3875

“ಥಟ್ ಅಂತ ಹೇಳಿ” ಎಂಬ ಅನಿಯಮಿತ ಜ್ಞಾನ ಭಂಡಾರ

rahul
ಅಂಕಣ : ರಾಹುಲ್ ಹಜಾರೆ
ರಿಯಾಲಿಟಿ ಶೋ ಅಂದ ತಕ್ಷಣ ಅದ್ದೂರಿ ವೇದಿಕೆ, ಸ್ಟಾರ್ ಜಡ್ಜ್.ಗಳು, ದೊಡ್ಡ ದೊಡ್ಡ ಲೈಟಿಂಗ್, ಮಧ್ಯೆ ಹತ್ತು ಹದಿನೈದು ನಿಮಿಷಗಳ ಜಾಹೀರಾತು, ಲಕ್ಷ ಲಕ್ಷ ರೂಪಾಯಿ ಬಹುಮಾನ, ಅರ್ಧಂಬರ್ಧ ಬಟ್ಟೆ ತೊಟ್ಟು ಮೈಕಪ್ ಹಾಕಿಕೊಂಡು ಪರಿಪಕ್ವ ಬುದ್ಧಿ ಇಲ್ಲದ ನಿರೂಪಕರು,ಸೋತು ಹೋದರೆ ಜಗವೇ ಮುಳುಗಿಹೋಯಿತು ಎಂಬ ಹಾಗೆ ಆಡುವ ಸ್ಪರ್ಧಾಳುಗಳು ಒಟ್ಟಿನಲ್ಲಿ ಸಮಾಜಕ್ಕೆ ಕೊಂಚವೂ ಉಪಯೋಗವಿಲ್ಲದೇ ಅಬ್ಬರಿಸಿ ಮರೆಯಾಗುವ ಕಾರ್ಯಕ್ರಮಗಳ ಮಧ್ಯೆ ಸಂಸ್ಕೃತಸ್ಥ ಪ್ರೇಕ್ಷಕ ವರ್ಗವನ್ನು ತನ್ನತ್ತ ಸೆಳೆದು ತನ್ನಲ್ಲಿ ಒಂದು ಮಾಡಿಕೊಂಡ ಕಾರ್ಯಕ್ರಮ ಚಂದನ ವಾಹಿನಿಯ “ಥಟ್ ಅಂಥ ಹೇಳಿ”.

ಸಂಕ್ಷಿಪ್ತವಾಗಿ ಅರ್ಧ ಘಂಟೆಯ ಕಾರ್ಯಕ್ರಮದಲ್ಲಿ ಚಂದನ ವಾಹಿನಿಯವರು ನಮ್ಮಲ್ಲಿ ಉಳಿಸಿಹೋಗುವ ಮೌಲ್ಯಗಳು ಕೂಡಾ ಅಪಾರ.ಇತ್ತೀಚೆಗಷ್ಟೆ 3000 ಕಂತುಗಳನ್ನು ಪೂರೈಸಿರುವ ಈ ಕಾರ್ಯಕ್ರಮ ಭಾರತದ ಅತೀ ಹೆಚ್ಚು ಕಂತುಗಳನ್ನು ಪೂರೈಸಿದ ಕ್ವಿಜ್ ಕಾರ್ಯಕ್ರಮವಲ್ಲದೇ ಲಿಮ್ಕಾ ಬುಕ್.ನಲ್ಲಿಯೂ ಕೂಡಾ ಕಾರ್ಯಕ್ರಮದ ಹೆಸರು ದಾಖಲಾಗಿದೆ. ಇನ್ನೂ ಕೆಲವು ವಿಶೇಷಗಳನ್ನು ಹೇಳಬೇಕೆಂದರೆ ಕೆಲವು ದಿನ ಅಂಧರಿಗೆ,ಜೀವಾವಧಿ ಶಿಕ್ಷೆಗೊಳಗಾದ ಖೈದಿಗಳಿಗೆ,ಏಡ್ಸ್ ರೋಗಿಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕೊಟ್ಟು ಸಮಾಜದ ಮುಖ್ಯವಾಹಿನಿಯಿಂದ ದೂರವಾದವರಲ್ಲೂ ಸಮಾಜದೊಂದಿಗೆ ಬೆರೆಯಲು ಒಂದು ಸಣ್ಣ ಅವಕಾಶ ಕಲ್ಪಿಸುವ ವಿಶೇಷ ಪ್ರಯೋಗ ಮಾಡಿದ್ದಾರೆ. ರಾಜ್ಯೋತ್ಸವ, ವಿಜಯದಶಮಿ,ದೀಪಾವಳಿ, ರಾಷ್ಟ್ರೀಯ ಹಬ್ಬಗಳು ಅಂಥ ದಿನಗಳಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ ಸಾಹಿತಿಗಳು,ಚಿಂತಕರು,ಸಿನಿಮಾ ಕ್ಷೇತ್ರದವರು,ಸಂಗೀತಗಾರರು ಹೀಗೆ ಹಲವು ರಂಗದ ಸಾಧಕರನ್ನು ಸ್ಪರ್ಧಾಳುಗಳಾಗಿ ಆಹ್ವಾನಿಸಿದ್ದಾರೆ. ಹೈಸ್ಕೂಲ್ , ಕಾಲೇಜ್ ವಿದ್ಯಾರ್ಥಿಗಳನ್ನು ಸ್ಪರ್ಧಿಸುವಂತೆ ಮಾಡಿ ಪಠ್ಯಪುಸ್ತಕದಿಂದಾಚೆಗಿನ ಜಗತ್ತನ್ನು ಅವರಿಗೆ ಪರಿಚಯಿಸಿದ್ದಾರೆ. ಒಳಾಂಗಣಕ್ಕಷ್ಟೇ ಸೀಮಿತವಾಗದೆ ಕರ್ನಾಟಕದ ವಿವಿಧ ಪ್ರವಾಸಿತಾಣಗಳಿಗೆ ಭೇಟಿ ನೀಡಿ ಅಲ್ಲಿ ಕಾರ್ಯಕ್ರಮ ನಡೆಸುವ ಮೂಲಕ ಆ ಸ್ಥಳದ ಐತಿಹಾಸಿಕ, ಪೌರಾಣಿಕ ಹಿನ್ನೆಲೆಗಳ ಪರಿಚಯಿಸಿ ಪ್ರವಾಸಿಗರನ್ನು ಅತ್ತ ಸೆಳೆಯುವಲ್ಲಿ ಪರೋಕ್ಷ ಕಾರಣವಾಯಿತು. ಪ್ರಶ್ನೆಗಳ ಆಯ್ಕೆಯೂ ಕೂಡಾ ಗಮನಾರ್ಹವಾಗಿದೆ. ಕನ್ನಡ ಸಾಹಿತ್ಯ ಸಂಸ್ಕೃತಿ, ಜಾನಪದ ಕಲೆಗಳು, ವಿಜ್ಞಾನ,ಗಣಿತ ಅಲ್ಲದೆ ನಮ್ಮ ಶಬ್ದಸಂಗ್ರಹವನ್ನು ಹೆಚ್ಚಿಸುವ ಪದಬಂಧ ಪರ್ಯಾಯ ಪದದ ಪ್ರಶ್ನೆ, ಹೀಗೆ ಎಲ್ಲ ಕ್ಷೇತ್ರಗಳನ್ನು ಸ್ಪರ್ಶಿಸಿ ನೋಡುಗರಿಗೆ ಒಳ್ಳೆಯ ಮಾಹಿತಿಯನ್ನು ಒದಗಿಸುತ್ತದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕಾರ್ಯಕ್ರಮಕ್ಕೆ ಬಹುಮಾನವಾಗಿ ಕೊಡುವುದು ಪುಸ್ತಕ. ಇತ್ತೀಚಿನ ದಿನಗಳಲ್ಲಿ ಅದು ತುಂಬಾ ಅವಶ್ಯಕವೂ ಹೌದು. ದಿನೇ ದಿನೇ ಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿರುವುದರಿಂದ ಪುಸ್ತಕ ಕೊಡುವುದರಿಂದ ಜನರ ವಾಚನಾಭಿರುಚಿ ಹೆಚ್ಚಿಸುವುದರಲ್ಲಿ ಕಾರ್ಯಕ್ರಮ ಆಯೋಜಕರ ಪರೋಕ್ಷ ಪ್ರಯತ್ನವೇ ಸರಿ.

ಇನ್ನು ಕಾರ್ಯಕ್ರಮ ಇಷ್ಟೊಂದು ಸುದೀರ್ಘ ಕಾಲ ನಡೆದುಕೊಂಡು ಬಂದು ಜನಪ್ರಿಯವಾಗಲೂ ನಿರೂಪಕರಾದ ನಾ.ಸೋಮೇಶ್ವರ ಅವರು ಮೂಲಕಾರಣ. ನಿರೂಪಣಾ ಶೈಲಿ,ಮಾಹಿತಿ ಸಂಗ್ರಹ, ಮಾತಾಡುವಾಗ ಬಳಸುವ ಶುದ್ಧ ಸರಳ ಕನ್ನಡ ಕಾರ್ಯಕ್ರಮದಲ್ಲಿನ ಶಿಸ್ತನ್ನು ತೋರಿಸಿಕೊಡುತ್ತವೆ. ಯಾವುದೇ ತಳುಕು ಬಳುಕಿಲ್ಲದ ನಿರೂಪಣೆ. ನೀವು ಕೇಳಬಹುದು ಕ್ವಿಜ್ ಕಾರ್ಯಕ್ರಮದಲ್ಲಿ ಅದೆಂತಹ ಥಳುಕನ್ನು ತೋರಿಸಲು ಸಾಧ್ಯ ಅಂತ. ಆದರೆ ಸರಿ ಉತ್ತರ ಹೇಳುವಾಗಲೂ ಕಾಯಿಸಿ ಕಾಯಿಸಿ ಉತ್ತರ ಹೇಳಿ ಅದನ್ನೇ ತಮ್ಮ ನಿರೂಪಣೆಯ ಶ್ರೇಷ್ಟತೆ ಎಂದುಕೊಳ್ಳುವ ನಿರೂಪಕರ ಮಧ್ಯೆ ಅಂತ ಔಪಚಾರಿಕತೆ ಇಲ್ಲದೇ ನೇರವಾಗಿ ಉತ್ತರ ಹೇಳಿ ಕಾರ್ಯಕ್ರಮದ ಸಹಜತೆಯನ್ನು ಕಾಪಾಡಿಕೊಂಡು ಹೋಗುವುದೂ ಕೂಡಾ ಒಂದು ಉಲ್ಲೇಖನೀಯ ಅಂಶ. ಒಬ್ಬ ಕ್ವಿಜ್ ನಿರೂಪಕ ತಾನು ಚರ್ಚಿಸುವ ಪ್ರಶ್ನೆಯ ಬಗ್ಗೆ ವಿಷಯ ಸಂಗ್ರಹ ಮಾಡಿಕೊಂಡು ಅದನ್ನು ಸಾಂದರ್ಭಿಕವಾಗಿ ಹೇಳುವ ಪರಿ ನಿರೂಪಕರ ಹೆಚ್ಚುಗಾರಿಕೆ. ಸ್ವತಃ ತಾವೂ ಕೂಡಾ ಬರಹಗಾರರಾಗಿರುವ ಸೋಮೇಶ್ವರ ಕಾರ್ಯಕ್ರಮಕ್ಕೆ ಮುಂಚೆ ಕೊಡುವ ಪುಸ್ತಕದ ಬಗೆಗಿನ ಮುನ್ನುಡಿಯಷ್ಟೇ ಮಾಹಿತಿ. ನೋಡುಗರಿಗೂ ಪುಸ್ತಕವನ್ನು ಕೊಂಡು ಓದಬೇಕು ಎಂಬ ಹಂಬಲವನ್ನು ಹೆಚ್ಚಿಸುವುದಂತು ನಿಜ. ಕಾರ್ಯಕ್ರಮದ ಕೊನೆಗೆ ಕುತೂಹಲಕರವಾದ ವಿಷಯ ನಮ್ಮ ಸುತ್ತಲೇ ಇದ್ದು ನಮಗೆ ಗೊತ್ತಿರದ ವಿಷಯದ ಬಗ್ಗೆ ಪರಿಚಯಿಸುತ್ತದೆ.

ಒಂದು ಅಚ್ಚುಕಟ್ಟಾದ, ಸದಭಿರುಚಿಯ, ಹಲವು ಜ್ಞಾನಕ್ಷೇತ್ರಗಳನ್ನು ಪರಿಚಯಿಸುವ ಇಂಥ ಕಾರ್ಯಕ್ರಮವನ್ನು ಯಶಸ್ವಿಯಾಗಿ ಇಷ್ಟು ದಿನಗಳ ಕಾಲ ನಡೆಸಿಕೊಂಡು ಬಂದ ಚಂದನ ವಾಹಿನಿಯವರಿಗೆ ಕನ್ನಡದ ಜನತೆ ಋಣಿಯಾಗಿದ್ದಾರೆ. ಈ ಕಾರ್ಯಕ್ರಮ ಇನ್ನೂ ಹೊಸ ಪ್ರಯೋಗಗಳನ್ನು ಮಾಡುತ್ತಾ ಹೆಚ್ಚು ಹೆಚ್ಚು ಕಂತುಗಳನ್ನು ಆಯೋಜಿಸುತ್ತಾ ಯಶಸ್ವಿಯಾಗಲಿ. ಚಂದನದ ಕಂಪು ವಿಶ್ವದೆಲ್ಲೆಡೆ ಪಸರಿಸಲಿ ಎಂದು ಹಾರೈಸುತ್ತೇನೆ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..