- By Guest Writer
- Sunday, December 17th, 2017
ಬಹುಶಃ ಅದು ಫೆಬ್ರವರಿ ತಿಂಗಳು ಅನ್ಸುತ್ತೆ. ನಮ್ಮದು ಸ್ವಾಯತ್ತ ಕಾಲೇಜು ಆಗಿದ್ದರಿಂದ್ದ ಇನ್ನೇನು ಕೆಲವೇ ತಿಂಗಳುಗಳಲ್ಲಿ ನಮ್ಮ ಇಂಜಿನಿಯರಿಂಗ್ ಮುಗಿಯೋದರಲ್ಲಿತ್ತು. ಆಗ ಕ್ಯಾಂಪಸ್ ಸೆಲೆಕ್ಷನ್ ಭರಾಟೆ ಕೂಡ ಕೊಂಚ ಜೋರಾಗೆ ಇತ್ತು. ಬಹಳ ಜನರಿಗೆ ಕ್ಯಾಂಪಸ್ ಸೆಲೆಕ್ಷನ್ ಆದಂತಹ ಖುಷಿ ಇದ್ರೆ, ಕೆಲವರಿಗೆ ಕ್ಯಾಂಪಸ್ ಸೆಲೆಕ್ಷನ್ ಜೊತೆಗೆ ಸಂಗಾತಿ ಸೆಲೆಕ್ಟ್ ಮಾಡಿಕೊಂಡ ಖುಷಿ. ಆದರೆ ಅಲ್ಲಿ ಇನ್ನೊಂದು ವರ್ಗವಿತ್ತು. ಆ ಕಡೆ ಕ್ಯಾಂಪಸ್ ಸೆಲೆಕ್ಷನ್ ಆಗದೆ, ಈ ಕಡೆ ಸಂಗಾತಿನೂ ಸಿಗದೆ ಇದ್ದಂತಹ ನತದೃಷ್ಠ ವರ್ಗ, ನಮ್ಮ ವರ್ಗ, ಅದರಲ್ಲಿದ್ದಿದ್ದು ನನ್ನಂತಹ ಕೆಲವೇ ಕೆಲವು ಮಂದಿ. ಅದು ನಮಗೆ ಒಂಥರಾ ಜಿಡಿusಣಡಿಚಿಣioಟಿ.
ಇಂತಹ ಸೋ ಕಾಲ್ಡ್ ಜಿಡಿusಣಡಿಚಿಣioಟಿಲ್ಲಿ ಇರುವಾಗ ಕುಂದಾಪುರದಲ್ಲಿರೋ ಮೂಡಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಉದ್ದೋಗಮೇಳ ಇದೆ ಅಂತ ಕುಂದಾಪುರದವನೇ ಆಗಿರೋ, ಬೆಂಗಳೂರಿನಲ್ಲಿ ನನ್ನ ಜೊತೆ ಓದ್ತಾ ಇದ್ದ ಶೆಟ್ಟಿಯಿಂದ ನನಗೆ ಗೊತ್ತಾಯ್ತು. ಮೊದಲೇ ಊರೂರು ತಿರುಗಾಡಬೇಕು ಅಂತ ಆಸೆ ಇದ್ದ ನಾನು, ಊರಿಗೆ ಹೋಗಿ ಬರಬೇಕು ಅಂತ ಯೋಚಿಸ್ತಾ ಇದ್ದ ಶೆಟ್ಟಿ, ಇಬ್ಬರಿಗೂ ಒಂದು ಕಾರಣ ಬೇಕಿತ್ತು. ಆ ಕಾರಣವೀಗ ಸಿಕ್ಕಿತ್ತು. ಹಾಗಾಗಿ ಮಾರನೆಯ ದಿನವೇ ಬೆಂಗಳೂರಿನಲ್ಲಿ ಕುಂದಾಪುರದ ಕಡೆ ಹೋಗೊ ಬಸ್ ಹತ್ತೇ ಬಿಟ್ವಿ.
ಬೆಂಗಳೂರಿನಿಂದ ಶುರುವಾದ ನಮ್ಮ ಬಸ್ಸಿನ ಓಟ, ಯಾವುದ್ಯಾವುದೋ ಹಾದಿ ತಿರುಗಿ, ಸುತ್ತು ಹಾಕಿ, ಹಳ್ಳ-ಕೊಳ್ಳಗಳಲ್ಲಿ ಇಳಿದು, ಗುಡ್ಡವನ್ನೇರಿ ತನ್ನೊಳಗೆ ನಮ್ಮಂತ ಹಲವರನ್ನ ಹೊತ್ತು ಹಲವು ಗಂಟೆಗಳ ಕಾಲ ಸಾಗಿತ್ತು. ಈ ಪಯಣದಲ್ಲಿ ನನಗೆ ಸಾಥ್ ಕೊಟ್ಟು, ಹೊಸ ಅನುಭೂತಿ ನೀಡಿದ್ದು ಅಂದರೆ ಅದು ರಘು ದೀಕ್ಷಿತ್ ಅವರ ಹಾಡುಗಳು. ಕಿವಿಗೆ ಇಯರ್ ಪೋನ್ ಸಿಕ್ಕಿಸಿ, ಬಸ್ಸಿನ ಕಿಟಕಿಯಂಚಿನಿಂದ ಹೊರ ಜಗತ್ತನ್ನ ನೋಡ್ತಾ, ಮಲೆನಾಡಿನ ಹಸಿರ ಸೊಬಗ ಆಸ್ವಾದಿಸುತ್ತಾ, ಮಳೆಯ ಹನಿಯ ಬಿಂದುವನ್ನ ಅನುಭವಿಸ್ತಾ, ರಘು ದೀಕ್ಷಿತ್ರವರ ಬಾನಿನ ಹನಿಯು ಧರೆಯಿಂದ ಪುಟಿದು ಹಾಡಿಗೆ ನಾನೂ ಧನಿಗೂಡಿಸುತ್ತಾ ಸಾಗ್ತಾ ಇದ್ರೆ ಹೊಸ ಲೋಕವೊಂದು ಪ್ರತಿ ಕ್ಷಣವೂ ತೆರೆದುಕೊಳ್ಳ್ತಾ ಇತ್ತು.
ಕುಂದಾಪುರದ ಮೀನಮ್ಮ, ಸೂಪರ್ ಸೂಪರ್ ಟೇಸ್ಟಮ್ಮ ಅಂತ ಶಿವಣ್ಣನ ಸಿನಿಮಾದ ಹಾಡು ಕೇಳಿ ಇಷ್ಟಪಟ್ಟಿದ್ದ ನನಗೆ ಈಗ ಅದೇ ಕುಂದಾಪುರಕ್ಕೆ ಹೋಗುವ ಅವಕಾಶ. ಕುಂದಾಪುರ ಕರಾವಳಿಯಂಚಿನ ಒಂದು ಊರು. ಆ ಕಡೆ ಕರಾವಳಿ, ಈ ಕಡೆ ಪಶ್ಚಿಮ ಘಟ್ಟಗಳಿಂದ ಕೂಡಿದ ಸುಂದರ ಜಾಗ.ಈ ಊರಿನ ಸಮೀಪದಲ್ಲೇ ನನ್ನ ಮುಂದಿನ ಎರಡು ದಿನಗಳ ಅಂದರೆ ನಲವತ್ತೆಂಟು ಗಂಟೆಗಳ ವಾಸ.
ಕೆಲಸದ ಕಾರಣವನ್ನ ಕಾಲಿಗೆ ಕಟ್ಟಿಕೊಂಡು ಹೋಗಿದ್ದ ನನಗೆ ಮೊದಲ ದಿನ ಕಾಲೇಜಿನಲ್ಲಿ ಸಂದರ್ಶನ, ಅದೂ ಇದು ಅಂತ ಸಮಯ ಮುಗಿದೇ ಹೋಗಿತ್ತು. ಆದರೂ ನನ್ನ ಗಮನ ಸೆಳೆದದ್ದು ಅಲ್ಲಿನ ಪ್ರಕೃತಿ ಸೌಂದರ್ಯ. ಮಳೆಗೆ ಮೈ ಒಡ್ಡಿ, ಹಸಿರ ಸೀರೆ ತೊಟ್ಟು, ಸಮುದ್ರದೇವನಿಂದ ಕಾಲು ತೊಳೆಸಿಕೊಳ್ಳುತ್ತಿದ್ದ ಭೂ ಮಾತೆ. ಹಸಿರ ಕಾನನದ ನಡುವೆ ಅಲ್ಲಲ್ಲಿ ಹರವಿಕೊಂಡು ನಿಂತಿರುವ ಮನೆಗಳು, ಅವುಗಳ ವಿಶಿಷ್ಟವೆನಿಸುವ ವಿಶೇಷ ವಿನ್ಯಾಸ, ತುಸು ವೇಗ ಅನಿಸಿದರೂ ಕಿವಿಗೆ ತಂಪನೀಯುವ ಕುಂದಗನ್ನಡ, ಅಲ್ಲಲ್ಲಿ ಕೇಳಿ ಬರೋ ತುಳು, ಕೊಂಕಣಿಯ ಗಂಧ, ದೂರದಲ್ಲಿ ಕೇಳಿ ಬರುತ್ತಿರುವ ಸಾಗರದ ಅಲೆಗಳ ಸದ್ದು, ಬೆಂಗಳೂರಿನ ಜಂಜಾಟವನ್ನ ಅನುಭವಿಸಿದ್ದ ನನಗೆ ಇದೊಂದು ಹೊಸ ಅನುಭೂತಿ, ಅನುಭವವೇ ಸರಿ.
ಬೆಂಗಳೂರಿನ ಬೋರ್ವೆಲ್ಲ್ನ ನೀರನ್ನ ಕುಡಿದು ಬದುಕ್ತಾ ಇದ್ದ ನನಗೆ, ತುಂಬಿದ ನೀರು ಬಾವಿಯ ಕಂಡು, ಅದರ ನೀರು ಕುಡಿದು, ಮರಗಟ್ಟಿದ ನಾಲಿಗೆಗೆ, ಮನಸ್ಸಿಗೆ ಹೊಸ ಚೈತನ್ಯ ಬಂದಿತ್ತು. ಬೆಳಗ್ಗಿನ ಉಪಹಾರಕ್ಕೆ ಇಡ್ಲಿ, ಕೊಚ್ಚ್ ಅಕ್ಕಿಯಿಂದ ಮಾಡಿದ ಬಿಸಿ ಅನ್ನಕ್ಕೆ, ತಿಳಿ ಟೊಮ್ಯಾಟೊ ಗೊಜ್ಜು ಕೊಟ್ಟು ಬಾಯಿ ರುಚಿ ಹಚ್ಚಿಸಿಬಿಟ್ರು ಕುಂದಾಪುರದ ಮಂದಿ. ಅದರ ಜೊತೆಗೆ ಅನ್ನದ ಬಸಿದ ಗಂಜಿ, ಅದಕ್ಕೆ ಒಂದಷ್ಟು ಉಪ್ಪು-ಕಾರ ಸೇರಿಸಿ ಕುಡಿತಾ ಇದ್ರೆ… ಆಹಾ…!!
ಮಾರನೆಯ ದಿನ ಬೆಳಗ್ಗೆ ಎದ್ದು, ಮನೆಯಲ್ಲಿದ್ದಂತಹ ಹೊಂಡಾ ಆಕ್ಟೀವ್ ತೆಗೆದುಕೊಂಡು ಊರಿಂದ ಕೆಲವೇ ಕಿಮೀ ದೂರದಲ್ಲಿರೋ ಕೊಲ್ಲೂರು ಮೂಕಾಂಭಿಕೆ ದೇವಸ್ಥಾನಕ್ಕೆ ಹೊರಟೆವು. ಆ ಮುಂಜಾನೆಯ ಮುಂಬೆಳಕಿನಲ್ಲಿ, ರವಿ ತನ್ನ ಕಿರಣ ಚೆಲ್ಲುವ ಪ್ರಯತ್ನ ಮಾಡ್ತಾ ಇದ್ರೆ, ಅದಕ್ಕೆ ಸವಾಲಾಗಿ ಮೋಡಗಳು ತುಂತುರು ಸುರಿಸುತ್ತಾ, ಆ ಇಂಬನಿಯ ಹನಿಗಳು ಮರಗಳ ಮೇಲೆ ಹರಿದಾಡೋದನ್ನ ನೋಡ್ತಾ ಇದ್ರೂ, ಚಳಿ ಆಗ್ತಾ ಇದ್ರೂ ಏನೋ ಒಂಥರಾ ಖುಷಿ ನಮಗೆ. ದೇವರಿಗೆ ಕೈ ಮುಗಿದು, ಅಲ್ಲೇ ಕೆಲ ಕಾಲ ಕಳೆದು,ಅಲ್ಲಿಂದ ಸ್ವಲ್ಪ ದೂರದಲ್ಲೇ ಇದ್ದ ಮರವಂತೆ ಬೀಚ್ ಕಡೆಗೆ ನಮ್ಮ ಮುಂದಿನ ದಾರಿ. ಆ ಕಡೆ ಶಾಂತವಾಗಿ ಹಾದಿ ಹುಡುಕುತ್ತಾ ಅಲೆವ ನದಿ, ಈ ಕಡೆ ಭೋರ್ಗೆರೆಯುತ್ತಿರುವ ಸಮುದ್ರ, ನಡುವೆ ತನಗೇನೂ ಗೊತ್ತಿಲ್ಲದಂತೆ ಮಲಗಿರುವ ಕಪ್ಪು ಹಾದಿ. ಅನುಭವಿಸಿದವನೇ ಬಲ್ಲ ಆ ದೃಶ್ಯವ, ಅದರ ವೈಭವವ.
ಹಂಗೆ ಹಿಂದೆ ಬಂದು ಅಲ್ಲೇ ಇದ್ದ ಬಸ್ರೂರಿನಲ್ಲಿರುವ ನನ್ನ ಮತ್ತೊಬ್ಬ ಗೆಳೆಯನ ನೋಡಲು ಹೊರಟೆವು. ಅಲ್ಲೂ ಕೂಡ ನನಗೆ ಕಂಡಿದ್ದು ಅದೇ ಅದ್ಬುತಗಳು. ತಣ್ಣಗೆ ಹರಿವ ನದಿ, ಅಡ್ಡಲಾಗಿ ಸಿಂತಿರುವ ಸಣ್ಣ ಸೇತುವೆ, ನದಿ ಪಕ್ಕ ನಿಂತಿರೋ ಸಣ್ಣ ಮನೆ,ಅದಕ್ಕೆ ಒರಗಿ ನಿಂತಿರೋ ಮರ, ಸುತ್ತಮುತ್ತಾ ಮೀನುಗಾರಿಕಾ ಬೋಟ್ಗಳು. ಒಂದು ಹೊಸ ಬಗೆಯ ಸಂಸ್ಕೃತಿಯ ಪರಿಚಯ ಮಾಡುವ ಸಲುವಾಗಿ ನಿಂತಂತಿದ್ದವು.
ನಾನು ಇಲ್ಲಿ ಕಳೆದಿದ್ದು ಕೆಲವೇ ಗಂಟೆಗಳು ಮಾತ್ರ, ನಾನು ನೋಡಿರುವುದು ಕೆಲವೇ ಅದ್ಭುತಗಳನ್ನ ಮಾತ್ರ, ನೋಡಬೇಕಾದವು ತುಂಬಾ ಇವೆ.
ಕುಂದಾಪುರ ಕೇವಲ ಒಂದು ಊರಾಗಿ, ತಾಲೂಕಾಗಿ ಮಾತ್ರ ಕಾಣಲಿಲ್ಲ ನನಗೆ. ಅದು ಒಂದು ಜಗತ್ತಾಗಿ ಕಂಡಿತ್ತು. ಬೆಂಗಳೂರಿನ ಜಂಜಾಟಗಳಿಂದ ಸೋತು, ಹೈರಾಣಾಗಿದ್ದವರಿಗೆ ನೆಮ್ಮದಿ ಕೊಡ್ತು. ಹಲವು ಸಂಸ್ಕೃತಿಗಳಿಗೆ ನೆಲೆಯಾಗಿ, ಭಾಷೆಗಳ ತವರಾಗಿ, ಹಲವು ದೈವಗಳ ನೆಲೆಯಾಗಿ ಹೊಸ ಅನುಭೂತಿ ಕೊಡ್ತು ನನಗೆ. ಇಲ್ಲಿ ಕಳೆದ ಒಂದೂವರೆ ದಿನಗಳು ನನಗೆ ಹಲವು ನೆನಪುಗಳ ಗಂಟನಿತ್ತಿವೆ. ಕರ್ನಾಟಕವನ್ನೆಲ್ಲಾ ಸುತ್ತಬೇಕೆನ್ನುವ ನನ್ನ ಆಸೆ ಈಡೇರುತ್ತೆ ಅನ್ನೋ ನಂಬಿಕೆ ಹುಟ್ಟಾಕಿದೆ. ಕರ್ನಾಟಕ ಸುತ್ತುವ, ಸಂಸ್ಕೃತಿ ಬಗ್ಗೆ ತಿಳಿಯುವ, ಆಹಾರ ಪದ್ದತಿ ಬಗ್ಗೆ ಅಭ್ಯಸಿಸುವ ನನ್ನ ಮನದಿಚ್ಚೆ ಮತ್ತೆ ಇಲ್ಲಿಂದಲೇ ಆರಂಭಿಸುವಾಸೆ. ಇಲ್ಲಿಂದಲೇ ಆರಂಭಿಸುವೆ ಅನ್ನೋ ನಂಬಿಕೆ ಅಂತೂ ಇದ್ದೇ ಇದೆ.ಒಂದಂತೂ ಸತ್ಯ, ಕರ್ನಾಟಕ ಕೇವಲ ಒಂದು ರಾಜ್ಯವಲ್ಲ, ಇದೊಂದು ಹಲವು ಅದ್ಭುತಗಳನ್ನ ತನ್ನೊಡಲಲ್ಲಿಟ್ಟುಕೊಂಡಿರುವ ಒಂದು ಪುಟ್ಟ ಜಗತ್ತು.