1684

ವಿರುಷ್ಕಾ…

ಹೌದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಬಗ್ಗೆಯೇ ಮಾತನಾಡುತ್ತಿರುವುದು.

ಹೆಣ್ಣು ಅಥವಾ ಗಂಡು ಎಂಬ ಲಿಂಗ ನಿರ್ಧರಿಸುವುದು ಕ್ರೋಮೋಸೋಮ್ ಗಳ ಸಮ್ಮಿಲನ ಕ್ರಿಯೆಯಿಂದ. ಇದೊಂದು ಸೃಷ್ಟಿಯ ವಿಸ್ಮಯ. ಇದರಲ್ಲಿ ಯಾರ ನಿಯಂತ್ರಣವೂ ಇರುವುದಿಲ್ಲ.
ಈ ದೃಷ್ಟಿಯಲ್ಲಿ ಹೆಣ್ಣು ಜನಿಸುವುದು ಅದೃಷ್ಟವೂ ಅಲ್ಲ ದುರಾದೃಷ್ಟವೋ ಅಲ್ಲ.
ಹೆಣ್ಣು ಲಕ್ಷ್ಮಿಯೂ ಅಲ್ಲ ಲತ್ತೆಯೂ ಅಲ್ಲ. ಗಂಡು ಅದೃಷ್ಟವೂ ಅಲ್ಲ, ರಾಜಕುಮಾರನೂ ಅಲ್ಲ. ಅದು ಸಹಜ ಸ್ವಾಭಾವಿಕ ಕ್ರಿಯೆ.

ಕ್ರೀಡೆಯ ಬಗ್ಗೆ ನಿಜವಾದ ಮಾಹಿತಿ ಇರುವ ಯಾರೂ ಪಂದ್ಯ ಗೆಲ್ಲಲು ಅಥವಾ ಸೋಲಲು ಒಂದು ಹೆಣ್ಣಿನ ಕೈಗುಣ ಅಥವಾ ಕಾಲ್ಗುಣ ಅಥವಾ ಇನ್ಯಾವುದೋ ಅಂಗ ಕಾರಣ ಎಂದು ಹೇಳಲಾರರು. ಕೇವಲ ವಿಕೃತ ಮನಸ್ಸಿನ ದುರುಳರು ಮಾತ್ರ ಈ ರೀತಿ ಹೇಳಲು ಸಾಧ್ಯ.

ಭಾರತ ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ನಲ್ಲಿ ಕೊಹ್ಲಿಯ ಕಳಪೆ ಆಟದಿಂದ ಸೋಲಲು ಅಕೆಯ ಪತ್ನಿ ಅನುಷ್ಕಾ ಶರ್ಮಾ ಕಾರಣ ಎಂದು Social media ಗಳಲ್ಲಿ ಬಾಯಿ ಬಡಿದು ಕೊಳ್ಳುತ್ತಾರೆ.
ಕ್ರೀಡೆ ಎಂಬುದು ಶ್ರಮ ಶ್ರದ್ಧೆ ಚಾಕಚಕ್ಯತೆ ಪ್ರತಿಭೆ ಏಕಾಗ್ರತೆ ನಮ್ಮ ನೆಲದ ಪರಿಸ್ಥಿತಿ ದೇಹರಚನೆ ಸಾಮಾಜಿಕ ಆರ್ಥಿಕ ಮತ್ತು ಆಡಳಿತ ಮುಂತಾದ ಅನೇಕ ಅಂಶಗಳು ಸಮೀಕರಣ. ಅದರಲ್ಲೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ವಿಶ್ವ ದರ್ಜೆಯ ಗುಣಮಟ್ಟ ಅವಶ್ಯಕತೆ ಇದೆ. ಇಲ್ಲಿ ಅದೃಷ್ಟ ಅಥವಾ ದುರಾದೃಷ್ಟವೆಂಬುದು ಸಮಬಲದ ಸ್ಪರ್ಧಾಳುಗಳ ನಡುವೆ ಕೆಲವೊಮ್ಮೆ ಪರೋಕ್ಷವಾಗಿ ಪರಿಣಾಮ ಬೀರಬಹುದಾದ ಒಂದು ಸಣ್ಣ ನಂಬಿಕೆ ಅಥವಾ ಕೆಲವೊಮ್ಮೆ ಅನಿರೀಕ್ಷಿತ ಪರಿಸ್ಥಿತಿಯ ವಾಸ್ತವ ಅಷ್ಟೆ. ನಮ್ಮ ಪ್ರತಿಸ್ಪರ್ಧಿ ಗಾಯಾಳುವಾಗುವುದು – ಗುರಿ ತಪ್ಪುವುದು – ಬಾಹ್ಯ ಒತ್ತಡದಿಂದಾಗಿ ಏಕಾಗ್ರತೆ ಭಂಗವಾಗುವುದು ಇತ್ಯಾದಿ ಕೆಲವು ಅಂಶಗಳು ಇಲ್ಲಿ ಕಾರಣವಾಗಬಹುದು. ಅಷ್ಟು ಬಿಟ್ಟರೆ ಅಲ್ಲಿ ಮುಖ್ಯವಾಗುವುದು ಆ ಕ್ರೀಡೆಯ ಮೇಲೆ ನಿಮಗಿರುವ ಸಂಪೂರ್ಣ ನಿಯಂತ್ರಣ ಮಾತ್ರ. ಇಲ್ಲಿ ಯಾವ ಅಡ್ಡ ದಾರಿಯೂ ಇರುವುದಿಲ್ಲ.

ಉಸೇನ್ ಬೋಲ್ಟ್ ಎಂಬ ಅತ್ಯಂತ ವೇಗದ ದಂತಕಥೆಯ ವ್ಯಕ್ತಿ ಕೂಡ ಇತ್ತೀಚೆಗೆ ಜಸ್ಟಿನ್ ಗ್ಯಾಟ್ಲನ್ ಎಂಬ 38 ವರ್ಷದ ಸ್ಪರ್ಧೆಯಿಂದ ಪರಾಜಿತರಾಗುತ್ತಾರೆ.
ವಿಶ್ವ ಚೆಸ್ ನ ಅಪ್ರತಿಮ ಪ್ರತಿಭೆ ವಿಶ್ವನಾಥನ್ ಆನಂದ್ 24 ಹರೆಯದ ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ ವಿರುದ್ಧ ತಬ್ಬಿಬ್ಬಾದರು.
ಅಷ್ಟೇ ಏಕೆ ಕ್ರಿಕೆಟ್ ದೇವರೆಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಸಹ ಕೆಲವು ಪಿಚ್ ಗಳಲ್ಲಿ ಇನ್ ಸ್ವಂಗರ್ ಗಳಿಗೆ ಉತ್ತರಿಸಲಾಗದೆ ಔಟಾಗುತ್ತಿದ್ದರು.
ಪುಟ್ ಬಾಲ್ ನ ಅಪ್ರತಿಮ ಆಟಗಾರರಾದ ಮರಡೋನ – ಮೆಸ್ಸಿ – ರೊನಾಲ್ಡೊ ಅಂತ ಆಟಗಾರರು ಕೂಡ ಕೆಲವೊಮ್ಮೆ ಅವರಿಗೆ ಅತ್ಯಂತ ಸುಲಭ ಎಂದು ಭಾವಿಸುವ – ಪಂದ್ಯದ ಫಲಿತಾಂಶವನ್ನೇ ಬದಲಾಯಿಸುವ ಪೆನಾಲ್ಟಿ ಕಿಕ್ ನಲ್ಲಿ ಗುರಿ ತಪ್ಪುತ್ತಾರೆ‌.

ಹಾಗೆಯೇ,
ವಿರಾಟ್ ಕೊಹ್ಲಿ ಕೂಡ ಸಾಮಾನ್ಯ ಮನುಷ್ಯ. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಅಲ್ಲಿ ಇರುವುದು ಈ ಎರಡೇ Option.( ಕೆಲವು ಆಟಗಳಲ್ಲಿ ಅಪರೂಪಕ್ಕೆ ಡ್ರಾ ಅಥವಾ ಟೈ ಹೊರತುಪಡಿಸಿ )
ಅನುಷ್ಕಾ ಅಥವಾ ಇನ್ಯಾವುದೇ ಹೆಣ್ಣಿಗೂ ಕ್ರೀಡಾ ಫಲಿತಾಂಶಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ.

ಆದ್ದರಿಂದ ಹೆಣ್ಣು ಹುಟ್ಟಿದರೆ ಲಕ್ಷ್ಮೀ ಮನೆಗೆ ಬಂದಂತೆ ಅಥವಾ ಗಂಡು ಹುಟ್ಟಿದರೆ ರಾಜಕುಮಾರ ಆಗಮಿಸಿದಂತೆ ಎಂಬ ಭಾರತೀಯ ಸಾಮಾಜಿಕ ನಂಬಿಕೆಯಲ್ಲಿ ಯಾವುದೇ ಹುರುಳಿಲ್ಲ. ಗಂಡು ಹೆಣ್ಣು ಎರಡೂ ಸೃಷ್ಟಿಯ ಸಹಜ ಮತ್ತು ಸಮಾನ ಜೀವಿಗಳು.
ಅವರನ್ನು ಅವರಂತೆ ಸ್ವೀಕರಿಸೋಣ.
ವಿಫಲತೆ ಅಥವಾ ಸಫಲತೆಗೆ ಹೆಣ್ಣನ್ನು ಕಾರಣವಾಗಿಸುವ ಕೆಟ್ಟ ಅಮಾನವೀಯ ಅನಾಗರಿಕ ಮನೋಭಾವವನ್ನು ಈ ಕ್ಣಣದಿಂದಲೇ ನಾವೆಲ್ಲ ಒಟ್ಟಾಗಿ ತಿರಸ್ಕರಿಸೋಣ…..
ಹೊಸ ನಾಗರಿಕ ಪ್ರಜ್ಞೆಗೆ ನಾಂದಿ ಹಾಡೋಣ……………

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..