- By Shwetha Sharath
- Wednesday, January 17th, 2018
ಕೆಲವು ಟಿವಿ ನ್ಯೂಸ್ ಮತ್ತು ಮನರಂಜನಾ ಮಾಧ್ಯಮಗಳು ಸಂಕ್ರಾಂತಿ ಹಬ್ಬವನ್ನು ಬಿಂಬಿಸಿದ ರೀತಿ ಅತ್ಯಂತ ಹಾಸ್ಯಾಸ್ಪದ ಮತ್ತು ನಿರೂಪಿಸಿದ ರೀತಿ ಅವರ ಉಡಾಫೆ ಮತ್ತು ಮೂರ್ಖತನಕ್ಕೆ ಸಾಕ್ಷಿಯಂತಿತ್ತು.
ಹಬ್ಬದ, ಅನಿವಾರ್ಯತೆ – ಅವಶ್ಯಕತೆ – ಸಹಜತೆ – ಸ್ವಾಭಾವಿಕತೆ – ವಾಸ್ತವತೆ – ಪ್ರಾಮುಖ್ಯತೆಗಳನ್ನು ಆ ಸಂಧರ್ಭದ ರೈತರ ಮಾನಸಿಕ ಸ್ಥಿತಿಗತಿಗಳನ್ನು ವಿಮರ್ಶೆಗೆ ಒಳಪಡಿಸಿ ಮುಂದಿನ ಪೀಳಿಗೆಗೆ ಅದನ್ನು ಅರ್ಥಮಾಡಿಸುವುದನ್ನು ಬಿಟ್ಟು ಮಂಗನ ಕೈಲಿ ಮಾಣಿಕ್ಯ ಸಿಕ್ಕಂತಾಗಿ ಇಡೀ ಹಬ್ಬವನ್ನು ಸರ್ಕಸ್ ನ ಜೋಕರ್ ಗಳಂತೆ ಬಿಂಬಿಸಿ ರೈತರನ್ನು ವಿಚಿತ್ರ ಪ್ರಾಣಿಗಳಂತೆ ಚಿತ್ರಿಸಿದರು.
ಬಹುಶಃ ಜೀವನದಲ್ಲಿ ಒಮ್ಮೆಯೂ ನಿಜವಾದ ಕೃಷಿ ಭೂಮಿಯನ್ನು ಸ್ಪರ್ಶಿಸದ, ಬಣ್ಣದ ಲೋಕದ ನಟನಟಿಯರಿಗೆ, ವಿಶೇಷವಾಗಿ ತಯಾರಿಸಿದ ರೈತರ ವೇಷದ ಬಟ್ಟೆಗಳನ್ನು ತೊಡಿಸಿ ಅಲಂಕಾರ ಮಾಡಿ ಪೆದ್ದು ಪೆದ್ದಾಗಿ ಮಾತನಾಡಿಸಿದರು.
ನಮ್ಮ ಸಂಸ್ಕೃತಿಯ ವಾಹಕರಂತೆ ಕೆಲಸ ಮಾಡಬಹುದಾದ ಸಾಧ್ಯತೆ ಇರುವ ಮಾಧ್ಯಮಗಳು ತಮ್ಮ ಮೌಡ್ಯ, ಹುಚ್ಚುತನ, ಅಪ್ರಬುದ್ದತೆಯಿಂದ ಇಡೀ ಸಾಂಸ್ಕೃತಿಕ ಲೋಕಕ್ಕೇ ಅಪಾಯಕಾರಿಯಾಗುತ್ತಿರುವುದು ದುರಂತ.
ಒಂದು ಕಡೆ ಜ್ಯೋತಿಷಿಗಳ ಮುಖಾಂತರ ಮೌಡ್ಯಗಳ ಬಿತ್ತನೆ ಮಾಡುತ್ತಾ, ಇನ್ನೊಂದು ಕಡೆ ಬಣ್ಣದ ವೇಷದಾರಿಗಳಿಂದ ಮಂಗನಾಟ ಆಡಿಸುತ್ತಾ,
ಮತ್ತೊಂದೆಡೆ ಕಳೆಗೂ ಬೆಳೆಗೂ ವ್ಯತ್ಯಾಸವೇ ಇಲ್ಲದಂತ ಫಸಲು ಸೃಷ್ಟಿಸಿ ಇಡೀ ವ್ಯವಸ್ಥೆಯನ್ನು ಹಾದಿ ತಪ್ಪಿಸುತ್ತಿವೆ.
ಭಾರತದಲ್ಲಿ,
ಈಗಾಗಲೇ ಅತ್ಯಂತ ವೇಗವಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವ ರೈತ ಸಮುದಾಯ ಕೊನೆಗೊಂದು ದಿನ ತನ್ನ ಸಂತತಿಯೇ ನಾಶವಾಗುವ ಸ್ಥಿತಿ ತಲುಪಬಹುದು. ಆಹಾರ ಧಾನ್ಯಗಳನ್ನು ಬಹುತೇಕ ಹೊರ ದೇಶಗಳಿಂದ ಅಪಾರ ಹಣ ಕೊಟ್ಟು ಆಮದು ಮಾಡಿಕೊಳ್ಳಬೇಕಾಗಬಹುದು. ಒಂದು ಮಟ್ಟದಲ್ಲಿ ಇದು ಈಗಾಗಲೇ ಪ್ರಾರಂಭವಾಗಿದೆ.
ನಾವು ಸಹ ಮನರಂಜನೆಯ ಹೆಸರಿನಲ್ಲಿ ಹಿತಾನುಭವ ಅನುಭವಿಸಿತ್ತಾ ಎಳ್ಳು ಬೆಲ್ಲ ಕಬ್ಬನ್ನು ಸವಿಯುತ್ತಾ ಅದರ ಸೃಷ್ಟಿಕರ್ತರನ್ನೇ ಮರೆತಿದ್ದೇವೆ ಮತ್ತು ತಪ್ಪಾಗಿ ಅರ್ಥಮಾಡಿಕೊಂಡಿದ್ದೇವೆ.
ಇದು ಅತ್ಯಂತ ಅಪಾಯಕಾರಿ.
ಆದಷ್ಟೂ ಬೇಗ ಮತ್ತೆ,
” ಜೈ ಕಿಸಾನ್ ” ನಮ್ಮ ಬದುಕಿನ ಭಾಗವಾಗಬೇಕಿದೆ.
ಕೇವಲ ಕಪಟ ಘೋಷಣೆಗೆ ಅಂತ್ಯವಾಡಬೇಕಿದೆ.
ನಮ್ಮ ದೇಶದ ಹಿತದೃಷ್ಟಿಯಿಂದ ಇದು ತೀರಾ ಅವಶ್ಯಕ…….
ಕೊನೆಯದಾಗಿ :
ತಮಾಷೆಯ ಕಾರ್ಯಕ್ರಮಗಳನ್ನು ತಮಾಷೆಯಾಗಿಯೇ ಮಾಡಿ . ಎಲ್ಲರಿಗೂ ಬೇಕಾಗಿರುವುದು ಮನೋರಂಜನೆ .ಟಿವಿ ಚಾನೆಲ್ ಇರುವುದು ಅದೇ ಉದ್ದೇಶಕ್ಕಾಗಿ .. 🙂 ಆದರೆ ಯಾವ ಕಾರ್ಯಕ್ರಮಕ್ಕೆ ಯಾವ ರೀತಿಯ ನಿರೂಪಣೆ ಅಗತ್ಯವೋ ಅದನ್ನೇ ಮಾಡಬೇಕು . ನೋಡುಗರಿಗೆ “ಇದೇನಪ್ಪ ” ಅನ್ನಿಸಬಾರದು . ನಾವು ನಿಮ್ಮ ಚಾನೆಲ್ಗಳ ವಿರೋಧಿಗಳಲ್ಲ. ನಿಮ್ಮ ಅಭಿಮಾನಿಗಳು ..ನಿಮ್ಮ ಚಾನೆಲ್ ನ ವೀಕ್ಷಕರು 🙂