2048

ಪಾಸು ಮಾಡಿಸಿದವನಿಗೊಂದು ಪತ್ರ

ಹಾಯ್ ಆಪತ್ಭಾಂದವನೇ…
ಕ್ಷೇಮವೇ?ನೀನು ಚೆನ್ನಾಗಿಯೇ ಇರುತ್ತೀಯ ಬಿಡು.ನಿಮ್ಮಂತವರು ಚೆನ್ನಾಗಿರದೇ ಇನ್ಯಾರು ಚೆನ್ನಾಗಿರಲು ಸಾಧ್ಯ?”ಯಾರಿವನು?,ನನಗ್ಯಾಕೆ ಪತ್ರ ಬರೆದಿದ್ದಾನೆ?,ನನ್ನನ್ಯಾಕೆ ಆಪತ್ಭಾಂದವನೇ ಎಂದು ಕರೆಯುತ್ತಿದ್ದಾನೆ?”ಎನ್ನುವ ಪ್ರಶ್ನೆಗಳೆಲ್ಲಾ ನಿನ್ನ ತಲೆಯ ತುಂಬ ಹೇನಿನಂತೆ ಓಡಾಡುತ್ತಿರಬಹುದಲ್ಲವೇ?ಇರು,ನಿಧಾನವಾಗಿ ಹೇನು ತೆಗೆಯುವ ಕಾರ್ಯವನ್ನು ಮಾಡುತ್ತಾ ಸಾಗುತ್ತೇನೆ.ಸುಮ್ಮನೆ ತಲೆ ಕೆರೆದುಕೊಳ್ಳಬೇಡ.ನಿಜವಾಗಿಯೂ ಹೇಳಬೇಕೆಂದರೆ,ನನಗೆ”ನೀನು ಎಸ್ ಎಸ್ ಎಲ್ ಸಿ ಯವರೆಗೂ ಹೇಗ್ ಬಂದ್ಯಪ್ಪಾ?”ಎಂದು ಸಾಕಷ್ಟು ಜನರು ಕೇಳಿದ್ದಾರೆ.ಪಾಸ್ ಮಾಡಿದ ಶಿಕ್ಷಕ ಮಹಾಶಯರಿಗೂ ಇದೇ ಅನುಮಾನ.ಬಹಳಷ್ಟು ಬಾರಿ ನನ್ನ ಪ್ರಶ್ನೆ ಪತ್ರಿಕೆಯನ್ನು ಒಬ್ಬರಿಗೊಬ್ಬರು ತೋರಿಸಿಕೊಂಡು ಗಹಗಹಿಸಿ ನಕ್ಕಿದಾರಂತೆ.”ಪ್ರಶ್ನೆ ಪತ್ರಿಕೆ?”ಧಂಗಾಗಬೇಡ.ಪರಿಕ್ಷಾ ಕೊಠಡಿಯಲ್ಲಿ ಉತ್ತರ ಗೊತ್ತಿಲ್ಲದೆ ಅಕ್ಕಪಕ್ಕದವರ್ಯಾರು ನಮ್ಮ ಕಷ್ಟಗಳಿಗೆ ಸ್ಪಂದಿಸದೇ ಇರುವಾಗ,ಪ್ರತಿಯೊಬ್ಬನೂ ಮಾಡುವ ಕೆಲಸವನ್ನೇ ನಾನೂ ಮಾಡುತ್ತಿದ್ದೆ.ಕೈಯಲ್ಲಿ ಪರೀಕ್ಷೆಗೆಂದೇ ತಂದಿದ್ದ ಹೊಸ ಪೆನ್ನು,ಪೆನ್ಸಿಲ್ಲು,ಖಾಲಿ ಹಾಳೆ,ನನ್ನ ಎಡಗೈಯಲ್ಲಿ ಪ್ರಶ್ನೆಪತ್ರಿಕೆ ಎಲ್ಲವೂ ಇರುತ್ತಿತ್ತು.ಆದರೆ ನನ್ನ ತಲೆಯಲ್ಲಿ ಮಾತ್ರ ಏನೂ ಅಂದರೆ ಏನೇನೂ ಇರುತ್ತಿರಲಿಲ್ಲ.ಇನ್ನೇನು ಮಾಡುವುದು?”ನನಗೆ ಖಾಲಿ ಹಾಳೆ ಕೊಟ್ಟವರಿಗೆ,ನಾನೂ ಖಾಲಿ ಹಾಳೆಯನ್ನೇ ವಾಪಾಸ್ಸು ಕೊಡುವುದೇ?” “ಛೇ ಛೇ…ಅದು ಧರ್ಮವಲ್ಲ”ಅಂದುಕೊಂಡು ಆ ಕ್ಸೆರಾಕ್ಸ್ ಯಂತ್ರ ಕೆಲವೇ ಸೆಕೆಂಡುಗಳಲ್ಲಿ ಮಾಡುವ ಕೆಲಸವನ್ನು ನಾನು ಕೆಲವೇ ನಿಮಿಷಗಳಲ್ಲಿ ಮಾಡಿ ಮುಗಿಸಿ ಬರುತ್ತಿದ್ದೆ.ಒಂದು ಬಾರಿಯಲ್ಲ ಎರಡು ಬಾರಿ ಪ್ರಶ್ನೆ ಪತ್ರಿಕೆಯನ್ನೇ ಉತ್ತರ ಪತ್ರಿಕೆಯಲ್ಲಿ ಬರೆದು ಎದೆ ನೀಡಿಸಿಕೊಂಡು ಕೊಠಡಿಯಿಂದ ಒಂದು ಕೆಟ್ಟ ಮುಗುಳ್ನಗು ಬೀರುತ್ತಾ ಕೊಠಡಿಯಿಯ ಹೊರಗೆ ಬಲಗಾಲಿಡುತ್ತಿದ್ದೆ.ಹೀಗೆ ಮಾಡುತ್ತಾ ಬಂದಿದ್ದರೂ ಪ್ರತಿ ಬಾರಿಯೂ ಪಾಸ್ ಆಗುತ್ತಿದ್ದೆ.ನನಗಂತೂ ಆಶ್ಚರ್ಯವಾಗುತ್ತಿದ್ದದ್ದು ಅಷ್ಟಿಷ್ಟಲ್ಲ.ಆದ್ರೂ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ.ಮರ್ಯಾದೆಯ ಪ್ರಶ್ನೆ ನೋಡು.ನಂತರ ಬಲ್ಲಮೂಲಗಳಿಂದ SSLCಯ ವರೆಗೂ ಯಾರನ್ನೂ ಫೇಲ್ ಮಾಡುವ ಹಾಗಿಲ್ಲವೆಂಬ ಹೊಸ ನಿಯಮ ಜಾರಿಗೆ ಬಂದಿರುವ ಸುದ್ಧಿ ತಿಳಿದು,ಅಂದೇ ನಮ್ಮ ಘನ ಸರ್ಕಾರಕ್ಕೆ ಮೊದಲ ಹಾಗು ಕೊನೆಯ ಬಾರಿಗೆ ನಮಸ್ಕರಿಸಿದ್ದೆ.ಹಾಗೋ ಹೀಗೋ SSLCಯವರೆಗೂ ಸಾಗಿತ್ತು ಚಕ್ರವಿಲ್ಲದ ನನ್ನ ಬಂಡಿ.ನಾನು SSLC ಗೆ ಬಂದದ್ದು ಇಡೀ ಊರಿನಲ್ಲಿ ಹುಡುಗಿಯೊಬ್ಬಳು ಮದುವೆಗೆ ಮುಂಚೆಯೇ ವಾಂತಿ ಮಾಡಿಕೊಂಡ ಸುದ್ಧಿಯಂತೆ ಹಬ್ಬಿತ್ತು.ಸಿಕ್ಕವರು,ಸಿಗದಿದ್ದವರು,ಎಲ್ಲರೂ ಕೇಳುವವರೇ.”ಈ ವರ್ಷ SLC ಅಂತೆ ಹೌದಾ?”ಅದಕ್ಕೆ ಪ್ರತಿಯಾಗಿ ನಾನು,”ಅದು SLC ಅಲ್ಲ,SSLC “ಎಂದು ಅವರನ್ನು ಸರಿಪಡಿಸಿ ,ಮುಖ ತಿರುವಿಕೊಂಡು ಹೋಗುತ್ತಿದ್ದೆ.”ಯಾವುದೋ ಒಂದು ಮೊದಲು ಪಾಸ್ ಮಾಡು”ಎಂದು ಹಿಂದಿನ ಭಾಗಕ್ಕೆ ಸೂಜಿ ಚುಚ್ಚಿ ಹೋಗುತ್ತಿದ್ದರು.ಊರಿನವರೆಲ್ಲಾ ನನ್ನನ್ನು ಅವಮಾನಿಸುತ್ತಿದ್ದರೆ,ಮನೆಯವರು ನನ್ನನ್ನು ಅನುಮಾನಿಸುತ್ತಿದ್ದರು.ಆಗಲೇ ನನಗೆ ನನ್ನನ್ನು ಶಾಲೆಯ ದಾರಿಯ ತಪ್ಪಿಸಿ ಕೆಲಸಕ್ಕೆ ದೂಡುವ ಯೋಜನೆಗಳ ಬಗ್ಗೆ ನನಗೆ ಅಧಿಕೃತವಾಗಿ ಮಾಹಿತಿ ದೊರೆತ್ತದ್ದು.ಇನ್ನು ಓಂದು ದಿನ ನಡೆದ ಘಟನೆಯೊಂದು ನನ್ನನ್ನು “ಹೇಗಾದರೂ ಮಾಡಿ ಪಾಸ್ ಆಗಲೇಬೇಕು “ಎನ್ನುವ ಧೃಡ ಸಂಕಲ್ಪ ಚಿಗುರೊಡೆದು ದೊಡ್ಡ ಮರವಾಗುವಂತೆ ಮಾಡಿತ್ತು.ಸಕ್ಕರೆ ಕೇಳಲು ಬಂದ ಪಕ್ಕದ ಮನೆಯ ಮೀನಾಕ್ಷಮ್ಮ,ಸಕ್ಕರೆ ತೆಗೆದುಕೊಂಡು,ನಾಲ್ಕೈದು ಧಾರಾವಾಹಿಯ ಬಗ್ಗೆ ಮಾತನಾಡಿ ಸುಮ್ಮನೆ ಮನೆಗೆ ಹೋಗುವುದನ್ನು ಬಿಟ್ಟು “ನಿಮ್ಮ ಮಗ SSLC ಅಲ್ವಾ? ಅವ್ನ್ ಬುಕ್ಸ್ ನೆಲ್ಲಾ ಮುಂದಿನ ವರುಷ ನನ್ ಮಗ್ಳಿಗ್ ಕೊಡಿ ಆಯ್ತಾ?”ಎಂದು ನುಲಿಯುತ್ತಾ ಹೇಳಿದಳು.ಇಷ್ಟಕ್ಕೆ ಮುಗಿದಿದ್ದರೆ ಅವಳು ನನ್ನ ಕೋಪಕ್ಕೆ ತುತ್ತಾಗುತ್ತಿರಲಿಲ್ಲ.ಮನೆಗೆ ಹೊರಟವಳು ಹಿಂದೆ ತಿರುಗಿ “ಬೇಡ ಬಿಡಿ,ನಿಮ್ಮ ಮಗನಿಗೇ ಬೇಕಾಗಬಹುದು.”ಎಂದು ಹೇಳುವುದು,ಕಿವಿಯೊಳಗೆ ಕಡ್ಡಿ ಹಾಕಿದಂತೆ ನನ್ನ ಕಿವಿಯ ಹೊಕ್ಕಿತು.ಬಾತ್ ರೂಮ್ ಒಳಗಿದ್ದ ನನಗೆ ಅದರ ಒಳಾರ್ಥವನ್ನು ಅರಿಯಲು ಜಾಸ್ತಿ ಸಮಯ ಬೇಕಾಗಲಿಲ್ಲ.ಅಂದೇ ಅರ್ಧಗೈದಿದ್ದ ಲೈಫ್ ಬಾಯ್ ಸೋಫ್ ಮೇಲೆ ಕೈಯಿಟ್ಟೂ ಶಪಥಗೈದೆ.ನಾನು ಪಾಸ್ ಆಗಲೇಬೇಕು.ಪಾಸ್ ಆಗಿ,ಸಕ್ಕರೆ ಖಾಯಿಲೆ ಇರುವ ಮೀನಾಕ್ಷಮ್ಮನ ಗಂಡನಿಗೆ ಸ್ವೀಟ್ಸ್ ಕೊಡಲೇಬೇಕೆಂದು.ಪ್ರಮಾಣವೇನೋ ಮಾಡಿದ್ದೆ.ಆದರೆ ಪಾಸು ಮಾಡೋದು ಅಷ್ಟು ಸುಲಭವಲ್ಲವೆ?ಹೇಗಾದರೂ ಕಷ್ಟಪಟ್ಟು ಓದಿದರೆ ಎಲ್ಲಾ ವಿಷಯಗಳಲ್ಲೂ ಪಾಸ್ ಅಗಬಹುದು.ಆದರೆ ಗಣಿತ ಎನ್ನುವುದು ಮಾತ್ರ ನನಗೆ ಕಬ್ಬಿಣದ ಬಿಸ್ಕೇಟ್ ನಂತೆ ಎನ್ನುವ ವಿಷಯವನ್ನು ನೆನೆದು ಒಂದು ಕ್ಷಣ ಕಂಗಾಲಾಗಿ ಹೋದೆ.ನನಗೆ ಗಣಿತದಲ್ಲಿ ಬಂದಿರುವ ಅಂಕಗಳನ್ನು ಕಂಡಿದ್ದರೆ,ಆರ್ಯಭಟನೂ “ಯಾಕಾದರೂ ಸೊನ್ನೆಯನ್ನು ಕಂಡು ಹಿಡಿದೆನಪ್ಪಾ?”ಎಂದು ಮರುಗುತ್ತಿದ್ದನೋ ಏನೊ?ನಾನ್ಯಾರು ಎನ್ನುವ ತಳಮಳವೇ?ಇರು ಇನ್ನೆನು ಅಲ್ಲಿಗೇ ಬರುತ್ತಿದ್ದೇನೆ.ಗೆಳೆಯ ಗಣಿತ ಪರೀಕ್ಷೆಯ ಹಿಂದಿನ ರಾತ್ರಿಯ ತಳಮಳವನ್ನು ನಿನ್ನಲ್ಲಿ ಹೇಳಲೇಬೇಕು ನಾನು.

ಮಾರನೇಯ ದಿನ ಗಣಿತ ಪರೀಕ್ಷೆ ಎಂದು ಹೆದರಿ,ಹಿಂದಿನ ದಿನ ರಾತ್ರಿಯ ಊಟವನ್ನೇ ಮರೆತ್ತಿದ್ದೆ.ಒಂದೆರಡು ಗಂಟೆಗಳ ಕಾಲ ಓದುವ ಪ್ರಯತ್ನ ಸಾಗಿತಾದರೂ,ತಲೆಯವರೆಗೆ ಬಂದದ್ದು ಮೆದುಳಿಗೆ ಹೋಗುತ್ತಿರಲಿಲ್ಲ.ಅಂತಹ ಪರಿಸ್ಥಿತಿ.ದುಸ್ಥಿತಿ.ಎಲ್ಲಿ ನೋಡಿದರೂ ಬೀಜಗಣಿತದ XYZ ,ABC ಎನ್ನುವ ಬೀಜಗಳು ತಲೆಯ ತುಂಬಾ ಓಡಾಡಿದಂತೆ,ರೇಖಾಗಣಿತದ ಅಡ್ಡಂಭಡ್ಡ ರೇಖೆಗಳು,ವೃತ್ತ,ಆಯತ,ಚೌಕ,ತ್ರಿಭುಜ,ಪೈಥಾಗೋರಸ್ ಪ್ರಮೆಯ,ಆಪ್ರಮೇಯ,ಈ ಪ್ರಮೇಯ ಎಲ್ಲವೂ ಘೋರವಾಗಿ ನನ್ನನ್ನೇ ನೋಡುತ್ತಿದ್ದವೇ ಹೊರತು ನಾನಂತು ಅವುಗಳನ್ನು ನೋಡುತ್ತಿರಲಿಲ್ಲ.ನಾನು ಹೇಗೆ ನೋಡಲಿ?ನಾನಾಗಲೇ ನಿದ್ರೆಯೆಂಬ ಮೊಬೈಲ್ ಒಳಗಡೆ ಹಾಕಿದ್ದ ಸಿಮ್ ಆಗಿ ಹೊಗಿದ್ದೆ.ನೆಟ್ ವರ್ಕೇ ಇಲ್ಲದ ವ್ಯಾಲಿಡಿಟಿ ಮುಗಿದಿರುವ ಸಿಮ್ಮು.ಅದೇನಾಯಿತೊ ಏನೊ ನಡುರಾತ್ರಿ ಎಚ್ಚರವಾಗಿ ಬಿಡುವುದೇ?”ಅಯ್ಯೋ ನಾನು ಫೇಲಾಗುವುದು ಗ್ಯಾರಂಟಿ”ಎಂದು ಮನದಲ್ಲೇ ಮಾತನಾಡುತ್ತಿರುವಾಗ ಲೊಚಗುಟ್ಟುತ್ತಿರುವ ಹಲ್ಲಿಯೊಂದನ್ನು ಹೊಡೆದು ಓಡಿಸಿದೆ.ಮತ್ತೆ ಪುಸ್ತಕ ತೆರೆದು ಕುಳಿತೆ.ರೇಖಾಗಣಿತದ ಪ್ಯಾರಲಲ್ ಲೈನುಗಳು,ಪ್ಯಾರಲಿಸಿಸ್ ಹೊಡೆದಂತೆ ಭಾಸವಾಗುತ್ತಿದ್ದವು.ಆಯತ ಆಯವಿಲ್ಲದ ಬಿಲ್ಡಿಂಗ್ ನಂತೆ ಅಲ್ಲಾಡುತ್ತಿತ್ತು.ಬಾತ್ ರೂಮಿಗೆ ಹೋಗಿ ಮುಖಕ್ಕೆ ಮೂರು ಮುಕ್ಕಾಲು ಲೀಟರ್ ನೀರು ಚಿಮುಕಿಸಿಕೊಂಡು ಬಂದು,ಓದಲು ಕುಳಿತೆ.ಯಾಕೋ ಬ್ಲಾಡರ್ ತುಂಬಿದ ಹಾಗಾಯಿತು.ಖಾಲಿ ಮಾಡಿ ಬಂದೆ.ಈ ಬಾರಿ ಯಾಕೋ ಬಾಯಿಯೆಲ್ಲಾ ಒಣಗಿದ ಹಾಗಾಯಿತು.ಹೋಗಿ ನೀರು ಕುಡಿದು ಬಂದೆ.ಕುಳಿತೆ,ಎದ್ದೆ,ಗೋಡೆಗೆ ಒರಗಿಕೊಂಡೆ,ಒಂದೆರಡು ಬಾರಿ ವಾಚು ನೋಡಿದೆ.ಸಣ್ಣ ಮುಳ್ಳು ದೊಡ್ಡ ಮುಳ್ಳು ತಮ್ಮ ತಮ್ಮ ಕೆಲಸವನ್ನು ಮುಂದುವರಿಸಿದವು.ಇತ್ತ ಓದಲೂ ಆಗಲಿಲ್ಲ,ಅತ್ತ ನಿದ್ರೆಯೂ ಬರಲಿಲ್ಲ.ಹೋಗಿ ಮಂಚದ ಮೇಲೆ ದೇಹ ಹಾಸಿಕೊಂಡೆ.ಬೆಳಗ್ಗೆ ಮೆಲ್ಲಗೆ ನೆಲದ ಮೇಲಿಂದ ಎದ್ದು ಬಂದೆ.ಯಾವ ಪರೀಕ್ಷೆಗೂ ತಂದೆ-ತಾಯಿಯ ಕಾಲಿಗೆರಗದವನು ಆವತ್ತು ಆಗಿದ್ದಾಗಲಿ ಎಂದು ಇಬ್ಬರನ್ನು ಜೊತೆಗೆ ನಿಲ್ಲಿಸಿ ಕಾಲಿಗೆರಗಿ ಹೊರಟೆ.ತಾಯಿ ಕರೆದು ಕುಡಿಯಲು ಹಾಲು ಕೊಟ್ಟು,ಹಾಲ್ ಟಿಕೇಟ್ ನೆನಪಿಸಿದರು,ಅದಾಗಲೇ ನಾಲ್ಕು ಬಾರಿ ಹಾಲ್ ಟಿಕೇಟ್ ಇದೆಯೋ ಇಲ್ಲವೊ ಎಂದು ಖಚಿತಪಡಿಸಿಕೊಂಡಿದ್ದರೂ ಮತ್ತೊಮ್ಮೆ ಅಮ್ಮನ ಸಮಾಧಾನಕ್ಕೆಂದು ನೋಡಿಕೊಂಡೆ.ಒಟ್ಟಾರೆ ಬಿಳಿ ಹಾಳೆಯಲ್ಲಿದ್ದ ನನ್ನ ನಗು ಮೊಗವನ್ನು ಐದು ಬಾರಿ ನೋಡಿಕೊಂಡು .ಮನೆಯಿಂದ ಹೊರಟೆ,ಯುದ್ಧಭೂಮಿಯ ಕಡೆಗೆ.”ಈಗಲೂ ಇವನ್ಯಾರಪ್ಪಾ?”ಎನ್ನುವ ಹೇನು ಓಡಾಡುತ್ತಿರಬೇಕಲ್ಲಾ?ಇನ್ನೇನು ಹತ್ತಿರವೇ ಬಂದೆ ,ಇರು.ಪರೀಕ್ಷಾ ಕೊಠಡಿ ಹುಡುಕುವುದರಲ್ಲೇ ಬಸವಳಿದು ಹೋಗಿದ್ದ ನಾನು.ಅಂತು ಇಂತು ಬಂದು ನನ್ನ ಸೀಟಿನಲ್ಲಿ ಕುಳಿತು ಒಮ್ಮೆ ಹಿಂದೆಲ್ಲಾ ಕಣ್ಣು ಹಾಯಿಸಿದೆ.ಒಂದಿಬ್ಬರು ನನ್ನ ತಂದೆಯ ವಯಸ್ಸಿನವರನ್ನು ಕಂಡು ಒಳಗೊಳಗೇ ನಕ್ಕೆ.ಎಲ್ಲರ ಮುಖದಲ್ಲೂ ಆತಂಕ ಒಮ್ಮೆ ನನ್ನ ಕಣ್ಣು ಬಲ ಬದಿಗೆ ಸರಿದಾಗ ಅಲ್ಲಿ ಕುಳಿತಿದ್ದ ಹುಡುಗಿ ನೋಡಿದೆ.ಬಾಬ್ ಕಟ್ ಹೇರ್,ಕಿವಿಗೆ ತಿಳಿ ಗುಲಾಬಿ ಬಣ್ಣದ ಓಲೆ.ಒಂದೆರಡು ಮುಂಗುರುಳು ಆಗಾಗ ಕೆಳಗೆ ಬಿದ್ದಾಗಲೆಲ್ಲಾ ಅವುಗಳನ್ನು ಬಲವಂತದಿಂದ ಕಿವಿಯ ಹಿಂದೆ ಸಿಕ್ಕಿಸಿಕೊಳ್ಳುತ್ತಿದ್ದಳು.ಮತ್ತೆ ಬೇಕು ಅಂತ ಅವುಗಳನ್ನು ಮುಖದ ಮೇಲೆ ಬೀಳಿಸಿಕೊಳ್ಳುತ್ತಿದ್ದಳು.ಅವಳನ್ನು ಕಂಡು ಒಂದು ಕ್ಷಣ ಮೈಮರೆತರೂ ತಕ್ಷಣ ಎಚ್ಚೆತ್ತುಕೊಂಡೆ.ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದೆ.ಆತಂಕದ ಛಾಯೆ ಎಲ್ಲಾ ಮೋರೆಗಳಲ್ಲಿ.ಕೆಲವೊಂದರಲ್ಲಿ ಮಾತ್ರ ಆತ್ಮವಿಶ್ವಾಸದ ಕಣಗಳು ಕಾಣಸಿಕ್ಕವು.ಅವರೆಲ್ಲಾ ತುಂಬಾ ಓದಿದ್ದರು ಅಂತ ಕಾಣಿಸುತ್ತದೆ.ನನ್ನಲ್ಲೂ ಅತ್ಮವಿಶ್ವಾಸಕ್ಕೇನೂ ಬರವಿರಲಿಲ್ಲ.ತುಂಬಿದ ಕೊಡ,ಖಾಲಿ ಕೊಡ ಎರಡೂ ತುಳುಕುವುದಿಲ್ಲ.ಇದರಲ್ಲಿ ನಾನ್ಯಾವ ಕೊಡ ಎಂದು ನಿನಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲವೆಂದು ಭಾವಿಸುತ್ತೆನೆ.ಒಂದೆರಡು ದಿನಕ್ಕೆ ಬಾಡಿಗೆ ಕೊಡುವ ಶಾಮಿಯಾನದಂತೆ ಮೂರು ಗಂಟೆಗಳ ಕಾಲ ಖಾಲಿ ಹಾಳೆಯನ್ನು ಬಾಡಿಗೆ ಕೊಟ್ಟು ಹೋದರು ಪರೀಕ್ಷಕರು.ನಂತರ ಪ್ರಶ್ನೆ ಪತ್ರಿಕೆ ಬಂತು ಹಿಂಬಾಲಿಸಿ.ಎಡಗೈಯಲ್ಲಿ ಹಿಡಿದು ಎರಡೂ ಕಣ್ಣಿನಲ್ಲಿ ದಿಟ್ಟಿಸಿ ನೋಡಿದೆ.ಏನೂ ಅಂದರೆ ಏನೂ ಅರ್ಥವಾಗಲಿಲ್ಲ,ಗೆಳೆಯ.ಯಾವುದಕ್ಕೂ ಅದು SSLC ಯದ್ದೇ ಪ್ರಶ್ನೆ ಪತ್ರಿಕೆ ಹೌದೋ ಅಲ್ಲವೊ ಎಂದು ಖಚಿತಪಡಿಸಿಕೊಂಡೆ.ಪತ್ರಿಕೆ ನೋಡಿ ಮುಗುಳ್ನಗು ಬೀರುತ್ತಿರುವ ನನ್ನ ಪಕ್ಕದ ಬಾಬ್ ಕಟ್ ಸುಂದರಿಯನ್ನು ನೋಡಿ ಎಲ್ಲಿಲ್ಲದ ಕೋಪ ಬಂತು.ಕೋಪದಿಂದ ಮತ್ತೆ ಅವಳ ಕಡೆ ನೋಡಲೇ ಇಲ್ಲ.ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳು ಹೊಸತು.ನನ್ನ ಅಕ್ಕಪಕ್ಕದಲ್ಲಿರುವ ಮುಖಗಳೂ ಹೊಸತು.ಅಸಹಾಯಕತೆ ತಾಂಡವವಾಡಿತು.ಗೊತ್ತಿದ್ದನ್ನೂ,ಗೊತ್ತಿಲ್ಲದನ್ನು ತಿರುಗ ಮುರುಗ ಮಾಡಿ ಬರೆದೆ.ಎಷ್ಟು ಅಂಕ ಬರಬಹುದು ಎಂದು ಒಂದು ಬಾರಿ ಎಣಿಸಿದೆ.ಎರಡು ಬಾರಿ,ಮೂರು ಬಾರಿ,ನಾಲ್ಕು,ಐದು.ಎಷ್ಟು ಬಾರಿ ಎಣಿಸಿದರೂ ಬಂದದ್ದು ಇಪ್ಪತೈದರ ಕೆಳಗೆ.”ಎದ್ದು ಹೊರಹೋಗೋಣ,ಮುಂದಿನ ಬಾರಿ ಏನಾದರೂ ಮಾಡಿದರಾಯಿತು.”ಅಂದುಕೊಳ್ಳುವಾಗ ತಕ್ಷಣ ಮೀನಾಕ್ಷಮ್ಮ ನೆನಪಾದರು.”ಇಲ್ಲ ಹೆಗಾದರೂ ಮಾಡಿ ಪಾಸ್ ಆಗಲೇಬೇಕು “ಅಂದುಕೊಂಡು,ಹಿಂದೆ ಮುಂದೆ ಕಣ್ಣು ಹಾಯಿಸುವಾಗ ನನಗೆ ಕಂಡದ್ದು ಅಧ್ಬುತ.ದ್ರಾಕ್ಷಿಯ ಗಾತ್ರದ ನಿನ್ನ ಅಕ್ಷರಗಳು.ಈಗ ತಿಳಿಯಿತಲ್ಲವೆ ನಾನ್ಯಾರು ಎಂದು?ಯೆಸ್ ಯೆಸ್ ನಾನೇ…ಆ ದಿನ ನನ್ನ ಹರಿದ ಚಪ್ಪಲಿಯಿಂದ ನಿನ್ನ ಖಾಲಿಗೆ ಒದ್ದು ಒದ್ದು”ಏಯ್ ತೋರ್ಸೊ ಪ್ಲೀಸ್….ಪ್ಲೀಸ್..ಕಣೋ.”ಎಂದು ಅಂಗಲಾಚುತ್ತಿದ್ದ ಬಡಪಾಯಿ ನಾನೇ.ದೇವರು ಮನುಜನ ಸಹಾಯಕ್ಕಾಗಿ ಯಾವ್ಯಾವುದೋ ರೂಪದಲ್ಲಿ ಬರುತ್ತಾನಂತೆ.ಅಂದು ನಿನ್ನ ರೂಪದಲ್ಲಿ ಬಂದಿದ್ದ .ನನ್ನನ್ನು ಗಣಿತದಲ್ಲಿ ಜಸ್ಟ್ ಪಾಸ್ ಆಗುವಂತೆ ಮಾಡಿದ.ಮೀನಾಕ್ಷಮ್ಮನ ಗಂಡನಿಗೆ ಸ್ವೀಟ್ಸ್ ಕೊಡುವಂತೆ ಮಾಡಿದ.ನಾನು ಪಾಸಾಗಿದ್ದೇನೆ ಎನ್ನುವ ವಿಚಾರವನ್ನೂ ಊರಿನವರಾಗಲಿ,ನಮ್ಮ ಮನೆಯವರಾಗಲಿ ಯಾರೂ ನಂಬಲಿಲ್ಲ.ಫಲಿತಾಂಶದ ಪ್ರತಿಯನ್ನು ಜೆರಾಕ್ಸ್ ಮಾಡಿಸಿ ಎಲ್ಲರ ಮುಂದೆ ಇಟ್ಟಾಗಲೇ,ಎಲ್ಲರು ನಂಬಿ ಮೂಗಿನ ಮೇಲೆ ಕೈ ಇಟ್ಟುಕೊಂಡದ್ದು.ಈ ವೈಭವಕ್ಕೆಲ್ಲಾ ಕಾರಣೀಭೂತ ನೀನಲ್ಲದೆ,ನಾನಲ್ಲ,ನನ್ನ ಗಣಿತ ಶಿಕ್ಷಕರಂತೂ ಖಂಡಿತ ಅಲ್ಲ.ಅವರಿಗೇ ನನ್ನ ಸ್ನೇಹಿತರು ಹೇಳಿಕೊಡಬೇಕು ಪಾಪ.ಇವತ್ತು ಹೀಗೆ ಕುಳಿತಾಗ ನೀನು ನೆನಪಾದೆ.ಯಾಕೊ ಕೃತಘ್ನತಾ ಭಾವ ಕಾಡುತ್ತಿತ್ತು.ಸೊ…ಈ ಪತ್ರದ ಮೂಲಕ ನಿನಗೆ ಧನ್ಯೋಸ್ಮಿ ಹೇಳುತ್ತಿದ್ದೇನೆ.ದೇವರು ನಿನ್ನಂತವರ ರೂಪದಲ್ಲಿ ಮತ್ತೆ ಬರಬಹುದು ಎನ್ನುವ ನಂಬಿಕೆಯಿಂದ ಕಲಾ ವಿಭಾಗದಲ್ಲಿ PUC ಸೇರಿಕೊಂಡಿದ್ದೇನೆ.ನನ್ನ SSLC ಪುಸ್ತಕಗಳನ್ನು ಮೀನಾಕ್ಷಮ್ಮನ ಮಗಳು ಓದುತ್ತಿದ್ದಾಳೆ,ಹಗಲು ರಾತ್ರಿಯೆನ್ನದೆ ಪಾಪ.

ಇಂತಿ ನಿನ್ನ
ಹೊಸ ಗೆಳೆಯ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..