5096

ಕೆಲಸ ಹುಡುಕುತ್ತಿರುವ ಗೆಳೆಯನಿಗೊಂದು ಪತ್ರ

pm
Pramod ಮರವಂತೆ

ಗೆಳೆಯ ……
ನೀನು ಹುಡುಕುತ್ತಿರುವುದು ಕೆಲಸವನ್ನಲ್ಲ.ಜೀವನವನ್ನ. ಜೀವನ ಅಷ್ಟು ಸುಲಭವಾಗಿ ಸಿಗುವುದಿಲ್ಲ ಗೆಳೆಯ.ಕಷ್ಟವಿದೆ,ಸಿಗುವವರೆಗೂ ,ಸಿಕ್ಕ ಮೇಲೆ ಸುಖವಿದೆ. ಅಂಗನವಾಡಿ ,ಎಲ್ ಕೆ ಜಿ,ಯು ಕೆ ಜಿ ಯಿಂದ ಆರಂಭವಾದ ಸರಸ್ವತಿಯ ಜಪ ಮುಗಿಯುವುದೇ ಇಂಜಿನಿಯರಿಂಗೋ ,ಮೆಡಿಕಲ್ಲೋ,ಡಿಗ್ರಿಯೂ,ಇನ್ನಿತರ ವೃತ್ತಿಪರ ಮತ್ತು ವೃತ್ತಿ ವಿರೋಧಿ ಕೋರ್ಸ್ ಗಳು ಮುಗಿದಾಗ. ಕೆಲವರು ಸರಸ್ವತಿಯ ಜಪವನ್ನು ಇನ್ನು ಬೇಗ ಮುಗಿಸಿ ಪುಣ್ಯ ಕಟ್ಟಿಕೊಳ್ಳುತ್ತಾರೆ.ಪುಣ್ಯಾತ್ಮರು. ಸರಸ್ವತಿಯ ಜಪ ಮುಗಿದ ನಂತರ ಆರಂಭವಾಗುವುದೇ ಲಕ್ಷ್ಮಿಯ ಆರಾಧನೆ . ಸರಸ್ವತಿ ಇಲ್ಲದೆ ಬದುಕುವವರಿದ್ದಾರೆ.ಬದುಕುತ್ತಿದ್ದಾರೆ. ಆದರೆ ಲಕ್ಷ್ಮಿ ಇಲ್ಲದೆ ?ಉಹುಂ ಸುತಾರಾಂ ಸಾಧ್ಯವಿಲ್ಲ.ಕೈಯಲ್ಲಿ ಕಾಸಿಲ್ಲದಿದ್ದರೆ, ಬಸ್ ನಿಲ್ದಾಣದಲ್ಲಿ ಇದನ್ನು (ಕಿರುಬೆರಳು ಎದ್ದಿದೆ ಉಳಿದವು ಮಲಗಿವೆ) ಮಾಡುವುದಕ್ಕೂ ಸಾಧ್ಯವಿಲ್ಲ.ಮೊದಲು ೫೦ ಪೈಸೆ ಇತ್ತು .ನಂತರ ಒಂದಕ್ಕೆ ಒಂದು ಎರಡಕ್ಕೆ ಎರಡು ರೂಪಾಯಿ ಇತ್ತು.ಈಗ ಒಂದಕ್ಕೆ ಎರಡಾಗಿದೆ. ಎರಡಕ್ಕೆ ಐದಾಗಿದೆ.ಕಾಸು ಅಷ್ಟರ ಮಟ್ಟಿಗೆ ತನ್ನ ಪ್ರಾಭಲ್ಯವನ್ನ ಮೆರೆಯುತ್ತಿದೆ.ನಿನ್ನೆ ಮೊನ್ನೆ ಹುಟ್ಟಿ ಚಾಕಲೇಟ್ ಗೆ “ಚಾಕಿ” ಎಂದು ಕರೆಯಲಾರಂಭಿಸಿದ ,ಮಗುವು ಕೂಡ ತನಗೆ ಏನಾದರೂ ತಿನಿಸು ಬೇಕಾದರೆ ತಂದೆಯ ಬಳಿ ಬಂದು ಹಣವನ್ನು ಕೇಳುತ್ತದೆಯೇ ವಿನಃ ನೇರವಾಗಿ ಅಂಗಡಿಯ ಬಳಿ ಹೋಗಿ ನಿಲ್ಲುವುದಿಲ್ಲ. ಎಲ್ಲರಿಗು ಗೊತ್ತು ಬದುಕಲು ಏನು ಬೇಕು ಎಂದು. ಆದರೆ ಬದುಕಲು ಯಾವುದು ಬೇಡ ಎನ್ನುವುದೇ ಗೊತ್ತಿಲ್ಲ ಅದೆ ದೊಡ್ಡ ದುರಂತ.

ಗೆಳೆಯ ಎಲ್ಲರಂತೆ ನೀನು ಕೂಡ ಶಾಲಾ ಕಾಲೇಜುಗಳಲ್ಲಿ ನಿನ್ನ ಚಪ್ಪಲಿ ಮತ್ತು ಮೆದುಳು ಎರಡನ್ನು ಸಾಕಷ್ಟು ಸವೆಸಿದ್ದೀಯಾ .ತಿಳಿದ ವಿಚಾರವೇ. ನೀನು ಬುದ್ದಿವಂತನೆಯೋ ದಡ್ಡನೋ ಅದು ಯಾರು ನಿಶ್ಚಯಿಸಲು ಸ್ಸಾಧ್ಯವಿಲ್ಲ. ಬುದ್ದಿವಂತರ ಗುಂಪಿನಲ್ಲಿ ಬುದ್ದಿವಂತನು ಒಮ್ಮೊಮ್ಮೆ ದಡ್ಡನಾಗುತ್ತಾನೆ. ದಡ್ಡರ ಗುಂಪಿನಲ್ಲಿ ದಡ್ಡನೂ ಒಮೊಮ್ಮೆ ಬುದ್ದಿವಂತನಾಗುತ್ತಾನೆ. ಹಣವಿದ್ದವನು ಹಣವಂತ ನಿಜ. ಆದರೆ ಬುದ್ದಿ ಇರುವವರೆಲ್ಲರೂ ಬುದ್ದಿವಂತರಲ್ಲ. ಇರುವ ಬುದ್ದಿಯನ್ನು ಸರಿಯಾಗಿ ಬಳಸಿಕೊಳ್ಳುವವನು ಮಾತ್ರ ಬುದ್ದಿವಂತ. ಬುದ್ದಿ ಇದ್ದ ಮೇಲೆ ಬಳಸಿಕೊಳ್ಳಬೇಕು.ಹಣವಿದ್ದ ಮೇಲೆ ….. ಬೇಡ ಬಿಡು ಅದು ಅವರವರಿಗೆ ಬಿಟ್ಟಿದ್ದು. ನಮಗ್ಯಾಕೆ? ನಾನೇನು ಹೇಳಬಯಸುತ್ತಿದ್ದೇನೆಂದು , ಅರ್ಥ ಮಾಡಿಕೊಂಡಿದ್ದೀಯ ಎಂದು ಭಾವಿಸುತ್ತೇನೆ. ಜೀವನದಲ್ಲಿ ಅರ್ಥ (ಹಣ) ಮಾಡಿಕೊಳ್ಳುವುದಕ್ಕಿಂತ ಮೊದಲು ನಿನ್ನನು ನೀನು ಅರ್ಥ ಮಾಡಿಕೊಳ್ಳುವುದು ತುಂಬಾ ಅವಶ್ಯಕ. ಮನುಷ್ಯ ಬದುಕಬೇಕೆಂದ ಮೇಲೆ ದುಡಿಯಲೇಬೇಕು. ದುಡಿದು ಗಳಿಸಲೇಬೇಕು.ಎಲ್ಲರು ಗಳಿಸುವುದು ಒಂದನ್ನೇ ಆದರೂ ದುಡಿಮೆಯ ದಾರಿ ಬೇರೆ ಬೇರೆ ಅಷ್ಟೆ . ಆ ದಾರಿಯನ್ನು ಹುಡುಕುವ ಜೀವನದ ಅತ್ಯಮೂಲ್ಯ ಘಟ್ಟದಲ್ಲಿ ನೀನೀಗ ಪರದಾಡುತಿದ್ದಿಯ. ಇದು ನೀನೊಬ್ಬನೇ ಅಂತ ಅಲ್ಲ. ಜೀವನದ ಈ ಒಂದು ಹಂತದಲ್ಲಿ ಪ್ರತಿಯೊಬ್ಬನೂ ಅನುಭವಿಸುವ ಪರಿಪಾಟಲು ಇದು. ಯಾರನ್ನು ಕೆಲಸವೇ ಮನೆಗೆ ಹುಡುಕಿಕೊಂಡು ಬರುವುದಿಲ್ಲ. ಎಲ್ಲರು ನಿನ್ನ ಹಾಗೆ ಬಿ ಎಂ ಟಿ ಸಿ ಯಲ್ಲಿ ಡೈಲಿ ಪಾಸ್ ತೆಗೆದುಕೊಂಡು ಬೆಂಗಳೂರು ಅಲೆದವರೆ.ಸಿಕ್ಕ ಸಿಕ್ಕವರಿಗೆಲ್ಲಾ ರೇಸುಮೆ ಕಳಿಸಿ ದಿನಕೆಂಟು ಬಾರಿ ಜಿ ಮೇಯಲ್ ಚೆಕ್ ಮಾಡಿದವರೆ. ಉಳಿಯಲು ರೂಮಿಲ್ಲದೆ, ಸಂಭಧಿಕರ ಮನೆಯಲ್ಲಿ ಎಷ್ಟು ದಿನ ಇರಲು ಸಾಧ್ಯವೋ ಅಷ್ಟು ದಿನ ಇದ್ದು ನಂತರ ಅಸಾಹಾಯಕರಾಗಿ ಮರಳಿ ಊರಿಗೆ ಹೋಗಿ ಬೇಸರ ಕಳೆದು ಬಂದವರೆ . ಸಾಕಷ್ಟು ಜನರನ್ನು ಹಾಗು ಅವರ ಪರದಾಟವನ್ನು ನೋಡಿದ್ದೇನೆ. ಆದರೆ ಆ ಪರದಾಟ ಶಾಶ್ವತವಂತೂ ಅಲ್ಲ .ಆ ದಿನ ಕೆಲಸವಿಲ್ಲದೇ ಇದ್ದವರು ಇಂದು ಒಂದಲ್ಲ ಒಂದು ಕೆಲಸವನ್ನು ಮಾಡುತ್ತಿದ್ದಾರೆ. ದುಡಿಯುತ್ತಿದ್ದಾರೆ. ಹೆಚ್ಚೋ ಕಡಿಮೆಯೋ .ಇಲ್ಲಿ ಯೋಚಿಸಬೇಕಾದದ್ದು ದುಡಿಮೆಯ ಪ್ರಮಾಣದ ಬಗ್ಗೆ ಅಲ್ಲ. ನೆಮ್ಮದಿಯ ಬಗ್ಗೆ. ದುಡಿಯುವುದು ಜೀವನದ ನೆಮ್ಮದಿಗಾಗಿಯೇ ಆದರೂ ಬರಿ ದುಡಿಮೆಯೊಂದೇ ನೆಮ್ಮದಿಯಲ್ಲ. ದುಡಿಮೆ ಹೊಟ್ಟೆಯ ಅನಿವಾರ್ಯತೆ. ನೆಮ್ಮದಿ ಮನಸ್ಸಿನ ಅನಿವಾರ್ಯತೆ.ಈ ಎರಡು ಅನಿವಾರ್ಯತೆಗಳನ್ನು ಪೂರೈಸುತ್ತಾ ಸಾಗುವುದೇ ಲೈಫ್ ಗೆಳಯ.

ನೀನೀಗ ಕಳೆಯುತ್ತಿರುವ ದಿನಗಳಲ್ಲಿ ಮಾನಸಿಕವಾಗಿ ನಿನ್ನನ್ನು ಹಿಂಸಿಸುವ ಸಾಕಷ್ಟು ಪ್ರಸಂಗಗಳು ನಡೆಯಬಹುದು.ಪ್ರತಿದಿನ ಫೋನ್ ನಲ್ಲಿ ಮಾತನಾಡುವ ತಂದೆ-ತಾಯಿ ನೇರವಾಗಿ ಅಲ್ಲದಿದ್ದರೂ “ಬೇಗ ಕೆಲಸ ಹುಡುಕಿಕೊ ” ಎನ್ನುವ ಸಂದೇಶವನ್ನು ನೀಡಬಹುದು.ಸಿಕ್ಕ ಸಿಕ್ಕವರಿಗೆಲ್ಲ ನಿನ್ನ ರೇಸುಮೆಯನ್ನು ಕಳುಹಿಸುವಂತೆ ಹೇಳಿ ಅವರ ಫೋನ್ ನಂಬರನ್ನು ಕೊಟ್ಟು ಅವರಿಗೆ ಫೋನ್ ಮಾಡಿ ಮಾತನಾಡು ಇವರಿಗೆ ಫೋನ್ ಮಾಡಿ ಮಾತಾನಾಡು ಎನ್ನುವಂತೆ ಹೇಳಬಹುದು.ಮನೆಯ ಸಮಸ್ಯೆಗಳನ್ನು ನಿನ್ನಲ್ಲಿ ಹಂಚಿಕೊಳ್ಳಬಹುದು.ಈ ಎಲ್ಲರ ಹಿಂದಿರುವುದು ಒಂದೇ ಉದ್ದೇಶ. ಮನೆಯಲ್ಲೇ ಹೀಗಾದ ಮೇಲೆ ಇನ್ನು ಹೊರಪ್ರಪಂಚದ ಬಗ್ಗೆಯಂತೂ ಹೇಳುವುದೇ ಬೇಡ . ಮದುವೆಯಾಗಿ ಒಂದೆರಡು ವರುಷ ಮಕ್ಕಳಾಗದ ಹೆಣ್ಣನ್ನು ಮತ್ತು ಡಿಗ್ರಿ ಮುಗಿಸಿ ಕೆಲಸ ಸಿಗದ ಹುಡುಗನನ್ನು ಪ್ರಪಂಚ ನೋಡುವ ಪರಿ ಒಂದೆ. ಸಹಜವಾಗಿಯೇ ಈ ಎರಡು ಸಂಧರ್ಭಗಳಲ್ಲಿಯೂ ಮಾನಸಿಕ ಹಿಂಸೆ ನಮ್ಮನ್ನು ಕೊಲ್ಲಲು ಪ್ರಯತ್ನಿಸುತ್ತದೆ. ಆದರೆ ನಾವು ಸಾಯಬಾರದಷ್ಟೆ .

ನೀನು ಓದಿದ್ದೀಯ ಎಂದ ಮಾತ್ರಕ್ಕೆ ನಿನ್ನ ಓದಿಗೆ ತಕ್ಕದಾದ ಕೆಲಸವೇ ಬೇಕೋ? ಅಥವಾ ಒಳ್ಳೆಯ ಜೀವನ ಕಲ್ಪಿಸುವ ಯಾವ ಕೆಲಸವಾದರೂ ಸಾಕೋ ?ಎನ್ನುವ ನಿರ್ಧಾರ ನಿನ್ನನು .ನಿನ್ನ ಲೈಫ್ ಗೆ ನೀನೆ ಅಂಪಾಯರ್ . ಆನ್ ಫಿಲ್ಡ್ ಅಂಪಾಯರ್ ಅಲ್ಲ ,ಥರ್ಡ್ ಅಂಪಾಯರ್ .ನಿಧಾನವಾಗಿ ತೀರ್ಮಾನವನ್ನು ಕೈಗೊಳ್ಳುವ ಸಮಯ ನಿನಗಿದೆ.
ನಾನು ನೋಡಿರುವ ಪ್ರಕಾರ ಮಕ್ಕಳನ್ನು ಕಷ್ಟಪಟ್ಟು ಸಾಲಸೋಲ ಮಾಡಿ ಓದಿಸಿದ ತಪ್ಪಿಗೆ ಅವರು ತಮ್ಮ ತಮ್ಮ ಮಕ್ಕಳಿಂದ ದೂರವಾಗಿದ್ದಾರೆ. ಐದನೇ ಕ್ಲಾಸಿಗೊ,ಆರನೇ ಕ್ಲಾಸಿಗೊ ಸರಸ್ವತಿಗೆ ಬಾಯ್ ಹೇಳಿದವರು ಇಂದು ತಂದೆ ತಾಯಿಯೊಂದಿಗೆ ತೋಟ,ಮನೆ, ಸಂಸಾರ ಎನ್ನುತ್ತಾ ಒಳ್ಳೆಯ ಬದುಕನ್ನೇ ಬದುಕುತ್ತಿದ್ದಾರೆ. ಎಷ್ಟು ಓದಿ ಎಷ್ಟು ಗಳಿಸಿದರೇನು ಪ್ರಯೋಜನ? ನನ್ನವರೊಂದಿಗೆ ನಾಲ್ಕು ದಿನ ಖುಷಿಯಿಂದ ಕಳೆಯಲಾಗದ ಮೇಲೆ? ನಮ್ಮ ಮನೆಯಲ್ಲಿ ಒಂದು ಶುಭ ಕಾರ್ಯವಿದ್ದರೂ ಊರಿಗೆ ಹೋಗಿ ಎರಡು ಇದ್ದು ಬರಲು ಅದ್ಯಾವನದೋ ದೊಣ್ಣೆ ನಾಯಕನ ಅನುಮತಿ ಬೇಕು.ಐದು ದಿನ ಮದುವೆ ,ಮತ್ತೊಂದು ಕಾರ್ಯಕ್ರಮವಿದ್ದರೆ ನಾವು ಮನೆಗೆ ಹೋಗುವುದು ಎರಡನೇ ದಿನ ಮತ್ತು ವಾಪಸ್ಸು ಹೊರಡುವುದು ಮೂರನೇ ದಿನ. ಯೋಚಿಸುತ್ತಾ ಹೋದರೆ ಬೇಸರವಾಗುದಂತೂ ನಿಜ. ಸೊ ನಾವು ಯೋಚಿಸುವುದನ್ನೆ ಬಿಡಬೇಕು ಅಥವಾ ಯೋಚಿಸಿದ ಮೇಲೆ ಬೇಸರ ಮಾಡಿಕೊಳ್ಳುವುದನ್ನು ಬಿಡಬೇಕು. ಹುಟ್ಟಿದ್ದೇವೆ,ಸುಖವೊ ಕಷ್ಟವೋ ಬದುಕಲೇಬೇಕು. ನಮ್ಮನ್ನು ನಂಬಿದವರನ್ನು ಬದುಕಿಸಬೇಕು. ಅದ್ಕಕೊಂದು ದುಡಿಮೆಯ ದಾರಿಬೇಕು.ದಾರಿ ಸಿಕ್ಕೇ ಸಿಗುತ್ತದೆ ಇಂದೊ,ನಾಳೆಯೋ, ನಾಡಿದ್ದೊ ಗೊತ್ತಿಲ್ಲ.ಬಟ್ ಸಿಗುವುದಂತೂ ನಿಜ.ಇದು ನಿನಗೆ ಕಾಯುವ ಸಮಯ.ಆದರೆ ಸುಮ್ಮನೆ ಕುಳಿತಲ್ಲ. ನಿನ್ನದೇ ಆದ ಗುರಿಯನ್ನು ಅರಿತುಕೊ ಅದಕ್ಕಿರುವ ದಾರಿಯ ಶೋಧನೆ ನಡೆಯಲಿ.ಅದು ಕಲ್ಲು ಮುಳ್ಳಿನ ಹಾದಿ. ಬೇಗ ಗುರಿ ಮುಟ್ಟುವ ತವಕ ಬೇಡ.ಒಂದು ಬಾರಿ ಕಲ್ಲು ಮುಳ್ಳಿನ ದಾರಿಯಲ್ಲಿ ನಡೆದರೆ ಮುಂದೆ ಸಿಗುವ ಎಲ್ಲ ದಾರಿಯೂ ಹೂವಿನ ಹಾದಿಯಂತೆ ಭಾಸವಾಗುವುದರಲ್ಲಿ ಅನುಮಾನವಿಲ್ಲ.ಜೀವನ ಆಟ, ಆಡು ಗೆಳೆಯ ಖುಷಿಯಾಗಿ.ಸೋಲು ಗೆಲುವು ಮಾಮೂಲು.ಸೋತರು,ಗೆದ್ದರೂ ಆಡಿದ ಖುಷಿ ಸಿಕ್ಕೇ ಸಿಗುವುದು. ಶುಭವಾಗಲಿ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..