ಲಿ ಸಿಲುಕಿಕೊಂಡಾಗ ಮೇಲೆ ಕೂತು ಮೋಜು ನೋಡುತ್ತಿರುತ್ತಾನೆ. ಆದರೆ ನಾವು ಮಾಡುವ ಒಳ್ಳೆಯ ಕೆಲಸ, ತಪ್ಪು ಎರಡಕ್ಕೂ ನಾವು ಹೊಣೆಗಾರರಲ್ಲ. ಅದು ಘಟಿಸಲು ನಾವೊಬ್ಬ ಮಧ್ಯವರ್ತಿಯಷ್ಟೆ. ಈ ಸರಿ ತಪ್ಪುಗಳಿಗೆ ಹೊಣೆ ಅವನದೇ. ಇಷ್ಟೆಲ್ಲಾ ಆದ ಮೇಲು ಕಗ್ಗಲ್ಲಿನಂತೆ ಕೂತು ತನ್ನದೇನು ಇಲ್ಲ ಎಂಬಂತಿರುವ ದೇವನಿಗೆ ನನ್ನ ಪಾಪಗಳಷ್ಟೆ ಅಲ್ಲ ಮಾಡಿದ ಸುಕಾರ್ಯಗಳನ್ನು ನಿನಗೆ ಅರ್ಪಿಸುತ್ತೇನೆ ಎರಡನ್ನು ತಕ್ಕಡಿಯಲ್ಲಿಟ್ಟು ತೂಗು ಶಿಕ್ಷೆ ರಕ್ಷೆಯೂ ಸರ್ವಶಕ್ತನಾದ ನೀನೆ ಕೊಡಬಲ್ಲೆ ಎಂದು ಕೈಚೆಲ್ಲಿಬಿಡುವ ಪರಿಸ್ಥಿತಿ ನಾಯಕನದ್ದು.

“ತಾಯೆ ಬಲ್ಲಂದದಲಿ ಕಂದನ
ಕಾಯಿ ಮೇಣ್ ಕೊಲ್ಲೆನುತ ಕಮಲದ
ಳಾಯತಾಕ್ಷಿ ಕುಮಾರಕನ ಹಾಯ್ಕಿದಳು ಮಡುವಿನಲಿ
ರಾಯಕೇಳೈ ಸಕಲಲೋಕದ
ತಾಯಲಾ ಜಾಹ್ನವಿ ತರಂಗದಿ
ನೋಯಲೀಯದೆ ಮುಳುಗಲೀಯದೆ

ಚಾಚಿದಳು ತಡಿಗೆ”

“ಗದುಗಿನ ಭಾರತ”ದಲ್ಲಿನ ಸಾಲುಗಳಂತೆ ಲೋಕಾಪವಾಧಕ್ಕೆ ಅಂಜಿ ಕರ್ಣನನ್ನು ಜಾಹ್ನವಿ(ಗಂಗೆ)ಯ ಮಡಿಲಿಗೆ ಹಾಕುವ ಸಂದರ್ಭದಲ್ಲಿ “ತಾಯಿ ನಿನಗೆ ತಿಳಿದ ಹಾಗೆ(ಬಲ್ಲಂದದಲಿ) ಮಾಡು ನಿನ್ನ ಮಡಿಲಿನಲ್ಲಿಟ್ಟಿರುವೆ ಮುಳುಗಿಸುವುದಾದರೆ ಮುಳುಗಿಸು ತೇಲಿಸುವುದಾದರೆ ತೇಲಿಸಿಬಿಡು.”ಎಂದು ಕುಂತಿ ನಿಟ್ಟುಸಿರುಬಿಡುತ್ತಾಳೆ.

ಆದರೆ ಲೋಕಮಾತೆ ಗಂಗೆ ದಡ ಮುಟ್ಟಿಸುತ್ತಾಳೆ.

ಅಂತೆಯೇ ನಾಯಕನೂ ಕೂಡಾ ಇಲ್ಲಿಯವರೆಗೆ ಆದದ್ದೆಲ್ಲವೂ ನಿನ್ನದೇ ಇನ್ನು ಮುಂದೆಯೂ ನೀನೇ ದಾರಿ ಎಂದು ನಿಸ್ಸಾಹಯಕತೆಯನ್ನು ತೋಡಿಕೊಳ್ಳುತ್ತಾನೆ.

ನಾಯಕಿಯದೇನು ವಿಭಿನ್ನ ಸ್ಥಿತಿಯಲ್ಲ. ಕೆಲವೊಮ್ಮೆ ನಾವೇನು ಬೇಡದೇ ಎಲ್ಲವನ್ನೂ ಕೊಡುವ ದೇವ. ನಾವಿನ್ನೇನು ಎಲ್ಲವೂ ಸುಸೂತ್ರ ಎಂದುಕೊಳ್ಳುತ್ತಿದ್ದಂತೆ ಎಲ್ಲವನ್ನೂ ಕಿತ್ತುಕೊಂಡು ಖಾಲಿ ಮಾಡಿಬಿಡುತ್ತಾನೆ. ನಾಯಕಿಗೆ ಮಾಂಗಲ್ಯ ಭಾಗ್ಯ ದೊರೆತಿದ್ದೇ ಆಕಸ್ಮಿಕ. ದಿನೇ ದಿನೇ ನಾಯಕನ ಹತ್ತಿರವಾಗುತ್ತಾ ಹೋಗುತ್ತಾಳೆ. ಆ ಸಂಬಂಧ ಅನಿರೀಕ್ಷಿತವಾಗಿ ಘಟಿಸಿದ್ದರೂ ಅವನನ್ನು ಬಿಟ್ಟು ಇರಲಾರೆ ಎಂಬಷ್ಟರ ಮಟ್ಟಿಗೆ ಅವರೀರ್ವರ ಮಧ್ಯೆ ಭಾವಗಟ್ಟಿತನ ಎರ್ಪಟ್ಟಿರುತ್ತದೆ. ತತ್‌ಕ್ಷಣ ಬೇರ್ಪಡಿಸುವುದಕ್ಕೆ ದೇವರು ನಿಂತುಬಿಡುತ್ತಾನೆ. ಮೃಷ್ಟಾನ್ನ ಭೋಜನವನ್ನು ಹಸಿವನ್ನು ಇಟ್ಟು ನಾಲಗೆ ಕತ್ತರಿಸಿ ಹಲ್ಲುಗಳನ್ನೇ ಮುರಿದ ಹಾಗೆ. ಗಂಡನನ್ನು ಉಳಿಸಿಕೊಡೆಂದು ಪರಿಪರಿಯಿಂದ ನಾಯಕಿ “ಬೇಡದೆ ತಾಳಿಯ.…” ಸಾಲುಗಳಲ್ಲಿ ಕೇಳಿಕೊಳ್ಳುತ್ತಾಳೆ.

ಸಾವನ್ನುವುದಂತೂ ನಿಶ್ಚಿತ. ಇಷ್ಟು ದಿನವಂತೂ ನನಗೇನು ಕೊಡಲಿಲ್ಲ. ಕೊಟ್ಟ ಪರಿಸ್ಥಿತಿಗೆ ತಕ್ಕಂತೆ ಪಾತ್ರಧಾರಿಯಾದೆ. ಬದುಕಿಸುವುದಾದರೆ ಬದುಕಿಸು ಇಲ್ಲದಾದರೆ ಕೊನೆಯ ಪಕ್ಷ ಸಾವನ್ನು ಎದುರಿಸುವ ಅಚಲ ಮನಸ್ಸನ್ನು ಕೊಟ್ಟುಬಿಡು. ನಿನ್ನ ಪಾದದಲ್ಲಿ ಜಾಗ ಕೊಟ್ಟುಬಿಡು ಎಂಬುದಷ್ಟೆ ಮನುಜನ ಕೊನೆಯ ವಿನಂತಿ. “ನಿಶ್ಚಯ ಮನುಜಗೆ…” ಎಂಬ ಸಾಲುಗಳಲ್ಲಿ ಈ ವಿನಮ್ರ ವಿನಂತಿ ಮೂಡಿಬಂದಿದೆ.

“ದೀಪ ಗಾಳಿ ಹಡಗು ಕಡಲು” ಎಲ್ಲವೂ ಅವನದೇ ಕತ್ತಲು ಆವರಿಸದಂತೆ ಬದುಕು ಮುಳುಗದಂತೆ ಪ್ರಾರ್ಥಿಸುವುದಷ್ಟೆ ನಮ್ಮ ಪಾಲು. ಹರಿಶ್ಚಂದ್ರನನ್ನು ಸುಡುಗಾಡು ಕಾಯುವಂತೆ, ಚಂದ್ರಹಾಸ ಬೀದಿಯಲ್ಲಿ ಬೆಳೆಯುವಂತೆ, ಪಾಂಡವರು ಶ್ರೀರಾಮ ಚಂದ್ರನು ವನವಾಸ ಮಾಡುವ ಪರಿಸ್ಥಿತಿಗೆ ತಳ್ಳಿದ ಕಪಟ ನಾಟಕ ಸೂತ್ರಧಾರಿ ಅವನೇ. ನಾವೆಲ್ಲ ನಿಮಿತ್ತ ಮಾತ್ರ. ಹರಿಶ್ಚಂದ್ರ, ಚಂದ್ರಹಾಸ, ಪಾಂಡವರು, ಶ್ರೀ ರಾಮಚಂದ್ರ ಅಂತ ಸಂದಿಗ್ಧಗಳಲ್ಲೂ ಆದರ್ಶಗಳನ್ನು ಗಟ್ಟಿಯಾಗಿ ಹಿಡಿದ ಕಾರಣ ಇವತ್ತಿಗೂ ಅವರು ಮಹಾಪುರುಷರಾಗಿ ಮ‌ನುಕುಲದಿಂದ ನೆನೆಯಲ್ಪಡುತ್ತಾರೆ. ಆದರೆ ಕೆಲವೊಮ್ಮೆ ಸಂದಿಗ್ಧಗಳಲ್ಲದ ಕೆಲವು ಪರಿಸ್ಥಿತಿಗಳಲ್ಲಿ ಅಡ್ಡಹಾದಿ ಹಿಡಿದು ಅಂತ ಪರಿಸ್ಥಿತಿಗಳ ಮೇಲೆ ಆರೋಪಿಸಿ ಅನುಕಂಪಕ್ಕಾಗಿ

ನಾವು ಅರಸುತ್ತೇವೆ. ಅಂತ ಹಾಡನ್ನು ಮುಂದಿನ ವಾರ ನೋಡೋಣ.

ಹಿಂದಿನ ಅಂಕಣಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
1.ಮಗು ಅಜ್ಜ ಮತ್ತು ಬಾಹುಬಲಿ. ಮುಗ್ಧತೆ ಪ್ರಬುದ್ಧತೆ ಮತ್ತು ವೈರಾಗ್ಯ.

2.ಒಂದು ವಿಯೋಗಕ್ಕೆ ಹುಡುಗಿಯ ಆಂತರ್ಯದ ಸಿದ್ಧತೆ

3.ಸಯಾಮಿಯೋ, ಅವಳಿ ಜವಳಿಯೋ, ದೇಹ ಬೇರೆ ಆತ್ಮ ಬೇರೆಯೋ?

4.ಮೈಯೆಲ್ಲಾ ಚಂದ್ರನ ಗುರುತು ಹೆಸರೆಲ್ಲೋ ಹೋಗಿದೆ ಮರೆತು.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..