1825

ನನ್ನ ಆಸ್ತಿ-

ಚಿನ್ನದ ಘೋಷಣೆಯಾಗಬೇಕಂತೆ
ಅದು ಹೇಗೆ ಘೋಷಿಸಿಕೊಳ್ಳಲ್ಲಿ
ಅಗೆದಷ್ಟು ಚಿನ್ನ ಮೊಗೆದಷ್ಟು ಚಿನ್ನ
ಚಿನ್ನದ ಮೂಗುನತ್ತಿನವಳು
ಮೂಗುಮುರಿದು ಬಿಟ್ಟುಹೋದ ಚಿನ್ನ
ಪಾವಿತ್ರ್ಯದ ಪುಟಕ್ಕಿಟ್ಟು ಶುದ್ಧವಾದ ಚಿನ್ನ
ಬದುಕಿನೊಲವಿನ ಬಂಗಾರದ ಲೆಕ್ಕವನು ಕೊಡಲಾದೀತೆ||

ಆಸ್ತಿ ಘೋಷಣೆ ಮಾಡಬೇಕಂತೆ
ಅದು ಹೇಗೆ ಘೋಷಿಸಿಕೊಳ್ಳಲ್ಲಿ
ಧನಕನಕದಂತೆ ಕರಗುವ ಆಸ್ತಿಯಲ್ಲ
ಕೊನೆತನಕ ಉಳಿಯುವ ಅಕ್ಷಯಪಾತ್ರೆಯದು
ಒಳ್ಳೆಯತನದ ಆಸ್ತಿಯ ಘೋಷಿಸಿಕೊಂಡರೆ
ನೆಮ್ಮದಿಯ ತೆರಿಗೆ ಕೊಡಬೇಕಾದೀತಲ್ಲವೇ||

ಸುಪ್ಪತ್ತಿಗೆ ಸುಖಾಸನ ಬೇಕೆಂದಿಲ್ಲ
ಚಾಪೆ ದಿಂಬುಗಳೇ ಸಾಕು ನಿದಿರೆಗೆ ಜಾರಲು
ಸಿಗದಿದ್ದರೆನಂತೆ ನೆಲಕೊರಗಿ ಕಣ್ಣಾಲಿ
ಮುಚ್ಚಿದರೆ ಧರೆಯನೆ ಮರೆತು ಬಿಡುವೆ ನಿದಿರೆಯಲಿ
ಮಲಗುತಿಹೆ ನಾನಿಂದು ದಣಿವಾರಿಸಲು
ಮತ್ತೆದ್ದು ಕೆಲಸಕೆ ನಡೆಯಲೇ ಬೇಕಲ್ಲವೇ||

ತುಪ್ಪ ಹಾಲುಗಳ ಮೃಷ್ಟಾನ್ನ ಬೇಕಿಲ್ಲ.
ಒಪ್ಪತ್ತಿನ ಊಟಕೆ ಕೊರಗಿಲ್ಲದಿರೆ ಸಾಕು
ಹರವಿಯ ತಣ್ಣೀರು ಬೇಕೆಂದಿಲ್ಲ
ಊರ ಬದಿಯ ಕೆರೆಯ ನೀರು ಸಾಕು ದಾಹ ನೀಗಲು
ತಿನ್ನತಿಹೆ ನಾನಿಂದು ಬದುಕಲೇ ವಿನಃ
ಬದುಕುತಿರುವುದು ತಿನ್ನಲಲ್ಲವಲ್ಲವೇ||

ಮೂರು ಅಂತಸ್ತಿನ ಮನೆ ನನದಲ್ಲ
ಭಾವ ಶ್ರೀಮಂತಿಕೆಯ ಭವನವದು
ಕುಸಿದು ಬೀಳುವ ಗಾಳಿಗೋಪುರವಲ್ಲ
ಸೆಟೆದು ನಿಲ್ಲುವ ಸ್ವಾಭಿಮಾನದ ಗೂಡದು
ಇರುವಷ್ಟು ದಿನ ನಾನು ನನ್ನದು
ಹೋಗುವ ದಿನ ಬಿಟ್ಟು ಹೋಗಲೇಬೇಕಲ್ಲವೇ||

ನಗದಿಗಿಂತ ನಗು ಲೇಸೆಂದು ಬದುಕುವೆ
ಅಕ್ಷರವೇ ಅತಿ ದೊಡ್ಡ ಆಸ್ತಿ ಎಂದು ಬಾಳುವೆ..

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..