- By Guest Writer
- Saturday, October 22nd, 2016
ಕವನಗಳು ಮನಸ್ಸಿನ ಭಾವನೆಯೊಂದಿಗೆ ಹೊಂದಿಕೊಂಡಿರುತ್ತವೆ …ಭಾವನೆಗಳನ್ನು ಕವಿತೆಗಳ ಮೂಲಕ ಹೊರಹೊಮ್ಮುವಂತೆ ಮಾಡುವ ಕಲೆಯೇ ಕವಿಗಾರಿಕೆ .ಪ್ರಮೋದ್ ಮರವಂತೆ ಬರೆದ ಹನಿಗವನಗಳನ್ನು ಇಲ್ಲಿ ಓದಿ
ಕುಡುಕನಿಗೊಂದು ರಾತ್ರಿ
ತಾನು ಬಾರಿನಲ್ಲಿ
ಕುಡಿಯುತ್ತಿದ್ದ ಕನಸು
ಕುಡಿದದ್ದು ಅಷ್ಟಿಷ್ಟೇ
ದೇಹದ ಬದಿ ಬದಿಗೂ
ಹೋಗಿ ಸೇರುವಷ್ಟು ಕುಡಿದ
ಯಾವುದೋ ಸದ್ದಾಯಿತು
ತಕ್ಷಣ ಎದ್ದ ..
ಮತ್ತೆ ತಿರುಗಿ ಮಲಗಿದ.
ದೇವರೇ ಹೆಂಡತಿಗೆ ಹೊಡೆದ
ಕನಸೂ ಒಮ್ಮೆ ಬೀಳಲಪ್ಪ ಎಂದ…
ಕುಡಿದವರಿಗದೇ ಮೋಜು
ಕುಡಿದ ಮೇಲೆ ಆವಾಂತರ
ಮಾಡದೇ ನಿದಿರೆ ಹತ್ತೀತೇ ಜೀವಕೆ.
ಕುಡಿಯುವಾಗ ಕುಡಿದಮೇಲೆ
ಸಿಗರೇಟು ಸುಡದಿದ್ದರಾದೀತೆ
ಬಾಯಿಗೆ ಬತ್ತಿಯ ಇಟ್ಟು
ತನ್ನ ಸುಟ್ಟುಕೊಂಡುದಲ್ಲದೇ
ಬೆಂಕಿ ಕಡ್ಡಿಯ ಎಸೆದದ್ದು
ಬಡವನ ಗುಡಿಸಲ ಮೇಲೆ…
ಕುಡುಕರು ಕುಡಿವರು
ಮದುವೆಯ ಮೊದಲು
ಜೊತೆಗಿರದ
ಪ್ರೇಯಸಿಯ ನೆನೆದು
ಮದುವೆಯ ನಂತರ
ಜೊತೆಗಿರುವ
ಹೆಂಡತಿಯನ್ನು ಮರೆತು
ಅಕ್ಕಾ ಕುಡಿದರೆ
ಹೋಗುವುದು
ಲಿವರ್ ಅಲ್ಲವೇನೇ?
ನನ್ನವನಿಗೆ
ಹೃದಯವೇ
ಹೋಗಿದೆಯಲ್ಲೇ…
ಮೊದಲು ಈ ಹೆಸರಿರಲಿಲ್ಲ
ಸಾರಾಯಿ ಅನ್ನುತ್ತಿದ್ದರು
ಯಾವಾಗ ಸಂಸಾರ
ಸುಡಲಾರಂಭಿಸಿತೋ
ಅಂದೇ ಅದು ಎಣ್ಣೆಯಾಯಿತು
ಅವನ ಬಾಯಿಯ ವಾಸನೆಗೆ
ಮೀರಿದ ದೇಹದ ವಾಸನೆಯ
ಮರೆತು ದೇಹ ಒಪ್ಪಿಸಿದಳು
ಒಳ್ಳೆಯ ಹೆಂಡತಿಯಾಗಲಲ್ಲ
ತಾಯಿಯಾಗಲು
ಅವಳ ತ್ಯಾಗ ತಾಯಿಯಾಗುವ
ಮುಂಚೆಯೇ ಆರಂಭ
ಡಾಕ್ಟರ್ರು ಹೇಳಿದ್ದರು
ಕಡಿಮೆ ಕುಡಿಯಯ್ಯಾ
ಸತ್ತು ಹೋಗುತ್ತೀಯ..
ಅಯ್ಯೊ ಸತ್ತು ಹೋಗುತ್ತೇನೆಯೇ
ಅವನು ಗಾಬರಿಗೊಂಡ
ಸತ್ತರೆ ಕುಡಿವವರ್ಯಾರು?
ಕಡಿಮೆಯೇ ಕುಡಿಯುತ್ತೇನೆ
ಅಂದಿನಿಂದ ನೀರು
ಮಿಶ್ರಿಸಿದೇ ಕುಡಿಯಲಾರಂಭಿಸಿದ
ಮೂರನೆಯ ಬಾರಿಗೆ
ಮುಟ್ಟು ನಿಂತಿದೆ ಅವಳಿಗೆ
ಅವನ ಕುಡಿತವೆಂದು
ನಿಲ್ಲುವುದೋ…
ಅಪ್ಪ ಕುಡಿಯುವಾಗ
ಮಗ ಕೇಳಿಯೇ ಬಿಟ್ಟ
ಅಪ್ಪ ನೀನು ಯಾಕೆ
ಕುಡಿಯುತ್ತೀಯಾ?
ಅಪ್ಪ ಹೇಳಿದ
ನಾನೂ ನಮ್ಮಪ್ಪನಿಗೆ
ಹೀಗೆ ಕೇಳುತ್ತಿದ್ದೆ…