- By Guest Writer
- Tuesday, June 21st, 2016
ಅಂಕಣ : ರಾಹುಲ್ ಹಜಾರೆ
ಬಹಳ ದಿನದ ನಂತರ ಮನೆಗೆ ಬಂದ ಮಗ ಅಮ್ಮನ ಹುಸಿ ಕೋಪ ತಣ್ಣಗಾಗಿಸಲು ಕಾಲು ಹಿಡಿದು ಗೋಳಾಡುವಂತೆ ವರುಣನಿಂದು ಭೂತಾಯಿಗೆ ಅತ್ತು ಕರೆದು ಸಂತೈಸುತ್ತಿದ್ದಾನೆ. ಮೊದಲ ಮಳೆಯಲ್ಲಿ ಆಫೀಸಿಗೆ ಲೇಟಾಗಿ ಹೋದ ಕೆಲಸಗಾರನ ಆತುರತೆಯಿದೆ. ಬರವನ್ನು ಕಂಡಾಗ ಮೌನದ ಮೊರೆಹೋದ ಮೋಡಗಳಿಗೀಗ ಆಕಾಶವನ್ನೇ ಹರಿದು ಭೂಮಿಗೆ ಬೀಳುವ ಹಪಹಪಿ ಇದೆ. ಸುಮಾರು ದಿನದಿಂದ ಮಾಡಿದ ಸಾಲವನ್ನು ತೀರಿಸಲಾಗದೇ ಹಣದ ಮೂಲವೂ ಸಿಗದೇ ಹೋದ ಬಡಪಾಯಿ ಒಮ್ಮೆಲೇ ಲಾಟರಿ ಹೊಡೆದು ಲಕ್ಷ ಲಕ್ಷ ಸಾಲವನ್ನು ಭರಿಸಿ ನೆಮ್ಮದಿಯಿಂದ ಮಲಗುವ ಹಾಗೆ ಹಲವು ದಿನಗಳಿಂದ ಬತ್ತಿದ ಕೆರೆ, ಕುಂಟೆ, ಕಲ್ಯಾಣಿ, ನದಿಗಳನ್ನು ಒಂದೆರಡು ದಿನದಲ್ಲಿ ತುಂಬಿಸಿ ನೀಲಾಕಾಶ ನೆಮ್ಮದಿ ಹೊಂದಿದೆ. ಭುವಿಯ ಮೇಲಿನ ಭುವನ ಸುಂದರಿಯ ಓರೆನೋಟಕ್ಕೆ ಬಾನು ಗುಡುಗಿ ಪ್ರೇಮ ನಿವೇದಿಸಿಕೊಂಡಿದೆ. ಆ ಹುಡುಗಿಯ ಓರೆನೋಟ ನೇರನೋಟವಾಯಿತೇನೊ ಅದಕ್ಕೆ ಕೊಲ್ಮಿಂಚು ಕಣ್ಣು ಹೊಡೆದಿದೆ. ಹಸಿರು ನಿಶಾನೆ ಆ ಹುಡುಗಿ ಕೊಟ್ಟ ತಕ್ಷಣ ತರಾತುರಿಯಲ್ಲಿ ಬಂದ ಹನಿ ಕಪ್ಪೆಚಿಪ್ಪಿನ ಎದೆಯಲ್ಲಿ ಅವಳಿಗಾಗಿ ಒಂದು ಮುತ್ತನ್ನು ರವಾನಿಸಿದೆ. ಅವಳು ಸ್ವೀಕರಿಸಿ ನಸುನಕ್ಕಿದ್ದಕ್ಕೆ ಮಳೆಬಿಲ್ಲು ಇಷ್ಷುದ್ದದ ಬಾಯ್ತೆರೆದು ಮುಗುಳ್ನಗುತ್ತಿದೆ. ಎಲ್ಲಿಂದಲೋ ಬಂದ ತಂಗಾಳಿ ಅವಳ ಕೂದಲೊಳಗೆ ಬೆರಳಾಡಿಸಿ ತುಂಟತನ ಮೆರೆದಿದೆ. ಭೂಮಿಯ ಮೇಲಿನ ಭೀಷ್ಮ ರೈತನನ್ನು ಕಾಣಲು ಗಂಗೆ ತವರಿಗೆ ಓಡಿ ಬಂದಿದ್ದಾಳೆ. ಎಷ್ಟೇ ಆಗಲಿ ಭೀಷ್ಮ ಅವಳ ಮಗನಲ್ಲವೇ ಕರುಳ ಕರೆಗೆ ಓಗೊಡದಿದ್ದರೆ ಹೇಗೆ.
ಬಿಸಿಲ ಬೇಗೆಗೆ ತಣ್ಣಗಿನ ಜಾಗ ಹುಡುಕುತ್ತಿದ್ದ ಹಕ್ಕಿಗಳು ಮಳೆ ಬಂದು ನಿಂತ ಮೇಲೆ ಸ್ವಚ್ಛಂದ ಆಕಾಶದಲ್ಲಿ ವಾಯುವಿಹಾರಕ್ಕೆ ಹೊರಟಂತಿದೆ. ತಮ್ಮ ಹಳೆ ರಾಗದಲ್ಲೇ ಕಪ್ಪೆಗಳು ಪಿಟೀಲು ಕುಯ್ಯುತ್ತಿವೆ.ಎಲ್ಲಿಂದಲೋ ಬೀಸಿದ ತಂಗಾಳಿ ಹೊತ್ತು ತಂದ ಮಣ್ಣ ವಾಸನೆಗೆ ಗಂಡು ನವಿಲು ಗರಿಬಿಚ್ಚಿ ಕುಣಿದಿದೆ. ಸ್ನಾನ ಮಾಡದೆ ಉದಾಸೀನದಿಂದ ರೂಮಿನಲ್ಲೇ ಕುಳಿತ ಹಾಸ್ಟೇಲ್ ಹುಡುಗ ಮೈಮುರಿದು ಸ್ನಾನಕ್ಕೆ ತಯಾರಾದಂತೆ ರೂಮಿನ ಮೂಲೆಯಲ್ಲಿ ಬಿದ್ದ ಕೊಡೆ ಈ ವರುಷದ ಮೊದಲ ಸ್ನಾನಕ್ಕೆ ಮೈಮುರಿದು ತಯಾರಾಗಿದೆ.ಸ್ನಾನವಾದ ನಂತರ ಉದ್ದ ಕೂದಲನ್ನು ಟೆರಸ್ ಮೇಲೆ ಬಂದು ಬಿಸಿಲಿಗೆ ಒಡ್ಡಿ ಆರಿಸಿಕೊಳ್ಳುವ ಎದುರು ಮನೆಯ ಹುಡುಗಿಯಂತೆ ಮಳೆನಿಂತ ಮೇಲೆ ಕೊಡೆ ಅಡ್ಡ ಮಲಗಿಕೊಂಡು ತನ್ನನ್ನು ಆರಿಸಿಕೊಂಡಿದೆ.ಅಟ್ಟದಲ್ಲಿ ಗಂಟು ಕಟ್ಟಿಟ್ಟ ರೇನ್ ಕೋರ್ಟು ಮೊದಲ ಮಜ್ಜನಕ್ಕೆ ತಯಾರಾಗಿದೆ.ಮುನ್ಸಿಪಾರ್ಟಿಯವರು ಹಲವು ದಿನದಿಂದ ಗುಡಿಸದೇ ಬಿಟ್ಟ ರಸ್ತೆ ಥಳಥಳಿಸುತ್ತಿದೆ.ಗಟಾರಗಳಲ್ಲಿ ಮುಂದೆ ಹೋಗದೇ ಇದ್ದ ಜಡ ವಸ್ತುಗಳು ಎಲ್ಲ ಅಡೆತಡೆ ಮೀರಿ ಹರಿದುಹೊರಟಿವೆ.
ಜೋಪಡಿಯೆಲ್ಲ ಬಿದ್ದ ಮಳೆಗೆ ತೊಯ್ದು ಮಲಗಲು ಜಾಗವಿಲ್ಲದೆ ನಿರ್ಗತಿಕ ಮಳೆಯನ್ನು ಮನಸೋಇಚ್ಛೆಯಿಂದ ಶಪಿಸುತ್ತಿದ್ದಾನೆ. ಸೋರುವ ಮನೆಯ ಬಡಪಾಯಿ ಕುಟುಂಬ ನೀರ ಹನಿ ಬೀಳುವ ಎಡೆ ಪಾತ್ರೆ ಇಟ್ಟರೆ ಆರ್ಸೀಸಿಯ ಮಧ್ಯಮ ವರ್ಗದ ಮನೆಯಲ್ಲಿ ಬಿಸಿಬಿಸಿ ಎಣ್ಣೆಯಲ್ಲಿ ವಿಲವಿಲ ಒದ್ದಾಡಿ ಕೆಂಪಗಾದ ಬಜ್ಜಿ ಯಾರ ಬಾಯಿ ಸೇರಬೇಕೋ ಎಂದು ಯೋಚಿಸುತ್ತಿದೆ.ಮೂರಂತಸ್ತಿನ ಮನೆಯ ಆಗರ್ಭ ಶ್ರೀಮಂತ ರೋಗಿ ಬಿದ್ದ ಮೊದಲ ಮಳೆಗೇ ಮೂಗು ಸೋರಿಸುತ್ತಾ ಎರಡು ಲೋಟದಲ್ಲಿ ಬಿಸಿನೀರನ್ನು ಆರಿಸಿ ಕುಡಿಯುತ್ತಿದ್ದಾನೆ. ಶಾಲೆಗ್ಹೋದ ಮಕ್ಕಳು ಮಳೆಯಿಂದ ಮರುದಿನ ಘೋಷಣೆಯಾದ ರಜೆಗೆ ಖುಷಿಯಾಗಿ ಮನೆ ಕಡೆಗೆ ಓಡುತ್ತಿದ್ದಾರೆ. ಅವರ ಸಮವಸ್ತ್ರದ ಹಿಂಭಾಗದಲ್ಲಿ ಕೆಸರು ಚಿತ್ತಾರ ಮೂಡಿಸಿದೆ. ಮನೆಗೆ ಬಂದ ತಕ್ಷಣ ಅಮ್ಮನ ಸೆರಗು ಅವರ ಹಸಿತಲೆಯನ್ನು ಒರೆಸಲು ಕಾಯುತಿದೆ.ಬಿಸಿನೀರಲ್ಲಿ ಅಮೃತಾಂಜನದ ಪರಿಮಳ ಹೀರಲು ಆ ಮಕ್ಕಳ ಮೂಗು ಕಾಯುತ್ತಿದ್ದರೆ ಅಡುಗೆಯ ಮನೆಯ ಕುರುಕಲಿಗೆ ಅವರ ಬಾಯಿ ನೀರೂರಿಸುತ್ತಿದೆ. ಇಷ್ಟು ದಿನ ಬರಿಮೈಯಲ್ಲಿ ಗುಡಿಕಟ್ಟೆಯ ಮೇಲೆ ಮಲಗುತ್ತಿದ್ದ ದಢೂತಿ ಬೆಚ್ಚಗಿನ ಮನೆಯಲ್ಲೂ ಒಂದರ ಮೇಲೊಂದು ಹೊದ್ದು ಮೊಣಕಾಲ ನಡುವೆ ಕೈ ಇಟ್ಟುಕೊಂಡು ಮಲಗಿದ್ದಾನೆ.
ಹೌದು ಇಳೆಗೆ ಇಳಿದ ಮೊದಲ ಮಳೆಯು ತಂದ ಬದಲಾವಣೆಗಳಿವು ನನಗೆ ಇಷ್ಟೊಂದು ಬಿಟ್ಟಿ ಸಾಲುಗಳನ್ನು ಕೊಟ್ಟಿದ್ದಕ್ಕೆ ಋಣಿಯಾಗಿದ್ದೇನೆ. ಇನ್ನಷ್ಟು ಮಳೆ ಸುರಿಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಎಷ್ಟೇ ಆಗಲಿ ನಾನು rain rain go away ಎಂದು ಹಾಡಿ ಬೆಳೆದ ಇಂಗ್ಲಿಷ್ ಮೀಡಿಯಂ ಹುಡುಗನಲ್ಲ. ಹುಯ್ಯೋ ಹುಯ್ಯೋ ಮಳೆರಾಯ ಎಂದು ಹಾಡುತ್ತ ಬೆಳೆದ ಅಪ್ಪಟ ಕನ್ನಡ ಮಿಡಿಯಂ ಸಂಸ್ಕಾರದವನು. Yes rain rain come again. ಮತ್ತೊಮ್ಮೆ ಮಗದೊಮ್ಮೆ ಮಳೆ ಸುರಿಯುತಿರಲಿ.