1732

PARKING-PARK ಅಲ್ಲಿ ಇಂಗು ತಿಂದ ಅನುಭವ

ಏನೇ ಹೇಳಿ, ಬೆಂಗಳೂರಿನಲ್ಲಿ ಈ ಪಾರ್ಕಿಂಗ್ ಸಮಸ್ಯೆ , ಬೆಳ್ಳಂದೂರಿನಲ್ಲಿ ನೊರೆಯ ಸಮಸ್ಯೆ , ಕಿತ್ಹೋಗಿರೋ ರೋಡಿನ ಸಮಸ್ಯೆ , ಸಿದ್ದರಾಮಯ್ಯನ ನಿದ್ದೆ ಸಮಸ್ಯೆ ಮತ್ತು ನನ್ನ ಹೊಟ್ಟೆಯ ಗ್ಯಾಸಿನ ಸಮಸ್ಯೆ ಶತಶತ ಮಾನವಾದರೂ ಬಗೆಹರಿಯದ ಸಮಸ್ಯೆ . ಇದರ ಬಗ್ಗೆ ನಾನು ಪುಂಗಿ ಬಿಡೋದು , ನೀವು ಅದನ್ನ ಕೇಳೋದು ..ಆಮೇಲೆ ಇದೆಲ್ಲ ಮಾಮೂಲಿ ರೀ.. ಅಂತ ಹೇಳೋದು .. ನನಗೆ ಗೊತ್ತೇ ಇದೆ.
ವಿಷಯ ಏನು ಅಂದ್ರೆ, ಈ ಪಾರ್ಕಿಂಗ್ ಸಮಸ್ಯೆಗೆ , ನಿಮ್ಮ ಬಳಿ ಒಂದು ಒಳ್ಳೆ ಪರಿಹಾರ ಇದೆಯೇ ?ಹಾ , ನಾನು ಹೇಳುತ್ತಿರೋದು ವಾಹನ ಪಾರ್ಕಿಂಗ್ ಸಮಸ್ಯೆ ಅಲ್ಲ , “ಪಾರ್ಕ್” ಅಂದರೆ ಬೆಂಗಳೂರಿನ ಉದ್ಯಾನವನದ ಸಮಸ್ಯೆ. ನಾನು ಇತ್ತೀಚಿಗೆ ಒಂದು ಒಳ್ಳೆ ಹವಾಸ್ಯವನ್ನ ಬೆಳೆಸಿಕೊಂಡಿದ್ದೇನೆ . ಸಂಜೆ ಮನೆಯ ಹತ್ತಿರ ಇರೋ ಪಾರ್ಕಿಗೆ ಹೋಗಿ, ಆಫೀಸ್ ನಲ್ಲೆ ಡುಬುಕ್ ಎಂದು ಪಾರ್ಕ್ ಮಾಡಿದ ನನ್ನ ದೇಹಕ್ಕೆ ಒಂದೊಳ್ಳೆ ವ್ಯಾಯಾಮ ಕೊಡ್ತೀನಿ . ಅಲ್ಲೇ ಒಂದು ಹತ್ತೋ ಹನ್ನೆರಡೋ ರೌಂಡು ಹೊಡೆದು ಉಸ್ಸಪ್ಪ ಅಂತ ಒಂದು ಕಡೆ ಕೂತರೆ .. ಶುರು ಆಗುತ್ತೆ ನೋಡಿ ಮಹಿಳಾ ಮಣಿಗಳ ಮಾತು.
ಸ್ವಾಮಿ, ಯಾರು ಹೇಳಿದ್ದು ಅವರಿಗೆ ಲೋಕದ ಜ್ಞಾನ ಇಲ್ಲ ಅಂತ. ಯಾವ ಸೀರಿಯಲ್ನಲ್ಲಿ , ಯಾವ ಸೊಸೆ , ಯಾವ ಅತ್ತೆಗೆ , ಯಾವ ಸಮಯದಲ್ಲಿ, ಹೇಗೆ , ಯಾವುದರಿಂದ , ಯಾಕಾಗಿ , ಯಾರ ಸಮ್ಮುಖದಲ್ಲಿ ಬೈದಳು ಅಥವಾ ಹೊಡೆದಳು ಅಂತ ಇಂಚ್ ಇಂಚಲ್ಲೆ ಚಾಚೂತಪ್ಪದೆ ಕೂಲಂಕುಷವಾಗಿ ಹೇಳ್ತಾರಾ ಅಂದರೆ.. ಅವರ ಲೆವೆಲ್ ಯಾವ ಮಟ್ಟಿಗೆ ಇರಬೇಕು ಅಂತ ಯೋಚನೆ ಮಾಡಿ.
ಈಗ ಪರೀಕ್ಷೆ ಸಮಯ ಬೇರೆ . ಪಾಪ ಮನೇನಲ್ಲಿ ಓದೋ ಗುಂಡ ಅಂದರೆ ಇಲ್ಲ ಅಪ್ಪ ನಾನು ಪಾರ್ಕಿನ ಗುಂಡಿಯಲ್ಲೇ ಓದುವೆ .. ಅಂತ ತಂದೆ ಜೊತೆ ಬರುವ ಮಕ್ಕಳು. ಮಕ್ಕಳು ಅವರ ಪಾಡಿಗೆ ಓದಲಿ ಎಂದು “ಜಿಯೊ” ಸಿಮ್ ಹಾಕಿ ಸ್ಮಾರ್ಟ್ ಫೋನ್ ನಲ್ಲೆ ಮುಳುಗಿರೋ ತಂದೆ ತಾಯಿಗಳು. ಇದೆಲ್ಲ ನೋಡಿsss , ಕೇಳಿsss ಸಾಕು ಅಂತ ಅನ್ನಿಸಿದ ನನಗೆ , ಆ ಕಡೆ ನೋಡಿದರೆ “hardware” ಅಂಗಡಿ ಮಾಲೀಕನಿಗೆ “software“ ವೈಫಿನ ಬೈಗುಳ. ಇದೊಳ್ಳೆ ಕಥೆ ಆಯಿತಲ್ಲ ಅಂತ ಎದ್ದು ಒಂದು ೧೦೦ ಮೀಟರ್ ಮುಂದೆ ಹೋಗಿ ಕಾಲಿ ಬೆಂಚಿನ ಮೇಲೆ ಕುಳಿತೆ. ಆಗ ಫಾಸ್ಟ್ ಮೋಷನ್ ಅವರಿಗಾದರೂ ಸ್ಲೋ ಮೋಷನ್ನಂತೆ ನನಗೆ ಕಾಣುತ್ತಿದ್ದರು ಆ ವೃದ್ಧ ದಂಪತಿಗಳ ನಡಿಗೆ. ಅವರಿಗೆ ಒಂದು ೮೦ ಇರಬಹುದು , ಇವರಿಗೆ ೭೫ ಇರಬಹುದೇನೋ. ಅವರ ಮುಖದಲ್ಲಿ ಅದೇನು ತೇಜಸ್ಸು. ತಾತನಿಗೆ ಒಂದು ಪುಟ್ಟ ವಾಕಿಂಗ್ ಸ್ಟಿಕ್. ಅಜ್ಜಿ ಗೆ ತಾತನೇ ವಾಕಿಂಗ್ ಸ್ಟಿಕ್ . ಇಬ್ಬರ ಮುಖುದಲ್ಲಿ ಅದೇನು ಆನಂದ. ಅದೇನು ಸಾರ್ಥಕತೆಯ ಭಾವ. ಅಬ್ಬಾ ಅವರನ್ನ ನೋಡಿದರೆ ನನಗೆ ಒಳಗೊಳಗೇ ಅಸೂಯೆ. ಆ ದಂಪತಿಗಳ್ಲಿಬ್ಬರು ನನ್ನ ಮುಂದೆ ಹಾದುಹೋದಾಗು ಪಕ್ಕನೆ ನನ್ನ ಕಡೆ ನೋಡಿದರು. ನಾನು ಇಂಗು ತಿಂದ ಮಂಗನಂತೆ ಹಿ ಹಿ ಅಂತ ನಕ್ಕೆ . ತಕ್ಷಣ ಆ ತಾತ .. ವಾಟ್ ಯಂಗ್ ಮ್ಯಾನ್ … ಬೆಂಚಿನಲ್ಲಿ ಅಂಡನ್ನು ಬಿಸಿ ಮಾಡುವ ಬದಲು ಈ ಪಾರ್ಕ್ನಲ್ಲಿ ಓಡು… ಅಂಡಿನ ಬದಲು ಕಾಲಿನ ಪಾದವನ್ನು ಬಿಸಿ ಮಾಡು “ ಅಂದರು .ಇದನ್ನ ಅಜ್ಜಿ ಕೇಳಿ …ಏನ್ ರೀ ನೀವು .. ಪಾಪದ ಹುಡುಗ .. ಯಾಕೆ ಏನೇನೋ ಮಾತಾಡುತ್ತೀರಿ … ಅಂತ ಹೇಳಿ ಮುಂದೆ ಹೋದರು. ನಾನು ಒಂದೈದು ನಿಮಿಷ ಹಾಗೆ ಅವರನ್ನ ನೋಡುತ್ತಾ … ear ಫೋನ್ ಹಾಕೊಂಡು ನಡೆದೆ. “ಅಣ್ಣಾವರ ಭಾಗ್ಯವಂತರು ಚಿತ್ರದ ‘ನಿನ್ನ ನನ್ನ ಮನವು…. ‘ “ಹಾಡು ಮೊಳಗಿಸಿತು . ನನಗೆ ಗೊತ್ತಿಲ್ಲದೆ ಕಣ್ಣಾಲಿಗಳು ತೇವ ಗೊಂಡವು .

Article contribution-Karthik Bhat

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..