2439

ಅಣ್ಣಾವ್ರ ಚಿತ್ರಗಳಿಂದ ಕಲಿಯಬಹುದಾದ 5 ಜೀವನದ ಅಂಶಗಳು

  • By Guest Writer
  • Monday, April 24th, 2017
  • Things You Should Know

ಪ್ರತಿಯೊಬ್ಬ ಕನ್ನಡಿಗ ನೆನಪಿಡುವ ಪ್ರಮುಖ ದಿನಗಳು ಎರಡು:
ನವೆಂಬರ್ ಒಂದು, ಕನ್ನಡ ರಾಜ್ಯೋತ್ಸವ.
ಏಪ್ರಿಲ್ 24, ಕನ್ನಡ ರಾಜೋತ್ಸವ.
ಕನ್ನಡ ಸಿನಿಮಾಭಿಮಾನಿಗಳ ಮನದಲ್ಲಿ ರಾಜನಂತೆ ಮೆರೆದ ನಮ್ಮ ನಿಮ್ಮ ಮೆಚ್ಚಿನ ಡಾ. ರಾಜಕುಮಾರ್ ಅವರು ಹುಟ್ಟಿದ ದಿನ ಏಪ್ರಿಲ್ 24. ಈ ದಿನವನ್ನು ರಾಜೋತ್ಸವವೆಂದೇ ಕರೆಯಲಾಗುತ್ತದೆ ಕೂಡ. ಕೌಟುಂಬಿಕ, ಪೌರಾಣಿಕ, ಜೀವನ ಮೌಲ್ಯಗಳನ್ನು ಸಾರುವ ಚಿತ್ರಗಳನ್ನು ಮಾಡಿಕೊಂಡು ಬಂದ ಅವರು on screen ಮತ್ತು off screen ಸರಳ ಸಾಮಾನ್ಯನಂತೆ ಬದುಕಿದ ನೆನಪುಗಳು ಇನ್ನೂ ತಾಜಾ ಆಗಿ ಉಳಿದಿವೆ. ಅಂತಹ ಅವರ ಜೀವನ / ಸಿನಿಮಾಗಳಿಂದ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ವಿಷಯಗಳನ್ನು ಇಲ್ಲಿ‌ ನೀಡುತ್ತಿದ್ದೇವೆ.

1. ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು
ಛೇ, ನಾನು MBBS ಮಾಡಿ ಡಾಕ್ಟರ್ ಆಗಿದ್ದರೆ ಇವತ್ತು ಈ ರೀತಿ ಕಂಪ್ಯೂಟರ್ ಮುಂದೆ ಮಣ್ಣು ಹೊರುವ ಕೆಲಸ ತಪ್ಪುತ್ತಿತ್ತು,

ಊರಲ್ಲಿ ಆರಾಮಾಗಿ ಅಪ್ಪನ ಅಂಗಡಿ ನೋಡ್ಕೊಳ್ಳೋದು ಬಿಟ್ಟು ಬಂದೆ ಏನೋ ಮಹಾ ಸಾಧಿಸ್ತೀನಿ ಅಂತ, ಯಾರಿಗೆ ಬೇಕಪ್ಪಾ ಈ ರೋಧನೆ

ಈ ರೀತಿ ಹಲವು ಬಾರಿ ನಾವು‌ ನಮ್ಮ ಜೀವನ ರಿವ್ಯೂ ಮಾಡಿಕೊಂಡಿರುತ್ತೇವೆ. ತಮಾಷೆ ಏನಪ್ಪಾ ಅಂದರೆ, ನಾವು ಅವನ ಜೀವನ ಆರಾಮ್, ಇವಳ ಜೀವನ ಸೊಂಪು ಎಂದು ಯೋಚಿಸುವ ಸೈಕಲ್ ಗ್ಯಾಪಲ್ಲಿ ನಮ್ಮ ಜೀವನದಂತೆ ಆದರೆ ಸಾಕಪ್ಪಾ ಎಂದು ಹಲವರು ದೇವರ ಬಳಿ‌ ಬೇಡಿರುತ್ತಾರೆ. ವಿಷಯ ಏನಪ್ಪಾ ಎಂದರೆ ಎಲ್ಲರಿಗೂ ತನ್ನ ಜೀವನ ಹೀಗಿರಬೇಕು, ಹೀಗಾಗಬೇಕು ಎಂಬ ಕನಸಿರುತ್ತದೆ. ಅಂತಹ ಕನಸು‌ ನನಸಾಗಲು ದಿನ, ತಿಂಗಳು, ವರ್ಷಗಳು ತಡವಾಗಬಹುದು. ಧೃತಿಗೆಡದೆ ಆ ಗುರಿಯ ಕಡೆ ನೆಡೆಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಜೀವನದಿಂದ ಏನನ್ನೂ ಬಯಸದೆ ಅದನ್ನು ಒಪ್ಪಿಕೊಳ್ಳಬೇಕು. ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ, ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ, ಹಾಯಾಗಿರುವೆ ರಾಘವೇಂದ್ರ ಹಾಡಿನಂತೆ ಲೈಫು ಬಂದ ಹಾಗೆ ಅಪ್ಪಿಕೊಳ್ಳುವವರು ನಾವಾಗಬೇಕು.

2. ಅಲ್ಲಾ, ಅಲ್ಲಾ, ನೀನೇ ಎಲ್ಲಾ, ನಿನ್ನನ್ನು ಬಿಟ್ಟರೆ ಗತಿ ಯಾರಿಲ್ಲ, ನಿನ್ನದೇ ಜಗವೆಲ್ಲಾ

ದೇವನಿರುವನು, ನಮ್ಮೊಳಗೆ ಇರುವನು ಎಂದು __ ಹೇಳಿದ್ದಾರೆ. ಎಲ್ಲೋ ಹುಡುಕಿದೆ, ಇಲ್ಲದ ದೇವರ ಕಲ್ಲು ಮಣ್ಣಿನ ಗುಡಿಯೊಳಗೆ, ಇಲ್ಲೇ ಇರುವ ನಮ್ಮ ನಡುವೆ __ ಎಂದು __ ಹೇಳಿದ್ದಾರೆ. The thing is, ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರೆದರೂ ಆಧ್ಯಾತ್ಮಿಕ ಧ್ಯಾನ ನಮ್ಮನ್ನು ಮಾನಸಿಕವಾಗಿ ಶಕ್ತನಾಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಭಜರಂಗಿ, ಕಾಳಿಕಾ ದೇವಿ, ಮಾರಿಕಾಂಬಾ, ವೆಂಕಟೇಶ್ವರ, ಚೌಡೇಶ್ವರಿ, ಮಂಜುನಾಥ, ಅಲ್ಲಾಹು, ಜೀಸಸ್, ಮಹಾವೀರ, ಹೀಗೆ ಹಲವು ಹೆಸರುಗಳಿಂದ ನಾವು ಅವರನ್ನು ಕರೆದರೂ, ಎಲ್ಲರ ತತ್ವ, ಆದರ್ಶಗಳು ಒಂದೇ. ಆ ಭಗವಂತ ಭೂಲೋಕ ಮಾಡಿದ, ನಾವು ಆ ದೇವರ ಹೆಸರಲ್ಲಿ ಜಾತಿ, ಧರ್ಮ, ದೇಗುಲ – ಮಸೀದಿ‌ – ಬಸದಿಗಳನ್ನು ಮಾಡಿಕೊಂಡೆವು. ಎಲ್ಲಾ ಧರ್ಮಗಳಿಗೂ ತನ್ನದೇ ಆದ ಆಚರಣೆಗಳಿದ್ದರೂ, ಎಲ್ಲವೂ ಸಾರುವ ಮಂತ್ರಸಾರವಂದೇ. ಅಲ್ಲಾ, ಅಲ್ಲಾ, ನೀನೇ ಎಲ್ಲಾ, ನಿನ್ನನು ಬಿಟ್ಟರೆ ಗತಿ ಯಾರಿಲ್ಲ, ನಿನ್ನದೇ ಜಗವೆಲ್ಲಾ, ಹಾಡಿನಲ್ಲಿ ಹೇಳಿರುವಂತೆ ದೇವರು ನಮ್ಮನ್ನು ಮಾಡಿದ, ನಾವು ಧರ್ಮವನ್ನು ಮಾಡಿಕೊಂಡೆವು ಎಂಬ ವಿಷಯ ಅರ್ಥವಾದಾಗ ಈ ರೀತಿಯ ಧರ್ಮ ಕಲಹಗಳು, ಯುದ್ಧಗಳು ಇರದೇ ಎಲ್ಲರೂ ಶಾಂತಿಯಿಂದ ಬಾಳಬಹುದು.

3. ಗುಟ್ಟೊಂದು ಹೇಳುವೆ, ಪುಟಾಣಿ ಮಕ್ಕಳೇ

ದುಡ್ಡು ಮಾಡುವ ದಾರಿಗಳು ಮುಖ್ಯವಾಗಿ ಎರಡು: ವ್ಯಾಪಾರ ಮತ್ತು ಉದ್ಯೋಗ. ಎರಡಕ್ಕೂ ತನ್ನದೇ ಆದ ಪ್ರಯೋಜನ, limitations ಎರಡೂ ಇವೆ. ನಮ್ಮ ದುಡಿಮೆಯ 50% ಹಣ, ಊಟ ಮತ್ತು ವಸತಿ, 30% ಇತರ ಮತ್ತು ಪುನರಾವರ್ತನೆಯಾಗದ, ಆಕಸ್ಮಿಕ, ಒನ್ ಟೈಮ್ ಖರ್ಚುಗಳು, 20% ಉಳಿತಾಯ ಮಾಡಬೇಕು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. 50, 30 and 20 ರೂಲ್ ಎಂದು ಹೇಳಲಾಗುತ್ತದೆ. ಆ‌ ಕಾಲದಲ್ಲಿ ‘ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ’ ಎಂಬ ಮಾತಿತ್ತು. ಮತ್ತು ಆಗಿನ ಕಾಲವೂ ಈಗಿನಷ್ಟು ಕಲುಷಿತವಾಗಿರಲಿಲ್ಲ. ಈಗ ಎಡಗೈ ಬಲಗೈಯನ್ನು ನಂಬದ ಪರಿಸ್ಥಿತಿ ಉಂಟಾಗಿದೆ ಎನ್ನಲಡ್ಡಿಯಿಲ್ಲ. ಎಲ್ಲಾ ಕಾಲಕ್ಕೂ ಸಲ್ಲುವ ಮಾತೆಂದರೆ ‘ಒಳ್ಳೆಯದು ಮಾಡು ಮತ್ತು ಮರೆತು ಬಿಡು’ ಎಂಬ ಸಾಲು. ಜಾಸ್ತಿ ಅಲ್ಲದಿದ್ದರೂ ನಿಮ್ಮ ದುಡಿಮೆಯಿಂದ ದಿನಕ್ಕೆ ₹10 ನೀಡಿದರೂ ಶಾಲಾ ಹುಡುಗರ ಮಧ್ಯಾಹ್ನದ ಊಟಕ್ಕೆ, ವೃದ್ಧಾಶ್ರಮಕ್ಕೆ ಅಥವಾ ಇತರ charity ಕೆಲಸಕ್ಕೆ ಸಹಾಯವಾಗುತ್ತದೆ. ಆದರೆ ಇದು ಅತಿ ಕೂಡ ಆಗಬಾರದು, ಇದೇ ವಿಷಯದ ಕುರಿತು ಬಾಬಾ ಅಮ್ಟೆಯವರು ಹೇಳಿದ್ದಾರೆ, work builds, charity destroys ಎಂದು.

4. ಒಲವಿನ ಪೂಜೆಗೆ ಒಲವೇ ಮಂದಾರ
ಮಾನವ ಜನ್ಮ ಪ್ರಾಣಿಗಳಿಗಿಂತ ತುಸು ಜಾಸ್ತಿಯೇ complicated. ಸೋಮವಾರದಿಂದ ಶುಕ್ರವಾರದವರೆಗೆ ದುಡಿದು, 1ನೇ ತಾರೀಖಿನ ಸಂಬಳಕ್ಕೆ ಕಾಯುತ್ತಾ ಬದುಕು ಸಾಗಿಸುತ್ತಿರುವ ಈ ಟೈಮಲ್ಲಿ ‘ನಗುತಾ ನಗುತಾ ಬಾಳು ನೀನು, ನೂರು ವರುಷ’ ಎಂದು ಹಾರೈಸಿದರೆ ನಗುತಾ ಬಾಳು ಅಂದಿದ್ದಕ್ಕಿಂತ ನೂರು ವರ್ಷ ಬದುಕಬೇಕಾ, ಈಗಲೇ ಸಾಕಾಗಿ ಹೋಗಿದೆ ಎನ್ನುವವರೇ ಜಾಸ್ತಿ. ಅಚಾನಕ್ ಆಗಿ‌ propone ಆಗುವ deadline ಗಳು, client ಜೊತೆ ಕಿರಿಕ್ಕು, ಬಾಸ್ ಇಂದ ಬೈಗುಳ, ಇವೆಲ್ಲದರಿಂದ ರೋಸಿ ಹೋಗಿ ಹಿಮಾಲಯಕ್ಕೆ ಹೋಗಿ ಕುಳಿತುಬಿಡೋಣ ಎಂದು ಯಾರಿಗೆ ಅನಿಸಿಲ್ಲ ಹೇಳಿ. Let me sleep ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ IIT ಹುಡುಗನಿಗೆ ಆಗಿರಬಹುದಾದ ಖಿನ್ನತೆಯನ್ನು ನಾವು ಅಂದಾಜಿಸಬಹುದಷ್ಟೇ. ಇಂತಹ ಸನ್ನಿವೇಶಗಳಲ್ಲಿ ಪ್ರೀತಿ ಖಿನ್ನತೆ ದೂರ ಮಾಡುವ, ಜೀವನದಲ್ಲಿ ಹೊಸ ಉತ್ಸಾಹ ತುಂಬುವ driving force ಆಗಬಲ್ಲದು. ತಂದೆ – ತಾಯಿ, ಒಡಹುಟ್ಟಿದವರು, ಫ್ರೆಂಡ್ಸು, ಪ್ರಿಯಕರ / ಪ್ರಿಯತಮೆ, ಹೆಂಡತಿ ಹೀಗೆ ಯಾವುದಾದರೂ ಒಂದು ರೂಪದಲ್ಲಿ ನಮ್ಮನ್ನು ಬೆಂಬಲಿಸುವವರು ಸದಾ ನಮ್ಮೊಂದಿಗಿದ್ದರೆ ಸಾಕು. ಮತ್ತೆ ಇದಕ್ಕೆ ಜಾಸ್ತಿ ಹೆಚ್ಚೇನೂ ಬೇಡ, ಯಾಕೆಂದರೆ ‘ಒಲವಿನ‌ ಪೂಜೆಗೆ, ಒಲವೇ ಮಂದಾರ, ಒಲವೇ ಬದುಕಿನ ಮಂದಾರ’

5. ಜೇನಿನ ಹೊಳೆಯೋ, ಹಾಲಿನ ಮಳೆಯೋ

ಈಗ ಏನೋ ಬೆಂಗಳೂರಿನಲ್ಲಿ ಇದ್ದೀವಿ, ಚಾಟ್ಸ್ ಅಂಗಡಿಯಲ್ಲಿ “ಭಾಯ್ ಏಕ್ ಸಮೋಸ, ದೋ ಚಾಯ್” ಎಂದುಕೊಂಡು ಆರಾಮಾಗಿ ಇರ್ತೀವಿ. ಆದರೆ ನಮ್ಮ ನಾಡನ್ನು, ನಮ್ಮ ಭಾಷೆಯನ್ನು ನಾವು ಎಷ್ಟು ಮಿಸ್ ಮಾಡಿಕೊಳ್ಳಬಹುದು ಎಂದು ಕೆಲಸದ‌ ನಿಮಿತ್ತ ಪುಣೆ, ಮುಂಬೈ, ಚೆನ್ನೈ, ಅಮೆರಿಕ, ಆಸ್ಟ್ರೇಲಿಯಾ, ಯೂರೋಪ್ ಹೋದವರನ್ನೇ ಕೇಳಬೇಕು. ಒಂದು ಭಾಷೆಗೆ ಇತರ ಭಾಷೆಗಳಿಂದ ಪದಗಳ ಎರವಲು – ಕೊಡುಗೆ ಸಹಜ. ಹಾಲು-ಪಾಲು, ಬಿದಾಯಿ-ವಿದಾಯ ಈ ಪದಗಳ ಹಾಗೆ ಹಲವು ಉದಾಹರಣೆಗಳು ನಿಮಗೆ ಸಿಗುತ್ತವೆ. ಕಾಲ ಬದಲಾಗಿದೆ, ಹಾಗೆಯೇ ನಮ್ಮ ಭಾಷೆಯನ್ನು ಬದಲಾಗುತ್ತಿರುವ ಸಾಂಸ್ಕೃತಿಕ ತಂತ್ರಜ್ಞಾನದ ಅಗತ್ಯಗಳಿಗೆ ತಕ್ಕಂತೆ ಕೊಡುಗೆ ನೀಡುವ ಕರ್ತವ್ಯ ಈಗ ನಮ್ಮ ಮೇಲಿದೆ ಎಂದು ಪೂರ್ಣಚಂದ್ರ ತೇಜಸ್ವಿಯವರ ಮಾತು ಅಂದಿಗಿಂತಲೂ ಇಂದೇ ಹೆಚ್ಚು ಪ್ರಸ್ತುತ. ಹಳಗನ್ನಡ, ನಡುಗನ್ನಡ, ಹೊಸಗನ್ನಡಷ ನಂತರ ಈಗ ಹ್ಯಾಷ್ ಟ್ಯಾಗ್ ಟೆಕ್ ಕನ್ನಡ #TechKannada ವಾಗಿ ಮುಂದುವರೆಯಲಿ. ಅದರ ಜವಾಬ್ದಾರಿ ಈಗ ನಮ್ಮ ಮೇಲಿದೆ. ಅದರ ಕುರಿತು ನಾವು ನಿರತರಾಗಬೇಕು.

ಡಾ. ರಾಜ್ ಅವರ ಜನುಮದಿನದ ಪ್ರಯುಕ್ತ ಅವರ ಚಿತ್ರಗಳ ಹಾಡಿನ ಸಾಲುಗಳ ಹಿನ್ನೆಲೆಯಲ್ಲಿ ಕೆಲವು ವಿಷಯಗಳ ಬಗ್ಗೆ ಇಲ್ಲಿ ಮಾತನಾಡಿದ್ದೇವೆ. ಇಷ್ಟ ಅದರೆ ಷೇರ್ ಮಾಡಿ. ಧನ್ಯವಾದಗಳು.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..