20292

ನೀರ್ದೋಸೆಯಲ್ಲಿ ಆಮ್ಲೇಟ್ ಹುಡುಕುವವರಿಗೆ ಲೇಖನ -“ವಯಸ್ಕರಿಗೆ ಮಾತ್ರ”

rahul

ರಾಹುಲ್ ಹಜಾರೆ

ನೀರ್ದೋಸೆ ವಿವಾದದ ವಿಚಾರಗಳಿಂದ ಶುರುವಾಗಿ ಕೊನೆಗೂ ಬಿಡುಗಡೆಯಾಗಿ ಒಳ್ಳೆಯ ಹಾಗೂ ಕೆಟ್ಟ ಎರಡು ಅಭಿಪ್ರಾಯಗಳನ್ನು ಸಮವಾಗಿ ಪಡೆದಿದೆ.ಚಿತ್ರದಲ್ಲಿ ಜಗ್ಗೇಶ್ ತಮ್ಮ ನವರಸ ನಾಯಕ ಎಂಬ ಬಿರುದಿಗೆ ತಕ್ಕಂತೆ ನಟಿಸಿದ್ದಾರೆ. ದತ್ತಣ್ಣ ಅವರಂತೂ ಅಭಿನಯದಲ್ಲಿ ಎಂದಿಗೂ ಬತ್ತದ ಚಿಲುಮೆ. ಹರಿಪ್ರಿಯಾ ಅವರ ವೇಶ್ಯೆಯ ಪಾತ್ರದಲ್ಲಿ ನಿಜಕ್ಕೂ ಹಾಟ್ ಆಗಿ ಭಲೆ ಎನ್ನುವ ಮಟ್ಟಿಗೆ ನಟಿಸಿದ್ದಾರೆ. ಇನ್ನು ಸುಮನ್ ರಂಗನಾಥ ಎಂಬ ಚಿರಯುವತಿ ಮಧ್ಯಮ ವರ್ಗದ ಹೆಣ್ಣುಮಗಳ ಪಾತ್ರದಲ್ಲಿ ತಮ್ಮ ಹಿತಮಿತವಾದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಚಿತ್ರದ ಸಂಭಾಷಣೆಯುದ್ದಕ್ಕೂ ಬರುವ ಡಬಲ್ ಮೀನಿಂಗ್ ಡೈಲಾಗ್ ಚಿತ್ರಕ್ಕೇ ಎ ಸರ್ಟಿಫಿಕೇಟ್ ಕೊಟ್ಟು ಹೋಗಿದೆ. ಹಾಡುಗಳು ಚೆನ್ನಾಗಿ ಚಿತ್ರೀಕರಣಗೊಂಡಿವೆ.” ಹೋಗು ಬೆಳಕೇ” ಹಾಡು ಸದಭಿರುಚಿಯ ಪ್ರೇಕ್ಷಕರಿಗೆ ಇಷ್ಟವಾಗುತ್ತೆ. ಹರಿಪ್ರಿಯಾ ಕಷ್ಟಪಟ್ಟು ಬೆಲ್ಲಿಡ್ಯಾನ್ಸ್ ಮಾಡಿದ್ದಾರೆ. ಯಾಕೆಂದರೆ ಫಿನಿಶಿಂಗ್ ಅಷ್ಟೊಂದು ಶಾರ್ಫ್ ಆಗಿ ಬಂದಿಲ್ಲ. ಅನೂಪ್ ಅವರ ಸಂಗೀತ ಮಧುರತೆ ಮತ್ತು ಅದ್ದೂರೀತನವನ್ನು ಹಾಡಿನ ಸಂದರ್ಭಕ್ಕೆ ತಕ್ಕಂತೆ ಮೂಡಿಬಂದಿದೆ. ಇದಿಷ್ಟು ಸಿನಿಮಾದ ರಿವ್ಯುವ್ ಈಗ ಚಿತ್ರ ಚೆನ್ನಾಗಿಲ್ಲ ಎನ್ನುವವರ ಅಭಿಪ್ರಾಯ ಬಿಟ್ಟು ಚಿತ್ರದ ಕಥೆಯ ಸಣ್ಣದೊಂದು ಡಿಸೆಕ್ಷನ್ ಮಾಡುತ್ತಾ ಹೋಗಬೇಕು. ನೀವು ತುಂಬಾ ಮಡಿವಂತರಾಗಿದ್ದರೆ ಮುಂದಿನ ಪ್ಯಾರಾಗಳನ್ನು ಓದಬೇಡಿ. ನೀವು ಸಾಮಾನ್ಯ ಜನರಂತೆ ಸಾಚಾತನದ ಮುಖವಾಡ ಹಾಕಿಕೊಂಡಿದ್ದರೆ ಚಿತ್ರವನ್ನು ನೀವೊಬ್ಬರೇ ಹೋಗಿ ನೋಡಿ.
ಒಂದು ಕಥೆಯೊಂದಿಗೆ ಶುರು ಮಾಡುವಾ. ಅದೊಂದು ದೊಡ್ಡ ಸಾಮ್ರಾಜ್ಯ ಅಂಥ ಸಾಮ್ರಾಜ್ಯದ ಮಹಾರಾಜ ಮಹಾರಾಣಿಯ ವೈಭೋಗಕ್ಕೇನು ಕಡಿಮೆ. ಎಲ್ಲವೂ ಇದ್ದಾಗ ಆ ಅರಸಿಗೆ ಏನೆಂದರೇನು ಕಡಿಮೆ ಇರೋಲ್ಲ. ಪ್ರೀತಿಸುವ ಗಂಡ, ಮೃಷ್ಟಾನ್ನ ಭೋಜನ, ಕೈಗೊಂದು ಕಾಲಿಗೊಂದು ಆಳು,ಮಲಗಲು ಅಂತಃಪುರದ ಸುಪ್ಪತ್ತಿಗೆ. ಹೀಗೆ ಅಂತಃಪುರದಲ್ಲಿ ಮಲಗಿದ್ದಾಗ ಒಂದು ಸುಮಧುರ ಹಾಡು ಕೇಳುತ್ತೆ. ತನ್ನ ಸಖಿಯನ್ನು ಕಳಿಸಿ ಆ ಹಾಡು ಬಂದ ಕಡೆಗೆ ಹೋಗಿ ಅವನ್ಯಾರು ಎಂಬುದನ್ನು ತಿಳಿದು ಬರಲು ಹೇಳುತ್ತಾಳೆ. ಆ ಸಖಿ ತಿರುಗಿ ಬಂದವಳೇ ಅವನು ನಮ್ಮ ಸಾಮ್ರಾಜ್ಯದ ಆನೆಗಳನ್ನು ಕಾಯುವ ಮಾವುತ ಅಷ್ಟಾವಕ್ರ ಎಂದು ಅವನ ಹೆಸರು. ಅವನ ಹೆಸರಿಗೆ ತಕ್ಕ ಹಾಗೆ ಪರಮಕುರೂಪಿ ಅಷ್ಟ ವಕ್ರಗಳು. ಗೂನು ಬೆನ್ನು, ಕಪ್ಪು ಬಣ್ಣ, ಮೊಡವೆ ಕಲೆಗಳು ,ದಢೂತಿ ದೇಹ ಇತ್ಯಾದಿ. ರಾಜ ಸುಂದರನಲ್ಲದಿದ್ದರೂ ಇಷ್ಟೊಂದು ಕುರೂಪಿಯಂತೂ ಆಗಿರಲಿಲ್ಲ. ರಾಣಿ ಪ್ರತಿದಿನ ಕದ್ದುಮುಚ್ಚಿ ಅವನ ಭೇಟಿಯಾಗುತ್ತಾಳೆ. ದಿನವೂ ಅವರ ಸ್ನೇಹ ಹೆಚ್ಚುತ್ತಾ ಹೋಗಿ ಕೊನೆಗೆ ತನ್ನ ದೇಹವನ್ನು ಅರ್ಪಿಸಿಕೊಂಡು ಬಿಡುತ್ತಾಳೆ. ಇದನ್ನರಿತ ರಾಜ ಚಿಂತಾಕ್ರಾಂತನಾಗಿ ತಾಯಿಗೆ ಸಲಹೆಯನ್ನು ಕೇಳುತ್ತಾನೆ. ತಾಯಿ ‘ನಾವು ಜೈನ ಕುಟುಂಬಕ್ಕೆ ಸೇರಿದವರಾದ್ದರಿಂದ ಬಲಿಕೊಡುವುದು ನಿಷಿದ್ಧ ಆದರೆ ಇದಕ್ಕೆ ಪರಿಹಾರವಾಗಿ ಕೋಳಿಯನ್ನು ಬಲಿಕೊಡಬೇಕು. ಹಿಟ್ಟಿನ ಕೋಳಿಯನ್ನು ಬಲಿಕೊಡುವಾ ಬಲಿಕೊಟ್ಟಾಗೂ ಆಗುತ್ತೆ ಅದರ ಜೊತೆಗೆ ಅಹಿಂಸೆಯ ಪಾಲನೆಯೂ ಆಗುತ್ತೆ’ ಎನ್ನುತ್ತಾಳೆ. ಹಿಟ್ಟಿನ ಕೋಳಿ ಕೊಯ್ದ ತಕ್ಷಣ ಒಂದು ಚೀತ್ಕಾರ ಕೇಳಿ ಬರುತ್ತದೆ ಅದರಲ್ಲಿ ಯಾವುದೋ ಆತ್ಮ ಬಂದು ಸೇರಿಕೊಂಡಿರುತ್ತದೆ. ಇದಕ್ಕೆ ಪ್ರತಿಯಾಗಿ ತಾಯಿ ಮಗ ಮೋಕ್ಷ ಹೊಂದದೆ ಬೇರೆ ಜನ್ಮಗಳಲ್ಲಿ ಪ್ರಾಣಿಯಾಗಿ ಹುಟ್ಟುತ್ತಾರೆ. ಇದು ಜನ್ನನ ಯಶೋಧರ ಚರಿತೆಯ ಸಾರಾಂಶ.ರಾಜನ ಹೆಸರು ಯಶೋಧರ ರಾಣಿ ಅಮೃತಮತಿ.
ಎಲ್ಲಿಯ ನೀರ್ದೋಸೆ ಎಲ್ಲಿಯ ಯಶೋಧರ ಚರಿತೆ ಎಂದುಕೊಂಡಿರಾ. ಸ್ವಲ್ಪ ನಿಲ್ಲಿ ಯಶೋಧರ ಚರಿತೆಯ ಎರಡೇ ಅಂಶಗಳನ್ನು ಹಿಡಿದು ನಮ್ಮ ಬದುಕಿನ ವಿಭಿನ್ನ ಆಯಾಮಗಳಿಗೆ ಮತ್ತು ಚಿತ್ರದ ಕಥೆಗೆ ಸಮೀಕರಿಸುತ್ತಾ ಹೋಗೋಣ. ಮೊದಲನೆಯದ್ದು ಅಷ್ಟೈಶ್ವರ್ಯದ ರಾಣಿ ಬದುಕಿನ ಕೊರಗನ್ನು ನೀಗಿಸಿಕೊಳ್ಳಲು ಒಬ್ಬ ಕುರೂಪಾತಿಕುರೂಪಿ ಯಃಕಶ್ಚಿತ್ ಮಾವುತನ ಬೆನ್ನ ಹಿಂದೆ ಹೋದಳು. ಅದೇ ತರಹ ಹಿಂಸೆ ಮಾಡಬಾರದು ಎಂಬ ಉದ್ದೇಶವಿದ್ದರೂ ಹಿಟ್ಟಿನ ರೂಪದಲ್ಲಿ ನಾನು ಕೊಲ್ಲುತ್ತಿರುವುದು ಕೋಳಿ ಎಂಬ ಭಾವವಿದೆಯಲ್ಲ ಅದು ದೊಡ್ಡ ಹಿಂಸೆ. ಅಂದರೆ ಮನಸ್ಸನಿಂದ ಏನೆಂದುಕೊಳ್ಳುತ್ತೇವೋ ಅದು ಭೌತಿಕವಾಗಿ ಮಾಡುವ ಕಾರ್ಯಕ್ಕಿಂತ ಹೆಚ್ಚಿನ ಮಹತ್ವದ್ದಾಗಿರುತ್ತದೆ. ಗಂಡನ ಪಕ್ಕ ದಿನವೂ ಮಲಗುವ ಹೆಂಡತಿಗೆ ಮನಸ್ಸಿನಲ್ಲಿ ಬೇರೊಬ್ಬರನ್ನು ನೆನೆಸಿಕೊಳ್ಳುತ್ತಿದ್ದರೆ, ಕೊಟ್ಟ ಹಣಕ್ಕೆ ಸೀಮಿತವಾದ ಸಮಯದಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ಒಪ್ಪಿಸಿಕೊಳ್ಳುವ ವೇಶ್ಯೆ ಈ ಢಂಬಾಚಾರದ ಗರತಿಗಿಂತ ಶ್ರೇಷ್ಟ. ಅಂತ ಒಂದು ಪಾತ್ರವೇ ಹರಿಪ್ರಿಯಾಳದ್ದು. ಅವಳನ್ನು ಪಡೆಯಲು ಹೋಗಿ ಅವಳ ಬಾಲ್ಯದಲ್ಲಿನ ಕಥೆ ಕೇಳಿ ಅವಳ ದೇಹ ಮಾತ್ರ ಮೈಲಿಗೆಯಾಗಿದೆ ಮನಸ್ಸಲ್ಲ ಎಂಬುದನ್ನು ಅರಿತು ಅವಳ ಕೈಯಲ್ಲಿ ಗಂಗಾ ಪೂಜೆ ಮಾಡಿಸಿ ತೀರಿಹೋದ ತನ್ನ ಅಕ್ಕನ ಚಿನ್ನದ ಬಳೆಯನ್ನು ಕೊಟ್ಟುಬಿಡುವ ದತ್ತಣ್ಣನ ಪಾತ್ರ. ಅವಳ ಬಾಲ್ಯದ ಬಗ್ಗೆ ಹೇಳಲೇ ಬೇಕು ಇಬ್ಬರು ಹುಡುಗರ ನಡುವೆ ಆಟವಾಡುವ ಹುಡುಗಿಯ ಕಥೆ. ಅವಳೇ ಮುಂದೆ ವೇಶ್ಯೆಯಾಗೋದು.
ಪ್ರತೀ ಮನೆಯ ದೋಸೆಯೂ ತೂತೆ. ಯಾರೋ ಒಬ್ಬಳು ಗಂಡನ ಬಿಟ್ಟು ಪರಪುರುಷನ ಹಿಂದೆ ಓಡಿಹೋದಳು ಎಂದು ಮಾತಾಡುವ ಪ್ರತೀ ಸಭ್ಯ ಹೆಣ್ಣು ನಿಮ್ಮ ಆತ್ಮವಿಮರ್ಶೆ ಮಾಡಿಕೊಳ್ಳುವುದು ಸೂಕ್ತ. ಬಾರ್ ನರ್ತಕಿಯ ಬಗ್ಗೆ ಛೀ ಎನ್ನುವ ನೀವು ಮನೆಯಲ್ಲಿನ ನಿಮ್ಮ ಸದ್ಗೃಹಿಣಿಯ ಬಿಟ್ಟು ಕುಣಿಯುವ ಅವಳ ಸೊಂಟ ನೋಡಲು ಏಕೆ ಬಂದಿರಿ? ಅವಳ ಬದುಕಿನ ಯಾವುದೋ ಕಾರಣಕ್ಕಾಗಿ ಅವಳು ವೇಶ್ಯೆಯೋ ಬಾರ್ ನರ್ತಕಿಯೋ ಆಗಿರುತ್ತಾಳೆ ಅಷ್ಟೆ. ಇನ್ನು ಗಂಡಸರು ಅಷ್ಟೆ ಮನೆಯಲ್ಲಿನ ತನ್ನ ಹೆಂಡತಿ ಉಪ್ಪಿನಕಾಯಿ ಭರಣಿಗೆ ಬಟ್ಟೆ ಸುತ್ತಿದ ಹಾಗಿರಬೇಕು ಆದರೆ ಆಫಿಸಿನ ರಿಸೆಪ್ಸಿನಿಷ್ಟ ತೊಡೆ ಕಾಣುವ ಹಾಗೆ ತುಂಡುಡುಗೆಯಲ್ಲಿರಬೇಕು. ಹೆಂಡತಿಯ ಮೇಲೆ ದಿನವೂ ಸಂಶಯ. ಸಂಶಯವಿಲ್ಲದಿದ್ದರೂ ಓಡಿಹೋಗುವ ಹೆಣ್ಣುಮಕ್ಕಳಿರುವಾಗ ಸಂಶಯದ ಮನೆಯ ಗೃಹಿಣಿ ಬಹುಬೇಗ ಹೊಸ ಸಂಬಂಧಗಳತ್ತ ಕೈಚಾಚುತ್ತಾಳೆ. ಜಗ್ಗೇಶ್ ಪಾತ್ರಧಾರಿಯ ತಾಯಿಯೂ ಕೂಡಾ ಹೀಗೆ ಗಂಡನನ್ನು ತೊರೆದು ಹೋಗಿರುತ್ತಾಳೆ. ಆದರೆ ತಂದೆಯ ಹೊಸದೊಂದು ಸಂಬಂಧಕದಕ್ಕೆ ಜಗ್ಗೇಶ್ ಮಧ್ಯಮವರ್ತಿಯಾಗುತ್ತಾನೆ. ಅದ್ಯಾಗೆ ಗಂಡ ನೆಟ್ಟಗಿದ್ದರೂ ಮತ್ತೊಬ್ಬನ ಜೊತೆ ಹೋದಳು ಎನ್ನುತ್ತೀರಾ. ಮಹಾಭಾರತದ ದ್ರೌಪದಿಗೆ ಒಳ್ಳೆಯ ಮನಸ್ಸುಳ್ಳ, ಬಲವುಳ್ಳ, ಬಿಲ್ವಿದ್ದೆಯನ್ನು ಬಲ್ಲ, ಜಾಣ ಮತ್ತು ಸ್ಫುರದ್ರೂಪಿ ಗಂಡ ಬೇಕೆಂದು ಬೇಡಿಕೊಂಡಾಗ ಐದು ಗುಣ ಒಬ್ಬನಲ್ಲೇ ಇರದ ಕಾರಣ ಐದು ಜನರನ್ನು ಮದುವೆಯಾಗುತ್ತಾಳೆ.
ಐದು ಜನ ಗಂಡಂದಿರಿದ್ದರೂ ಕೆಲವು ಉಲ್ಲೇಖಗಳ ಪ್ರಕಾರ ಅವಳಿಗೆ ಇನ್ನೂ ಆಸೆಗಳಿದ್ದವು. ಯಾರ ಜೀವನವೂ ಸಂಪೂರ್ಣ ತೃಪ್ತಿಕರವಲ್ಲ ನಾವೆಲ್ಲ ನಮ್ಮ ಬದುಕನ್ನು ತೆಗಳುತ್ತಾ ಮತ್ತೊಬ್ಬರ ಬದುಕನ್ನು ಆಸೆಗಣ್ಣಿನಿಂದ ನೋಡುತ್ತಲೇ ಬದುಕುತ್ತೇವೆ. ಭೈರಪ್ಪನವರು ಬರೆದ ಪರ್ವದ ಪ್ರಕಾರ ದ್ರೌಪದಿ ವರ್ಷಕ್ಕೊಬ್ಬನ ಹಾಗೆ ವರಿಸುತ್ತಿದ್ದಳು. ತನಗೆ ನಾಲ್ಕು ವರ್ಷದ ಅಂತರದಲ್ಲಿನ ಕಾಮನೆಗಳನ್ನು ಸಹಿಸಲಾಗದ ಅರ್ಜುನ ಸುಭದ್ರೆ,ಉಲೂಚಿ,ಚಿತ್ರಾಂಗದೆಯನ್ನು ಮದುವೆಯಾಗುತ್ತಾನೆ. ಕಾಮನೆಗಳೆಂದರೆ ಹಾಗೆ ಬದುಕೆಂದರೆ ಹಾಗೆ. ಇಲ್ಲಿ ಜಗ್ಗೇಶ್ ತಂದೆ ಕೂಡಾ ತನ್ನ ಹೆಂಡತಿ ಓಡಿಹೋದ ನಂತರ ಮತ್ತೊಂದು ಹೆಣ್ಣಿನ ಸಹವಾಸಕ್ಕೆ ಮೊರೆಹೋಗುತ್ತಾನೆ.ತಂದೆಯ ಸಾವಿನ ದಿನ ಅವನ ಜೊತೆಗೆ ಸಂಬಂಧವಿರುವ ಆ ಪರಸ್ತ್ರೀಯನ್ನು ತಂದು ಭೇಟಿಮಾಡಿಸುತ್ತಾನೆ ಜಗ್ಗೇಶ್. ಅವನ ತಂದೆ ಅವಳ ಮಡಿಲಲ್ಲಿ ಸಂತೃಪ್ತಿಯಿಂದ ಪ್ರಾಣಬಿಡುತ್ತಾರೆ.
ಇದು ಸಂಸಾರಿಗಳ ವಿಷಯವಾಯ್ತು. ಇನ್ನು ಯಾವುದೋ ಆದರ್ಶಕ್ಕೆ ಜೋತು ಬಿದ್ದು ಮದುವೆಯಾಗದೆ ಆಜನ್ಮ ಬೃಹ್ಮಚಾರಿಯಾಗಿರುತ್ತೇನೆ ಎಂದವರು ಕಾಮನೆಗಳನ್ನು ಅದುಮಿಟ್ಟುಕೊಳ್ಳುವುದಾದರೂ ಹೇಗೆ. ಅಂಥವರು ಝೀನ್ಸ ಹಾಕಿ ಬಂದ ತಮ್ಮ ಸುತ್ತಲಿನ ಹೆಂಗಸರ ದೈಹಿಕ ಉಬ್ಬುತಗ್ಗುಗಳನ್ನೋ, ಲೋ ನೆಕ್ ಟೀಶರ್ಟ್ ಹಾಕಿರುವ ಸೆಕ್ರೆಟರಿಯ ಎದೆಯ ಸೀಳನ್ನೋ ನೋಡಿ ನಯನಮಸಾಲೆಯನ್ನು ಅನುಭವಿಸಿರುತ್ತಾರೆ. ಅಂಥವರಿಗೆ ಒಂದು ಅವಕಾಶ ಸಿಕ್ಕರೆ ಅವರ ಆದರ್ಶಗಳೆಲ್ಲ ಕತ್ತಲಲ್ಲಿ ಬೆತ್ತಲಾಗಿಬಿಡುತ್ತವೆ. ಬೃಹ್ಮಚಾರಿಗಳ ವಿಷಯ ಬಿಡಿ ಅವರದು ಉಪ್ಪು ಖಾರಾ ತಿಂದು ಬೆಳೆಯುವ ದೇಹ ಎಲ್ಲವನ್ನೂ ಬಿಟ್ಟು ಸನ್ಯಾಸಿಯಾದವನೇ ಕಾವಿ ಕಳಚಿಟ್ಟು ಚಟಕ್ಕಾಗಿ ನಿಂತ ಸಿ.ಡಿ.ಗಳು ಹೊರಬರುತ್ತಿರುವ ಕಾಲವಿದು. ಇಂತದ್ದೊಂದು ಸಿನಿಮಾವನ್ನು ಒಪ್ಪಿಕೊಳ್ಳಲು ನಿಮಗೆ ಮಡಿವಂತಿಕೆ ಏಕೆ ಅಡ್ಡಬರುತ್ತೆ. ಮಡಿಯಿಂದಿರಬೇಕಾದ ಮಠವೇ ಮೈಲಿಗೆಯಾಗಿದ್ದರ ಬಗ್ಗೆ ನಿಮ್ಮ ಸಮರ್ಥನೆ ಏನು? ಹೀಗೆ ಕಾಮನೆ ತೀರಿಸಿಕೊಳ್ಳಲು ದತ್ತಣ್ಣ ಪಾತ್ರ ಆಗಾಗ ತನ್ನ ವಯಸ್ಸಿನ ಅನಿವಾರ್ಯತೆಗೆ ಮಾತ್ರೆ ತೆಗೆದುಕೊಳ್ತಿರ್ತಾನೆ.
ಇನ್ನೂ ಒಂದು ನಮ್ಮ ಸಮಾಜದ ದಾರಿದ್ರ್ಯವಿದೆ . ಅದು ನಕ್ಷತ್ರ ಜಾತಕದ ಮೇಲೆ ವ್ಯಕ್ತಿಯನ್ನು ತೂಗುವುದು. ಮೂಲ ನಕ್ಷತ್ರದ ಮಧ್ಯಮವರ್ಗದ ಕುಟುಂಬಕ್ಕೆ ಸೇರಿದ ಹುಡುಗಿಯ ಪಾತ್ರದಲ್ಲಿ ಸುಮನ್ ರಂಗನಾಥ ಅವರನ್ನು ನೋಡಲು ಬರುವ ಶವದ ವಾಹನದ ಚಾಲಕ ಜಗ್ಗೇಶ್ ಅಪ್ಪಟ ಬೃಹ್ಮಚಾರಿಯೇನಲ್ಲ ಎಡಬಲ ಮೇಯ್ದು ಬೇಸರವಾಗಿ ಮನೆಯ ಆರೋಗ್ಯಕರ ಊಟ ಮಾಡಬೇಕೆಂದು ಕನ್ಯಾಬೇಟೆಗೆ ತಯಾರಾಗಿರುತ್ತಾನೆ. ಮೂಲಾ ನಕ್ಷತ್ರದ ಕಾರಣಕ್ಕೆ ಅವಳಿಗೆ ಅವನು ಶವವಾಹನದ ಚಾಲಕನ ಕೆಲಸವಾದ್ದರಿಂದ ಅವನಿಗೆ ಅವಳು ಅನಿವಾರ್ಯ ಆಯ್ಕೆಯಾಗುತ್ತಾರೆ. ಹೆಣ್ಣು ಒಬ್ಬಳೇ ಆದರೂ ಪತ್ನಿ, ಗೆಳತಿ, ಅಕ್ಕ, ತಂಗಿ, ಪ್ರೇಯಸಿ, ಮಗಳು, ತಾಯಿ, ವೇಶ್ಯೆ ಹೀಗೆ ವಿಭಿನ್ನ ಪಾತ್ರಗಳಿಗೆ ತಕ್ಕಂತೆ ಗಂಡು ಅವಳನ್ನು ನೋಡುವ ದೃಷ್ಟಿ ಕೂಡಾ ಬೇರೆಯಾಗುತ್ತೆ. ಅದೇ ಅಕ್ಕನ ಪಾತ್ರವೂ ಇದರಲ್ಲಿ ಹಾದು ಹೋಗುತ್ತೆ. ದತ್ತಣ್ಣ ಮತ್ತು ಅವನ ಅಕ್ಕನ ನಡುವಿನ ಮಧುರ ವಾತ್ಸಲ್ಯಭರಿತ ಸಂಬಂಧವನ್ನೂ ಚಿತ್ರ ತೋರಿಸುತ್ತದೆ. ಅಕ್ಕ ತೀರಿಹೋದಾಗ ದತ್ತಣ್ಣ ಅಳುವ ಕ್ಷಣ ಪರಕಾಯಪ್ರವೇಶ ಎಂದರೆ ಕ್ಲೀಷೆಯಾದೀತು.
ಬದುಕೆಂದರೆ ಇಷ್ಟೆ ಅದು ಪ್ರತಿ ಸಂದಿಗ್ಧ ಕ್ಷಣದಲ್ಲೂ ಹಲವು ಆಯ್ಕೆಗಳನ್ನು ನಮ್ಮ ಮುಂದೆ ಚೆಲ್ಲುತ್ತೆ. ನಮ್ಮ ಆ ಕ್ಷಣದ ಭಾವುಕತೆ,ಪರಿಸ್ಥಿತಿಗಳು ನಮ್ಮ ಆಯ್ಕೆಗೆ ಕಾರಣವಾಗುತ್ತೆ. ಬದುಕಿನ ಪ್ರತಿ ಬಿಂದುವಿನಲ್ಲೂ ಬರುವ ಕವಲುದಾರಿಗಳಲ್ಲಿ ಒಲ್ಲದ ಮನಸ್ಸಿನಿಂದ ಪರಿಸ್ಥಿತಿಯ ಕೈಗೊಂಬೆಯಾಗಿ ನಾವು ಒಂದು ಕವಲುದಾರಿಯನ್ನು ಆಯ್ಕೆ ಮಾಡಲೇಬೇಕಾಗುತ್ತದೆ. ಜಗತ್ತಿನ ಯಾವುದೇ ಸಂಬಂಧಗಳು ಅನೈತಿಕವಲ್ಲ ಅವು ಅವರವರ ಅನಿವಾರ್ಯ ಆಯ್ಕೆಗಳಷ್ಟೆ. ಚಿತ್ರದ ಪಾತ್ರಗಳಾದ ಹರಿಪ್ರಿಯಾ ವೇಶ್ಯೆಯಾಗಿದ್ದು, ದತ್ತಣ್ಣನ ಪಾತ್ರ ಮಾತ್ರೆ ತೆಗೆದುಕೊಳ್ಳೋದು, ಜಗ್ಗೇಶ್ ತಾಯಿ ವಿವಾಹೇತರ ಸಂಬಂಧಕ್ಕೆ ಕೈಚಾಚಿದ್ದು ತರುವಾಯ ಆಕೆಯ ಗಂಡ ಮತ್ತೊಂದು ಸಂಬಂಧಕ್ಕೆ ಮೊರೆಹೋಗಿದ್ದು, ಸುಮನ್ ರಂಗನಾಥ ಪಾತ್ರ ಜಗ್ಗೇಶ್ ಪಾತ್ರದ ಹಿಂದೆ ಬಿದ್ದಿದ್ದು ಎಲ್ಲವೂ ಅನಿವಾರ್ಯ ಆಯ್ಕೆಗಳಷ್ಟೆ. ಅದಕ್ಕೆ ನಮ್ಮ ದೇಶ ಸತಿ ಸಹಗಮನವನ್ನೂ ನೋಡಿದೆ. ಲಿವಿಂಗ್ ಟುಗೆದರ್ ರಿಲೆಷನ್ ಅನ್ನೂ ನೋಡಿದೆ.ಸಂಪ್ರದಾಯ ಸಮಾಜ ನಮಗೆ ಇಂಥ ಕಾಮನೆಗಳನ್ನು ಅದುಮಿಟ್ಟುಕೊಂಡು ಬದುಕಲು ನಾವೇ ಕಟ್ಟಿಕೊಂಡಿರುವ ವ್ಯವಸ್ಥೆ. ಹಾಗೆಂದು ನಾನು ನಿಮ್ಮನ್ನು ನೈತಿಕ ಚೌಕಟ್ಟಿನಿಂದ ಹೊರಬರಲು ಹೇಳುತ್ತಿಲ್ಲ ಬದಲಾಗಿ ಮತ್ತೊಬ್ಬರ ಬದುಕನ್ನು ಸಮಾಜದ ಪ್ರತಿನಿಧಿಯಾಗಿ ಹಿಯಾಳಿಸುವುದು ಬೇಡ. ಅದು ಅವರ ಅನಿವಾರ್ಯ ಆಯ್ಕೆ,ಸಂದಿಗ್ಧ ಪರಿಸ್ಥಿತಿಗೆ ತಕ್ಕ ಪ್ರತಿಕ್ರಿಯೆ. ಜಗತ್ತಿನಲ್ಲಿ ನನ್ನಿಂದ ಹಿಡಿದು ಯಾರೂ ಪರಿಪೂರ್ಣರಲ್ಲ ಅಪೂರ್ಣತೆಯಿಂದ ಪರಿಪೂರ್ಣತೆಯ ಕಡೆ ಸಾಗುವುದೇ ಬದುಕು. ಆದಷ್ಟು ಸಮಾಜಕ್ಕೆ ಹೆದರದೆ ಮನಃಸಾಕ್ಷಿಗೆ ನಿಷ್ಠರಾಗಿರೋಣ. ಬೇರೆಯವರ ಮಗಳು ಯಾರದೋ ಹುಡುಗನ ಹಿಂದೆ ಓಡಿಹೋಗಿದ್ದನ್ನು ಮಾತಾಡುವಾಗ ನಿಮ್ಮ ಮನೆಯ ಮಗಳು ಯಾವನದೋ ಜೊತೆ ರೂಮ್ ಬಾಗಿಲು ಜಡಿದುಕೊಂಡು ಮೆಸೇಜ್ ಮಾಡ್ತಿರ್ತಾಳೆ ಹುಷಾರ್….ಆತ್ಮವಿಮರ್ಶೆಗೆ ಹಚ್ಚುವ ಖುಷಿ ದುಃಖ ಎರಡಕ್ಕೂ ಕಣ್ಣೀರು ತರಿಸುವ ಇಂಥ ಒಂದು ಚಿತ್ರವನ್ನು ಕೊಟ್ಟ ವಿಜಯಪ್ರಸಾದ್,ಅನೂಪ್,ಅರಸು ಅಂತಾರೆ, ಜಗ್ಗೇಶ್, ದತ್ತಣ್ಣ, ಹರಿಪ್ರಿಯಾ, ಸುಮನ್ ರಂಗನಾಥ ಮತ್ತು ಸಂಪೂರ್ಣ ಚಿತ್ರತಂಡಕ್ಕೆ ಕನ್ನಡಿಗರು ಋಣಿಯಾಗಿದ್ದಾರೆ.
ಚಿತ್ರವನ್ನು ನೋಡಿ ಅಷ್ಟೆ ಕುಟುಂಬದೊಂದಿಗೆ ಹೋದರೆ ಮುಜುಗರವಾದೀತು. ಮಾಂಸದೂಟವೆಂದರೆ ವಾಕರಿಕೆ ಬರುವ ಸೋ ಕಾಲ್ಡ್ ಸಭ್ಯ ಸಸ್ಯಾಹಾರಿ ನೀರ್ದೋಸೆಯನ್ನು ಆಮ್ಲೇಟ್ ತರಹ ಕಾಣುತ್ತಾನೆ.ಉಳಿದಂತೆ ಬದುಕಿನ ರುಚಿಯನ್ನು ಕಣ್ಣುಮುಚ್ಚಿ ಅನುಭವಿಸೋಣಿಗೆ ಇಷ್ಟವಾಗುತ್ತೆ. ಈ ಲೇಖನ ಓದಲು ಮುಜುಗರವಾದ ಹೆಣ್ಣುಮಕ್ಕಳಿಗೆ ಹಿರಿಯರಿಗೆ ಕ್ಷಮೆಯಾಚಿಸುತ್ತಾ ಲೇಖನ ಮುಗಿಸುತ್ತೇನೆ…

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..