3437

ನನ್ನ ಕನಸುಗಳ ಕೊಲೆಯಾದಾಗ

PRADEEP-IMAGEಪ್ರದೀಪ್ ಎಂ. ಆಚಾರ್
ನನಗೆ ನಿನ್ನೆಯಿಂದ ಕೈಕಾಲು ಆಡುತ್ತಿಲ್ಲ. ಜೀವನದಲ್ಲಿ ಇದ್ದ ಎಲ್ಲಾ ಭರವಸೆಗಳು, ಆಸೆಗಳು ಕಮರಿಹೋಗಿ, ದಾರಿ ಕಾಣದೆ ಈ ನಮ್ಮೂರಿನ ಕೆರೆಯ ದಂಡೆಯ ಮೇಲೆ ಒಬ್ಬಂಟಿಯಾಗಿ ಕುಳಿತಿದ್ದೇನೆ. ನಿಜ, ನನಗೆ ಆ ದಿನ ಇನ್ನೂ ಸರಿಯಾಗಿ ನೆನಪಿದೆ. ನಾನು SSLC ಎಗ್ಸಾಮಲ್ಲಿ ಅನುತ್ತೀರ್ಣನಾದಾಗ ಅವರು ನನಗೆ ಹೇಳಿದ ಮಾತುಗಳು, ಪ್ರತಿಕ್ಷಣ ನಾನು ನನ್ನ ಜೀವನದ ಆಟದಲ್ಲಿ ಸೋತಾಗಲೂ, ಮರಳಿ ಹುಮ್ಮಸ್ಸನ್ನು ತುಂಬುತ್ತಿದ್ದವು. ಫಲಿತಾಂಶ ಬಂದ ಆ ರಾತ್ರಿ ಎಷ್ಟು ಕಷ್ಟ ಪಟ್ಟರೂ ನನಗೆ ನಿದ್ದೆ ಹತ್ತಿರ ಸುಳಿಯಲಿಲ್ಲ. ಬಾಯಿಗೆ ಬಂದಂತೆ ಬೈದಿದ್ದ ನನ್ನ ಅಪ್ಪ ಅಮ್ಮನಿಗೆ ಮನಸ್ಸಿನ ಯಾವುದೋ ಮೂಲೆಯಲ್ಲಿ ನಾನು ಆತ್ಮಹತ್ಯೆಗೆ ಪ್ರಯತ್ನಿಸಬಹುದು ಎಂಬ ಅನುಮಾನ ಖಂಡಿತಾ ಇತ್ತು ಅನಿಸುತ್ತೆ. ಕೊರಳಿಗೆ ನೇಣು ಕುಣಿಕೆ ಬೀಳುವ ಕೊನೆ ಕ್ಷಣದಲ್ಲಿ ಬಂದು ತಡೆದರು. ಮರುದಿನವೇ ನಮ್ಮ ಮನೆಗೆ ಬಂದವರು ನನ್ನ ಪಾಲಿಗೆ ಆಶಾಕಿರಣವಾಗಿ ಬಂದರು. ಅವರು ಬೇರೆ ಯಾರೂ ಅಲ್ಲ, ನನ್ನ ಅಪ್ಪನ ಗೆಳೆಯ ಗಣಪತಿ ಅಂಕಲ್. ಅಲ್ಲ, ಅಲ್ಲ, ಗಣಪತಿ ಮಾವ. ಅವರು ನಮ್ಮ ಮನೆಗೆ ಬಂದ ಕೆಲವೇ ಹೊತ್ತಿನಲ್ಲಿ ಅವರಿಗೆ ನನ್ನ ಫಲಿತಾಂಶ ಬಂದ ವಿಷಯ ಹಾಗೂ ನಾನು ಆತ್ಮಹತ್ಯೆ ಮಾಡಿಕೊಕೊಳ್ಳಲು ಹೊರಟ ವಿಷಯ ತಿಳಿದು ಇದೇ ಕೆರೆಯ ದಂಡೆಗೆ ನನ್ನನ್ನು ಕರೆದುಕೊಂಡು ಬಂದಿದ್ದರು. ಅವರು ಅವರ ಜೀವನದಲ್ಲಿ ಬಂದಂತ ಕಷ್ಟದ ಸನ್ನಿವೇಶಗಳು, ಹಾಗೂ ಅವರು ಅವುಗಳಿಂದ ಹೊರಬಂದಿದ್ದ ವಿಷಯಗಳು, ನನ್ನೊಳಗೆ ಹೊಸ ಚೇತನವೊಂದು ಮೂಡಿಸಿತ್ತು. ಅವರು ಪೊಲೀಸ್ ಅಧಿಕಾರಿಯಾಗಲು ಪಟ್ಟ ಕಷ್ಟಗಳು, ಪೊಲೀಸ್ ಆದ ಮೇಲೆ ಎದುರಿಸಿದ ಅಡೆತಡೆಗಳು, ಕಠಿಣ ತರಬೇತಿ, ಹೀಗೆ ಜೀವನದ ಸಂಪೂರ್ಣ ಕಥೆಯನ್ನು ನನಗೆ ಹೇಳಿದರು. ಅವರಿಗೆ ತರಬೇತಿಗಳಿಂದ ಹೇಗೆ ಅವರೊಬ್ಬ ಧೃಡ ಮನಸ್ಸಿನ ವ್ಯಕ್ತಿಯಾದರು ಎಂಬುದರ ಬಗ್ಗೆ ಹೇಳಿದರು.

ಬಹುಶಃ ಕೆಲವು ಮಾತುಗಳು ನಮ್ಮೊಳಗೆ ಹೋಗಿ ಧೃಡವಾಗಿ ನಿಲ್ಲಬೇಕೆಂದರೆ ಕೇಳುವ ವಿಚಾರಗಳಿಗಿಂತ ಹೇಳುವ ವ್ಯಕ್ತಿಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ.
ಸುಮಾರು 2 ಗಂಟೆಗಳ ಕಾಲ ನಾವು ಮಾತನಾಡಿದ್ದೆವು. ಅವರು ನನಗೆ ಆ 2 ಗಂಟೆಗಳಲ್ಲಿ ಎಷ್ಟು ಹತ್ತಿರವಾಗಿದ್ದರೆಂದರೆ ನಾನು ಅನುತ್ತೀರ್ಣನಾಗಲು ಏನೇನು ಕಾರಣಗಳಿದ್ದವೋ ಅವೆಲ್ಲವನ್ನು ನನಗೆ ಗೊತ್ತಿರುವ ಮಟ್ಟಕ್ಕೆ ಅವರಿಗೆ ಹೇಳಿದ್ದೆ. ಮತ್ತು ಕೆರೆದಂಡೆಯಿಂದ ವಾಪಸ್ಸು ಮನೆಗೆ ಹೋಗುವುದರೊಳಗೆ ನನ್ನ ಮನಸ್ಸಿನ ಭಾವನೆಗಳು ಬದಲಾಗಿ ಹೋಗಿದ್ದವು. ನನ್ನ ಪ್ರಥಮ ಸೋಲಿನ ನೆನಪುಗಳು ಮರೆತು ಹೋಗುವಂತೆ, ನನ್ನ ತಂದೆ ತಾಯಿಗೆ ಒಳ್ಳೆ ಹೆಸರು ತರುವಂತೆ ಖಂಡಿತವಾಗಿಯೂ ನಾನಾಗುತ್ತೇನೆ ಎಂಬ ಭರವಸೆ ನನ್ನಲ್ಲಿ ಮೂಡಿತ್ತು. ಆ ದಿನದಿಂದ ನಾನು ಪ್ರತಿ ವಾರಕ್ಕೊಮ್ಮೆ ಗಣಪತಿ ಮಾವರಿಗೆ ಕರೆ ಮಾಡುತ್ತಿದ್ದೆ . ಪ್ರತಿಯೊಂದು ವಿಷಯದಲ್ಲಿಯೂ ಅವರು ನನಗೆ ಸಮಂಜಸ ಸಲಹೆ ನೀಡುತ್ತಿದ್ದರು. ಒಬ್ಬ ಹಿರಿಯ ಅಧಿಕಾರಿಯಂತೆ ಅಲ್ಲ, ಒಬ್ಬ ಗೆಳೆಯನಂತೆ.

ಅದಾದ ವರ್ಷಗಳ ನಂತರ ನನ್ನ ಜೀವನದ ಚಿತ್ರಣವೇ ಬದಲಾಯಿತು. 2nd PUC ಕಲಾ ವಿಭಾಗದಲ್ಲಿ ಕಾಲೇಜಿಗೆ 2ನೇ ಸ್ಥಾನ ಪಡೆದೆ. ಈಗ ಪತ್ರಿಕೋದ್ಯಮದಲ್ಲಿ ಪದವಿ ಪಡೆಯಲು ಓದುತ್ತಿದ್ದೇನೆ. ಒಂದು ವಿಷಯ ಹೇಳಲು ಮರೆತೇ, ನಾನು ಗಣಪತಿ ಮಾವನೊಂದಿಗೆ ಮಾತನಾಡಿದ ದಿನವೇ ನಿರ್ಧಾರ ಮಾಡಿದ್ದೆ, ನಾನೊಬ್ಬ ಪೊಲೀಸ್ ಅಧಿಕಾರಿಯಾಗಬೇಕೆಂದು. ಅದು ನಾನು ಬರಿ ಅಂದುಕೊಂಡಿದ್ದು ಮಾತ್ರವಲ್ಲ, ಅದಕ್ಕೆ ತಕಂತೆ ಶ್ರಮ ಕೂಡ ಪಡುತ್ತಿದ್ದೆ. ನಾನು ಮನೋಧೈರ್ಯ ಬೆಳೆಸಿಕೊಳ್ಳಲು ಅವರು ನೀಡಿದ ಪುಸ್ತಕಗಳನ್ನು ಓದುತ್ತಿದ್ದೆ. ಪ್ರತಿದಿನ ಬೆಳಿಗ್ಗೆ ಬೇಗನೆ ಎದ್ದು ವ್ಯಾಯಾಮ ಮಾಡುತ್ತಿದ್ದೆ.

ಆದರೆ ನಿನ್ನೆ ನಾನು ಕೇಳಿದ ವಿಚಾರ, ನಾವು ಮಡಿಕೇರಿಗೆ ಹೋಗಿ ನೋಡಿದ ದೃಶ್ಯಗಳು, ಎಲ್ಲ ಗಾಢ ನಿದ್ರೆಯಲ್ಲಿ ಕಂಡ ಕೆಟ್ಟ ಕನಸಿನ ಸನ್ನಿವೇಶಗಳೇನೋ ಎನಿಸುತ್ತಿದೆ. ಅದೂ ಅವರ ಸಾವು ಆತ್ಮಹತ್ಯೆ ಎಂದರೆ ನನಗೆ ನಂಬಿಕೆ ಹತ್ತಿರವೂ ಸುಳಿಯುತ್ತಿಲ್ಲ. ಬಹುಶಃ ಯಾರೋ ಕೊಲೆಪಾತಕರ ಗುಂಡಿಗೆ ಬಲಿಯಾಗಿದ್ದರೆ ನಾನು ನಂಬುತ್ತಿದ್ದೆ. ಅಥವಾ ನನ್ನ ಸ್ವಂತ ಮಾವನೇ ಆತ್ಮಹತ್ಯೆ ಮಾಡಿಕೊಂಡಿದ್ದರೆ ಇಷ್ಟು ದಿಗ್ಭ್ರಾಂತಿ ಆಗುತ್ತಿರಲಿಲ್ಲ. ಆದರೆ ನನ್ನ ಮಾವ, ಗಣಪತಿ ಮಾವ, ಆತ್ಮಹತ್ಯೆ ಮಾಡಿಕೊಂಡರು ಅಂದರೆ ಅದು ಅಸಾಧ್ಯವಾದ ಮಾತು. ಇದೊಂದು ನಮ್ಮವರೇ ನಮ್ಮವರನ್ನು ಕೊಲ್ಲುವ ಹೊಸ ಪರಿಯೆಂದು ಒಳ ಮನಸ್ಸು ಹೇಳಿತು.

ಈಗ ಅದೇ ರೀತಿ 4 ವರ್ಷಗಳ ಹಿಂದಿನ ಹಾಗೆ ಮತ್ತೆ ಅದೇ ಕೆರೆಯ ದಂಡೆಯ ಮೇಲೆ ಕುಳಿತಿದ್ದೇನೆ. ಬದುಕಿನಲ್ಲಿ ಯಾವುದೇ ಆಸೆ ಆಕಾಂಕ್ಷೆಗಳಿಲ್ಲದೆ ಖಾಲಿ ಮನಸ್ಸಿನ ಮನುಷ್ಯನಾಗಿ. ಕಣ್ಣ ಹನಿಗಳು ಹೊರ ಬಂದಿದ್ದರೆ ಕೆರೆಯಾದರೂ ಒಂಚೂರು ಭರ್ತಿಯಾಗುತ್ತಿತ್ತೇನೋ, ಆದರೆ ಏಕೋ ಒಂದು ಹನಿಯೂ ಹೊರ ಬರುತ್ತಿಲ್ಲ, ನಮ್ಮ ಸುತ್ತಲಿರುವ ನಗುಮೊಗದ ಮುಖವಾಡ ಧರಿಸಿರುವ ರಾಕ್ಷಸರ ನೋಡುತ್ತಿದ್ದರೆ.

ನೀವು ಇಲ್ಲಿಯವರೆಗೂ ಓದಿದ ಯಾವುದೂ ನಿಜವಲ್ಲ, ಇದು ಕೇವಲ ನನ್ನ ಕಲ್ಪನೆಯ ಕಥೆ; ಕಥೆಯ ಹಿಂದಿರುವ ನೋವು ಹಾಗೂ ನಮ್ಮ ಸಮಾಜದಲ್ಲಿ ಪ್ರತಿದಿನವೂ ನೆಡೆಯುತ್ತಿರುವ ಸಾಮಾನ್ಯ ವ್ಯಕ್ತಿಗೆ ತಡೆಯಲಾಗದಂತಹ ಅನ್ಯಾಯಗಳನ್ನು ಹೊರತುಪಡಿಸಿ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..