2377

ಕುಡುಕ ಮತ್ತು ಕುಡಿತ

pramod-authorPramod ಮರವಂತೆ

1)
ಕುಡಿಯುತ್ತಾ ಕುಡಿಯುತ್ತಾ
ಉಣ್ಣುತ್ತಿದ್ದವರು
ಅನ್ನವ ಎಸೆದರು
ಹೊಟ್ಟೆ ತುಂಬಿತೆಂದು
ಆದರೆ ಕುಡಿತ ನಿಲ್ಲಲಿಲ್ಲ
ಕುಡಿದದ್ದು ಏರುವುದು
ತಲೆಗಲ್ಲವೇ…?
ಕುಡುಕರ ತಲೆ ಎಂದಾದರೂ
ತುಂಬುವುದುಂಟೇ
ಖಾಲಿ ತಲೆ….

2)
ಆ ದಿನ ಕುಡಿತ ಹೆಚ್ಚಾಗಿ
ಕುಡುಕನೋರ್ವ ಇಡೀ ಊರಿಗೇ
ಬಾಯಿಗೆ ಬಂದ ಹಾಗೆ
ಬೈಯುತಿರಲು
ಒಂದೆರಡು ನಾಯಿಗಳು
ಬೊಗಳಿದ್ದು ಬಿಟ್ಟರೆ
ಎಲ್ಲೆಡೆ ನೀರವ ಮೌನ
ಮತ್ತೆ ಬೈಗುಳದ ಸುರಿಮಳೆ
ಕೊನೆಯಲ್ಲಿ ಕೇಳಿಯೇ ಬಿಟ್ಟ
“ಯಾರೂ ಗಂಡಸರಿಲ್ಲವೆ ಊರಿನಲಿ?”
ಗಂಡಸರಿದ್ದರು ಆದರೆ
ಕುಡಿಯದ ಗಂಡಸರರಿರಲಿಲ್ಲ
ಕುಡಿದ ಹೆಂಗಸಿರಿದ್ದರು ಬೇಕಾದರೆ..

3)
ತನ್ನೆದೆಯಲ್ಲಿ
ಹಾಲಿಲ್ಲವಲ್ಲ
ಕಂದಮ್ಮ ಹಸಿದಿಹುದು
ಹಡೆದವಳಿಗಾ ಚಿಂತೆ
ಹುಟ್ಟಿಸಿದವನಿಗೆ
ತನಗೆರೆದುಕೊಳ್ಳಲು
ಮೂರು ಕಾಸು ಹುಟ್ಟತ್ತಿಲ್ಲವಲ್ಲ
ಎನ್ಜುವ. ಸಂಧಿಗ್ದತೆಯ ಸಂತೆ….

4)
ಮಧ್ಯರಾತ್ರಿಯಲಿ
ಮದ್ಯಪಾನ ಮಾಡಿ ಬಂದವನು ನೀನು
ನಿನಗೊಂದು ಜೀವವಿದೆ ಎನ್ನುವುದ ಮರೆತು
ಆ ಜೀವವು ಇಷ್ಟೊತ್ತು ಕಾದದ್ದು
ಕಳೆದುಹೋಗಲು ಮಧು ಮಂಚದಲಿ ನಿನ್ನೊಂದಿಗೆ ಬೆರೆತು

5)
ಗುರುವಿಲ್ಲದೇ ಕಲಿತ
ವಿದ್ಯೆಯೊಂದಿದೆ ಮದ್ಯಪಾನ
ದ್ರೋಣಾಚಾರ್ಯ
ಕಲಿಸುವುದಿಲ್ಲ ಎಂದಾಗ
ತಾನೇ ಕಲಿತ ಏಕಲವ್ಯ ಬಿಲ್ವಿದ್ದೆ
ದೊಡ್ಡವರು ಬಿಟ್ಟು ಹೋದಾಗ
ಹಿಂಬಾಲಿಸಿ ಕಲಿತದ್ದು ಬಾರ್ ವಿದ್ಯೆ…

6)
ಅಪ್ಪನ ಕಣ್ಣುಗಳೇಕೆ
ಮನೆಗೆ ಬರುವಾಗ
ಕೆಂಪಾಗಿರುತ್ತವೆ?
ಎನ್ನುವ ಮಗುವಿನ
ಪ್ರಶ್ನೆಗೆ ಉತ್ತರವಿಲ್ಲದೇ
ಸಂಜೆಯಾಗುತ್ತಲೇ
ತಟ್ಟಿ ಮಲಗಿಸಿಬಿಟ್ಟಳದನು…

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..