1655

ನನ್ ಲೈಫಲ್ ಒಂದಿನ

ಅವತ್ತು ಯಾಕೋ ಏಳಲಿಕ್ಕೇ ಮನಸಿಲ್ಲ, ಸೋಂಬೇರಿ ತನದ ಪರಮಾವಧಿ ಅಂತಾರಲಾ ಆ ತರ. ಬೆಳಿಗ್ಗೆ 9 ಆದ್ರೂ, ಅಲರಾಂ ಬಡ್ಕೋತಾನೇ ಇದ್ರೂ, ಹಾಸಿಗೆ ಮೇಲೇ ಹೊದ್ಕೆ ಮುಚ್ಕಂಡು ಮಲಗಿದ್ದೆ. ನಾನ್ ಯಾವ್ ತರಾ ಅಂದರೆ, ಬೆಳಿಗ್ಗೆ 8 ಕ್ಕೆ ಏಳ್ಬೇಕು ಅಂತ ಇಟ್ಕೊಳಿ, ಅಲರಾಂನ ಮಾತ್ರಾ ಬೆಳಿಗ್ಗೆ ಮುಂಚೆ 5 ಇಂದನೇ ಇಟ್ಟಿರ್ತೀನಿ. ಅದೋ ಪ್ರತೀ 20 ನಿಮಿಷಕ್ಕೂ ಬಡ್ಕೊಂಡೂ.. ಬಡ್ಕೊಂಡೂ.. ಅದರ ಗಂಟಲೂ ಕಟ್ಟಿ ಹೋಗಿತ್ತು ಅನ್ಸತ್ತೆ. ಅಂದ್ರೇ, ಬ್ಯಾಟರಿ ಮುಗೀತಾ ಬಂದಿತ್ತು ಅನ್ಸತ್ತೆ. ಕೊನೆಗೂ ಒಲ್ಲದ ಮನಸ್ಸಿನಿಂದ ತಬ್ಬಿಕೊಂಡಿದ್ದ ಹಾಸಿಗೆನಾ ಬಿಟ್ಟು ಎದ್ದಿದ್ದಾಯ್ತು.

ಶುಕ್ರವಾರ ಆಗಿದ್ರಿಂದಾ ವರ್ಕ್ ಪ್ರಂ ಹೋಂ ತಗೊಂಡಿದ್ದೆ. ಹಾಗಾಗಿ ಆಫೀಸಿಗೆ ಹೋಗಲಿಕ್ಕೆ ಆ ಸಿಲ್ಕ್ ಬೋರ್ಡ್ ಸಿಗ್ನಲ್ ಕಡೆಗೆ ಹೋಗೋದು ಬೇಡವಾಗಿತ್ತು. ಬೆಂಗಳೂರಿನ ಹೆಚ್ಚಿನ ಟ್ರಾಫಿಕ್ ಆಗೊದು ಈ ರಸ್ತೆಯಲ್ಲೇ. ಬಿಟ್ರೆ, ಹೆಬ್ಬಾಳ ಪ್ಲೈಓವರ್, ಭನ್ನೇರುಘಟ್ಟ ರಸ್ತೆ ಗಳೂ ಇದಾವೆ. ಈ ಸಾಪ್ಟ್ ವೇರ್ ಎಂಜಿನಿಯರ್ ಗಳಾದ ನಮಗೆ ಖುಷಿ ಏನಂದ್ರೇ, ವರ್ಕ್ ಪ್ರಂ ಹೋಂ ತಗೋಬೋದು. ಡಾಕ್ಟರ್ ಗಳಿಗೆಲ್ಲಾ ಇದೆಲ್ಲಿ ಆಗತ್ತೆ ಹೇಳಿ?? ಅವ್ರೂ ವರ್ಕ್ ಪ್ರಂ ಹೋಂ ತಗೊಂಡ್ರೂ ಅಂತ ಇಟ್ಕೊಳಿ. ಹೇಗೆ ಕೆಲಸ ಮಾಡ್ಬೋದು?? ಇಂಟರ್ನೆಟ್ ವೆಬ್ ಕ್ಯಾಮೆರಾ ಆನ್ ಮಾಡಿ .. ಹಾ ನಾಲಿಗೆ ತೆಗೀರಿ, ಕಣ್ಣು ತೋರಿಸಿ ಅಂತ ಹೇಳಿ. ಇದ್ದಿದ್ದೇ ಬೇರೆ ಖಾಯಿಲೆ, ಇವ್ರು ಅನ್ಕೊಂಡಿದ್ದೇ ಬೇರೆ ಆಗಿ, ಕೊನೆಗೆ ಕೊಟ್ಟಿದ್ ಮಾತ್ರೆಯಿಂದಾ ಏನೋ ಸೈಡ್ ಎಫೆಕ್ಟ್ ಆಗಿ, ಆಮೇಲೆ ಡಾಕ್ಟರ್ ಕೆಲಸಕ್ಕೇ ಅಲ್ಲದೇ ಅವರ ಜೀವಕ್ಕೇ ಸಂಚಕಾರ ಬರತ್ತೆ ನೋಡಿ. ಆದ್ರೇ ನಮಗೆ ಹಾಗಲ್ಲಾ ಲಾಗಿನ್ ಆಗಿ, ತಿಂಡಿ ತಿಂತಾ, ಊಟ ಮಾಡ್ತಾನೇ ಕೆಲಸ ಮಾಡ್ಬೋದು. ಅಲ್ಲದೇ ಡಾಕ್ಟರ್ ಗಳಿಗೆ ಇರೋ ಸಂಬಳನೂ ಜಾಸ್ತಿನೇ ಬಿಡಿ. ಆದ್ರೂ ಚೆನ್ನಾಗಿ ಜೀವನ ಮಾಡಲಿಕ್ಕೆ ನಮಗೆ ಇವಾಗ ಬರ್ತಿರೋದೇ ಸಾಕು.
ಅಂದಹಾಗೆ ನನ್ನ ಹೆಸರು ಮೋಹನ್. ನಾನು ಮೆಕ್ಯಾನಿಕಲ್ ಎಂಜಿನಿಯರೇ ಆದ್ರೂ, ಸೇರಿದ್ದು ಮಾತ್ರಾ ಸಾಫ್ಟ್ ವೇರ್ ಕಂಪೆನಿ. ಕಾಲೇಜಿನಲ್ಲಿ ಹುಡುಗಿಯರ ಮುಖ ನೋಡಿದ್ದೇ ಕಮ್ಮಿ, ಆದ್ರೇ ಇಲ್ಲಿ ಅವರೇ ಬಹುಸಂಖ್ಯಾತರು. ಹಾಗಾಗಿ ಅಲ್ಪಸಂಖ್ಯಾತರಾದ ನಮಗೆ ಬೇಸರವಿಲ್ಲ. ಮರುಭೂಮಿಲಿ ಒಯಾಸಿಸ್ ಇದ್ದರೂ ಅದರಿಂದ ಹೊರಗೆ ಬಂದ ತಕ್ಷಣ ಸಮುದ್ರನೇ ಸಿಕ್ಕಿದಂತಹಾ ಅನುಭವ. ಏನೋ ಓದಿದ ಸಬ್ಜೆಕ್ಟ್ ಗೆ ಸರಿಯಾದ ಕೆಲಸ ಸಿಕ್ಕಿಲ್ಲಾ ಅನ್ನೋ ಕೊರಗು ಒಂದೇ ಬಿಟ್ರೇ ಬೇರೇನಿಲ್ಲ. ಸಂಬಳಕ್ಕೂ ಏನ್ ಕಮ್ಮಿ ಇಲ್ಲಾ. ಹಾಗಾಗಿ ಜೀವನ ಚೆನ್ನಾಗೇ ಸಾಗ್ತಾ ಇದೆ.
ಇಷ್ಟೆಲ್ಲಾ ಆದ್ರೂ ಮನೇಲಿ ಒಂದು ವರ್ಷದಿಂದಾ ಒಂದೇ ರಗಳೆ, ಬ್ರಾಹ್ಮಣರಲ್ಲಿ ಹುಡುಗೀರು ಸಿಕ್ಕೋದು ಕಷ್ಟ ಬೇಗ ಒಂದು ಮದುವೆ ಮಾಡ್ಕೋಬಾರ್ದಾ ಅಂತ ಅಮ್ಮ, ಅಜ್ಜಿ, ಅಕ್ಕ, ಅಜ್ಜ ಹೀಗೆ ಎಲ್ಲರ ರಗಳೆನಾ ತಡಿಯಲಿಕ್ಕೇ ಆಗ್ತಾ ಇಲ್ಲ. ಅಪ್ಪ ಮಾತ್ರ ಹಾಗೆ ಹೇಳಲ್ಲ, ಯಾಕೆ ಹೇಳಿ?? ಅವರಿಗೆ ಗೊತ್ತು ಮದುವೆಯಾದ ಹುಡುಗರ ಕಷ್ಟಗಳು. ಹಾಗಂತಾ ಅಜ್ಜನಿಗೆ ಗೊತ್ತಿಲ್ಲಾ ಅಂತಲ್ಲ, ವಯಸ್ಸಾಯ್ತಲ್ಲಾ ಎಲ್ಲಾ ಮರೆತುಹೋಗಿದೆ ಅಷ್ಟೇ. ಇವರೆಲ್ಲರ ರಗಳೆ ತಡೆಯಲಿಕ್ಕಾಗದೇ ಒಂದು ನಿರ್ಧಾರ ಮಾಡಿದೆ. ಹೇಗಿದ್ರೂ ವಯಸ್ಸು 26 ಆಯ್ತು, ಒಳ್ಳೆ ಕೆಲಸನೂ ಇದೆ, ಇನ್ನಾ ತಡ ಮಾಡಿದ್ರೇ ಆಗಲ್ಲಾ ಅಂತ ಒಪ್ಕೊಂಡೆ. ನಾನು ಒಪ್ಕೊಳದೇ ಕಾಯ್ತಾ ಇದ್ರೇನೋ ಅನ್ಸತ್ತೆ ಎರಡೇ ವಾರದಲ್ಲಿ ಹುಡುಗಿ ಹುಡುಕಿ, ಇಬ್ರೂ ಒಪ್ಕೊಂಡು ಕಳೆದ ತಿಂಗಳಷ್ಟೇ ನಿಶ್ಚಿತಾರ್ಥ ನೂ ಆಯ್ತು. ಹೆಸರು ಪ್ರೀತಿ, ಅವಳೂ ಸಾಪ್ಟ್ ವೇರ್ ಎಂಜಿನಿಯರ್.
ಓಹ್, ಮರೆತೇ ಬಿಟ್ಟಿದ್ದೇ, ಇವೆಲ್ಲಾ ಕಥೆಗಳ ಯೋಚನೆಯಲ್ಲಿ ಮೊಬೈಲ್ ಅಲರಾಂ ಹೊಡೆದೂ, ಹೊಡೆದೂ, ಸ್ವಿಚ್ ಆಫ್ ಆಗಿದ್ದೇ ಮರೆತಿದ್ದೆ ನೋಡಿ. ಅದನ್ನ ಚಾರ್ಜ್ ಗೆ ಹಾಕಿ ನಿತ್ಯಕರ್ಮಾಧಿಗಳಿಗೆ ಹೋದೆ. ಬಿಸಿ ಬಿಸಿ ನೀರಿನಲಿ ಮಿಂದು, ಸಂಧ್ಯಾವಂದನೆ ಮುಗಿಸಿ ಬಂದೆ. ನಾವು ಬ್ರಾಹ್ಮಣ ಹುಡುಗರಿಗೆ ಮನೇಲಿ ಸಂಧ್ಯಾವಂದನೆ ಮಾಡದೇ ಇದ್ದರೇ ಸಾವಿರ ಬೈಗುಳದ ಅಭ್ಯಂಜನ ಆಗತ್ತೆ. ಸಂಧ್ಯಾವಂದನೆ ಮುಗಿಸಿ ಬಂದು ಮೊಬೈಲ್ ಸ್ವಿಚ್ ಆನ್ ಮಾಡಿದೆ, ನೋಡಿದರೆ 27 ಮಿಸ್ ಕಾಲ್ ಇತ್ತು. ಪ್ರೀತಿನೇ ಮಾಡಿದ್ದಾಳೇನೋ ಅನ್ಕೊಂಡೆ, ಆದ್ರೇ ಅನ್ನೌನ್ ನಂಬರ್ ಅದಾಗಿತ್ತು.
ನಮಗೆಲ್ಲಾ ಅನ್ನೌನ್ ನಂಬರ್ ಕಾಲ್ ಬಂದರೇ ಯಾರದು ಅಂತಾ ಹುಡುಕುವ ಒಂದು ಚಟ ಇರತ್ತೆ. ಹಾಗೇ ನೋಡೋಣ ಎಂದು ವಾಪಾಸ್ ಕಾಲ್ ಮಾಡಿದೆ. ಅತ್ತಕಡೆ ಬರೀ ರಿಂಗ್ ಆಯ್ತು ಆದ್ರೇ ಎತ್ತಲಿಲ್ಲ. ಮತ್ತೆ ಪ್ರಯತ್ನ ಮಾಡ್ದೆ. ಈ ಬಾರಿ ಹಾಗಾಗಲಿಲ್ಲ, ಆ ಕಡೆಯಿಂದ “ಹಲೋ” ಎಂಬ ಅವಳ ಸುಮಧುರ ಧ್ವನಿ ಕೇಳಿಸ್ತು. ಆ ಧ್ವನಿಗೇ ನನ್ನ ಮನಸಲ್ಲಿ ಒಮ್ಮೆಗೆ ಆ ಹುಡುಗಿಯ ಮುಖವನ್ನು ನೋಡಲೇಬೇಕು ಎನಿಸಿದ್ದು ಮಾತ್ರ ಸುಳ್ಳಲ್ಲ.

(ತಡ್ಕೊಳಿ ಇನ್ನೂ ಇದೆ……)

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..