793

ನಮ್ಮನಿ ಮಾಣಿ: ಹುಟ್ಟಿದ ಊರನು ಬಿಟ್ಟು ಬಂದ ಮೇಲೆ

Consider this: ಒಂದೂರಲ್ಲಿ ಒಬ್ಬ ವ್ಯಕ್ತಿ ಇದ್ದ. For time being, ಅವನ ಹೆಸರನ್ನು ವ್ಯಕ್ತಿ ಅಂತ ಅಂದುಕೊಂಡು ಮುಂದೆ ಹೋಗೋಣ. ಆ ವ್ಯಕ್ತಿಯ ಕೆಲಸ ಏನು ಎಂಬುವುದು ನಮಗೀಗ ಬೇಡದ ವಿಷಯ. ಆ ವ್ಯಕ್ತಿ ಊರಾಚೆ ಒಂದು ಕಲ್ಲು ಬೆಂಚಿನ ಮೇಲೆ ಮಲಗುತ್ತಿರುತ್ತಾನೆ. ಪ್ರತಿ ದಿನ ನಿಗದಿತ ಸಮಯಕ್ಕೆ ಒಂದು ಅಟ್ಲಾಸ್ ಸೈಕಲ್ ಮೇಲೆ ಒಬ್ಬರು ಟಿಫನ್ ಕ್ಯಾರಿಯರ್ ಹೊತ್ತು ಬಂದು ಬೆಲ್ ಮಾಡುತ್ತಾರೆ. ಅವನು ಆ ಸೈಕಲ್ ಅನ್ನೇ ನೋಡುತ್ತಿರುತ್ತಾನೆ. ಅದರಲ್ಲಿದ್ದವರು ಆ ಊಟದ ಡಬ್ಬಿಯನ್ನು ಕೆಳಗಿರಿಸಿ ಹೋಗುತ್ತಾರೆ. ಆ ವ್ಯಕ್ತಿ ತಿಂದು‌ ಮತ್ತೆ ಮಲಗುತ್ತಾನೆ. ಹೀಗೇ ಸುಮಾರು ವರ್ಷಗಳು ನೆಡೆಯುತ್ತದೆ. ಒಂದು ದಿನ ಆ ಸೈಕಲ್ ಬರಲ್ಲ. ವ್ಯಕ್ತಿ ನಿದ್ದೆ ಮುಗಿಸಿ, ಎದ್ದು, ಮತ್ತೆ ನಿದ್ದೆ ಮಾಡಿ ಮತ್ತೆ ಎದ್ದೇಳಿದರೂ ಸೈಕಲ್ ಪತ್ತೆ ಇಲ್ಲ! ಯಾಕೋ ಹೊಟ್ಟೆಯಲ್ಲಿ ಒಂದು ಬಗೆಯ ಸಂಕಟ, ಯಾರೋ ಹೊಟ್ಟೆಯ ಒಳಗೆ ಕೂತು ಎಳೆದಂಥ ಭಾವ. ವ್ಯಕ್ತಿಗೆ ಹಸಿವಿನ ಪರಿಚಯ ಆಗಲೇ ಆಗಿದ್ದು. ವ್ಯಕ್ತಿ ಸುಮಾರು ಹೊತ್ತು ಸೈಕಲ್ ಗಾಗಿ ಕಾಯುತ್ತಾನೆ. ಸೈಕಲ್ ಬರಲೇ ಇಲ್ಲ. ಸರಿ ಅಂತ ಸೈಕಲ್ ಬರುತ್ತಿದ್ದ ದಿಕ್ಕಿನೆಡೆಗೆ ಹೊರಡುತ್ತಾನೆ. ಕಟ್ ಮಾಡಿದ್ರೆ, ಒಂದು ಕ್ಲೈಮ್ಯಾಕ್ಸ್ ಮೆಸೇಜು: “ಆ ದಿನ ಅನ್ನವನ್ನು ಹುಡುಕಿಕೊಂಡು ಹೊರಟ ವ್ಯಕ್ತಿ, ಇನ್ನೂ ಅಲೆಯುತ್ತಲೇ ಇದ್ದಾನೆ”.

ಒಂದು ಶಾರ್ಟ್ ಮೂವಿ ಮಾಡೋಣ ಮಗಾ ಬಾ ಅಂತ ನಮ್ಮ ಹುಡುಗರು ಕರೆದರೆ ಈ ಕಥೆಯನ್ನು ಗ್ಯಾರಂಟಿ ಕೊಡೋಕಾಗಲ್ಲ. ಯಾಕೆಂದರೆ ಇದನ್ನು ಆಗಲೇ ನಮ್ಮ ಪ್ರಮೋದ್ ಮರವಂತೆ ಮಾಡಿದ್ದಾರೆ. ಈ ಕಥೆಗೂ, ಇಲ್ಲಿ ಹೇಳುತ್ತಿರುವ ಅವರದೇ ಇನ್ನೊಂದು ಕಿರುಚಿತ್ರ ‘ನಮ್ಮನೆ ಮಾಣಿ’ಗೂ ಒಂದು ಸಣ್ಣ ನಂಟಿದೆ. ಅದೇನು ಅಂತ ಇನ್ನೂ ಸ್ವಲ್ಪ ಹೊತ್ತಲ್ಲೇ ಹೇಳುವೆ. But before that: ಪರಪಂಚ Veg and Non Veg ಎಂಬ ದಿಗಂತ್ ಅಭಿನಯದ ಚಿತ್ರವೊಂದು ಬಂದಿತ್ತು, ನೆನಪಿದೆಯಾ?

ಪರಪಂಚ ಚಿತ್ರ ಬಾಕ್ಸ್ ಆಫೀಸ್ ಹಿಟ್ ಅಲ್ಲ, ಆದರೆ ವೀರ್ ಸಮರ್ಥ್ ಸಂಯೋಜನೆಯಲ್ಲಿ ಎಲ್ಲಾ ಬಗೆಯ ಹಾಡುಗಳು ಚಿತ್ರದಲ್ಲಿವೆ. ಅದರಲ್ಲಿ ಒಂದು ಕಾಡುವ ಹಾಡು: ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ. ಮನುಷ್ಯ ಸಂಘಜೀವಿ, ಅದು ಗೊತ್ತಿರುವ ವಿಷಯ. ಆದರೆ ಜಿಮ್ಮೀಗಲ್ಲು ಚಿತ್ರದ ಹಾಡಿನ ಸಾಲಿನ “ಹರಿಯೋ ನದಿ ಒಂದೇ ಕಡೆ‌ ನಿಲ್ಲೋಕಾಗಲ್ಲ, ಹುಟ್ಟಿದ ಮನ್ಸ ಒಂದೇ ಊರಗ್ ಬಾಳಕಾಗಲ್ಲ” ಎಂದು ಹೇಳಿರುವಂತೆ ನಾವು ಸಂಚಾರಿ ಕೂಡ ಹೌದು. ಎಲ್ಲೋ ಹುಟ್ಟಿ, ಮೆಡಿಕಲ್, ಇಂಜಿನಿಯರಿಂಗ್ ಅಂತ ಎಲ್ಲೋ ಓದಿ, ಯಾವುದೋ ದೇಶದ ಕಂಪನಿ ಕೆಲಸ ಹಿಡಿದು, ಒಮ್ಮೊಮ್ಮೆ ಕೆಲಸದ ನಿಮಿತ್ತ ಯಾವುದೋ ದೇಶದಲ್ಲಿ ಕೂಡ ಕೆಲಸ ಮಾಡಲು ಹೊರಡುವ ನಮ್ಮಂಥ ಸಂಚಾರಿ ಬದುಕಿನಲ್ಲಿ ಮನಸ್ಸಿಗೆ ನೆಮ್ಮದಿಯ ತಂಗುದಾಣವೇ ಇಲ್ಲದಂತಾಗಿದೆ. ಇರೋ 24 ತಾಸಿನಲ್ಲಿ ಒಂದು ಐದು ನಿಮಿಷ ಬಿಡುವು ಮಾಡಿಕೊಂಡು ಅಪ್ಪ ಅಮ್ಮನ ಜೊತೆ ಫೋನಲ್ಲಿ ಕೂಡ ಮಾತನಾಡಲು ಆಗದಷ್ಟು ಬ್ಯುಸಿ ಬ್ಯುಸಿ. ಸಿಲ್ಕ್ ಬೋರ್ಡ್ ಅಲ್ಲಿ ಒಮ್ಮೆ ಸಿಕ್ಕಿ ಹಾಕಿಕೊಂಡದರೆ ಇಲ್ಲಿ ಮಾಯ ಆಗಿ ಅಲ್ಲಿ ಪ್ರತ್ಯಕ್ಷ ಆಗುವ Portal ಜರೂರು ಅರ್ಥವಾಗುತ್ತದೆ. ಯಾಕೆ ಇಷ್ಟೆಲ್ಲಾ ಶೆಕೆ, ಏನಕ್ಕೆ ಇಷ್ಟೆಲ್ಲಾ ತೊಂದರೆ ಅಂದರೆ ನಮ್ಮ ಬಳಿ ಉತ್ತರವಿಲ್ಲ. ಸೀಲಿಂಗ್ ನತ್ತ ದೃಷ್ಟಿ ನೆಟ್ಟು ಯೋಚಿಸುತ್ತಾ ಕುಳಿತರೆ, ಕೆಲಸ ಯಾಕೆ ಮಾಡುತ್ತಿಲ್ಲ ಎಂಬ ಲುಕ್ ಕೊಟ್ಟು ಹೋಗುತ್ತಾರೆ ಬಾಸ್. ಯೌವ್ವನವೇ ಒಂದು ಮೋಸ, ಇಲ್ಲಿ ಏನೂ ಇಲ್ಲ, ವಾಪಸ್ ಮಗು ಆದರೆ ಎಷ್ಟು ಚಂದ ಅಲ್ಲವೇ ಅನಿಸಿದ್ದಿದೆ. Here comes: ನಮ್ಮನೆ ಮಾಣಿ.

ಮಾಣಿ, ಪುಟ್ಟ, ಗುಂಡ, ಚಿಂಟು, ಏನಾದರೂ ಅಂದುಕೊಳ್ಳಿ, ನಮ್ಮನಿ ಮಾಣಿ ಕಿರುಚಿತ್ರದ ಈ ಹುಡುಗ ನಮ್ಮ ಬಾಲ್ಯದ ನೆನಪುಗಳು ರಪ್ಪ್ ಅಂತ ಕಣ್ಣ ಮುಂದೆ ಪಾಸ್ ಆಗುವಂತೆ ಮಾಡುವ ತರ್ಲೆ ಹುಡುಗ. ಸ್ಕೂಲ್ ಇಂದ ಬರುತ್ತಿದ್ದಂಗೆ ಯೂನಿಫಾರ್ಮ್, ಶೂ, ಸಾಕ್ಸು ಎಲ್ಲಿ ಹೋದವೋ ಅದು ನಾಳೆಯ ಸಮಸ್ಯೆ, ಈಗ ಆಟ ಆಡಬೇಕು ಅಷ್ಟೇ. ತುಂಬಾ ಬೇಜಾರಾದಾಗ ಬೀಚ್ ಹತ್ತಿರ ಹೋಗಿ ಆಟ ಆಡಬೇಕು ಎಂಬ ಸಣ್ಣ ಬಯಕೆಯ Easy Happy Soul. ಮಾಣಿಯ ಅಪ್ಪ ಮೇಲೆ ಪರಪಂಚ ಚಿತ್ರದ ಹಾಡಿನಂತೆ ನಮ್ಮ ನಿಮ್ಮ present ನ ಹಾಗಿನ ಬ್ಯುಸಿ ಬ್ಯುಸಿ ಮನುಷ್ಯ. ಮೇಲಿನ ಕಥೆಯಲ್ಲಿ ಬಂದ ಅನ್ನವನ್ನು ಹುಡುಕಿಕೊಂಡು ಹೋಗುವ ವ್ಯಕ್ತಿ ಅಂತ ಹೇಳಿದೆನಲ್ಲಾ, ಅವನೇ ಇವನು. ಕುಟುಂಬಕ್ಕೆ ಅಂತ ಎರಡು ನಿಮಿಷ ಸಮಯ ಕೊಡಲಾಗದಷ್ಟು ಕೆಲಸ. ಕೆಲಸದ ಉದ್ದೇಶ ಸಂಪಾದನೆ, ಸಂಪಾದನೆಯ ಆಶಯ ತನ್ನ ಕುಟುಂಬ ಚೆನ್ನಾಗಿರಬೇಕು ಎಂಬುದು. So, in a way, ಅಪ್ಪ, ಕುಟುಂಬಕ್ಕಾಗಿ ಕುಟುಂಬದ ಜೊತೆಯಲ್ಲಿಲ್ಲ!! ಎಂಥಾ ವಿಪರ್ಯಾಸ ನೋಡಿ. ಇವರ ಅಪ್ಪ, ಅಂದರೆ ಮಾಣಿಯ ಅಜ್ಜ, ನಮ್ಮ future ನ ಪ್ರತಿಬಿಂಬ. ಸುಸ್ತು, ನೋವು, ಮತ್ತು ಸದಾ ಕಾಲ ಕುಟುಂಬದ ಆಪ್ತತೆ ಬಯಸುವ ಮಗುವಿನಂಥ ಅಜ್ಜ. ಆದರೆ ಇಲ್ಲಿ ಮತ್ತೊಂದು ವಿಪರ್ಯಾಸ ಏನಪ್ಪಾ ಅಂದರೆ, ಸದ್ಯಕ್ಕೆ ಮಾಣಿಯ ಅಪ್ಪನಂತಿರುವ ನಾವು, ಮಾಣಿಯ ಅಜ್ಜನಂತಾಗುವ ಹೊತ್ತಿಗೆ, ನಮ್ಮನೆ ಮಾಣಿ ಅಂದರೆ ನಮ್ಮ ಮಕ್ಕಳು ಕೆಲಸದ ಇದರಲ್ಲಿ ಬ್ಯುಸಿ ಆಗುತ್ತಾರೆ. “ಛೇ, ಈ ಅಪ್ಪ ಅಮ್ಮ ಅದೆಷ್ಟು ಸಲ ಅಂತ ಫೋನ್ ಮಾಡಿ ಶೆಕೆ ಕೊಡ್ತಾರೆ” ಅಂತ ಅಂದುಕೊಳ್ಳುತ್ತಿದ್ದ ನಮಗೆ ಪೋಷಕರ ನೋವು ಅರ್ಥವಾಗುತ್ತಾ ಹೋಗುತ್ತದೆ. ಸಮಯಕ್ಕಿರುವ ತಾಕತ್ತು ಅಂಥದ್ದು. ಮಧ್ಯರಾತ್ರಿಯ ಗೆಳೆಯರ ಜೊತೆಯ ‘ಸಿಟ್ಟಿಂಗ್’ ನಲ್ಲಿ ಗ್ಯಾನೋದಯ ಆದಾಗ ಮೂಡಬಹುದಾದ ಆಲೋಚನೆಗಳು ಒಂದು ಕಿರುಚಿತ್ರ ನೋಡಿದಾಗ ಆಗುತ್ತದೆ ಅಂದರೆ ಅದು definitely ನಿಮ್ಮ ಪ್ರಶಂಸೆಗೆ ಅರ್ಹ. ಇಂತಹ ಹಲವು ಯೋಚನೆಗಳನ್ನು ನಮ್ಮಲ್ಲಿ ಬಿತ್ತುವ ಮಾಣಿಯೇ: ನಮ್ಮನೆ ಮಾಣಿ.

ನಮ್ಮ ಪ್ರಮೋದ್ ಮರವಂತೆ ನಿರ್ದೇಶನದ ಕಿರು ಚಿತ್ರದ ಬಗ್ಗೆ ಒಂದು ಕಿರು ಬರಹ ಅಂತ ಶುರು ಆಗಿದ್ದು ಇಷ್ಟು ಆಯಿತು ನೋಡಿ. ನಮ್ಮನೆ ಮಾಣಿ ಕಿರು ಚಿತ್ರದ ಬಗ್ಗೆಯೇ ಆದರೂ ನಮ್ಮನಿ ಮಾಣಿ ಬಗ್ಗೆ ಅಲ್ಲದ ಒಂದು ಹೊಸ ರೂಪದಲ್ಲಿ ಈ ಅಂಕಣವನ್ನು ಪ್ರಸ್ತುತ ಪಡಿಸಲಾಗಿದೆ. ಇಲ್ಲಿ ನೀವು ಏನು ಓದಿದ್ದೀರಾ, ಏನೂ ಅರ್ಥವಾಗಿಲ್ಲ ಅಂದರೆ ಮೊದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನೆ ಮಾಣಿಯ ಪಯಣವನ್ನು ಒಮ್ಮೆ ನೋಡಿಕೊಂಡು ಬನ್ನಿ. ಸಚಿನ್ ಬಸ್ರೂರ್ ಸಂಗೀತ ನಿರ್ದೇಶನದ ಜೊತೆಯಲ್ಲಿ ಒಂದು ಫಿಲಾಸಫಿಕಲ್ ಪಯಣ ನಿಮಗೆ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರವನ್ನು ನೀಡುವುದರಲ್ಲಿ ಸಂದೇಹವೇ ಇಲ್ಲ.

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..