1177

ತಪ್ಪು ಮಾಡದವರು ಇಬ್ಬರೇ – ಸತ್ತವನು ಮತ್ತು ಹುಟ್ಟದವನು

s
ಅಂಕಣ :ಅಕ್ಷಯ್ ಕಿಣಿ

ನನ್ನ ಈ ತುತ್ತೂರಿಯ ಓದಲು ಒಪ್ಪಿ ಬಂದವರಿಗೂ , ತಪ್ಪಿ ಬಂದವರಿಗೂ , ಒಪ್ಪಿ ತಪ್ಪದವರಿಗೂ, ತಪ್ಪಿ ಒಪ್ಪಿದವರಿಗೂ ಆತ್ಮೀಯವಾದ ಸ್ವಾಗತ ಹಾಗೂ ಧನ್ಯವಾದಗಳು. ‘ತಪ್ಪು’ ಎಂಬ ಶಬ್ದಕ್ಕಿರುವ ತಪ್ಪು ಪರಿಕಲ್ಪನೆಗಳನ್ನು ಗುಡಿಸಿ ಸರ್ವರೂ ಒಪ್ಪುವ ವಿಶಿಷ್ಟ ಕಲ್ಪನೆಗಳನ್ನು ಮೂಡಿಸುವ ಪ್ರಾಮಾಣಿಕ ಪ್ರಯತ್ನ ಈ ತುತ್ತೂರಿಯದ್ದು.

‘ತ’ ಮತ್ತು ‘ಪ’ ಅಕ್ಷರಗಳ ಅಪ್ಪುಗೆಯನ್ನು ‘ತಪ್ಪು’ ಎನ್ನಬಹುದು. ಮನುಷ್ಯನ ಹುಟ್ಟಿದ ದಿನಾಂಕವೇ ತಪ್ಪಿನ ಡೇಟ್ ಆಫ್ ಬರ್ತ್ ಎನ್ನುವುದಕ್ಕೆ ಯಾವ ಅಡ್ಡಿಯಿಲ್ಲ.

‘ತಪ್ಪು ಮಾಡುವುದು ಸಹಜ’
‘ತಿದ್ದಿಕೊಳ್ಳುವವ ಮನುಜ.. ಹೌದು ಅದೇ ನಿಜ…’

ಎಂಬ ಗಾದೆ ನೀ ಹೇಗಾದೆ? ಎನ್ನುವ ತಗಾದೆಯಲ್ಲಿ ಮುಂದುವರೆಯೋಣ. ಹುಟ್ಟಿದವನು ತಪ್ಪು ಮಾಡದೇ ತಪ್ಪಿಯೂ ಸತ್ತಿಲ್ಲ ಎಂಬ ಮಾತಿನಲ್ಲಿ ತಪ್ಪಿಲ್ಲ. ಬೆಪ್ಪು ಮೂಡಿಸುವ ತಪ್ಪುಗಳು ಹಾಗು ತಪ್ಪುಗಳು ಮೂಡಿಸುವ ಬೆಪ್ಪುಗಳೆರೆಡೂ ಕೆಲವೊಮ್ಮೆ ಇತರರಿಗೆ ವಿನೋದಕೊಡುವುದುಂಟು. ನನ್ನ ಪ್ರಕಾರ ತಪ್ಪುಗಳನ್ನು ಎರೆಡು ರೀತಿಯಲ್ಲಿ ಗುರುತಿಸಬಹುದು. ‘ಸರಿಯಾದ ತಪ್ಪುಗಳು’ ಹಾಗೂ ‘ತಪ್ಪಾದ ತಪ್ಪುಗಳು’. ಸರಿಯಾದ ತಪ್ಪುಗಳನ್ನು ಕಲಿಕೆಯ ಭಾಗಗಳೆಂತಲೂ, ತಪ್ಪಾದ ತಪ್ಪುಗಳನ್ನು ಕಲಿಕೆಯ ದೋಷಗಳೆಂತಲೂ ಪರಿಗಣಿಸಬಹುದು. ‘ತಪ್ಪು ಮಾಡದ ಗಂಡು ಮತ್ತು ತಪ್ಪು ಮಾಡಿಸದ ಹೆಣ್ಣು ಇಲ್ಲ’ ಎಂಬ ರೂಢಿಮಾತು ತಪ್ಪಿನ ಲಿಂಗ ಸಮಾನತೆಯನ್ನು ವ್ಯಕ್ತಪಡಿಸುತ್ತದೆ.

ಆಪರಾಧಗಳು ಹಾಗೂ ತಪ್ಪುಗಳಿರುವ ವ್ಯತ್ಯಾಸವನ್ನು ಮನಗೊಳ್ಳೋಣ. ಎಲ್ಲ ತಪ್ಪುಗಳು ಅಪರಾಧಗಳಲ್ಲ ಆದರೆ ಎಲ್ಲಾ ಅಪರಾಧಗಳು ಮೂಲಭೂತವಾಗಿ ತಪ್ಪುಗಳೇ ಆಗಿರುತ್ತದೆ ಎಂಬುವುದನ್ನು ಗಮನಿಸಬಹುದು. ನಮ್ಮ ಅನೇಕ ತಪ್ಪುಗಳು ಒಪ್ಪಿಕೊಳ್ಳುವಷ್ಟು ಚಿಕ್ಕವೂ ಆಗಿರುವುದಿಲ್ಲ-ತಿದ್ದಿಕೊಳ್ಳುವಷ್ಟು ದೊಡ್ಡದು ಆಗಿರುವುದಿಲ್ಲ.ಪ್ರಪಂಚದಲ್ಲಿ ಓಳ್ಳೆಯತನದಿಂದಾಗುವಷ್ಟು ತಪ್ಪು ಜಾಣತನದಿಂದ ಆಗುವುದಿಲ್ಲ. ಬಿಳಿ ಬಟ್ಟೆಯ ಮೇಲಿನೆ ಕಲೆ, ಒಳ್ಳೆಯವನ ತಪ್ಪುಗಳೆರಡು ಬಹು ಬೇಗ ಎದ್ದು ಕಾಣುತ್ತವೆ. ನಮ್ಮ ನೂರು ಸತ್ಯಗಳು ಕಣ್ಣಿಗೆ ಕಾಣದಿದ್ದರೂ ಕೇವಲ ಒಂದೇ ಒಂದು ತಪ್ಪು ಎಲ್ಲರೆದುರು ನಮ್ಮನ್ನು ನಗ್ನಗೊಳಿಸುತ್ತದೆ.

ಮನುಷ್ಯನು ಸಹಜವಾಗಿ ಇತರರ ತಪ್ಪುಗಳನ್ನು ಕಣ್ಣಮುಂದೆ ಇಟ್ಟುಕೊಳ್ಳುತ್ತಾನೆ ಆದರೆ ತನ್ನ ತಪ್ಪುಗಳನ್ನು ಮಾತ್ರ ಬೆನ್ನ ಹಿಂದೆ ಬಿಡುತ್ತಾನೆ. ಇತರರ ತಪ್ಪುಗಳನ್ನು ಆನೆಯಂತೆ ಕಾಣುವ ನಾವು ನಮ್ಮ ತಪ್ಪುಗಳ ಇರುವಿಕೆಯನ್ನು ಇರುವೆಯ ಹಾಗೆ ಪರಿಗಣಿಸುತ್ತೇವೆ. ನಮ್ಮ ತಪ್ಪುಗಳನ್ನು ನಾವು ಗಮನಿಸಿರೆ ಮಾತ್ರ ಇತರರ ತಪ್ಪುಗಳನ್ನು ಎಣಿಸುವ ತಪ್ಪು ತಪ್ಪುತ್ತದೆ. ತಪ್ಪು ಯಾರದೇ ಆಗಲಿ, ಅವುಗಳಿಂದ ಕಲಿಯುವಂತಹದ್ದು ಸಾಕಷ್ಟಿರುತ್ತದೆ. ತಪ್ಪುಗಳನ್ನು ಯಶಸ್ಸಿನ ಮೆಟ್ಟಿಲುಗಳಂತೆ ಪರಿಗಣಿಸಿದವರು ಖಂಡಿತವಾಗಿ ಯಶಸ್ವಿಯಾಗಿದ್ದಾರೆ ಎಂಬುವ ಉದಾಹರಣೆಗಳಿಗೇನು ಕೊರತೆಯಿಲ್ಲ. ಯಾಕೆ ಇಂದಿನ ವಿಜ್ನಾನಕ್ಕೆ ಅಂದಿನ ಅಜ್ನಾನವೇ ಮುನ್ನುಡಿಯಾಗಲಿಲ್ಲವೇ? ಹಾಗಾದರೆ ನಮ್ಮ ಇಂದಿನ ತಪ್ಪುಗಳು ಮುಂದಿನ ಸರಿಗಳಿಗೆ ದಾರಿಯಾಗಬಹುದಲ್ಲವೇ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಿದಾಗಲೇ ತಪ್ಪಿನ ಮಹತ್ವ ಅರಿವಾಗುವುದು. ಏಕೆಂದರೆ ಆವಿಷ್ಕಾರ ಮತ್ತು ಅನ್ವೇಷಣೆಗಳಿಗೆ ತಪ್ಪುಗಳೇ ಅಡಿಪಾಯ. ಹೌದು ಅನುಭವಕ್ಕಿರುವ ಮೊದಲ ಅನ್ವರ್ಥವೇ ತಪ್ಪು.

ಮರದ ಮೇಲೆ ಕುಳಿತ ಹಕ್ಕಿಗೆ ಕೊಂಬೆ ಮುರಿದು ಬೀಳುವ ಭಯವಿರದು. ಏಕೆಂದರೆ ಅದು ನಂಬಿರುವುದು ತನ್ನ ರೆಕ್ಕೆಯನ್ನೇ ಹೊರತು ಕೊಂಬೆಯನ್ನಲ್ಲ. ಹಾಗೆ ನಾವು ಮಾಡುವ ತಪ್ಪುಗಳ ಎಲ್ಲಾ ಸೈಡ್ ಎಫೆಕ್ಟ್ಸ್ ಗಳಿಗೆ ಆತ್ಮವಿಶ್ವಾಸವೇ ಮದ್ದು. ಜಗತ್ತಿನಲ್ಲಿ ಎಲ್ಲಾ ಕಾಲದಲ್ಲೂ ತಪ್ಪುಗಳು ಸಂಭವಿಸುತ್ತಲೇ ಬಂದಿವೆ, ಅವುಗಳ ರೀತಿ ಬೇರೆಯಾಗಿದ್ದಿರಬಹುದು ಆದರೆ ನೀತಿಯೊಂದೇ ಎಂಬ ನನ್ನ ಅಭಿಪ್ರಾಯದಲ್ಲಿ ತಪ್ಪುಗಳಿದ್ದರೆ ಕ್ಷಮೆಯಿರಲಿ..

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..