1687

ಸಾ ಪಾ ಸಾ..

ಸಾನ್ವಿಗೆ ಇಂದು ಏನೋ ಸಂಭ್ರಮ. ಆಫೀಸಿಗೆ ರಜ ಇದ್ದಿದ್ದು ಒಂದು ಕಾರಣವಾದರೆ, ಅಮ್ಮನ ಮನೆಗೆ ತುಂಬಾ ದಿನಗಳ ನಂತರ ತಾನೊಬ್ಬಳೇ ಹೋಗುತ್ತಿರುವುದು ಸಾನ್ವಿಯ ಖುಷಿಯನ್ನು ದುಪ್ಪಟ್ಟು ಮಾಡಿತ್ತು. ಮನೆ ಕೆಲಸವನ್ನೆಲ್ಲಾ ಬೇಗ ಮುಗಿಸಿ, ‘ತವರು ಮನೆ ಅಂದ ತಕ್ಷಣ ನಿಮ್ಮಮ್ಮನ ಹುರುಪು ನೋಡು ಪುಟ್ಟಾ’ ಅಂತ ರೇಗಿಸುತ್ತಿದ್ದ ಗಂಡ ಮತ್ತು ಅರ್ಥ ಆಗದಿದ್ದರೂ ಅಪ್ಪನ ಮಾತಿಗೆ ಯಾವಾಗಲೂ ಸಾಥ್ ಕೊಡುವ ಪುಟ್ಟಾಣಿ ಫಲ್ಗುಣಿಯನ್ನು ನೋಡಿ ಒಮ್ಮೆ ನಕ್ಕು ಹೊರಡಲು ಸಿದ್ಧವಾದಳು.

‘ತವರು ಮನೆ ಒಂದೇ ಊರಲ್ಲಿ ಇದ್ರೂ ಕೆಲಸ, ಮನೆ ಜವಾಬ್ದಾರಿಗಳ ಮಧ್ಯೆ ಅಪ್ಪ ಅಮ್ಮನನ್ನು ನೋಡೋದು ಕೇವಲ video ಕಾಲ್ ಮೂಲಕ ಆಗಿ ಹೋಗಿದೆ. ಎಷ್ಟು ಬೇಗ ನಾವು ಹೆಣ್ಣು ಮಕ್ಕಳು ತಂದೆ ತಾಯಿಯನ್ನು ಬಿಟ್ಟು ಬದುಕೋದು ಕಲಿತಿವಿ, ಹೊಸ ಪರಿವಾರವನ್ನು ನಮ್ಮ ಪರಿವಾರವಾಗಿಸಿಕೊಂಡು ಜೀವನ ಮಾಡ್ತೀವಿ. ಇನ್ನು ನಾವು ತಾಯಿಯಾದ ಮೇಲಂತೂ ಮುಗಿಯಿತು. ಕೆಲಸ ಜಾಸ್ತಿ, ಜವಾಬ್ದಾರಿ ಕೂಡ ಜಾಸ್ತಿ ಜೊತೆಗೆ ತವರು ಮನೆ ಜೊತೆ ಆಗೋ ಗ್ಯಾಪ್ ಕೂಡ ಜಾಸ್ತಿ. ಆದ್ರೆ ಇವತ್ತು ಸಮರ್ಥ “ಪಾಪುನ ನಾನು ನೋಡ್ಕೋತೀನಿ, ನೀನು ಅಮ್ಮನ ಮನೆಗೆ ಹೋಗಿಬಾ” ಅಂದಾಗ ಎಷ್ಟು ಖುಷಿಯಾಯ್ತು. ಖುಷಿಯಲ್ಲಿ ಅವನಿಗೊಂದು ಮುತ್ತು ಕೊಟ್ಟು, ತಕ್ಷಣವೇ ಅಮ್ಮನಿಗೆ ಫೋನಾಯಿಸಿದ್ದೆ ತಿಂಡಿಗೆ ಪರೋಟನೇ ಬೇಕೆಂದು.ಅಮ್ಮನಿಗೂ ಸಂಭ್ರಮ, ಅಮ್ಮನಿಗಿಂತ ಅಪ್ಪನಿಗೆ ಯಾವಾಗಲೂ ಜಾಸ್ತಿ ಖುಷಿ, ಎಷ್ಟಾದರೂ ನಾನು ಕೂಡ ಫಲ್ಗುಣಿಯ ತರಹ “ಅಪ್ಪನ ಮಗಳು” ಅಲ್ವಾ?’ ಹೀಗೆ ಯೋಚನಾಲಹರಿಯಲ್ಲಿ ಮುಳುಗಿದ್ದ ಸಾನ್ವಿಗೆ ಅಮ್ಮನ ಮನೆ ಬಂದಾಗಲೇ ಎಚ್ಚರವಾದದ್ದು

 ಕಿಟಕಿಯಿಂದಲೇ ಅಮ್ಮ ಮಾಡುತ್ತಿದ್ದ ಅಡುಗೆಯ ಘಮಲು ಬರುತ್ತಿತ್ತು. ಅಮ್ಮನ ಕೈ ರುಚಿಯನ್ನು ನೆನೆದೇ ಅವಳ ಬಾಯಲ್ಲಿ ನೀರೂರಿತು. ಬಿಸಿ ಪರೋಟಗೆ ಅಪ್ಪ ಪ್ರೀತಿ ಇಂದ ಬೆಣ್ಣೆ ಹಾಕ್ತಾ ಇದ್ರೆ, ‘diet ಮನೆ ಹಾಳಾಗಲಿ’ ಅಂತ ನೆಮ್ಮದಿ ಇಂದ ಹೊಟ್ಟೆ ತುಂಬಾ ತಿಂದಳು. ಅಮ್ಮನ ಜೊತೆ ಮುಗಿಯದಷ್ಟು ಮಾತಾಡಿ, ಅಪ್ಪನ ಹತ್ರ ಇನ್ನೂ ಚೆನ್ನಾಗಿ ಉಪಚಾರ ಮಾಡಿಸಿಕೊಂಡು, ತಮ್ಮನ ತಲಹರಟೆ ಬಗ್ಗೆ ಅಪ್ಪ ಅಮ್ಮನಿಗೆ ಚಾಡಿ ಹೇಳಿ ಕೊಟ್ಟು ಅವನ ಹತ್ರ ಬೈಸ್ಕೊಳ್ಳೋವಾಗ ಸಾನ್ವಿ ಹದಿನೈದು ವರ್ಷ ಹಿಂದಿನ ಸಾನ್ವಿಯಂತಾಗಿದ್ದಳು.

ಹೀಗೆ ನೆಮ್ಮದಿಯಾಗಿ ಕಾಲಹರಣೆ ಮಾಡುತ್ತಿದ್ದ ಸಾನ್ವಿಗೆ ಸಮರ್ಥನ whatsapp ಸಂದೇಶ ವಾಸ್ತವಕ್ಕೆ ಬರುವಂತೆ ಮಾಡಿತು. ಸಂದೇಶವನ್ನು ತೆರೆದರೆ, ಮಗಳು ಫಲ್ಗುಣಿ ತನ್ನ ತೊದಲು ನುಡಿಯಿಂದ ಮುದ್ದು ಮುದ್ದಾಗಿ “ವರ ವೀಣಾ ಮೃದು ಪಾಣಿ” ಹಾಡಿರುವ ವಿಡಿಯೋ ನೋಡಿ ಸಾನ್ವಿಯ ಕಣ್ಣಾಲಿಗಳು ತುಂಬಿ ಕೊಂಡಿತು. ‘ಎಷ್ಟು ಬಾರಿ ಅದನ್ನು ನೋಡಿದರೂ ಮತ್ತೊಮ್ಮೆ ನೋಡಬೇಕೆನಿಸುತ್ತದೆ ಅಂದುಕೊಳ್ಳುತ್ತಾ’ ಸಾನ್ವಿ ಆ ವಿಡಿಯೋ ಅನ್ನು ತನ್ನ ವಾಟ್ಸಪ್ಪ್ ಸ್ಟೇಟಸ್ ಹಾಕಿ ಅದನ್ನು ಎಲ್ಲಾ ವಾಟ್ಸಪ್ಪ್ ಗ್ರೂಪ್ಗಳ್ಲಲೂ ಕಳಿಸಿದಳು.

‘ಅಮ್ಮ-ಅಪ್ಪ, ನೋಡಿ ಇಲ್ಲಿ ನಿಮ್ ಮೊಮ್ಮಗಳು ಎಷ್ಟ್ ಮುದ್ದಾಗಿ ಹಾಡು ಹೇಳಿದ್ದಾಳೆ’ ಎಂದು ಅವರಿಗೂ ಖುಷಿ ಇಂದ ತೋರಿಸಿದಳು. ಅಜ್ಜಿ ತಾತನಿಗೆ ಮೊಮ್ಮಗಳು ಹಾಡಿರೋದು ನೋಡಿ ತುಂಬಾ ಖುಷಿಯಾಯಿತು.

‘ನೋಡಪ್ಪ, ಹೆಂಗೆ ನನ್ ಮಗಳು? ಒಂದೆರಡು ಸಲ ಅವಳಿಗೆ ಹೇಳಿ ಕೊಟ್ಟಿರೋದು ಅಷ್ಟೇ ಆ ಹಾಡು, ಆಗಲೇ ಎಷ್ಟು ಸ್ಪಷ್ಟವಾಗಿ ಹೇಳ್ತಾಳೆ ಅಲ್ವಾ?’ ಎಂದು ಅಪ್ಪನೆದುರು ಬೀಗಿದಳು.

 ಅವಳ ಅಪ್ಪ ಹುಸಿನಕ್ಕು ಸುಮ್ಮನಾದರು. ತನ್ನ ಹುರುಪಿಗೆ ಅಪ್ಪನಿಂದ ಏನೂ ಪ್ರತಿಕ್ರಿಯೆ ಸಿಗದಿದ್ದನ್ನು ನೋಡಿ ಸಾನ್ವಿಗೆ ಕೋಪ ಬಂತು.’ಏನಪ್ಪಾ, ನಾನ್ ಇಷ್ಟು ಜೋಶ್ ಅಲ್ಲಿ ಹೇಳ್ತಿದೀನಿ ನೀನ್ ಏನೋ ಸುಮ್ನೆ ಫಾರ್ಮಾಲಿಟಿಗೆ ನಕ್ಕಿದ್ಯಲ್ಲ…ಯಾಕೆ?’ ಎಂದಳು ಅಸಮಾಧಾನ ವ್ಯಕ್ತ ಪಡಿಸುತ್ತಾ

 ‘ಒಂದು ನಿಮಿಷ ಬಂದೆ ಇರು’ ಎಂದು ಅವರ ಕೊಣೆಗೆ ಹೋದ ಅಪ್ಪ, ಬರುವಾಗ ಕೈ ಅಲ್ಲಿ ಒಂದು ಪುಟ್ಟ ಚೀಲವನ್ನು ತಂದರು.

ಅವರ ಕೈ ಅಲ್ಲಿ ಇರುವುದು ಏನೆಂದು ಗುರುತಿಸಲು ಸಾನ್ವಿಗೆ ಹೆಚ್ಚು ಸಮಯ ಬೇಕಿರಲಿಲ್ಲ. ಅಪ್ಪನ ಕೈ ಅಲ್ಲಿ ತನ್ನ ಶ್ರುತಿ ಪೆಟ್ಟಿಗೆ ಮತ್ತು ಸಂಗೀತ ಪುಸ್ತಕದ ಚೀಲವನ್ನು ನೋಡಿ ಸಾನ್ವಿಗೆ ಏನು ಹೇಳಬೇಕೆಂದು ತೋಚಲಿಲ್ಲ. ನೂರಾರು ಭಾವನೆಗಳು, ನೂರಾರು ಪ್ರಶ್ನೆಗಳು ಅವಳ ಮನಸಲ್ಲಿ ಆಗಲೇ ಮನೆ ಮಾಡಿತ್ತು.

 ಈಗ ಮಾತನಾಡುವ ಸರದಿ ಅಪ್ಪನದಾಗಿತ್ತು -‘ ಇವತ್ತು ನಿನ್ನ ಮಗಳು ಹಾಡಿದಾಗ, ನೀನು ಸಂಭ್ರಮ ಪಟ್ಟ ಹತ್ತರಷ್ಟು ಖುಷಿ ನೀನು ಮೊದಲ ಬಾರಿ ಹಾಡಿದಾಗ ನನಗೆ ಆಗಿತ್ತು. ಅಂದೇ ನಿನ್ನನ್ನು ಸಂಗೀತ ಶಾಲೆಗೆ ಸೇರಿಸೋ ನಿರ್ಧಾರ ಮಾಡಿದ್ದೆ ನಾನು. ತಡ ಮಾಡದೆ ಒಳ್ಳೆಯ ಗುರುಗಳನ್ನು ಗೊತ್ತು ಮಾಡಿ ಸಂಗೀತ ಪಾಠ ಶುರು ಮಾಡಿಸಿಯೂ ಬಿಟ್ಟಿದ್ದೆ. ನೀನೂ ಕೂಡ ಚೆನ್ನಾಗಿ ಸಂಗೀತ ಕಲಿತು ಶಾಲೆಯಲ್ಲಿ ಅಲ್ಲದೇ ಬೇರೆ ಕಡೆ ಕೂಡ ಸ್ಪರ್ಧೆಗಳಲ್ಲಿ ಗೆದ್ದಾಗ ನನ್ನೆದೆ ಖುಷಿಯಿಂದ ಉಬ್ಬಿಹೋಗುತ್ತಿತ್ತು.

 ನೀನು ಹಾಡ್ತಾ ಇದ್ದ “ಹರಿಯ ನೆನೆಯದ ನರ ಜನ್ಮವೇಕೆ”ಮತ್ತೆ “ಓ ನನ್ನ ಚೇತನ” ಹಾಡುಗಳು ನಿನ್ನ ಹತ್ರ ಅದೆಷ್ಟು ಬಾರಿ ಹೇಳಿಸಿದೆನೋ ನನಗೇ ಗೊತ್ತಿಲ್ಲ. ಆಫೀಸಿನ ಗಲಾಟೆಗಳು ತಲೆನೋವುಗಳೆಲ್ಲಾ ನಿನ್ನ ಹಾಡು ಕೇಳಿದರೆ ಮಾಯವಾಗಿ ಬಿಡುತ್ತಿತ್ತು.

 ನಮ್ಮ ಮನೆಯ ಪುಟ್ಟ ಕೋಗಿಲೆ ಆಗಿದ್ದ ನೀನು. ಓದು-ಪರೀಕ್ಷೆಗಳ ಗಲಾಟೆಯ ಮಧ್ಯದಲ್ಲಿ ಆಗಾಗ ನಿನ್ನ ಸಂಗೀತ ಅಭ್ಯಾಸ ನಿಂತರೂ, ಅದನ್ನೆಂದಿಗೂ ನೀನು ಸಂಪೂರ್ಣವಾಗಿ ಮರೆತಿರಲಿಲ್ಲ.

 ಆದರೆ, ಓದು ಮುಗಿದು ನೀನು ಕೆಲಸಕ್ಕೆ ಸೇರಿದಾಗ ನಿನ್ನ ಮತ್ತು ಸಂಗೀತದ ನಂಟು ಕಡಿಮೆಯಾಗಿದ್ದು, ಹಾಗು ಮದುವೆಯ ನಂತರ ಆ ನಂಟು ಸಂಪೂರ್ಣವಾಗಿ ನಶಿಸಿ ಹೋಗಿದ್ದನ್ನು ಕೂಡ ನಾನು ಗಮನಿಸುತ್ತಲೇ ಇದ್ದೆ.

 ಮದುವೆ ಆದಮೇಲೆ ಮನೆಯಲ್ಲಿ ಇದ್ದ ನಿನ್ನ make up kit ತೊಗೊಂಡು ಹೋದ ನೀನು, ಶ್ರುತಿ ಪೆಟ್ಟಿಗೆ ಮತ್ತು ಸಂಗೀತ ಪುಸ್ತಕಗಳನ್ನು ಇಲ್ಲೇ ಬಿಟ್ಟು ಹೋಗಿದ್ದು ನನ್ನ ಮನಸ್ಸಿಗೆ ಎಷ್ಟು ನೋವು ಮಾಡಿತ್ತು ಅಂತ ಹೇಳೋಕೆ ಆಗಲ್ಲ.

“ಸಾನ್ವಿ, ಶ್ರುತಿ ಪೆಟ್ಟಿಗೆ ತೊಗೊಂಡು ಹೋಗೆ ನಿನ್ ಗಂಡನ ಮನೆಗೆ” ಅಂತ ನಿಮ್ಮಮ್ಮ ಅಂದಾಗ, “ಅಯ್ಯೋ, ಅದು ಇಲ್ಲೇ ಇರಲಿ ಬಿಡಮ್ಮ  … ನನ್ ಗಂಡನ ಮನೆಯಲ್ಲಿ ಜಾಗ ಇಲ್ಲ…ಇನ್ನು ಯಾವಾಗಾದ್ರೂ ತೊಗೊಂಡು ಹೋಗ್ತೀನಿ” ಅಂತ ನೀನು ಉತ್ತರಿಸಿದ್ದನ್ನ ನಾನು ಇಂದಿಗೂ ಮರೆತಿಲ್ಲ.

“ನನ್ನ ಮಗಳು ಎಲ್ಲರಂತಲ್ಲಾ, ಏನಾದರು ಸಾಧನೆ ಮಾಡೇ ಮಾಡುತ್ತಾಳೆ” ಅಂತ ತುಂಬಾ ನಿರೀಕ್ಷೆಯಲ್ಲಿ ಇದ್ದ ನನಗೆ, ನೀನೂ ಕೂಡ ಎಲ್ಲರಂತೆ ಕೇವಲ ಗಂಡ-ಮನೆ-ಮಕ್ಕಳು ಅಂತ ಇರುವುದು ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ನಿನ್ನ ಕಲೆಯನ್ನು, ನಿನ್ನ ಧ್ವನಿಯಲ್ಲಿರುವ ಆ ಸರಸ್ವತಿ ದೇವಿಯನ್ನು ನೀನು ಮರೆತಿರುವುದು ತುಂಬಾ ವಿಷಾದನೀಯ ಮಗಳೇ’ ಇಷ್ಟು ಮಾತನಾಡುವಷ್ಟರಲ್ಲಿ ಅಪ್ಪನ ಕಣ್ಣು ತುಂಬಿದ್ದು, ಅವರು ಗದ್ಗದಿತರಾಗಿದ್ದು ಸಾನ್ವಿಯ ಗಮನಕ್ಕೆ ಬಾರದೇ ಇರಲಿಲ್ಲ.

ಅಪ್ಪನ ಮನಸಿನಲ್ಲಿ ಇಷ್ಟೊಂದು ನೋವಿರುವುದು, ಆ ನೋವಿಗೆ ಕಾರಣ ತಾನಾಗಿರುವುದು ಸಾನ್ವಿಗೆ ಇನ್ನೂ ಬೇಜಾರಾಯಿತು.

ಅಪ್ಪ ಹೇಳಿದ ಮಾತುಗಳಲ್ಲಿ ಇರುವ ಸತ್ಯ ಅವಳಿಗರಿವಾಯಿತು. ಇನ್ಮೇಲೆ ಫಲ್ಗುಣಿಯ ಜೊತೆ ತಾನೂ ಮತ್ತೆ ಸಂಗೀತ ಅಭ್ಯಾಸ ಶುರು ಮಾಡಬೇಕು, ನನ್ನ ಕಲೆಗೆ ನಾನು ನ್ಯಾಯ ಒದಗಿಸಬೇಕು ಎಂದುಕೊಂಡು ಹೋಗಿ ಅಪ್ಪನ ಮಡಿಲಲ್ಲಿ ಮಲಗಿದಳು.

ಮೂಲೆಯಲಿದ್ದ ಶ್ರುತಿಪೆಟ್ಟಿಗೆ ಮೌನವಾಗಿಯೇ ಸಾ…ಪಾ…ಸಾ ನುಡಿಸುತ್ತಿದ್ದಂತೆ ಅಪ್ಪ-ಮಗಳು ಇಬ್ಬರಿಗೂ ಭಾಸವಾಯಿತು

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..