819

ಪ್ರೇಮಿಗಳ ದಿನದಂದು.. ಕಲ್ಪನೆಯ ಪ್ರೇಮಿಗೆ ಕಾತರದ ಕಾಗದ….

ಮುಸ್ಸಂಜೆಯ ಮುಗಿಲೆ ಕೇಳಿ ಬಾ ನನ್ನವಳ
ಹೇಗಿರುವೆ ಎಂದು..?
ಮಾಮರದ ಕೋಗಿಲೆ ಹೇಳಿ ಬಾ ಅವಳಿಗೆ
ಕಾದಿರುವೆ ನಾನಿಲ್ಲಿ ನೊಂದು….
ತಂಪೆರೆವ ಓ ತಂಗಾಳಿ ತಿಳಿಸಿ ಬಾ ಅವಳಿಗೆ
ನನ್ನೆದೆಯ ಆ ನೂರು ಕನಸುಗಳ ತಾತ್ಪರ್ಯ……
ಓ ನನ್ನ ಸಂಗಾತಿ ಬಳಸಿ ಬಾ ಬಳಿಗೆ
ಹರಸಿ ಹಸಿರಾಗಿಸು ನನ್ನ ಅಂತರ್ಯ…!!!

ಸ್ವರವಿಲ್ಲದ ಶ್ವಾಸದೊಳು ಸ್ವವಿಶ್ರುತಿಯ
ನುಡಿಸು ಬಾ….
ಮಡಿದ ಮನಸ್ಸಿನೊಳು ಮೊಂಬತ್ತಿಯ
ಹೊತ್ತಿಸು ಬಾ….
ಮಂಜಾದಾ ನಯನದೊಳು ಸವಿಗನಸ
ಹೊದಿಸು ಬಾ….
ಬರಡಾದ ಹ್ರದಯದೊಳು ಸವಿಪ್ರೀತಿ
ಹರಿಸು ಬಾ……!!!!

ಮಲಗಿದ್ದ ಭೂವಿಗೆ ರವಿ ತರುವ ಚಿಲುಮೆ
ನೀನಾಗು ನನ್ನಮನದೊಳಗೆ…..
ದಣಿದಿದ್ದ ಧರೆಗೆ ಶಶಿ ತರುವ ಪೌರ್ಣಿಮೆ
ನೀನಾಗು ನನ್ನಹ್ರದಯದೊಳಗೆ…..
ಬಳಲಿದ್ದ ಇಳೆಗೆ ಮಳೆ ತರುವ ಒಲುಮೆ
ನೀನಾಗು ನನ್ನದೇಹದೊಳಗೆ……
ಅರಿವಿಲ್ಲದೆ ಕಡೆದಿರಲು ಒಡಲೊಳಗೆ ನಿನ್ನ ಪ್ರತಿಮೆ
ಜೀವಕ್ಕೆ ಜೀವವಾಗು ನೀ ನನ್ನೊಳಗೆ…..!!!

ಪಾಲ್ಗಡಲ ಸೆಲೆವೊಳು ನೈದಿಲೆಯ ನಡುವಲಿ
ನಿನ್ನ ಕುಳ್ಳಿರಿಸಿ ಕಾಲ್ತೊಳಿಸುವಾಸೆ…..
ಚುಮುಗುಡುವ ಚಳಿಯೊಳು ಇಬ್ಬನಿಯ ಚಿಮುಕಿಸಿ
ನಿ ನುಲಿವ ಅಂದವ ಕಣ್ತುಂಬಿಕೊಳ್ಳುವಾಸೆ….
ಮುಂಗಾರಿನ ಶುರುವಿನಲಿ ಮೊಡಗಳ ನಡುವಿನಲಿ
ಬಾನಂಗಲದೊಳು ಕೈಹಿಡಿದು ನೆಡೆಸುವಾಸೆ…..
ಓ ನನ್ನ ನಲ್ಲೆ ದಾಟಿ ಬಾ ಎಲ್ಲಾ ಎಲ್ಲೆ
ಪ್ರೀತಿಸಿ ಪೂರೈಸು ನನ್ನೆಲ್ಲಾ ಆಸೆ….!!!

ಎಲ್ಲಿರುವೆಯೊ ತಿಳಿದಿಲ್ಲಾ,ನಿನ್ಬಗೆಗಿನ ಅರಿವಿಲ್ಲಾ
ಪ್ರೇಮದ ಗುಂಗಿನಲಿ,ಮುಳುಗಿರಲು ಜಗವೆಲ್ಲಾ..
ಕಾಣದ ಪ್ರೀತಿಗೆ ಕಲ್ಪನೆಯ ಪ್ರೇಮಿಗೆ
ಕಾತರದ ಕಾಗದ,ಸುಮ್ಮನೆ ಹಾಗೆ…!!

by ಶಿವರಾಜ್ ಶೆಟ್ಟಿ

ನೀವೂ ಕೂಡ ನಿಮ್ಮ ಬರಹಗಳನ್ನು ನಮಗೆ ಕಳಿಸಬಹುದು . ನಿಮ್ಮ ಬರಹಗಳನ್ನು localkebal@gmail.com ಕಳಿಸಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..