3098

ಹಿಲಿಯಾಣ ಯೋಗಾರೂಡ ನರಸಿಂಹ ದೇವಸ್ಥಾನ

ವಿಶೇಷ ವರದಿ

ಹಿಲಿಯಾಣ ಯೋಗಾರೂಡ ನರಸಿಂಹ ದೇವಸ್ಥಾನ: ಜೀರ್ಣೋದ್ದಾರ ಕೆಲಸಗಳಿಗೆ ಆರ್ಥಿಕ ಸಹಕಾರ ಕೋರಿ ಮನವಿ!!

ಪೊಡವಿಗೊಡೆಯ ಶ್ರೀಕೃಷ್ಣನ ನೆಲೆವೀಡು ಉಡುಪಿ ಜಿಲ್ಲೆ /ಉಡುಪಿ ತಾಲೂಕಿನ ಹಿಲಿಯಾಣ ಗ್ರಾಮದ ಸುಂದರ ಪ್ರಾಕೃತಿಕ ಹಸುರಿನ ಸಿರಿಯಲ್ಲಿ ಮೈದಳೆದು ನಿಂತಿರುವ ಪ್ರಾಚೀನವೂ, ಪುಣ್ಯತಮವೂ ಆಗಿರುವ ಪವಿತ್ರತಮ ಸನ್ನಿಧಿಯೇ ಶ್ರೀ ಯೋಗಾರೂಢ ಲಕ್ಷ್ಮೀನರಸಿಂಹ ದೇವಸ್ಥಾನ. ಈ ಬಹುಕಾರಣಿಕ ವಿಶಿಷ್ಟ ದೇಗುಲ ಇದೀಗ ಭವ್ಯವಾಗಿ ಜೀಣೋದ್ದಾರಗೊಳ್ಳುತ್ತಿದ್ದು ಆಸ್ಥಿಕ ಭಕ್ತರಿಂದ ಆರ್ಥಿಕ ಸಹಕಾರದ ನಿರೀಕ್ಷೆಯಲ್ಲಿದೆ.
ದೇವಳದ ಭವ್ಯ ಇತಿಹಾಸ ಹೀಗುಂಟು:
ದೇವಾಲಯಗಳ ಬೀಡು, ಜಗತ್ಪ್ರಸಿದ್ದ ತೌಳವ ನಾಡಿನ ರಾಜಧಾನಿ ಬಾರಕೂರು ಸಂಯುಕ್ತ ಸಂಸ್ಥಾನದ ಪುರಾಣ ಪುಣ್ಯ ದೇಗುಲಗಳ ಪರಂಪರೆಯಲ್ಲಿ ಹಿಲಿಯಾಣದ ಯೋಗರೂಢ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನವೂ ಒಂದು ಎಂಬ ಪುಣ್ಯಚರಿತ್ರೆ ಮೈಮನ ರೋಮಾಂಚನ ಗೊಳಿಸುವಂತಹದ್ದು. ಸರಿಸುಮಾರು 13 ನೇ ಶತಮಾನಕ್ಕೂ ಮೊದಲೇ ನಿರ್ಮಾಣಗೊಂಡ ಈ ಯೋಗಾರೂಢ ನರಸಿಂಹನ ಭವ್ಯ ಸನ್ನಿಧಿ ಇತಿಹಾಸದ ಕಾಲಘಟ್ಟದಲ್ಲಿ ತುಳುನಾಡಿನ ಪ್ರಮುಖ ದೇವಳವಾಗಿ ಮೆರೆದಾಡಿತ್ತು ಎಂಬ ಸತ್ಯ ಇಲ್ಲಿನ ಐತಿಹ್ಯದ ಕುರುಹುಗಳಿಂದ ನಿಚ್ಚಳವಾಗಿ ನಮಗೆ ಗೋಚರಿಸುತ್ತದೆ. ಅಂದಿನ ಬಾರಕೂರು ಸಂಯುಕ್ತ ಸಂಸ್ಥಾನವನ್ನಾಳಿದ ವಿಜಯನಗರ ಸಾಮ್ರಾಜ್ಯದ ಅರಸರು, ಮತ್ತವರ ಸಾಮಂತರು ಈ ದೇವಳಕ್ಕೆ ಬೇಟಿಕೊಟ್ಟು ಇದರ ಕಾರಣಿಕ ಶಕ್ತಿಗೆ ತಲೆಭಾಗಿ ಸಾಕಷ್ಟು ದೇಣಿಗೆ ಕೊಟ್ಟಿರುವುದನ್ನು ಇಲ್ಲಿ ದೊರೆತ ಶಿಲಾ ಶಾಸನವೊಂದು ಬೆಳಕು ಚೆಲ್ಲುತ್ತದೆ.

ರುದ್ರಾಕ್ಷಿ ಶಿಲೆಯ ಅಪರೂಪದ ಮೂರ್ತಿ:
ಅತ್ಯಂತ ಪ್ರಾಚೀನವೂ ಅಪರೂಪವು ಎನಿಸಿರುವ ಪವಿತ್ರ ರುದ್ರಾಕ್ಷಿ ಶಿಲೆಯಲ್ಲಿ ಕೆತ್ತಲ್ಪಟ್ಟ ಮಂಗಳಮಯ ಲಕ್ಷ್ಮಿ ನರಸಿಂಹ ಸ್ವಾಮಿಯ ಮೂರ್ತಿ ಇಲ್ಲಿ ಪ್ರತಿಷ್ಟಾಪಿತಗೊಂಡಿದೆ. ಶಂಖಚಕ್ರಧಾರಿಯಾಗಿ ಮೂರು ಕಣ್ಣುಗಳನ್ನು ಹೊಂದಿರುವ ಈ ಮೂರ್ತಿಯಲ್ಲಿ ಲಕ್ಷ್ಮೀ ಮತ್ತು ಮಹಾಗಣಪತಿಯ ದಿವ್ಯ ಸಾನಿಧ್ಯವು ಇದೆ.
ಅತ್ಯಂತ ಎತ್ತರದ ಪ್ರದೇಶದಲ್ಲಿ ಇರುವ ಈ ದೇವಳ ಇತಿಹಾಸದ ಕಾಲಘಟ್ಟದಲ್ಲಿ ಅತ್ಯಂತ ವೈಭವದಿಂದ ಮೆರೆದಾಡಿತ್ತು. ಪ್ರತಿದಿನವೂ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯುತಿದ್ದರು. ಸುತ್ತಲಿನ ಎಲ್ಲ ಭೂಮಿಗಳು ಈ ದೇವಸ್ಥಾನಕ್ಕೆ ಸಂಬಂಧಪಟ್ಟಿದ್ದವುಗಳೇ ಆಗಿದ್ದವು. ಆದರೆ ಉತ್ತರ ಸಿಗದ ಇತಿಹಾಸದ ಅನೇಕ ದುರಂತಗಳಿಗೆ ಸಿಕ್ಕು ತುಳುನಾಡಿನ ಅನೇಕ ದೇವಾಲಯಗಳು ಮೂಲೆಗೆ ತಳ್ಳಲ್ಪಟ್ಟಂತೆ ಈ ಸನ್ನಿದಿಯೂ ಸ್ವಲ್ಪ ಮಟ್ಟಿಗೆü ತನ್ನ ಭವ್ಯತೆಯನ್ನು ಕಳೆದುಕೊಂಡು ಮೂಲೆಗುಂಪಾಗಿದ್ದು ಸತ್ಯ. ಇಂತಹ ಯೋಗಾರೂಢ ಲಕ್ಷ್ಮೀನರಸಿಂಹ ಸನ್ನಿಧಿಯ ಭವ್ಯತೆಯ ಪುನರ್ ನಿರ್ಮಾಣದ ಸದುದ್ದೇಶದೊಂದಿಗೆ ದೇವಳದ ಜೀರ್ಣೋದ್ದಾರ ಕೆಲಸಗಳು ಈಗಾಗಲೇ ಆರಂಭಗೊಂಡಿದೆ.

ಜೀಣೋದ್ದಾರ ಕೈಂಕರ್ಯಗಳ ಬಗ್ಗೆ:
ಶ್ರೀ ಯೋಗಾರೂಡ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ 2004ರಲ್ಲಿ ಆರಂಭಗೊಂಡು ಭಗವಧ್ಬಕ್ತರ ಸಹಕಾರದೊಂದಿಗೆ ಶಿಲಾಮಯ ಗರ್ಭಗುಡಿ, ತೀರ್ಥ ಮಂಟಪ, ತಾಮ್ರದ ಹೊದಿಕೆಯ ಪುಣ್ಯ ಕೆಲಸಗಳ ಕಾರ್ಯ ಈಗಾಗಲೇ ಯಶಸ್ವಿಯಾಗಿ ಮುಗಿದಿದೆ.
ಆದರೆ ಸುತ್ತುಪೌಳಿ, ನೆಲಹಾಸು, ಹೆಬ್ಬಾಗಿಲು, ತೀರ್ಥಬಾವಿ, ನೈವಿದ್ಯದ ಕೋಣೆ, ಪುಷ್ಕರಿಣಿ, ದೇವಳಕ್ಕೆ ಡಾಂಬಾರು ರಸ್ತೆ-ಹೀಗೆ ತೀರಾ ಅಗತ್ಯವಾಗಿರುವ ದೇವಸ್ಥಾನದ ಇನ್ನಿತರ ಕೆಲಸಗಳು ಆರ್ಥಿಕ ಸಹಕಾರದ ಕೊರತೆಯಿಂದ ಕುಟುಂತ್ತಾ ಸಾಗುತ್ತಿದೆ. ತಾಂತ್ರಿಕ ತಜ್ಞರು ಈ ಎಲ್ಲ ಕೆಲಸಗಳಿಗೆ ರೂ 40 ಲಕ್ಷಕ್ಕೂ ಮಿಕ್ಕಿ ಖರ್ಚಾಗಬಹುದೆಂದು ಅಂದಾಜಿಸಿದ್ದಾರೆ.
ದೇವಳದ ಈ ಎಲ್ಲ ಜೀರ್ಣೋದ್ದಾರ ಕಾಮಗಾರಿ ಕೆಲಸಗಳಿಗೆ ಭಗವದ್ಭಕ್ತರ ಸಹಕಾರ ಇದೀಗ ತೀರಾ ಅಗತ್ಯ .ಇತಿಹಾಸದ ಪುಟದಲ್ಲಿ ವೈಭವದಿಂದ ಮೆರೆದಾಡಿದ ಯೋಗರೂಡನ ಈ ಭವ್ಯ ಸನ್ನಿಧಿಯ ಜೀರ್ಣೋದ್ದಾರ ಕೆಲಸಗಳಿಗೆ ತಮ್ಮಿಂದಾಗುವಷ್ಟು ಆರ್ಥಿಕ ಸಹಕಾರ ಮಾಡಿ. ಲಕ್ಷ್ಮೀನರಸಿಂಹ ಸ್ವಾಮಿಯ ಕೃಪೆಗೆ ಪಾತ್ರರಾಗಿ ಎಂದು ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಕೇಳಿಕೊಳ್ಳುತ್ತಿದೆ.
ಆರ್ಥಿಕವಾಗಿ ಸಹಾಯ ಮಾಡುವವರು ಕೆನರಾ ಬ್ಯಾಂಕ್ ಬೆಳ್ವೆ ಇಲ್ಲಿಯ ಉಳಿತಾಯ ಖಾತೆ ನಂ 0647101006925 (IFSC Code:CNRB0000647) ಇದಕ್ಕೆ ಕಳುಹಿಸಿಬಹುದು. ಅಲ್ಲದೆ ಜೀಣೋದ್ದಾರ ಕೆಲಸಗಳ ಕುರಿತ ಹೆಚ್ಚಿನ ಮಾಹಿತಿಗೆ ಮತ್ತು ಈ ಪವಿತ್ರ ಸನ್ನಿಧಿಗೆ ಬೇಟಿ ಕೊಡುವವರು ದೇವಳದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ (ಮೊ.ಸ -9449168059) ಅವರನ್ನು ಸಂಪರ್ಕಿಸಬಹುದು.

ಖಂಡಿತವಾಗಿಯೂ ಕರುನಾಡಿನ ಅತ್ಯಂತ ಅಪರೂಪದ ಶ್ರೇಷ್ಟ ದೇಗುಲಗಳಲ್ಲಿ ಹಿಲಿಯಾಣದ ಈ ದೇವಸ್ಥಾನವು ಒಂದು. ತಪ್ಪದೆ ಒಮ್ಮೆ ಇಲ್ಲಿಗೆ ಬೇಟಿಕೋಡಿ. ಇದರ ಜೀಣೋದ್ದಾರ ಕೆಲಸಗಳಿಗೆ ಸಹಾಯ ಒದಗಿಸಿ!!

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..