473

ನೀವೂ ನವೆಂಬರ್ ಕನ್ನಡಿಗರೇ…

ಮತ್ತೆ ಬಂದಿತು ನವೆಂಬರ್ ೧. ಕರುನಾಡ ಬೀದಿ ಬೀದಿಗಳು ಮತ್ತೆ ಅರಶಿನ ಕುಂಕುಮ ತೊಟ್ಟು ನೀಲ ನಭಕ್ಕೆ ಚಾಚಿ ವಿಜ್ರಂಬಿಸುತ್ತಿವೆ. ಎಲ್ಲೆಡೆ ಕನ್ನಡಮ್ಮನ ಭಾವ ಬಕುತಿಯ ಹೊಗಳಿ ಕನ್ನಡದ ಕಂಪನು ದೇಶದಾದ್ಯಂತ ಪಸರಿಸುತ್ತಿದ್ದಾರೆ. ಕನ್ನಡ ಕವಿಗಳ ಕವನದ ಕೋಮಲತೆ ಮತ್ತೆ ಕಣ್ಣಾಲಿಗೆಯಲಿ ಜಿನುಗುತಿದೆ. ಎಲ್ಲ ವಾಹನವು ಹಸಿರುಡುಗೆ ತೊಟ್ಟು ಹಳದಿ ಕೆಂಪಿನ ಬಾವುಟ ದರಿಸಿ ರಾರಾಜಿಸುತ್ತಿವೆ. ಎಲ್ಲರೊಂದುಗೂಡಿ ಕನ್ನಡದ ಸುನಾದವ ಕನ್ನಡೇತರರಿಗೆ ಉಣಬಡಿಸಲು ಯೋಧರಂತೆ ಸನ್ನದ್ದರಾಗಿದ್ದಾರೆ. ಕನ್ನಡ ನಾಡಿನಲ್ಲಿ ಜನಿಸಿದ್ದಕ್ಕೆ ಕನ್ನಡಕ್ಕೆ ಇಷ್ಟು ಮಾಡಿದರೆ ಸಾಕು ಬಿಡಿ. ಮತ್ತೆ ಮುಂದಿನ ವರ್ಷ ನೋಡಿದರಾಯಿತು. ಇಷ್ಟೇ ಅಲ್ಲವೇ ನಮ್ಮ ಕನ್ನಡಾಭಿಮಾನ? ನಾವೇಕೆ ನವೆಂಬೆರ್ ಕನ್ನಡಿಗರಾಗಿದ್ದೇವೆ? ನವೆಂಬರ್ ತಿಂಗಳಲ್ಲಿ ಪರ ಭಾಷಾ ಚಿತ್ರದ ಬಿತ್ತಿಚಿತ್ರವನ್ನು ನೋಡಲಾಗದೆ ಹರಿದು ಹಾಕುವ ಭಾಷಾಭಿಮಾನಿಗಳಿಗೆ ಕನ್ನಡ ಚಿತ್ರವೇಕೆ ಹಿಡಿಸುವುದಿಲ್ಲ? ನಭಕಪ್ಪುವ ಕನ್ನಡ ಧ್ವಜ ಧರಿಸಿ ಓಡಾಡೋ ರಿಕ್ಷಾಗಳು, ಪ್ರಯಾಣಿಕರು ಕುಂತೊಡನೆ “ಕಿದರ್ ಜಾನಾ ಹೈ??” ಅನ್ನುವುದೇಕೆ?. ರಾಜ್ಯೋತ್ಸವ ಬಂದೊಡನೆ ನೆನಪಾಗೋ ಕವಿ ಪುಂಗವರು ತದ ನಂತರ ಹೇಳ ಹೆಸರಿಲ್ಲವಾಗುವುದೇಕೆ? ರಾಜ್ಯೋತ್ಸವ ಆಚರಿಸುವ ಪ್ರತಿಯೊಬ್ಬ ಕನ್ನಡಿಗ ಎಷ್ಟು ಕನ್ನಡ ಪುಸ್ತಕ ಕೊಂಡು ಓದಿದ್ದಾನೆ? ಕನ್ನಡಕ್ಕಾಗಿ ಬಾಳು ಸವೆಸಿದವರ ಬಗ್ಗೆ ಎಷ್ಟು ತಿಳಿದಿದ್ದಾನೆ? ಆಂಗ್ಲ ಭಾಷಾ ಫಲಕವನ್ನು ಕಿತ್ತು ಹಾಕೋ ಕನ್ನಡಬಿಮಾನಿ ಎಷ್ಟರ ಮಟ್ಟಿಗೆ ಕನ್ನಡ ತಿಳಿದಿದ್ದಾನೆ?? ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಾಹಿತಿಗಳ ಎಷ್ಟು ಕಥೆ-ಕವಿತೆ ಓದಿದ್ದಿರಿ?? ನೀವು, ನಿಮ್ಮೊಡಲ ಒಮ್ಮೆ ಕೇಳಿ ನೋಡಿ. ಆಡಂಬರದ, ತೋರಿಕೆಯ ಭಾಷಾಭಿಮಾನ ಬೇಕೆ? ಕನ್ನಡಮ್ಮನ, ಕರುನಾಡ ಏಳ್ಗೆ ಇದರಿಂದ ಎಷ್ಟಾದೀತು? ಕನ್ನಡಿಗರಿಗೆ ನವೆಂಬೆರ್ ನಲ್ಲಿ ಮಾತ್ರ ಯಾಕೆ ಭಾಷಾಭಿಮಾನ ಹೊರ ಹೊಮ್ಮುವುದು?? ಬರಿ ಪ್ರಶ್ನೆಗಳು, ಉತ್ತರಿಸಲಾಗದ, ಉತ್ತರ ಸಿಗದ, ಉತ್ತರ ಇಲ್ಲದ ಅನಂತಾನಂತ ಪ್ರಶ್ನೆಗಳು. ಓ ನಲ್ಮೆಯ ಕನ್ನಡಿಗರೇ ಯಾಕೆ ಹೀಗೆ? ನೀವೂ ಕೂಡ ನವೆಂಬರ್ ಕನ್ನಡಿಗರೇ??

ಬೆಳೆಯುವ ಜಗತ್ತಿನ ಬೆಳವಣಿಗೆಗೆ ಅನುಗುಣವಾಗಿ ಕರುನಾಡು ಬೆಳೆಯಬೇಕು, ಬೆಳಗಬೇಕು. ಬಳಸುವ ವಸ್ತು, ಭಾಷೆ, ಆಚರಣೆಗಳು ಬದಲಾಗುವುದು ಅನಿವಾರ್ಯ. ಅನಿವಾರ್ಯಕ್ಕೆ ವಗ್ಗಿ ಅನುಸರಿಸುವುದು ಅಷ್ಟೇ ಅನಿವಾರ್ಯ. ಅನಿವಾರ್ಯದ ಜೊತೆ ತನ್ನ ತನವನ್ನು, ತನ್ನ ಭಾಷೆ, ಸಂಸ್ಕೃತಿಯನ್ನು ಬಳಸುವುದು, ಬೆಳೆಸುವುದು ಕೂಡ ಅಷ್ಟೇ ಅನಿವಾರ್ಯ ಹಾಗು ಕರ್ತವ್ಯ. ಇವುಗಳನ್ನು ಬದಿಗೊತ್ತಿ ನವೆಂಬೆರ್ ತಿಂಗಳಲ್ಲಿ ಕನ್ನಡ ನೆನಪು ಮಾಡಿಕೊಂಡು, ನಾನು ಕನ್ನಡಿಗ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಹೇಳಿದರೆ ಸಾಕೆ?. ಕನ್ನಡದ ಐತಿಹಾಸಿಕ ಪರಂಪರೆ ಉಳಿಸಿ ಬೆಳೆಸಬೇಕಾದರೆ ಕನ್ನಡ ಉಸಿರಾಗಬೇಕು. ಕನ್ನಡ ದಿನ ಬಳಕೆಯಾಗಬೇಕು. ಎಲ್ಲಿ ಅತ್ಯಗತ್ಯವಿದೆಯೋ ಅಲ್ಲಿ ಕನ್ನಡೇತರ ಭಾಷೆ ಉಪಯೋಗಿಸಬೇಕು. ಕನ್ನಡ ಸಾಹಿತಿಗಳ ಪುಸ್ತಕ ಕೊಂಡೊದಿ ಅವರನ್ನು ಪ್ರೋತ್ಸಾಹಿಸಿ ಕನ್ನಡದ ಗಂಧವ ಎಲ್ಲೆಡೆ ಪಸರಿಸಬೇಕು. ಕನ್ನಡ, ಸುಂದರವೆಂದರೆ ಸಾಲದು, ಸುಲಲಿತವಾಗಬೇಕು. ಎಳೆಯ ತಲೆಮಾರಿಗರಿಗೆ ಕರುನಾಡ ನಡೆ-ನುಡಿಯ ಬಗ್ಗೆ, ಅವುಗಳನ್ನು ರಕ್ಷಿಸಿ ಉತ್ತುಂಗಕ್ಕೆರಿಸುವ ಬಗ್ಗೆ ತಿಳಿ ಹೇಳಬೇಕು, ಮಾರ್ಗದರ್ಶನ ನೀಡಬೇಕು. ರಾಜ್ಯೋತ್ಸವವನ್ನು ಲೆಕ್ಕ ಇಟ್ಟು ಕೊಂಡರೆ ಸಾಲದು, ನಾವೇನು ಮಾಡಿದ್ದೇವೆ ಎಂಬುದನ್ನು ಲೆಕ್ಕ ಇಟ್ಟು ಕೊಳ್ಳಿ. ರಾಜ್ಯೋತ್ಸವ ಎಂದರೆ ಕನ್ನಡ ಮಾತನಾಡುವ ದಿನ ಆಗಬಾರದು. ಕನ್ನಡ ತಿಳಿಯದವರಿಗೆ ಕಲಿಸುವ ದಿನವಾಗಬೇಕು. ಕನ್ನಡಕ್ಕಾಗಿ ಹೋರಾಡಲು ಕಂಕಣ ತೊಡುವ ದಿನವಾಗಬೇಕು. ಕನ್ನಡ ಡಿಂಡಿಮವ ಬಾರಿಸುವ ದಿನವಾಗಬೇಕು. ಕರ್ನಾಟಕ ವೈವಿದ್ಯಮಯ ರಾಜ್ಯ. ಎಲ್ಲ ಭಾಷೆಯ, ಸಂಸ್ಕೃತಿಯ ಜನರನ್ನು ನಮ್ಮವರು ಎಂದೆಣಿಸುವ ವಿಶಾಲ ಮನೋಹೃದಯದ ಜನರಿರುವ ನಾಡು. ಅದಕ್ಕಾಗಿಯೇ ಇರಬೇಕು ಕನ್ನಡ ಕಲಿಸುವ ಬದಲು ಪರಭಾಷೆಯನ್ನು ನಾವು ಕಲಿಯುತ್ತಿದ್ದೇವೆ. ಎಲ್ಲ ಭಾಷೆಯನ್ನು ಗೌರವಿಸಿ, ಕನ್ನಡವನ್ನು ಪ್ರೀತಿಸಿ.ಒಬ್ಬ ಕನ್ನಡಿಗನಾಗಿ ಕರುನಾಡಿಗೆ ಮಾಡಬೇಕಾದದ್ದು ಇಷ್ಟೇ ಕನ್ನಡವನ್ನು ದಿನ ಬಳಸಿ, ಬೆಳೆಸಿ, ಉಳಿಸಿ. ಕನ್ನಡ ರಾಜ್ಯೋತ್ಸವವನ್ನು ನಿತ್ಯೋತ್ಸವವಾಗಿಸಿ.ಕುವೆಂಪು ರವರ “ಭಾರಿಸು ಕನ್ನಡ ಡಿಂಡಿಮ..” ನಿಮ್ಮ ಗುರಿಯಾಗಿಸಿ.ಕನ್ನಡ ಉಳಿಸಿ ಬೆಳೆಸುವ ಮೊದಲು ಬಳಸಿ.

ಸಿರಿಗನ್ನಡಂ ಗೆಲ್ಗೆ , ಸಿರಿಗನ್ನಡಂ ಬಾಳ್ಗೆ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..