5208

ಅಮ್ಮಂಗ್ ಹೇಳ್ತೀನಿ ಇರು

pramod-authorPramod ಮರವಂತೆ
ಭಾರತ ಮಾತೆ ಎಂದಿನಂತೆ ಮನೆಯ ಎದುರಿಗೆ ಚೆಲ್ಲಿರುವ ಮಲ್ಲಿಗೆಯ ಬಳ್ಳಿಯಲ್ಲಿ ಮಲ್ಲಿಗೆಯ ಮೊಗ್ಗನ್ನು ಕೀಳುತ್ತಾ ಭಕ್ತಿ ಗೀತೆಯೊಂದನ್ನು ಗುನುಗುತ್ತಿದ್ದಾಳೆ. ತಕ್ಷಣ ಪಕ್ಕದ ಮನೆಯಿಂದ ಬಾಂಬಿನ ಸದ್ದು ಕೇಳುವುದು . ತಿರುಗಿ ನೋಡಿದರೆ ಕಂಪೌಂಡಿನ ಆಚೆ ಪಾಕಿಸ್ತಾನ ಭಾರತಾಂಬೆಯನ್ನು ಗುರಾಯಿಸುತ್ತಿರುವುದು. ಭಾರತಾಂಬೆ ಕ್ಯಾರೇ ಮಾಡದೆ ತನ್ನ ಕೆಲಸವನ್ನು ಮುಂದುವರಿಸುವಳು.ಈ ಬಾರಿ ಭಕ್ತಿಗೀತೆಯನ್ನು ಬಿಟ್ಟು ದೇಶ ಭಕ್ತಿ ಗೀತೆಯನ್ನು ಗುನುಗಲು ಆರಂಭಿಸುವಳು.ಮೊದಲಿಗಿಂತ ಸ್ವಲ್ಪ ಜೋರಾಗೆ,ಪಾಕಿಸ್ತಾನದ ಪಕ್ಕದ ಅಫಘಾನಿಸ್ತಾನಕ್ಕೂ ಕೇಳುವಂತೆ. ಸೆರಗ ತುಂಬಾ ಹೂವು ತುಂಬಿಕೊಂಡು ಮನೆಯ ಒಳಗೆ ಹೊರಡುವ ಭಾರತಾಂಬೆ ತಕ್ಷಣ ಹಿಂದೆ ತಿರುಗಿ ನೋಡಿದರೆ ,ಕನ್ನಡಾಂಬೆ ನಿಂತಿದ್ದಾಳೆ .ಕನ್ನಡಾಂಭೆ ಸುಮ್ಮನೆ ಭಾರತಾಂಭೆಯ ಮುಖವನ್ನೇ ನೋಡುತ್ತಾ ನಿಂತಿರುವಳು.
ಭಾರತಾಂಭೆ: ಮಗಳೇ ….. ಇದೇನು ಸಡನ್ ಆಗಿ ಬಂದ್ಬಿಟ್ಟಿದೀಯ ?
ಕನ್ನಡಾಂಭೆ: ಯಾಕಮ್ಮ ಬರಬಾರ್ದಾ ?
ಭಾರತಾಂಭೆ:ಹಾಗಲ್ಲಮ್ಮ ಯಾಕ್ ಕೇಳ್ದೆ ಅಂದ್ರೆ ಯಾವತ್ತೂ ನೀನ್ ಹೀಗೆ ಸಡನ್ ಆಗಿ ಬಂದವಳಲ್ಲ, ಅದು ಅಲ್ದೆ ನಿನ್ನ ಮುಖದಲ್ಲಿ ಕಾಣತಾ ಇದ್ದಿದ್ ಆ ಹೊಳಪು ಇವತ್ತ್ ಇಲ್ಲ. ನಿನ್ನ ಕಣ್ಣುಗಳು ಮಾತ್ರ ಹೊಳಿತಾ ಇದೆ ಆದ್ರೆ ಅದು ನಿನ್ನ ಕಣ್ಣಿನ ಕಾಂತಿಯಿಂದಲ್ಲ .ಕಣ್ಣೀರಿನಿಂದ. (ಕನ್ನಡಾಂಭೆ ತನ್ನ ಕಣ್ಣೀರನ್ನು ಒರೆಸಿಕೊಳ್ಳುವಳು)…ಸರಿ ಅದೇನೇ ಇರ್ಲಿ ಒಳಗ್ ಬಾ ಕೂತುಕೊಂಡು ಮಾತಾಡೋಣ.
(ಇಬ್ಬರು ಮನೆಯ ಒಳಗೆ ಬಂದು ಕುಳಿತುಕೊಳ್ಳುವರು)
ಭಾರತಾಂಭೆ: ಹೇಳು ಮಗಳೇ ಏನಾಯ್ತು ಯಾಕ್ ಕಣ್ಣಿರು ? ಏನ್ ಪ್ರಾಬಲಮ್ಮು?(ತಕ್ಷಣ ಏನೋ ನೆನಪಾಗಿ) ಅಯ್ಯೋ ನನ್ ಬುದ್ದಿಗೆ…ನಿಂಗೆ ಕುಡಿಯೋಕೆ ನೀರ್ ಬೇಕಾ ಅಂತ ಕೇಳೋದನ್ನೇ ಮರ್ತೆ ನೋಡು. ಇರು ಪುಟ್ಟ ಕುಡಿಯೋದಕ್ಕೆ ನೀರ್ ತಗೊಂಡ್ ಬರ್ತಿನಿ .
ಕನ್ನಡಾಂಭೆ: ಇರಮ್ಮ ಬೇಡ… ದಾಹ ನನಗೆನು ಹೊಸತೇನಲ್ಲ. ಬಾ ಕುತ್ಕೋ .
ಭಾರತಾಂಭೆ: ಏನಾಯ್ತು ಮಗಳೆ ? ಮತ್ತೆ ಕಾವೇರಿ ಪ್ರಾಬ್ಲಮ್ಮಾ?
ಕನ್ನಡಾಂಭೆ: ಹುಂ …. ಇಲ್ಲಿ ನನಗೆ ಕುಡಿಯೋದಕ್ಕೆ ನೀರಿಲ್ಲ, ಅಲ್ಲಿ ಅವ್ರಿಗೆ ಬೆಳೆ ಬೆಳೆಯೋದಕ್ಕೆ ನೀರ್ ಬೇಕಂತೆ. ನೀನೆ ಹೇಳು ಅವ್ರಿಗ್ ನೀರ್ ಕೊಟ್ರೆ ನಾನ್ ಏನ್ ಕುಡಿಲಿ?ಈಗ ಅಲ್ರೇಡಿ ಕಾವೇರಿ ನನ್ ಕೈ ತಪ್ಪಿ ತಮಿಳ್ ನಾಡಿಗೆ ಹರಿದ್ ಹೋಗಿ ಬಿಟ್ಟಿದಾಳಮ್ಮ . ಇದೆಲದಕ್ಕೂ ಕಾರಣ ಅಮ್ಮಾನೆ .
ಭಾರತಾಂಭೆ: ಅಯ್ಯೋ ನಾನೇನ್ ಮಾಡದೆ?
ಕನ್ನಡಾಂಭೆ: ಅಯ್ಯೋ ನೀನಲ್ಲಮ್ಮ .. ಅಲ್ಲಿ ತಮಿಳ್ ನಾಡಲ್ಲೊಬ್ಬಳು ಅಮ್ಮ ಇದ್ದಾಳಲ್ಲ ಅವ್ಳು . ಅದೇ… ಅಮ್ಮ ಇಡ್ಲಿ,ಅಮ್ಮ ದೋಸೆ, ಅಮ್ಮ ಸೀರೆ ಅಮ್ಮ ಮೊಬೈಲು ಕೇಳಿಲ್ವಾ?
ಭಾರತಾಂಭೆ : ಒಹ್ ಆ ಅಮ್ಮನಾ?
ಕನ್ನಡಾಂಭೆ : ಹುಂ ಅವಳೇ .ಅವಳೇ ಇದಕೆಲ್ಲಾ ಕಾರಣ.
ಭಾರತಾಂಭೆ: ಅಲ್ಲ ಯಾವಾಗ್ಲೂ ನಿಂಗೆ ಯಾಕ್ ಈ ತರ ಅನ್ಯಾಯ ಆಗತ್ತೆ ಅಂತ ?ಅಲ್ಲ ನಿನ್ ಸರ್ಕಾರ ಏನ್ ಮಾಡ್ತಾ ಇದೆ ?ಸಿ ಎಂ ಏನ್ ಮಾಡ್ತಾ ಇದಾರೆ ?
ಕನ್ನಡಾಂಭೆ: ಅಮ್ಮ ….ಮನೇಲಿ ನಿಂತ್ ಹೋಗಿರೋ ಗಡಿಯಾರ ಏನ್ ಮಾಡತ್ತೆ?
ಭಾರತಾಂಭೆ: ಇನ್ನೇನ್ ಮಾಡತ್ತೆ ಹೇಳ್ತಾ ಇರೋ ಒಂದ್ ಮಾತನ್ನೇ ಮತ್ತೆ ಮತ್ತೆ ಹೇಳತ್ತೇ,ಅಷ್ಟೇ. ಆದ್ರೆ ಏನು ಕೆಲಸ ಮಾಡಲ್ಲ .
ಕನ್ನಡಾಂಭೆ: ಇಲ್ಲೂ ಹಾಗೆ, ಸರ್ಕಾರ ಇದೆ,ಸುಮ್ಮನೆ . ಸಿಎಂ ಇದಾರಂತೆ. ಆಗಾಗ ಟೀವಿಲಿ ನೋಡಿದೀನಿ,ನಿದ್ರೆ ಮಾಡೋದನ್ನ.ಕಾವೇರಿ ಗಲಾಟೆ ಇಷ್ಟ್ ದೊಡ್ಡದಾಗಿದ್ರು ಯಾರು ತಲೆ ಕೆಡಸ್ಕೊತಾ ಇಲ್ಲ.ನನ್ನ ಕನ್ನಡಿಗರು ಮಾತ್ರ ಪ್ರತಿಭಟಿಸ್ತಾ ಇದಾರೆ. ಯಾಕ್ ಯಾವಾಗ್ಲೂ ನನಗೆ ಹೀಗಾಗತ್ತೆ ಅಂತ ಗೊತ್ತಾಗ್ತಾ ಇಲ್ಲಮ್ಮ. ಅಲ್ಲ ನಾನ್ ಮಾಡಿರೋ ಅಂತ ದೊಡ್ಡ್ ತಪ್ಪಾದ್ರೂ ಏನು ?
ಭಾರತಾಂಭೆ: ಮಾಡಿದೀಯ ಮಗಳೇ ದೊಡ್ಡ ತಪ್ಪನ್ನೇ ಮಾಡಿದೀಯ.
ಕನ್ನಡಾಂಭೆ: ದೊಡ್ಡ್ ತಪ್ಪಾ? ನಾನಾ?
ಭಾರತಾಂಭೆ: ಪಾಪ ಹೋಗ್ಲಿ ಎಷ್ಟೇ ಆದ್ರು ನಮ್ಮವ್ರು ಸ್ವಲ್ಪ ದಿನ ಇದ್ದು ತಮ್ ಹೊಟ್ಟೆ ತುಂಬಸ್ಕೊಂಡ್ ಹೋಗತಾರೆ ಅಂತ ಉಸಿರಾಡೋಕೆ ಗಾಳಿ,ಕುಡಿಯೋದಕ್ಕೆ ನೀರು, ತಿನ್ನೋಕೆ ಅನ್ನ ,ಶೊಕಿ ಮಾಡಿಕೊಂಡ್ ಐಷಾರಾಮಿ ಜೀವನ ಸಾಗಿಸೋಕೆ ಒಳ್ಳೆ ಕೆಲಸ ಎಲ್ಲ ಕೋಟ್ಯಲ ಅದೇ ನೀನ್ ಮಾಡಿರೋ ದೊಡ್ಡ್ ತಪ್ಪು. ನೀನೇನೋ ಎಲ್ಲಾನು ಕೊಟ್ಟೆ ಆದ್ರೆ ತಗೊಂಡೋರು ಏನ್ ಮಾಡಿದ್ರು?ನೆಂಟ್ರ್ ತರ ಬಂದ್ರು ಮನೆಯವರ ತರಾ ಇಲ್ಲೇ ಸೆಟಲ್ ಆದ್ರು .ಮನೇನ ಗಲೀಜ್ ಮಾಡಿ ಹಾಳ್ ಮಾಡ್ ಬಿಟ್ರು. ಅವರುಗಳು ಇಲ್ಲಿ ಬಂದಿದಿದ್ದು ತಪ್ಪು ಅಂತ ನಾನ್ ಹೇಳ್ತಾ ಇಲ್ಲ.ಆದ್ರೆ ನಿನ್ ಜಾಗದಲ್ಲಿ ಇದ್ಮೇಲೆ ನಿನಗೆ ,ನಿನ್ನ ಕನ್ನಡಿಗರಿಗೆ ಅನುಸರಿಸಿಕೊಂಡು,ನಿನ್ನ ಭಾಷೆಯನ್ನ ಕಲಿತು ಮಾತನಾಡುವ ಪ್ರಯತ್ನವನ್ನಾದರೂ ಮಾಡಿದ್ರಾ?ಉಹುಂ ಇಲ್ಲ . ಒಬ್ರು “ಎನ್ನಡ” ಅಂತಾರೆ ಇನ್ನೊಬ್ರು “ಎಕ್ಕಡ” ಅಂತಾರೆ, ಉಳಿದವರು ” ಸಾಲಾ ಸಾಲ… ಮಾ ಬೆಹನ್ ” ಅಂತ ನಿನ್ನ ನೆಲದಲ್ಲಿ ವಡಾಪಾವ್ ತಿಂದುಕೊಂಡು ಆರಾಮಾಗ್ ಇದಾರೆ. ನೀನ್ ಮಾತ್ರ ಎಲ್ಲಾನು ಸಹಿಸಿಕೊಂಡೆ ಇದ್ದೆ.ಈಗಲೂ ಸಹಿಸ್ಕೊಂಡೆ ಹೋಗ್ತಾ ಇದಿಯ.
ಕನ್ನಡಾಂಭೆ: ಆದ್ರೆ ನಾನ್ ಏನ್ ಮಾಡ್ಲಿ ಅಮ್ಮ ?ಈ ವಿಚಾರದಲ್ಲಿ ನಾನು ಅಸಹಾಯಕಳು.
ಭಾರತಾಂಭೆ: ನೀನು ಅಸಹಾಯಕಳಲ್ಲ . ನಿನ್ನಲ್ಲಿ ಅಪಾರವಾದ ಶಕ್ತಿಯಿದೆ ಮಗಳೆ . ಆದ್ರೆ ನಿನ್ನ ಸಹನೆ ನಿನನ್ನ ತಡೆದು ನಿಲ್ಲಿಸಿದೆ ಅಷ್ಟೆ. ಮೊದಲನೇದಾಗಿ ನೀನು ಇವ್ರನ್ನೆಲ್ಲಾ ನಿನ್ನ ಮನೆಯ ಒಳಗೆ ಸೇರಿಸಿದ್ದೆ ನೀನು ಮಾಡಿದ ದೊಡ್ಡ ತಪ್ಪು. ನಿನ್ನ ಮುಗ್ಧತೆ ಅವರ ಅಸ್ತ್ರ ಆಗಿದೆ ಅಷ್ಟೆ. ಮಗಳೇ ಇನ್ನಾದ್ರೂ ಅರ್ಥ ಮಾಡ್ಕೋ .ನಿನ್ನನ್ನ ನೀನು ಸ್ಟ್ರಾ0ಗ್ ಮಾಡ್ಕೊ. ಇದು ನೀನು ತಿರುಗಿ ಬೀಳ್ಬೇಕಾಗಿರೋ ಟೈಮು.
ಕನ್ನಡಾಂಭೆ: ಏನ್ ಮಾಡ್ಲಿ ಅಮ್ಮ ಈಗ ಅವ್ರನ್ನೆಲ್ಲಾ ಸಡನ್ ಆಗಿ ಬಿಟ್ ಹೋಗಿ ಅಂತ ಕಳಸೋದಕ್ಕಾಗತ್ತಾ?ನಾನ್ ಅಕಸ್ಮಾತ್ ಹೋಗಿ ಅಂದ್ರು, ಅವ್ರ್ ಹೋಗ್ತಾರಾ?
ಭಾರತಾಂಭೆ: ನೀನ್ ಹೇಳೋದು ಸರಿ ಮಗಳೆ. ಬಿಟ್ ಹೋಗಿ ಅಂದ್ರೆ ಅವರ್ಯಾರು ಹೋಗಲ್ಲ. ದಿನದ ಕೊನೆಯಲ್ಲಿ ಎಲ್ರು ಮನುಷ್ಯರೇ.ಎಲ್ರು ಭಾರತೀಯರೇ. ಆದ್ರೆ ನಾವು ಇನ್ನೊಬ್ರ ಜಾಗದಲ್ಲಿದಾಗ , ಆ ಜಾಗವನ್ನ ,ಅಲ್ಲಿ ಜನರನ್ನ, ಅಲ್ಲಿನ ಭಾಷೆ,ಸಂಸ್ಕೃತಿಯನ್ನ , ಗೌರವಿಸಿ ಪೋಷಿಸಬೇಕು.ಅದನ್ನ ಬಿಟ್ಟು ಇವುಗಳನ್ನೆಲ್ಲಾ ಅವಮಾನಿಸಿದ್ರೆ ಅಥವಾ ತುಳಿಯೊ ಪ್ರಯತ್ನವನ್ನೇನಾದ್ರೂ ಮಾಡಿದ್ರೆ, ನೀನು ಸುಮ್ಮನಿರಬೇಡ ಮಗಳೆ. ಅವರನ್ನ ಗಂಟು ಮೂಟೆ ಸಮೇತ ಹೊರಗ್ ಹಾಕು. ಈ ವಿಚಾರದಲ್ಲಿ ನನ್ನ ಸಂಪೂರ್ಣ ಬೆಂಬಲ ನಿನಗಿದೆ ಮಗಳೆ .
ಕನ್ನಡಾಂಭೆ: ನನ್ನ ನೆಲ ,ಭಾಷೆ ,ಸಂಸ್ಕೃತಿ ಮತ್ತು ನನ್ನ ಆಶ್ರಯದಲ್ಲಿರುವ ಏಳು ಕೋಟಿ ಕನ್ನಡಿಗರ ತಂಟೆಗೆ ಯಾರಾದ್ರೂ ಬಂದ್ರೆ ನಾನ್ಯಾವತ್ತೂ ಸುಮ್ಮನಿದ್ದಿದ್ದಿಲ್ಲ . ಮುಂದೆಯೂ ಸುಮ್ಮನಿರುವುದಿಲ್ಲ . ಈಗ ಮತ್ತೆ ನನ್ನ ಶಕ್ತಿಯನ್ನು ನಮ್ಮ ನೆರೆಹೊರೆಯವರಿಗೆ ತೋರಿಸುವ ಸಮಯ ಬಂದಿದೆ. ತೋರಿಸುತ್ತೇನೆ ,ಕನ್ನಡವೆಂದರೇನು,ಕನ್ನಡಿಗರ ಶಕ್ತಿ ಏನೆಂಬುದನ್ನು. ಜೀವ ಬಿಟ್ಟರು ಕಾವೇರಿಯನ್ನು ಬಿಡಲಾರೆ . ಕಾವೇರಿ ನನ್ನವಳು. ಎಲ್ಲಿಯವರೆಗೆ ಕನ್ನಡಿಗರ ಉಸಿರಿರುವುದೋ ಅಲ್ಲಿಯವರೆಗೆ ಕನ್ನಡಿಗರನ್ನ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ.
ಭಾರತಾಂಭೆ: ನನ್ನಿಂದ ಯಾವ ಸಹಕಾರ ಬೇಕಿದ್ದರೂ ಕೇಳು ಮಗಳೆ .
ಕನ್ನಡಾಂಭೆ: ನಿನ್ನ ಆಶಿರ್ವಾದ ಒಂದು ನನ್ನ ಮೇಲಿರಲಿ ಅಮ್ಮ. ಅಷ್ಟೇ ಸಾಕು, ಎಲ್ಲಾನು ಗೆಲ್ತಿನಿ . ಸರಿ ಅಮ್ಮ ನಾನ್ ಬರ್ತೀನಿ. ಲೇಟಾಯ್ತು.
ಭಾರತಾಂಭೆ: ಅಯ್ಯೋ ಹೀಗ್ ಬಂದು ಹೀಗೆ ಹೊರಟ್ ಬಿಟ್ಯಲ ಪುಟ್ಟ? ಇದ್ದು ಊಟ ಗೀಟ ಮಾಡಕೊಂಡು ಹೋಗು ಮಗಳೆ .
ಕನ್ನಡಾಂಭೆ: ಇಲ್ಲಮ್ಮ ಇನ್ನೊಂದ್ಸಲ ಬರ್ತೀನಿ. ಈಗ ನನಗೆ ಬೇಕಿರೋದು ಊಟ ಅಲ್ಲ ನೀರು…ನೀರು.
(ತಾಯಿ ಮಗಳು ಇಬ್ಬರು ನಗುವರು)

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..