2971

ಅಮೃತದಂಥ ಐದು ಹಾಡುಗಳ ವರ್ಷಿಣಿ…

ಹಾಡೆಂದರೆ ಸಾಮಾನ್ಯವಲ್ಲ. ಹಾಡುಗಳು ಪ್ರೇಕ್ಷಕರನ್ನು ಸಿನಿಮಾದತ್ತ ಕರೆತರುವ ಆಕರ್ಷಕ ಲೋಹಚುಂಬಕದಂತೆ. ಹಳೆಯ ಸಿನಿಮಾಗಳಲ್ಲಿ ಹಾಡುಗಳನ್ನು ಸುಮ್ಮನೇ ಬಳಸುತ್ತಿರಲಿಲ್ಲ. ಹಾಡುಗಳು ಸಿನಿಮಾದ ಕಥೆ ಕಟ್ಟುವ, ಕಥೆಗೆ ತಿರುವು ಕೊಡುವ, ಕಥೆಗೆ ಪುಷ್ಟಿಕೊಡುವ, ಅವುಗಳೇ ಕಥೆ ಹೇಳುವ ಎಲ್ಲ ಕೆಲಸಗಳನ್ನು ಮಾಡಿ ಬಿಡುತ್ತಿದ್ದವು. ಒಂದು ಸುಂದರವಾದ ಚಿತ್ರ ಒಂದು ಪುಟದಷ್ಟು ವಿವರಣೆಗೆ ಸರಿಸಮವಾಗಬಲ್ಲದು. ಅಂತೆಯೇ ಹಾಡು ಕೂಡಾ ಪಾತ್ರಗಳ ನಡುವಿನ ಸಂಬಂಧಗಳ ಗಟ್ಟಿತನ ನಡೆದು ಹೋದ ಘಟನೆಯನ್ನು ಸರಳೀಕರಿಸಿ ಹೇಳಲು ಬಳಸಲ್ಪಡುವ ಸುಲಭ ಸೂತ್ರಗಳು. ಹಾಡುಗಳು ಕಥೆಗೆ ಪೂರಕವಾಗಿದ್ದರೆ ಅದನ್ನು ಬರೆಸಿದ್ದಕ್ಕೂ ಸಂದರ್ಭೋಚಿತವಾಗಿ ಬಳಸಿದ್ದಕ್ಕೂ ಸಾರ್ಥಕ. ಆದರೆ ಈ ಜಾಣ್ಮೆ ಈಗಿನ ಕೆಲವು ನಿರ್ದೇಶಕರಲ್ಲಿ ಕಾಣುವುದಿಲ್ಲ. ಅದರ ಬಗ್ಗೆ ಮತ್ತೊಂದು ಬರಹದಲ್ಲಿ ಬರೆಯೋಣ. ತುಂಬಾ ಹಳೆಯದೇನಲ್ಲ. 1997 ರಲ್ಲಿ ಬಿಡುಗಡೆಯಾದ ಚಿತ್ರ ಅಂದರೆ ಇವತ್ತಿಗೆ ಇಪ್ಪತ್ತೆ ವರ್ಷಗಳ ಹಿಂದೆ ಹಾಡನ್ನು ಕಥೆಯ ತಿರುವಿಗಾಗಿ ಸಮರ್ಥವಾಗಿ ಬಳಸಿಕೊಂಡ ಒಂದು ಸಿನಿಮಾ ಇದೆ.‌ ಇವತ್ತಿಗೂ ಆ ಹಾಡುಗಳನ್ನು ನಾವು ಗುನುಗುತ್ತೇವೆ. ಅದೇ “ಅಮೃತವರ್ಷಿಣಿ.”(https://youtu.be/KRR02hbZJBg)ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ತಾವು ಚಿತ್ರವನ್ನು ನೋಡಿದ್ದರೂ ನಾನೊಮ್ಮೆ ಕಥೆ ಹೇಳುತ್ತೇನೆ. (ಬರಹದ ಸಲೀಸಿಗೆ ರಮೇಶ್, ಸುಹಾಸಿನಿ‌,ನಿವೇದಿತಾ ಜೈನ್, ಶರತ್ ಬಾಬು ಅವರ ಪಾತ್ರಗಳನ್ನು ಅವರ ಹೆಸರುಗಳಿಂದಲೇ ಕರೆದಿದ್ದೇನೆ. ಅದನ್ನು ಪಾತ್ರವಾಗಿ ಸ್ವೀಕರಿಸಿ)

ರಮೇಶ್ ಒಂದು ಹುಡುಗಿಯನ್ನು ಪ್ರೀತಿಸುತ್ತಿರುತ್ತಾನೆ. ಅವಳನ್ನು ಕಳೆದುಕೊಂಡ ಮೇಲೆ ಸುಹಾಸಿನಿ ಮತ್ತು ಶರತ್ ಬಾಬು ದಂಪತಿಗಳ ಮನೆಗೆ ಬರುತ್ತಾನೆ. ಸುಹಾಸಿನಿ ಸಾಂತ್ವನ ಹೇಳುತ್ತಾ ಖಾಲಿ ಇರುವ ರಮೇಶ್ ಅವರ ಮನಸ್ಸು ಸೇರಿಬಿಡುತ್ತಾಳೆ. In fact ರಮೇಶ್ ಅವರ ಮನಸ್ಸಿನ ತಪ್ಪು. ಈ ವಿಷಯ ಶರತ್ ಬಾಬುವಿಗೆ ಗೊತ್ತಾಗುತ್ತಿದ್ದಂತೆ ರಮೇಶ್ ಶರತ್ ಬಾಬು ಅವರ ಕೊಲೆ ಮಾಡುತ್ತಾರೆ.‌ನಂತರ ಸಂಪೂರ್ಣ ವಿಷಯ ಸುಹಾಸಿನಿಗೆ ಗೊತ್ತಾಗಿ ಅವರು ಸತ್ತುಹೋಗುತ್ತಾರೆ.

ಪ್ರತಿ ಬಾರಿ ಪಾತ್ರದಲ್ಲಾಗುವ ಭಾವಪಲ್ಲಟವನ್ನು ಒಂದು ಹಾಡು ಪ್ರತಿನಿಧಿಸುತ್ತದೆ.

ಮೊದಲು ಬರುವ ಹಾಡು “ತುಂತುರು ಅಲ್ಲಿ ನೀರ ಹಾಡು” ಇಲ್ಲಿ ಸುಹಾಸಿನಿ ಶರತ್ ಬಾಬುರ ನಡುವಿನ ಭಾವ ಗಟ್ಟಿತನ, ದಾಂಪತ್ಯದಲ್ಲಿರುವ ಒಲವು ಇತ್ಯಾದಿಗಳನ್ನು ಹೇಳಲಾಗಿದೆ. ಅವರಿಬ್ಬರ ನಡುವೆ ದಾಂಪತ್ಯಕ್ಕೆ ಮಿಗಿಲಾದ ಸ್ನೇಹವಿರುವುದು. ಈ ಹಾಡು ಅದೆಷ್ಟು ಚೆನ್ನಾಗಿ ಅವರಿಬ್ಬರ ಬಾಂಧವ್ಯವನ್ನು ಕಟ್ಟಿಕೊಟ್ಟಿದೆ ಎಂದರೆ ಅರ್ಧಗಂಟೆ ಸಿನಿಮಾದಲ್ಲಿ ತೋರಿಸಬೇಕಾದ ಕೆಲಸವನ್ನು ನಾಲ್ಕು ನಿಮಿಷದ ಹಾಡು ಹೇಳಿದೆ. ಅವರಿಬ್ಬರೂ ಸೌಖ್ಯ ಸ್ವಚ್ಛಂದವಾಗಿದ್ದರು.

ನಂತರ ರಮೇಶ್ ಅವರ ಪ್ರವೇಶವಾಗುತ್ತದೆ. ಅವರ ಮನಸ್ಸನ್ನು introduce ಮಾಡುವ ಕೆಲಸವನ್ನು “ಭಲೆ ಭಲೆ ಚೆಂದದ ಚೆಂದುಳ್ಳಿ..” ಹಾಡು ಮಾಡುತ್ತದೆ. ತನ್ನ ಪ್ರೇಯಸಿಯ ಭೌತಿಕ ಅನುಪಸ್ಥಿತಿಯಲ್ಲಿಯೂ ಮನಸ್ಸಿನಲ್ಲಿ ಅವಳೇ ಇದ್ದಾಳೆ ಎಂಬುದನ್ನು ಈ ಹಾಡು ಒತ್ತಿಹೇಳುತ್ತದೆ. ಇದರರ್ಥ ಅವರ ಮನೆಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ರಮೇಶ್ ಮನಸ್ಸಿನಲ್ಲಿ ಎಳ್ಳಷ್ಟು ಸುಹಾಸಿನಿಯವರ ಪ್ರವೇಶವಾಗಿರುವುದಿಲ್ಲ.ಅಲ್ಲಿ‌ ಅವರ ಈ‌ ಮೊದಲಿನ ಸುಂದರ ಪ್ರೇಯಸಿ ಮಾತ್ರ ಇರುತ್ತಾಳೆ.

ರಮೇಶ್ ಅವರ ಕೋಣೆಯಲ್ಲಿ ಒಂದು ಕುರ್ಚಿಯ ಮೇಲೆ ಕೂತಾಗ ಎದುರಿನ ಗೋಡೆಯ ಮೇಲೆ ನಿವೇದಿತಾ ಜೈನ್ ಅವರ ಫೋಟೋ ಮುಡುತ್ತಿರುತ್ತದೆ. ಅರ್ಥಾರ್ಥ್ ಆ ಕುರ್ಚಿ ಒಂದು ಸತ್ಯಪೀಠ ಮನಸ್ಸಾಕ್ಷಿಯನ್ನು ಕೆದಕುವ ಸ್ಥಳದಂತೆ ಚಿತ್ರದಲ್ಲಿ ತೋರಿಸಲಾಗಿದೆ. ಮನಃಪಟಲದಲ್ಲಿ ಮೂಡುವ ಚಿತ್ರಗಳೇ ಎದುರಿನ ಕಾಲ್ಪನಿಕ ಪರದೆಯ ಮೇಲೆ ಮೂಡುತ್ತದೆ.

ತೀವ್ರ ದುಃಖಿಯಾದ ರಮೇಶ್ ಸಾಂತ್ವನ ಅನುಕಂಪದ ಆಕಾಂಕ್ಷಿಯಾಗಿರುತ್ತಾನೆ. ಅದನ್ನು ನೀಡಲು ಬಂದ ಸುಹಾಸಿನಿ ಬಹಳ ಬೇಗ ರಮೇಶ್‌ಗೆ ಆಪ್ತಳಾಗಿ ಬಿಡುತ್ತಾಳೆ.

ಆದರೆ ಆ ಆಪ್ತತೆ ದಿಕ್ಕು ತಪ್ಪುವುದು “ಈ ಸುಂದರ ಬೆಳದಿಂಗಳ…” ಹಾಡಿನಲ್ಲಿ ಅದೂ ವಿಶೇಷವಾಗಿ ಸುಹಾಸಿನಿ ಹಾಡುವ ಹಾಡಿನ ಎರಡನೇ ಚರಣದಲ್ಲಿ ಸ್ಪಷ್ಟವಾಗಿ ಮೂಡಿಬಂದಿದೆ.

ಸ್ವಲ್ಪ ಗಮನಿಸಿ “ತುಂತುರು” ಸುಹಾಸಿನಿ ಒಬ್ಬರೇ ತಮ್ಮ ದಾಂಪತ್ಯದ ಬಗ್ಗೆ ಹಾಡಿದರು. “ಭಲೇ ಭಲೇ” ರಮೇಶ್ ಒಬ್ಬರೇ ತಮ್ಮ ಈ ಹಿಂದಿನ ಪ್ರೇಮದ ಕುರಿತು ಹಾಡಿದರು. ಈ ಹಾಡನ್ನು ಒಬ್ಬ ಗಾಯಕಿ ಮತ್ತು ಗಾಯಕ ಇಬ್ಬರೂ ಹಾಡುತ್ತಾರೆ ಮತ್ತು ಈ ಹಾಡು ಯಾವೊಂದು ಸಂಬಂಧವನ್ನು(ಯಾರ ದಾಂಪತ್ಯವನ್ನು ಯಾರ ಪ್ರೇಮವನ್ನು) ಸ್ಪಷ್ಟವಾಗಿ ಪ್ರತಿನಿಧಿಸುವುದಿಲ್ಲ. ಆ ಅಸ್ಪಷ್ಟತೆಯ ನಿರ್ವಾತವನ್ನು ತುಂಬುವುದೇ ರಮೇಶ್ ಮನಸ್ಸಿನಲ್ಲಿನ ದುರ್ಭಾವಗಳು.

ಹಾಡು ಮುಗಿದ ನಂತರ ಕಂಬದ ಮೇಲೆ ಮೂಡಿದ ಸುಹಾಸಿನಿಯ ನೆರಳನ್ನು ಹಿಡಿಯುವ ಪ್ರಯತ್ನವನ್ನು ನಿರ್ದೇಶಕರು ಬಳಸಿದ ರೀತಿ ಅದ್ಬುತ. ನಂತರ ರಮೇಶ್ ತನ್ನ ರೂಮಿನ ಸತ್ಯಪೀಠದ ಮೇಲೆ ಕುಳಿತು ಮತ್ತೊಮ್ಮೆ ಮನಃಪಟಲವನ್ನು ತೆರೆದಾಗ ನಿಧಾನವಾಗಿ ನಿವೇದಿತಾ ಜೈನ್ ಅಲ್ಲಿಂದ ನಿರ್ಗಮಿಸಿ ಸುಹಾಸಿನಿ ಆವರಿಸಿಬಿಟ್ಟಿರುತ್ತಾಳೆ. ಈ ಒಂದು ಭಾವಪಲ್ಲಟ ಇಡೀ ಕಥೆಯನ್ನೇ ಒಂದು ದುರಂತದೆಡೆಗೆ ತೆಗೆದುಕೊಂಡು ಹೋಗುತ್ತದೆ. ಮನಃಸ್ಸಾಕ್ಷಿ ಎಚ್ಚೆತ್ತುಕೊಂಡು ಇದು ಸಲ್ಲದು ಎಂದು ರಮೇಶ್ ಅವರಿಗೆ ಹೇಳುತ್ತದೆ. ತತ್‌ಕ್ಷಣವೇ ಆ ಮನೆ ಬಿಟ್ಟು ಹೋಗುವ ತಯಾರಿ ನಡೆಸುತ್ತಾರೆ. “Out of sight out of mind” ಎಂಬ ಮಾತಿನಂತೆ ಈ ವಿಕೃತ ಭಾವದಿಂದ ಮುಕ್ತನಾಗಲು ಇಡೀ ಕಥೆಯಿಂದಲೇ ದೂರವಿರುವ ಪ್ರಯತ್ನ ಮಾಡಿದರು. ಸುಹಾಸಿನಿ ತಡೆಹಿಡಿಯುತ್ತಾಳೆ ಒಂದು ಕಡೆ ಅವಳು ಸ್ನೇಹಿತೆಯಾಗಿ ಆಸರೆಯಾಗಿದ್ದನ್ನು ರಮೇಶ್ ತಮ್ಮ ಅನುಕೂಲಕ್ಕೆ ತಕ್ಕಂತೆ ಭಾವಿಸಿಕೊಳ್ಳುತ್ತಾರೆ.

ಈ ವಿಷಯವೂ ಆಕಸ್ಮಿಕವಾಗಿ ಶರತ್ ಬಾಬುವಿಗೆ ಗೊತ್ತಾಗುತ್ತದೆ. ಅಲ್ಲಿಯವರೆಗೂ ಅನುಮಾನವಿದ್ದು ಆ ಅನುಮಾನವನ್ನು ದೃಢಿಕರಿಸುವುದೇ “ಕಣ್ಣಿನ ನೋಟಗಳು…” ಹಾಡು ಈ ಹಾಡು ಪೂರ್ತಿ ಸುಹಾಸಿನಿಯವರನ್ನು impress ಮಾಡುವ ಉದ್ದೇಶವನ್ನೇ ಹೊತ್ತಿರುತ್ತದೆ. ಅವರು ಕೊಟ್ಟ ಪದಗಳಿಗೆ ರಮೇಶ್ ಆಶುಕವಿತೆ ರಚಿಸುತ್ತಾ ಹೋಗುತ್ತಾರೆ. ಇದರರ್ಥ ರಮೇಶ್ ಅಷ್ಟೊತ್ತಿಗೆ ಸುಹಾಸಿನಿಯನ್ನು ಪಡೆಯುವ ಹಂಬಲದ ಕೈಗೊಂಬೆಯಾಗಿರುತ್ತಾರೆ. ಶರತ್ ಬಾಬುಗೆ ಈ ಸುದ್ದಿ ಗೊತ್ತಾಗುತ್ತಿದ್ದಂತೆ ಅವರ ಕೊಲೆ ಮಾಡುವುದಕ್ಕೂ ಹೇಸದಷ್ಟು ರಮೇಶ್ ಅವರ ಮನಸ್ಸು ಲಾಲಸೆಯ ದಾಸ್ಯಕ್ಕೊಳಗಾಗಿ ಬಿಟ್ಟಿರುತ್ತದೆ.

ಈಗ ಹೋದ ವಾರದ ಹಾಡಿನ ಬಗ್ಗೆ ಒಂದು ಸಣ್ಣ ಅಂಶವನ್ನು ಈ ವಾರದ ಬರಹಕ್ಕೆ ಬರಹ- ವರ್ಧಕವಾಗಿ ಬಳಸೋಣ. ಹೋದ ವಾರ ಬದುಕಿನಲ್ಲಿ ನಡೆಯುವ ಹಲವಾರು ಘಟನೆಗಳಲ್ಲಿ ನಾವು ನಿಮಿತ್ತ ಮಾತ್ರವಾಗಿ ಪಾತ್ರಧಾರಿಯಾಗಿರುತ್ತೇವೆ ಎಂಬುದು ಮೊದಲ ಅಂಶ. ಆದರೆ ಆ ಸಂದರ್ಭಗಳು ಹೊಸ ಅಪರಾಧಕ್ಕೆ ಮೊದಲ ಹಂತದ ಮನಸ್ಥಿತಿಯನ್ನು ಕಲ್ಪಿಸಿಕೊಡುತ್ತವೆ. ಲೇಖಕ ಜೋಗಿಯವರು ಒಂದು ಕಡೆ ಹೇಳುವಂತೆ ಅಪರಾಧದ ಮೊದಲ ಹಂತ ನಮಗೆ ಸಹಜವಾಗೇ ಕಾಣುತ್ತದೆ.

ರಮೇಶ್ ಅವರ ಮನೆಗೆ ಬಂದದ್ದು ಸಹಜ. ಒಂಟಿತನದಿಂದ ದೂರಾಗಲು ಸ್ನೇಹಿತನ ಮತ್ತು ಅವನ ಹೆಂಡತಿಯ ಸ್ನೇಹವನ್ನು ಬಯಸಿದ್ದು ಸಹಜ.‌ ಪ್ರೇಮ ವಂಚಿತರಿಗೆ ಬಹಳ ಬೇಗ ಮತ್ತೊಬ್ಬರೆಡೆಗೆ ಪ್ರೇಮ ಹುಟ್ಟುವುದು ಸಹಜ.‌ಆದರೆ ಯಾರ ಮೇಲೆ ಹುಟ್ಟುತ್ತದೆ ಎಂಬುದು ನಮ್ಮ ಜಾಗೃತೆಯ ಮೇಲೆ ಅವಲಂಬಿಸಿರುತ್ತದೆ. ಯಾವುದೋ ಭಾವುಕ ಘಳಿಗೆಯಲ್ಲಿ ಸುಹಾಸಿನಿಯತ್ತ ಜಾರಿದ ಮನಸ್ಸನ್ನು ರಮೇಶ್ ಮತ್ತೆ ತಾಟಸ್ಥ್ಯಕ್ಕೆ ತಂದಿದ್ದರೆ ಅದು ಸಹಜವಾಗಿರುತ್ತಿತ್ತು. ಯಾವಾಗ ಅದಕ್ಕೆ ಪುಷ್ಟಿಕೊಡುವಂತೆ ವರ್ತಿಸುತ್ತಾ ಹೋಗುತ್ತಾರೋ ಆಗ ಭಾವ ತೀವ್ರತೆ ಹೆಚ್ಚಾಗಿ ಅದು ಅಪರಾಧದ ಮುನ್ನುಡಿಯಾಗುತ್ತದೆ. ನಂತರ ಅದು ಒಂದು ಕೊಲೆಯವರೆಗೆ ಹೋಗುತ್ತದೆ. ರಮೇಶ್ ಆತ್ಮಸಾಕ್ಷಿ ಮೊದಲೇ ಎಚ್ಚೆತ್ತುಕೊಂಡು ಅವರ ಮನೆ ಬಿಟ್ಟು ಹೋಗಲು ನಿರ್ಧರಿಸಿದರು. ಎರಡು ಬಾರಿ ಆ ಆತ್ಮಸಾಕ್ಷಿಯನ್ನು ಬಡಿದ ಪರಿಣಾಮ ಬದುಕೇ ದಿಕ್ಕೆಟ್ಟು ಹೋಗುತ್ತದೆ. ಆತ್ಮಸಾಕ್ಷಿಯೇ ಹಾಗೆ ಎರಡು ಬಾರಿ ಹೇಳುತ್ತೆ ನಾವು ಅದನ್ನು ಯಾವ ಮಟ್ಟಿಗೆ ರೂಪಾಂತರ ಮಾಡುತ್ತೇವೆಂದರೆ ಮೂರನೇಯ ಬಾರಿ ಅದು ನಾವು ಮಾಡುವ ಅಪರಾಧಗಳಿಗೂ ಜೊತೆಯಾಗಿಬಿಡುತ್ತದೆ.

ಐದನೇಯ ಮತ್ತು ಕೊನೆಯ ಹಾಡಿನ ಹೊತ್ತಿಗೆ ರಮೆಶ್ ಮನಃಸ್ಥಿತಿ ಅಲ್ಲಿಗೆ ತಲುಪಿರುತ್ತದೆ. ಆ ಹಾಡೇ ಇವತ್ತು ನಾನು ಹೇಳ ಹೊರಟಿರುವ ಹಾಡು ಹೋದ ವಾರದಲ್ಲಿನ “ಅಪರಾಧಿ ನಾನಲ್ಲ”(http://localkebal.com/haadu-jaadu-5)

ಹಾಡಿನ ತದ್ವಿರುದ್ಧ ಹಾಡು. ಆದ ಘಟನೆಗೆ ಅಪರಾಧಿ ನಾನಲ್ಲ ಎಂದು ನಿಸ್ಸಹಾಯಕತೆ ತೋಡಿಕೊಳ್ಳುವ ಒಂದು ಮುಖ ನೋಡಿದೆವು. ನೂರಾರು ಪರ್ಯಾಯ ಹಾದಿಗಳನ್ನು ಮರೆತು ಅಪರಾಧದ ಹಾದಿಯಲ್ಲೇ ನಡೆದು ಇದಕ್ಕೂ ಕಾರಣ ನಾನಲ್ಲ ಎಲ್ಲಕ್ಕೂ ಸಂದರ್ಭಗಳೇ ಕಾರಣ ಎಂಬ ಮನಃಸ್ಥಿತಿಯ ಹಾಡು “ಮನಸೇ ಬದುಕು ನಿನಗಾಗಿ ಬವಣೆ ನಿನಗಾಗಿ ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲಾ ಸುಳ್ಳು ಅಲ್ಲವೇ?”

(https://youtu.be/xBS_X-uoiWA)

ಎಂಬ ಹಾಡು. ಈ ಹಾಡಿನಲ್ಲಿ ತಪ್ಪಿನ ಸಮರ್ಥನೆಯನ್ನು ಕಟ್ಟಿಕೊಡುತ್ತದೆ.

ಹಾಡು ಇಂತಿದೆ.

“ಮನಸೇ ಈ ಬದುಕು ನಿನಗಾಗಿ ಬವಣೆ ನಿನಗಾಗಿ
ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ

ನಿನ್ನ ಒಂದು ಮಾತು ಸಾಕು ಮರುಮಾತು ಎಲ್ಲಿ
ನಿನ್ನ ಒಂದು ಆಣತಿ ಸಾಕು ನಾ ಅಡಿಗಳಲ್ಲಿ
ನಿನ್ನ ಒಂದು ಹೆಸರೇ ಸಾಕು ಉಸಿರಾಟಕಿಲ್ಲಿ
ನಿನ್ನ ಒಂದು ಸ್ಪರ್ಶ ಸಾಕು ಈ ಜನುಮದಲ್ಲಿ
ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ
ಮನಸೇ ಮನಸ ಕ್ಷಮಿಸೆ……

ನನ್ನ ಪ್ರೀತಿ ಗಂಗೆ ನೀನು ಮುಡಿಸೇರಲೆಂದೇ
ಸಮಯಗಳ ಸರಪಳಿಯಲ್ಲಿ ಕೈ ಗೊಂಬೆಯಾದೆ
ನನ್ನ ಬಾಳ ಪುಟಕೆ ನೀನು ಹೊಸ ತಿರುವು ತಂದೆ
ನಿನ್ನ ಮರೆತು ಹೋದರೆ ಈಗ ಬದುಕೇಕೆ ಮುಂದೆ
ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ
ಮನಸೇ ಮನಸ ಹರಿಸೆ…..”

ನಾನು ಮಾಡಿದ್ದು ಮನಸ್ಸಿನ ತೃಪ್ತಿಗಾಗಿ. ಅನೈತಿಕತೆ ಸಮಾಜ ಇವೆಲ್ಲವನ್ನೂ ಹೊರಗಿಟ್ಟು ನೋಡಿದಾಗ ನಾನು ಮನಸ್ಸಿಗೆ ಏನು ಕೊಡಲಿಲ್ಲ. ಎಷ್ಟೋ ಬಾರಿ ಸಮಾಜದ ಹೆದರಿಕೆಗಾಗಿ ನಮ್ಮ ಆಸೆಗಳ ಕತ್ತು ಹಿಸುಕಿರುತ್ತೇವೆ. ಅಕಸ್ಮಾತ್ ಆ ಆಸೆಗಳಿಗೆಲ್ಲ ನಾವು ಪೂರಕವಾಗಿ ವರ್ತಿಸುತ್ತಾ ಹೋಗಿದ್ದರೆ ಇವತ್ತು ಸಮಾಜದಲ್ಲಿ ಅದೆಷ್ಟು ಅಮೃತವರ್ಷಿಣಿಗಳು, ಸಂಗ್ಯಾಬಾಳ್ಯಾ ಕಥೆಗಳು ಆಗಿರುತ್ತಿದ್ದವೋ. ಜಗತ್ತಿನ ಯಾವ ಮಾನದಂಡಗಳಿಂದ ಅಳೆದರೂ ನಾನು ಸಜ್ಜನನಲ್ಲ ನನ್ನ ಪ್ರೀತಿಗಾಗಿ ನೀತಿಹೀನನಾಗುವಷ್ಟು ನಿಷ್ಟೆ ತೋರಿದ್ದೇನೆ ಅದೇ ಸುಳ್ಳಾದರೆ ಜಗತ್ತೇ ಸುಳ್ಳಲ್ಲವೇ ಎಂಬ ಮಾತನ್ನು ಪಲ್ಲವಿಯಲ್ಲಿ ಕೇಳಲಾಗಿದೆ.

ಇಲ್ಲಿ ಒಂದು ವಾದ ಅಥವಾ ಜಿಜ್ಞಾಸೆ ಏರ್ಪಟ್ಟಿದೆ. ಒಂದು ತಾನು ಪ್ರೀತಿಸಿದ ಮನಸ್ಸಿಗೆ ಕೇಳುತ್ತಿದ್ದರೆ ಮತ್ತೊಂದು ತಮ್ಮದೇ ಅಂತಾರಾತ್ಮಕ್ಕೆ ಹೇಳುತ್ತಿದ್ದಾರೆ ಅದಕ್ಕಿಂತ ಹೆಚ್ಚಾಗಿ ಸಮರ್ಥನೆಗಳನ್ನು ಕೊಡುತ್ತಿದ್ದಾರೆ. ಪ್ರೀತಿಸಿದ ಹೃದಯವೇ ಒಂದೇ ಒಂದು ಮಾತು, ಆಣತಿ (ಅಪ್ಪಣೆ), ಹೆಸರು ಸ್ಪರ್ಶಗಳು ಸಾಕು ಈ ಬದುಕಿಗೆ ಉಸಿರಿಗಿಂತ ಹೆಚ್ಚು ಎನ್ನುವ ಭಾವ. ಮತ್ತೊಂದು ಭಾವದಲ್ಲಿ ಇವೆಲ್ಲಾ ತಮ್ಮದೇ ಅಂತಾರಾತ್ಮಕ್ಕೂ ಹೇಳಿಕೊಳ್ಳುತ್ತಿದ್ದಾರೆ. ಮನಸ್ಸೆ ನೀ ಅಪ್ಪಣೆ ಕೊಟ್ಟರೆ ನಿನ್ನ ಅಡಿಗಳಲ್ಲಿ ಎಲ್ಲವನ್ನೂ ತಂದಿಡುವೆ, ಅವಳ ಹೆಸರೊಂದನ್ನೆ ನನಗೆ ಕೊಟ್ಟು ಬಿಡು ಉಸಿರಾಟವನ್ನೇ ನಿಲ್ಲಿಸಿ ಬಿಡುವೆ. ನೀನಾಡುವ ಮಾತುಗಳಿಗೆ ನಾನು ಮರುಮಾತಾಡದೇ ಒಪ್ಪಿಕೊಂಡು ಬಿಡುವೆ ಅಂತ ಹೇಳುತ್ತಾರೆ. ಕೊನೆಯ ಸಾಲು ನೋಡಿ “ಮನಸೇ ನಾ ಏನೇ ಮಾಡಿದರೂ ನಿನ್ನ ಪ್ರೀತಿಗಲ್ಲವೇ? ಮನಸೇ ಮನಸಾ ಕ್ಷಮಿಸೆ”. ಇಲ್ಲಿ ಸಂಪೂರ್ಣವಾಗಿ ತನ್ನ ತಪ್ಪುಗಳಿಗೆ ಮನಸ್ಸು ಮತ್ತು ಸಂದರ್ಭಗಳೆ ಕಾರಣ ಎಂಬ ಸಮರ್ಥನೆ ಇದೆ. ಮೊದಲನೇಯದ್ದು ಪ್ರೀತಿಸಿದ ಹುಡುಗಿಗೆ ನಾನು ಏನೆ ಮಾಡಿದ್ದರೂ ನಿನ್ನ ಪ್ರೀತಿಗಾಗಿ ಅಲ್ಲವೇ ಎಂದು ಕೇಳಿದ್ದರೆ ಎರಡನೇಯದ್ದು ಆತ್ಮವೇ ನಾ ಏನೆ ಮಾಡಿದ್ದರೂ ನಿನ್ನ ತೃಪ್ತಿಗಲ್ಲವೇ ಎಂದು ಕೇಳಿಕೊಳ್ಳುತ್ತೆ. “ಮನಸೇ ಮನಸಾ ಕ್ಷಮಿಸೆ” ಎಂಬ ಸಾಲಿನ ಎರಡು ಮನಸ್ಸುಗಳಲ್ಲಿ ಒಂದು ಅಪೇಕ್ಷೆಯನ್ನಿಟ್ಟ ಲಾಲಸೆಯ ಮನಸ್ಸು ಎರಡನೇಯದ್ದು ಮಾಡಿದ್ದು ತಪ್ಪು ಅಂತ ಹೇಳುವ ಮನಸ್ಸಾಕ್ಷಿ. ಇಲ್ಲಿ ಮನಃಸ್ಸಾಕ್ಷಿಗೆ ರಮೇಶ್ ಲಾಲಸೆಯ ಮನಸ್ಸನ್ನು ಕ್ಷಮಿಸಿಬಿಡು ಎಂದು ಕೇಳುತ್ತಿದ್ದಾರೆ. ಅದರರ್ಥ ಅವರು ಮನಃಸಾಕ್ಷಿಯನ್ನು ಮರೆತು ಮನಸ್ಸಿನ ಹಂಬಲ ತೀರಿಸಿಕೊಳ್ಳಲು ಅದರ ಬೆನ್ನೇರಿಬಿಟ್ಟಿದ್ದಾರೆ. ಇದು ಗೂಡಾರ್ಥ ಮತ್ತು ರಮೇಶ್ ಮನಸ್ಸಿನಲ್ಲಿನ ಭಾವ ಮಥನವಾದರೆ ಸರಳಾರ್ಥದಲ್ಲಿ ಅವರು ಸುಹಾಸಿನಿಯ ಮನಸ್ಸಿಗೆ ಕ್ಷಮೆಯಾಚಿಸುತ್ತಿದ್ದಾರೆ ಅಂತಲೂ ಆಗಬಹುದು

ನೀನು‌ ಪ್ರೇಮ ಗಂಗೆ ನನ್ನ ಮುಡಿಸೇರಲೆಂದೆ ನಾನು ಇಷ್ಟೆಲ್ಲಾ ಕಷ್ಟಗಳನ್ನು ಸಹಿಸಿಕೊಂಡೆ. ಸಮಯದ ಗೊಂಬೆಯಾಗಿ ಹೋದೆ. ನನ್ನ ಕಥೆಗೆ ತಿರುವು ತಂದವಳು ನೀನೆ ಆ ತಿರುವಿನಲ್ಲಿ ನಾನೆಲ್ಲಿಯವರೆಗೆ ಬಂದಿದ್ದೇನೆಂದರೆ ಅದರ ಗಮ್ಯ ನೀನೆ ನಿನ್ನ ಹೊರತು ಮಿಕ್ಕೆಲ್ಲಾ ದಾರಿಗಳು ತಟಸ್ಥವಾಗಿವೆ. ಮನಸ್ಸು ಮಿಕ್ಕ ದಾರಿಗಳ ಪ್ರಯಾಣವನ್ನು ನಿಷೇಧಿಸಿಬಿಟ್ಟಿದೆ. ಹೀಗಾಗಿ ನೀನಿಲ್ಲದೇ ಹೋದರೆ ಅಂತ ದಿಕ್ಕೆಟ್ಟ ಬದುಕನ್ನು ಊಹಿಸಲಿಕ್ಕೂ ಸಾಧ್ಯವಿಲ್ಲ. “ಮನಸೆ ಮನಸಾ ಹರಿಸೆ” ಇಷ್ಟೊತ್ತು ಆಸೆ ಪಟ್ಟ ಮನಸ್ಸಿನ ಪ್ರತಿನಿಧಿಯಾಗಿ ರಮೇಶ್ ಅವರ ಮಾತುಗಳಿದ್ದವು.‌ಮನಸ್ಸಾಕ್ಷಿ ಅದರ ವಿರುದ್ಧವಾಗಿತ್ತು. ‌ನಾನು ಮಾಡಿದ್ದು ತಪ್ಪು ಕ್ಷಮಿಸು ಎಂದು ಕೇಳಿತ್ತು.‌ ಆದರೆ ಈಗ ನೋಡಿ ಮನಸ್ಸಾಕ್ಷಿ ಬರೀ ಕ್ಷಮಿಸುವುದು ಮಾತ್ರವಲ್ಲ ಆ ದಾರಿಯೆಡೆಗಿನ ಪಯಣಕ್ಕೆ ಶುಭಹಾರೈಸಬೇಕು. ನಾನು ಆಗಲೇ ಹೇಳಿದೆನಲ್ಲ ಮನಃಸಾಕ್ಷಿಯನ್ನು ಬಡಿಯುವುದು ಅಥವಾ ಚಿವುಟಿಹಾಕುವುದು ಅಂತಾ ಅದು ಇದೆ ಹೊರತು ಮತ್ತೇನು ಅಲ್ಲ. ಬರುಬರುತ್ತಾ ರಮೇಶ್ ಮನಃಸ್ಥಿತಿ ನಾನು ಮಾಡುವುದೇ ಸರಿ ಎಂದು ಹೇಳುತ್ತಾ ಹೋಗುತ್ತೆ. ಮನಃಸಾಕ್ಷಿಗೂ ಇದೇ ದಿಕ್ಕಿಗೆ ಕೊಂಡೊಯ್ಯುತ್ತದೆ.

ಕೊನೆಗೆ ರಮೇಶ್ ಅವರ ಮನಸ್ಸಿನ ಆಸೆಗಳು ಮತ್ತು ಗಂಡನ ಕೊಲೆಯಾದದ್ದೆಲ್ಲವೂ ಒಂದೊಂದಾಗಿ ಸುಹಾಸಿನಿಗೆ ತಿಳಿಯುತ್ತಾ ಹೋಗುತ್ತವೆ. ಭಾರತೀಯ ಹೆಣ್ಣುಮಕ್ಕಳ ಒಂದು ಇತ್ಯಾತ್ಮಕ ಅಂಶವೆಂದರೆ ಒಬ್ಬ ಗಂಡು ಅವಳೆಡೆಗಡ ನೋಡುವ ರೀತಿ ಮಾತಾಡಿಸುವ ಪರಿ ಮುಟ್ಟಿದ ರೀತಿಗಳಿಂದ ಅವನು ಅವಳನ್ನು ಯಾವ ದೃಷ್ಟಿಯಲ್ಲಿ ನೋಡುತ್ತಿದ್ದಾನೆ ಎಂಬುದನ್ನು ಬಹುಬೇಗ ಗ್ರಹಿಸಿಬಿಡುತ್ತಾರೆ. ಅಂಥ ಸೂಕ್ಷ್ಮ ಸಂವೇದನೆ ಅವರಲ್ಲಿರುತ್ತದೆ. ಹೀಗೆಲ್ಲಾ ಇರುವಾಗ ಸುಹಾಸಿನಿ ಕೊನೆಗೂ ಸಾವನ್ನು ಅಪ್ಪಿಕೊಳ್ಳುತ್ತಾಳೆ ವಿನಃ ಪರಪುರುಷನಲ್ಲ ಎಂಬುದೇ ಚಿತ್ರದ ವಿಶೇಷ. ಹೋದ ವಾರದ ಹಾಡಿನಲ್ಲಿ ಎಲ್ಲ ಸಂದಿಗ್ಧಗಳ ಮಧ್ಯೆ ಆದರ್ಶವನ್ನು ಹಿಡಿದ ಮಹಾಪುರುಷರ ಬಗ್ಗೆ ಹೇಳಿದ್ದೆನಲ್ಲ ಅಂತ ಅತ್ಯುಚ್ಛ ಮನಸ್ಥಿತಿ ಸುಹಾಸಿನಿಯದ್ದು ಮನ ಬಂದಂತೆ ನಡೆದು ಸಂದರ್ಭಗಳ ನೆಪ ಒಡ್ಡುವ ಮನಃಸ್ಥಿತಿ ರಮೇಶ್ ಅವರದ್ದು..

ಐದು ಹಾಡುಗಳನ್ನು ಕಥೆಯ ತಿರುವಿಗಾಗಿ ಸಮರ್ಪಕವಾಗಿ ಬಳಸಿಕೊಂಡ ನಿರ್ದೇಶಕ ದಿನೇಶ್ ಬಾಬು ಅವರ ಜಾಣ್ಮೆಗೆ ಮೆಚ್ಚುಗೆ ವ್ಯಕ್ತ ಪಡಿಸೋಣ. ಇಲ್ಲಿ ಸುಹಾಸಿನಿ ಶರತ್ ಬಾಬು ಅವರ ಪಾತ್ರ ಇಷ್ಟವಾದಂತೆ ರಮೇಶ್ ಅರವಿಂದರ ಪರಕಾಯ ಪ್ರವೇಶ ಯಾವ ಮಟ್ಟಿಗಿದೆ ಎಂದರೆ ಅವರ ಅಭಿಮಾನಿಗಳಿಗೂ ಅವರ ಮೇಲೆ ಸಿಟ್ಟು ಬರುವಷ್ಟರ ಮಟ್ಟಿಗಿದೆ.

ಹಾಡನ್ನು ಕಥೆಗೆ ಬಳಸೋದರಿಲಿ‌ ಹಾಡಿಗಾಗೇ ಕಥೆ ಬರೆದ ಮತ್ತೊಂದು ಚಿತ್ರ ಮತ್ತು ಹಾಡುಗಳಿವೆ ಅದನ್ನು ಮುಂದಿನ ವಾರ ನೋಡೋಣ.

ಹಿಂದಿನ ಅಂಕಣಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
1.ನಾವೆಲ್ಲಾ ಇಲ್ಲಿ ನಿಮಿತ್ತ ಮಾತ್ರ.

2.ಮಗು ಅಜ್ಜ ಮತ್ತು ಬಾಹುಬಲಿ. ಮುಗ್ಧತೆ ಪ್ರಬುದ್ಧತೆ ಮತ್ತು ವೈರಾಗ್ಯ.

3.ಒಂದು ವಿಯೋಗಕ್ಕೆ ಹುಡುಗಿಯ ಆಂತರ್ಯದ ಸಿದ್ಧತೆ

4.ಸಯಾಮಿಯೋ, ಅವಳಿ ಜವಳಿಯೋ, ದೇಹ ಬೇರೆ ಆತ್ಮ ಬೇರೆಯೋ?

5.ಮೈಯೆಲ್ಲಾ ಚಂದ್ರನ ಗುರುತು ಹೆಸರೆಲ್ಲೋ ಹೋಗಿದೆ ಮರೆತು.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..